ಧರ್ಮಗಳ ವಿವಾಹ ಕಾಯ್ದೆ ಅನ್ವಯ ಸಲಿಂಗ ವಿವಾಹ ವಿಚಾರಣೆ ನಡೆಸಲ್ಲ: ಸುಪ್ರೀಂ
ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಬೇಕೇ ಬೇಡವೇ ಎಂಬ ಬಗ್ಗೆ ವಿಚಾರಣೆ ಆರಂಭಿಸಿರುವ ಸುಪ್ರೀಂ ಕೋರ್ಟ್, ‘ಯಾವ ಧರ್ಮದ ವೈಯಕ್ತಿಕ ಕಾನೂನುಗಳು ಏನು ಹೇಳುತ್ತವೆ ಎಂಬುದನ್ನು ನಾವು ಚರ್ಚಿಸಲು ಹೋಗುವುದಿಲ್ಲ. ಕೇವಲ ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಬೇಕೋ ಬೇಡವೋ ಎಂಬ ಬಗ್ಗೆ ಮಾತ್ರವಿಚಾರಣೆ ನಡೆಸುತ್ತೇವೆ ಎಂದು ಸ್ಪಷ್ಟಪಡಿಸಿದೆ.
ನವದೆಹಲಿ: ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಬೇಕೇ ಬೇಡವೇ ಎಂಬ ಬಗ್ಗೆ ವಿಚಾರಣೆ ಆರಂಭಿಸಿರುವ ಸುಪ್ರೀಂ ಕೋರ್ಟ್, ‘ಯಾವ ಧರ್ಮದ ವೈಯಕ್ತಿಕ ಕಾನೂನುಗಳು ಏನು ಹೇಳುತ್ತವೆ ಎಂಬುದನ್ನು ನಾವು ಚರ್ಚಿಸಲು ಹೋಗುವುದಿಲ್ಲ. ಕೇವಲ ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಬೇಕೋ ಬೇಡವೋ ಎಂಬ ಬಗ್ಗೆ ಮಾತ್ರವಿಚಾರಣೆ ನಡೆಸುತ್ತೇವೆ ಎಂದು ಸ್ಪಷ್ಟಪಡಿಸಿದೆ.
ಸಲಿಂಗ ಮದುವೆಗೆ (sam sex marriage) ಮಾನ್ಯತೆ ನೀಡಬೇಕು ಎಂದು ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆಗೆ ಮಂಗಳವಾರ ಚಾಲನೆ ನೀಡಿದ ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ ನೇತೃತ್ವದ ಪೀಠ, ನಾವು ಈ ವಿಷಯದ ಕುರಿತಂತೆ ಧರ್ಮಗಳ ವಿವಾಹ ಕಾಯ್ದೆಗಳನ್ನು ಆಧರಿಸಿ ವಿಚಾರಣೆ ನಡೆಸಲು ಹೋಗುವುದಿಲ್ಲ. ಇದರ ಬದಲು ವಿಶೇಷ ವಿವಾಹ ಕಾಯ್ದೆಯನ್ವಯ ಇದರ ವಿಚಾರಣೆ ನಡೆಸುತ್ತೇವೆ ಎಂದಿತು.
ಆಗ ಕೇಂದ್ರ ಸರ್ಕಾರದ ಪರ ವಾದ ಮಂಡಿಸುತ್ತಿರುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ (Tushar mehta) ವಾದ ಮಂಡಿಸಿ, ವಿಶೇಷ ವಿವಾಹ ಕಾಯ್ದೆಯಲ್ಲೂ ಪುರುಷ ಹಾಗೂ ಮಹಿಳೆಯ ನಡುವೆ ವಿವಾಹ ಎಂದಿದೆ ಎಂದರು. ಇದಕ್ಕೆ ಉತ್ತರಿಸಿದ ನ್ಯಾ. ಡಿ.ವೈ. ಚಂದ್ರಚೂಡ್ ಅವರು, ವಿಶೇಷ ವಿವಾಹ ಕಾಯ್ದೆಯಲ್ಲಿ (special Marriage Act) ಪುರುಷನ ಸಂಪೂರ್ಣ ಪರಿಕಲ್ಪನೆ ಅಥವಾ ಮಹಿಳೆಯ ಸಂಪೂರ್ಣ ಪರಿಕಲ್ಪನೆ ಎಂಬುದು ಇಲ್ಲ. ಇದರಲ್ಲಿ ನಿಮ್ಮ (ಜನರ) ಜನನಾಂಗ ಯಾವುದು ಎಂಬ ಪ್ರಶ್ನೆ ಅಲ್ಲ. ಇದು ಅದಕ್ಕಿಂತ ಹೆಚ್ಚು ಸಂಕೀರ್ಣವಾಗಿದೆ ಎಂಬುದೇ ಸಮಸ್ಯೆಯ ವಿಷಯ. ಆದ್ದರಿಂದ ವಿಶೇಷ ವಿವಾಹ ಕಾಯ್ದೆಯಲ್ಲಿ ಪುರುಷ ಮತ್ತು ಮಹಿಳೆ ಎಂದು ಹೇಳಲಾಗಿದೆಯಾದರೂ, ಅದರ ಪರಿಕಲ್ಪನೆ ಕೇವಲ ಪುರುಷ ಹಾಗೂ ಮಹಿಳೆ ಎಂದಲ್ಲ. ಜನನಾಂಗ ಆಧರಿಸಿ ಮಾಡಿದ ವ್ಯಾಖ್ಯಾನ ಅದಲ್ಲ ಎಂದು ಹೇಳಿದರು. ಅಲ್ಲದೆ, ಗುರುವಾರದವರೆಗೂ ಇದರ ವಿಚಾರಣೆ ನಡೆಸುವುದಾಗಿ ತಿಳಿಸಿದರು.
ಸಲಿಂಗಿ ವಿವಾಹ ಕಾನೂನಿಗೆ ಅಲ್ಪಸಂಖ್ಯಾತರ ವಿರೋಧ; ರಾಷ್ಟ್ರಪತಿ, ಸಿಜೆಐಗೆ ಪತ್ರ
ವಿಶೇಷ ವಿವಾಹ ಕಾಯ್ದೆಯು ಹಿಂದೂ ವಿವಾಹ ಕಾಯ್ದೆ ಅಥವಾ ಮುಸ್ಲಿಂ ವಿವಾಹ ಕಾಯ್ದೆಗಳಂತೆ ಇರದೇ ಧರ್ಮಾತೀತ ವಿವಾಹ ಕಾಯ್ದೆಯಾಗಿದೆ.
ಸಾಲಿಸಿಟರ್ ಜನರಲ್‌ಗೆ ಸುಪ್ರೀಂ ತರಾಟೆ
ಸಲಿಂಗ ವಿವಾಹಕ್ಕೆ ಕಾನೂನು ಮನ್ನಣೆ ಕೊಡಬೇಕು ಎಂಬ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಸುಪ್ರೀಂಕೋರ್ಟು (Supreme court) ತರಾಟೆಗೆ ತೆಗೆದುಕೊಂಡ ಪ್ರಸಂಗ ಮಂಗಳವಾರ ನಡೆಯಿತು. ಕಲಾಪ ಆರಂಭವಾದ ಬಳಿಕ ವಾದ ಮಂಡಿಸಿದ ಮೆಹ್ತಾ, ಮೊದಲು ಈ ಅರ್ಜಿಯಲ್ಲಿನ ಅಂಶಗಳನ್ನು ವಿಚಾರಣೆ ನಡೆಸಬೇಕೋ ಅಥವಾ ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡುವ ವಿಚಾರವನ್ನು ಸಂಸತ್ತಿಗೆ ಬಿಡಬೇಕೋ ಎಂಬ ಕುರಿತಾದ ನಮ್ಮ ವಾದವನ್ನು ಮೊದಲು ಆಲಿಸಬೇಕು ಎಂದು ಕೋರಿದರು.
ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾ.ಚಂದ್ರಚೂಡ, ಐ ಆ್ಯಮ್ ಸಾರಿ ಮಿಸ್ಟರ್ ಸಾಲಿಸಿಟರ್. ಇಲ್ಲಿ ವಿಚಾರಣೆಗೆ ನಾವು ಉಸ್ತುವಾರಿ. ಅರ್ಜಿದಾರರು ಏನು ಹೇಳುತ್ತಾರೆ ಎಂಬುದನ್ನು ಮೊದಲು ಆಲಿಸುತ್ತೇವೆ. ಕಲಾಪ ಹೇಗೆ ನಡೆಸಬೇಕು ಎಂದು ಸೂಚಿಸುವುದು ನಿಮ್ಮ ಕೆಲಸವಲ್ಲ. ಇಂಥದ್ದಕ್ಕೆ ನನ್ನ ಕೋರ್ಟಿನಲ್ಲಿ ಅವಕಾಶ ನೀಡಲ್ಲ ಎಂದರು. ಇದಕ್ಕೆ ಉತ್ತರಿಸಿದ ಮೆಹ್ತಾ, ನಾನು ಯಾವತ್ತೂ ಹಾಗೆ ಮಾಡಿಲ್ಲ. ಆದರೆ ವಿಷಯ ಸೂಕ್ಷ್ಮವಾಗಿದ್ದರಿಂದ ಹಾಗೆಂದೆ ಎಂದರು. ಇದಕ್ಕೆ ಪೀಠ ಪ್ರತಿಕ್ರಿಯಿಸಿ, ನಮ್ಮ ಮೇಲೆ ವಿಶ್ವಾಸ ಇಡಿ. ಎಲ್ಲ ದೃಷ್ಟಿಕೋನದಿಂದಲೂ ವಿಚಾರಣೆ ನಡೆಸುತ್ತೇವೆ ಎಂದಿತು.
ಕೇಂದ್ರದ ವಾದವೇನು?
ಸಲಿಂಗ ವಿವಾಹವು ಈಗಾಗಲೇ ಇರುವ ವೈಯಕ್ತಿಕ ಕಾನೂನುಗಳು ಹಾಗೂ ಸಾಮಾನ್ಯವಾಗಿ ಎಲ್ಲರಿಂದಲೂ ಸ್ವೀಕೃತಿಗೆ ಒಳಗಾಗಿರುವ ಸಾಮಾಜಿಕ ಮೌಲ್ಯಗಳ ನಡುವಿನ ಸಮತೋಲನವನ್ನೇ ಅಲ್ಲಾಡಿಸಲಿದೆ ಎಂದು ಅಫಿಡವಿಟ್‌ನಲ್ಲಿ (Affidavit)ಕೇಂದ್ರ ವಾದಿಸಿದೆ. ಸಲಿಂಗ ವಿವಾಹಕ್ಕೆ ಅನುಮೋದನೆ ನೀಡುವುದು ನಾಗರಿಕರ ಹಿತಾಸಕ್ತಿ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡದೇ ಇರುವುದು ತಾರತಮ್ಯವಲ್ಲ. ಏಕೆಂದರೆ ಎಲ್ಲ ಧರ್ಮಗಳಲ್ಲಿ ಮದುವೆಗಳಂತಹ ಸಾಂಪ್ರದಾಯಿಕ ಮತ್ತು ಸಾರ್ವತ್ರಿಕವಾಗಿ ಅಂಗೀಕಸಲ್ಪಡುವ ಸಾಮಾಜಿಕ-ಕಾನೂನಾತ್ಮಕ ಸಂಬಂಧಗಳು ಆಳವಾಗಿ ಇವೆ. ಮದುವೆಯನ್ನು ಹಿಂದೂ ಕಾನೂನಿನ ಎಲ್ಲಾ ಶಾಖೆಗಳಲ್ಲಿ ಒಂದು ಸಂಸ್ಕಾರವೆಂದು ಪರಿಗಣಿಸಲಾಗಿದೆ. ಇಸ್ಲಾಂನಲ್ಲಿ(Islam) ಸಹ, ಇದು ಮಾಮೂಲಿ ಒಪ್ಪಂದವಾಗದೇ ಪವಿತ್ರ ಒಪ್ಪಂದವಾಗಿದೆ. ಮಾನ್ಯತೆ ಪಡೆದ ಮದುವೆಯು ಜೈವಿಕ ಪುರುಷ ಮತ್ತು ಜೈವಿಕ ಮಹಿಳೆಯ ನಡುವೆ ಮಾತ್ರ ನಡೆಯುತ್ತದೆ ಎಂದಿತು.
ಸಲಿಂಗ ವಿವಾಹ ವಿರೋಧಿಸಿ ಅಲ್ಪಸಂಖ್ಯಾತ ಸಮುದಾಯದ ಪತ್ರ, ಕೇಂದ್ರದ ನಿರ್ಧಾರಕ್ಕೆ ಬೆಂಬಲ!
ಅರ್ಜಿಗಳು ಕೇವಲ ನಗರ ದೃಷ್ಟಿಕೋನ ಹೊಂದಿವೆ. ಸಂಸತ್ತಿಗೆ ಮಾತ್ರ ಈ ಕುರಿತು ನಿರ್ಣಯ ಕೈಗೊಳ್ಳಲು ಸಾಧ್ಯ. ಎಲ್ಲ ಗ್ರಾಮೀಣ, ಅರೆ-ಗ್ರಾಮೀಣ ಮತ್ತು ನಗರ ಜನಸಂಖ್ಯೆಯ ವಿಶಾಲ ದೃಷ್ಟಿಕೋನಗಳು ಮತ್ತು ಧ್ವನಿಗಳನ್ನು ನಿರ್ಣಯಕ್ಕೂ ಮುನ್ನ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ಹೇಳಿತು.