ಕನ್ನಡ ಚಿತ್ರರಂಗದ ಪಾಲಿಗೆ ಆಗಸ್ಟ್‌ ತಿಂಗಳು ಸ್ಟಾರ್‌ಗಳ ಜಾತ್ರೆ ಆಗಲಿದೆ. ಒಂದೇ ತಿಂಗಳಲ್ಲಿ ನಾಲ್ಕು ದೊಡ್ಡ ಸಿನಿಮಾಗಳು ತೆರೆಗೆ ಸಜ್ಜಾಗಿವೆ. ಇವೆಲ್ಲ ವರಮಹಾಲಕ್ಷ್ಮೀ ಹಬ್ಬದ ಕೊಡಗೆಯಾಗಿ ಪ್ರೇಕ್ಷಕರ ಮುಂದೆ ಬರುತ್ತಿವೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. 

ಬೆಂಗಳೂರು (ಏ. 10): ಕನ್ನಡ ಚಿತ್ರರಂಗದ ಪಾಲಿಗೆ ಆಗಸ್ಟ್‌ ತಿಂಗಳು ಸ್ಟಾರ್‌ಗಳ ಜಾತ್ರೆ ಆಗಲಿದೆ. ಒಂದೇ ತಿಂಗಳಲ್ಲಿ ನಾಲ್ಕು ದೊಡ್ಡ ಸಿನಿಮಾಗಳು ತೆರೆಗೆ ಸಜ್ಜಾಗಿವೆ. ಇವೆಲ್ಲ ವರಮಹಾಲಕ್ಷ್ಮೀ ಹಬ್ಬದ ಕೊಡಗೆಯಾಗಿ ಪ್ರೇಕ್ಷಕರ ಮುಂದೆ ಬರುತ್ತಿವೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಆದರೆ, ಬಹುಭಾಷೆಯಲ್ಲಿ ತಯಾರಾಗಿ, ಸ್ಟಾರ್‌ಗಳೇ ನಟಿಸಿರುವ ಹಾಗೂ ಸಕ್ಸಸ್‌ ಕಂಡ ನಿರ್ದೇಶಕರೇ ಒಂದೇ ತಿಂಗಳಲ್ಲೇ ತಮ್ಮ ಚಿತ್ರಗಳನ್ನು ತೆರೆ ಮೇಲಿಡುವುದಕ್ಕೆ ಹೊರಟಿರುವುದು ಕುತೂಹಲ ಮೂಡಿಸಿದೆ. ಹೌದು, ‘ಪೈಲ್ವಾನ್‌’, ‘ಆನಂದ್‌’, ‘ಭರಾಟೆ’ ಹಾಗೂ ‘ಅವನೇ ಶ್ರೀಮನ್ನಾರಾಯಣ’ ಚಿತ್ರಗಳು ಆಗಸ್ಟ್‌ನಲ್ಲಿ ತೆರೆಗೆ ಸಜ್ಜಾಗಿವೆ. ಇವುಗಳ ಜತೆಗೆ ದರ್ಶನ್‌ ಹಾಗೂ ಧ್ರುವ ಸರ್ಜಾ ಚಿತ್ರಗಳು ಸೇರಿಕೊಳ್ಳುವ ಸಾಧ್ಯಗಳಿವೆ. ಸದ್ಯಕ್ಕೆ ಇವರ ಚಿತ್ರಗಳು ಇನ್ನೂ ಖಚಿತವಾಗಿಲ್ಲ.

1. ಆಗಸ್ಟ್‌ನಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿರುವ ಚಿತ್ರಗಳ ಪೈಕಿ ಸುದೀಪ್‌ ನಟನೆಯ ‘ಪೈಲ್ವಾನ್‌’ ಚಿತ್ರದ ಬಗ್ಗೆ ಸಾಕಷ್ಟುಕ್ರೇಜ್‌ ಹುಟ್ಟುಕೊಂಡಿದೆ. ‘ಹೆಬ್ಬುಲಿ’ ನಂತರ ಕೃಷ್ಣ ಹಾಗೂ ಸುದೀಪ್‌ ಕಾಂಬಿನೇಷನ್‌ನ ಸಿನಿಮಾ ಇದಾಗಿದ್ದು, ಜತೆಗೆ ಏಳು ಭಾಷೆಯಲ್ಲಿ ಏಕಕಾಲಕ್ಕೆ ತೆರೆಗೆ ಬರುತ್ತಿದೆ.

ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಹಾಗೂ ಬೋಜ್‌ಪುರಿ, ಮರಾಠಿ ಭಾಷೆಯಲ್ಲಿ ಕಿಚ್ಚನ ಚಿತ್ರ ವರಮಹಾಲಕ್ಷ್ಮೀ ಹಬ್ಬದಂದೇ ಸದ್ದು ಮಾಡುತ್ತಿದೆ. ಮೊದಲ ಬಾರಿಗೆ ಸುದೀಪ್‌ ಕುಸ್ತಿ ಪೈಲ್ವಾನ್‌ ಆಗಿ ಕಾಣಿಸಿಕೊಂಡಿದ್ದು, ಸಿಕ್ಸ್‌ ಪ್ಯಾಕ್‌ ಮಾಡಿ ಬರೀ ಮೈಯಲ್ಲಿ ಮೈದಾನಕ್ಕಿಳಿದಿರುವುದು, ಬಾಲಿವುಡ್‌ ಅಂಗಳದ ಸ್ಟಾರ್‌ಗಳು ಇಲ್ಲಿ ಕಾಣಿಸಿಕೊಂಡಿರುವುದು, ಬಿಗ್‌ ಬಜೆಟ್‌, ಅದ್ದೂರಿ ಮೇಕಿಂಗ್‌ ಇವೆಲ್ಲವುಗಳ ಕಾರಣಕ್ಕೆ ‘ಪೈಲ್ವಾನ್‌’ ನಿರೀಕ್ಷೆ ಮೂಡಿಸಿದೆ. ಜತೆಗೆ ಬಿಡುಗಡೆಯ ದಿನಾಂಕ ಘೋಷಿಸಿದ್ದು ಅವರ ಅಭಿಮಾನಿಗಳಲ್ಲಿ ಮತ್ತಷ್ಟುಕ್ರೇಜ್‌ ಹೆಚ್ಚಾಗಿದೆ.

2. ಪಿ ವಾಸು ಹಾಗೂ ಶಿವಣ್ಣ ಕಾಂಬಿನೇಷನ್‌ನ ಸಿನಿಮಾ ‘ಆನಂದ್‌’ ಸದ್ದಿಲ್ಲದೆ ಚಿತ್ರೀಕರಣ ಮುಗಿಸುತ್ತಿದೆ. ಎರಡು ತಿಂಗಳಲ್ಲಿ ಎಲ್ಲ ಕೆಲಸಗಳನ್ನು ಮುಗಿಸಿಕೊಂಡು ‘ಆನಂದ್‌’ ಚಿತ್ರವನ್ನು ತೆರೆಗೆ ತರುವುದಕ್ಕೆ ಹೊರಟಿದ್ದಾರೆ. ‘ಶಿವಲಿಂಗ’ ಚಿತ್ರದ ಬಳಿಕೆ ಪಿ ವಾಸು ಹಾಗೂ ಶಿವಣ್ಣ ಎರಡನೇ ಬಾರಿಗೆ ಜತೆಯಾಗಿದ್ದಾರೆ. ರಚಿತಾ ರಾಮ್‌ ನಾಯಕಿಯಾಗಿ ನಟಿಸುತ್ತಿರುವ ಈ ಸಿನಿಮಾ ದ್ವಾರಕೀಶ್‌ ಬ್ಯಾನರ್‌ನಲ್ಲಿ ನಿರ್ಮಾಣಗೊಳ್ಳುತ್ತಿರುವುದು ಮತ್ತೊಂದು ಹೈಲೈಟ್‌. ‘ಶಿವಲಿಂಗ’ ಚಿತ್ರದಂತೆ ಈ ಚಿತ್ರವೂ ಯಶಸ್ಸು ಕಾಣಲಿದೆ ಎಂಬುದು ಎಲ್ಲರ ಅಂದಾಜು.

3. ನಟ ಶ್ರೀಮುರಳಿ ಅವರಿಗೆ ಮತ್ತೊಂದು ಹಿಟ್‌ ಕೊಡಬಲ್ಲ ಸಿನಿಮಾ ಎಂದೇ ಊಹಿಸಿರುವ ‘ಭರಾಟೆ’ಗೂ ಆಗಸ್ಟ್‌ನಲ್ಲೇ ಬಿಡುಗಡೆಯ ಭಾಗ್ಯ ದೊರೆಯುತ್ತಿದೆ. ಮೂರು ಯಶಸ್ಸು ಚಿತ್ರಗಳ ನಂತರ ‘ಭರಾಟೆ’ ಕೂಡ ದೊಡ್ಡ ಮಟ್ಟದ ನಿರೀಕ್ಷೆಯಲ್ಲಿ ಬರುತ್ತಿದೆ. ಅಲ್ಲದೆ ನಿರ್ದೇಶಕ ಚೇತನ್‌ ಕುಮಾರ್‌ ‘ಬಹದ್ದೂರ್‌’ ಹಾಗೂ ‘ಭರ್ಜರಿ’ ಚಿತ್ರಗಳಲ್ಲಿ ಗೆಲುವು ಕಂಡವರು. ಸದ್ಯ ‘ಭರಾಟೆ’ ಚಿತ್ರದ ಮೇಕಿಂಗ್‌ ವಿಡಿಯೋ ಬಿಟ್ಟಿದ್ದು ಅದು ಸಾಕಷ್ಟುಸದ್ದು ಮಾಡುತ್ತಿದೆ. ಜತೆಗೆ ರಚಿತಾ ರಾಮ್‌ ಅವರು ಒಂದು ಹಾಡಿಗೆ ಹೆಜ್ಜೆ ಹಾಕಿರುವುದು ವಿಶೇಷ.

ಈ ಮೂರು ಚಿತ್ರಗಳ ಸಾಲಿನಲ್ಲಿ ರಕ್ಷಿತ್‌ ಶೆಟ್ಟಿನಟನೆಯ ‘ಅವನೇ ಶ್ರೀಮನ್ನಾರಾಯಣ’ ಕೂಡ ಅದೃಷ್ಟಪರೀಕ್ಷೆಗೆ ಇಳಿದಿದೆ. ಮೇ ತಿಂಗಳ 27ರ ವರೆಗೂ ಹೆಚ್ಚು ಕಮ್ಮಿ ರಾಜಕೀಯದ್ದೇ ಹವಾ. ಹೀಗಾಗಿ ಸಿನಿಮಾಗಳ ಹವಾ ನಡೆಯಲ್ಲ. ಈ ಕಾರಣಕ್ಕೆ ಚುನಾವಣೆ ಸದ್ದು ಮುಗಿಸಿ ಎಲ್ಲರು ಆಗಸ್ಟ್‌ನಲ್ಲೇ ಬರುತ್ತಿದ್ದಾರೆ. ಅಲ್ಲಿಗೆ ಸುದೀಪ್‌, ಶಿವಣ್ಣ, ಶ್ರೀಮುರಳಿ, ರಕ್ಷಿತ್‌ ಶೆಟ್ಟಿಅವರು ಆಗಸ್ಟ್‌ ತಿಂಗಳ ಪಂದ್ಯಕ್ಕೆ ಸಜ್ಜಾಗಿದ್ದಾರೆ.