ರಾಯಚೂರಿನಲ್ಲಿ ನಾಡದೇವಿ ಮೆರವಣಿಗೆ: ಜಾನಪದ ಕಲಾ ತಂಡಗಳ ಮೆರಗು
ನಾಡದೇವಿ ಮೆರವಣಿಗೆಗೆ ಕುಂಭ, ಕಳಸ, ಜಾನಪದ ಕಲಾ ತಂಡಗಳು ಮೆರವಣಿಗೆಗೆ ಮೆರಗು ನೀಡಿ ಜನರ ಗಮನ ಸೆಳೆದವು| ರಸ್ತೆಯುದ್ದಕೂ ಎರಡು ಬದಿ ನಿಂತು ಉತ್ಸಾಹದಿಂದ ವೀಕ್ಷಿಸಿದ ನಾಗರಿಕರು ಕಳೆ ಹೆಚ್ಚಿಸಿದರು| ಕಿಲ್ಲೇಮಠದ ಸ್ವಾಮಿ, ನಾಡ ಹಬ್ಬ ದಸರಾ ಎಲ್ಲರಿಗೂ ಸುಖ-ಶಾಂತಿ, ಸಮೃದ್ಧಿಯನ್ನು ನೀಡಲಿ, ತಾಯಿ ಅಂಬಾಭವಾನಿ ಆಶೀರ್ವಾದ ಎಲ್ಲರ ಮೇಲಿರಲಿ ಎಂದ ಶಾಸಕ ಡಾ.ಶಿವರಾಜ ಪಾಟೀಲ್|
ರಾಯಚೂರು(ಅ.9): ವಿಜಯದಶಮಿ ನಿಮಿತ್ತ ನಗರಸಭೆ ಏರ್ಪಡಿಸಿದ್ದ ನಾಡದೇವಿ ಮೆರವಣಿಗೆಗೆ ಕುಂಭ, ಕಳಸ, ಜಾನಪದ ಕಲಾ ತಂಡಗಳು ಮೆರವಣಿಗೆಗೆ ಮೆರಗು ನೀಡಿ ಜನರ ಗಮನ ಸೆಳೆದರೆ, ರಸ್ತೆಯುದ್ದಕೂ ಎರಡು ಬದಿ ನಿಂತು ಉತ್ಸಾಹದಿಂದ ವೀಕ್ಷಿಸಿದ ನಾಗರಿಕರು ಕಳೆ ಹೆಚ್ಚಿಸಿದರು.
ಸ್ಥಳೀಯ ನಗರಸಭೆ ಕಚೇರಿ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನಾಡದೇವಿ ಭಾವಚಿತ್ರದ ಮೆರವಣಿಗೆಯು ಅದ್ಧೂರಿಯಾಗಿ ಜರುಗಿತು. ಕಿಲ್ಲೇ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯರು ಭುವನೇಶ್ವರಿ ಮೂರ್ತಿಗೆ ಪೂಜೆ ಸಲ್ಲಿಸಿದರು. ಶಾಸಕ ಡಾ.ಶಿವರಾಜ ಪಾಟೀಲ್ ಚಾಲನೆ ನೀಡುತ್ತಿದ್ದಂತೆಯೇ ವಾದ್ಯಗಳು ಮೊಳಗಿದವು. ಈ ವೇಳೆ ಮಾತನಾಡಿದ ಕಿಲ್ಲೇಮಠದ ಸ್ವಾಮಿ, ನಾಡ ಹಬ್ಬ ದಸರಾ ಎಲ್ಲರಿಗೂ ಸುಖ-ಶಾಂತಿ, ಸಮೃದ್ಧಿಯನ್ನು ನೀಡಲಿ, ತಾಯಿ ಅಂಬಾಭವಾನಿ ಆಶೀರ್ವಾದ ಎಲ್ಲರ ಮೇಲಿರಲಿ ಎಂದು ಆಶೀರ್ವದಿಸಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಮುಖ್ಯ ರಸ್ತೆಯಲ್ಲಿ ಹೊರಟ ಮೆರವಣಿಗೆ ಏಕ್ ಮಿನಾರ್, ತೀನ್ ಕಂದೀಲ್, ಸರಾಫ್ ಬಜಾರ್, ನೇತಾಜಿ ವೃತ್ತ, ಸ್ವಾಮಿ ವಿವೇಕಾನಂದ ವೃತ್ತ, ಎಲ್‌ವಿಡಿ ಕಾಲೇಜ್ ಮಾರ್ಗವಾಗಿ ಮಾಣಿಕಪ್ರಭು ದೇವಸ್ಥಾನದ ಹತ್ತಿರ ಇರುವ ಬನ್ನಿಮಂಟಪ ತಲುಪಿತು.
ಸಡಗರ ಹಬ್ಬ ಆಚರಿಸಿದ ಜನರು ದಾರಿಯುದ್ದಕ್ಕೂ ನಿಂತು ಮೆರವಣಿಗೆ ವೀಕ್ಷಿಸಿದರು. ಜಾನಪದ ಕಲಾ ವೈಭವ ಮಕ್ಕಳ ಮನಸೂರೆಗೊಂಡಿತು. ಮೆರವಣಿಗೆ ತಲುಪಿದ ಬನ್ನಿ ಮಂಟಪದಲ್ಲಿ ಪೂಜೆ ನಡೆಯಿತು. ನಂತರ ನೆರೆದವರು ಬನ್ನಿ ಹಂಚಿಕೊಂಡು ಬಾಳು ಬಂಗಾರವಾಗಿರಲೆಂದು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಈ ಮೆರವಣಿಗೆಯಲ್ಲಿ ನಗರಸಭೆ ಪೌರಾಯುಕ್ತ ರಮೇಶ ನಾಯಕ, ಸದಸ್ಯರಾದ ಜಯಣ್ಣ, ನಾಗರಾಜ, ಮುಖಂಡರು, ಪ್ರಮುಖರು, ನೂರಾರು ಜನರು ಭಾಗವಹಿಸಿದ್ದರು.