Asianet Suvarna News Asianet Suvarna News

ಅಕ್ರಮ ಬಿಲ್‌ ಆರೋಪದ ಕಾಮಗಾರಿಗಳ ಪರಿಶೀಲಿಸಿದ ಶಶಿಧರ್ ಕುರೇರ್

ರಾಯಚೂರು ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಾಮಗಾರಿ ಮಾಡದೇ ಬಿಲ್ ಮಾಡಿದ ಆರೋಪ ಕೇಳಿಬಂದಿತ್ತು. ಹೀಗಾಗಿ ಜಿಲ್ಲಾ ಪಂಚಾಯತಿ ಸಿಇಒ ಶಶಿಧರ್ ಕುರೇರ್ ಖುದ್ದು ವಿವಿಧ ಗ್ರಾಮ ಪಂಚಾಯತ್ ಗಳಿಗೆ ಭೇಟಿ ನೀಡಿ ಕಾಮಗಾರಿಗಳ ವೀಕ್ಷಣೆ ಮತ್ತು ದಾಖಲೆಗಳ ಪರಿಶೀಲನೆಗೆ ಮುಂದಾಗಿದ್ದಾರೆ.

Shashidhar Kurer inspected the works accused of illegal bill
Author
First Published Nov 23, 2022, 7:06 PM IST

ವರದಿ : ಜಗನ್ನಾಥ ‌ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್

ರಾಯಚೂರು (ನ.23): ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಾಮಗಾರಿ ಮಾಡದೇ ಬಿಲ್ ಮಾಡಿದ ಆರೋಪ ಕೇಳಿಬಂದಿತ್ತು. ಹೀಗಾಗಿ ರಾಯಚೂರು ಜಿಲ್ಲಾ ಪಂಚಾಯತಿ ಸಿಇಒ ಶಶಿಧರ್ ಕುರೇರ್ ಖುದ್ದು ವಿವಿಧ ಗ್ರಾಮ ಪಂಚಾಯತ್ ಗಳಿಗೆ ಭೇಟಿ ನೀಡಿ ಕಾಮಗಾರಿಗಳ ವೀಕ್ಷಣೆ ಮತ್ತು ದಾಖಲೆಗಳ ಪರಿಶೀಲನೆಗೆ ಮುಂದಾಗಿದ್ದಾರೆ. ದೇವದುರ್ಗ ತಾಲೂಕಿನ ಗಬ್ಬೂರು, ನಾಗಡದಿನ್ನಿ ಮತ್ತು ಮಲ್ಲೆದೇವರಗುಡ್ಡ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ನರೇಗಾ ಯೋಜನೆಯ ಕಾಮಗಾರಿಗಳ ಗುಣಮಟ್ಟ ಪರಿಶೀಲಿಸಿ ಕಾನೂನು ಬದ್ಧವಾಗಿ ಕಾರ್ಯ ನಿರ್ವಹಿಸಲು ಸೂಚನೆ ನೀಡಿದ್ದಾರೆ.

ಗಬ್ಬೂರು ಪ್ರಾಥಮಿಕ ಆರೋಗ್ಯ ‌ಕೇಂದ್ರಕ್ಕೆ ಭೇಟಿ: ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಿ.ಪಂ.ಸಿಇಒ ಶಶಿಧರ್ ಕುರೇರ್ ಭೇಟಿ ನೀಡಿ ವಿವಿಧ ವೈದ್ಯರ ಜೊತೆಯಲ್ಲಿ ಆಸ್ಪತ್ರೆಯ ಔಷಧಿ ಕೋಣೆ ವೀಕ್ಷಣೆ ‌ಮಾಡಿದ್ರು.ಆ ಬಳಿಕ ಪುರುಷರ ಮತ್ತು ಮಹಿಳೆಯರ ವಾರ್ಡ್ ವೀಕ್ಷಣೆ ಮಾಡಿ, ಡಿ ಗ್ರೂಪ್ ನ ಸಿಬ್ಬಂದಿಗೆ ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡುವಂತೆ ಸೂಚನೆ ನೀಡಿದರು. ನಂತರ ಗ್ರಾಮದ ಸಾರ್ವಜನಿಕ ಗ್ರಂಥಾಲಯಕ್ಕೆ ಭೇಟಿ ನೀಡಿ ಹೆಚ್ಚಿನ ಪುಸ್ತಕಗಳನ್ನು ಇಡಬೇಕು. ವಿದ್ಯಾರ್ಥಿಗಳ ಅಭ್ಯಾಸಕ್ಕೆ ಅನುಕೂಲವಾಗುವ ಹೊಸ ಪುಸ್ತಕಗಳನ್ನು ಇಟ್ಟು ಓದುವ ವಾತಾವರಣ ನಿರ್ಮಿಸಬೇಕು ಎಂದು ಗ್ರಂಥಾಲಯ ಮೇಲ್ವಿಚಾರಕರಿಗೆ ತಿಳಿಸಿದರು. ಅಲ್ಲಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಸರ್ಕಾರಿ ಶಾಲಾ  ಮಕ್ಕಳೊಂದಿಗೆ ಸಂವಾದ ನಡೆಸಿದರು. ವಿವಿಧ ವಿಷಯಗಳ ಬಗ್ಗೆ ಮಕ್ಕಳಿಗೆ ಪ್ರಶ್ನೆಗಳನ್ನು ಕೇಳಿ ಶಾಲೆಯಲ್ಲಿರುವ ಮಕ್ಕಳ ಸಮಸ್ಯೆಗಳ ಬಗ್ಗೆಯೂ ವಿಚಾರಿಸಿದರು.

Karnataka Assembly Election 2023: ಕಾಂಗ್ರೆಸ್‌ನ ಒಂದೇ ಟಿಕೆಟ್‌ಗಾಗಿ 16 ಜನರ ಪೈಪೋಟಿ: ಅರ್ಜಿ ಸಲ್ಲಿಕೆ

ವಿವಿಧ ಕಾಮಗಾರಿ ವೀಕ್ಷಣೆ ಮಾಡಿದ ಸಿಇಒ: ಜಿಲ್ಲೆಯಲ್ಲಿ ನರೇಗಾ ಸೇರಿದಂತೆ ಹತ್ತಾರು ಯೋಜನೆಯಲ್ಲಿ ನೂರಾರು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಗಬ್ಬೂರು ಗ್ರಾಮದಲ್ಲಿ ನರೇಗಾ ಯೋಜನೆ ಅಡಿಯಲ್ಲಿ ನಡೆದ 16 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಗೋದಾಮು ವೀಕ್ಷಣೆ ಮಾಡಿದರು. ನಂತರ ನಾಗಡದಿನ್ನಿ ಗ್ರಾಮದಲ್ಲಿನ ಜಲ ಜೀವನ ಮಿಷನ್ ಯೋಜನೆ ಕಾಮಗಾರಿ ವೀಕ್ಷಿಸಿ, ನೀರು ಬರುವದನ್ನು ಖಾತ್ರಿ ಪಡಿಸಿಕೊಂಡರು. ನರೇಗಾ ಯೋಜನೆಯ ರಸ್ತೆ ಕಾಮಗಾರಿ ಪರಿಶೀಲಿಸಿದರು. ಮುಂದಿನ ದಿನಗಳಲ್ಲಿ ಚರಂಡಿ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು. 

ಮಲ್ಲೆದೇವರಗುಡ್ಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಂಡೆಗುಡ್ಢದಿಂದ ಭೂಮನಗುಡ್ಡದವರೆಗೆ 8 ಕೋಟಿ ರೂ. ವೆಚ್ಚದ ರಸ್ತೆ ನಿರ್ಮಾಣಕ್ಕಾಗಿ ಸ್ವಾಧೀನ ಮಾಡಿಕೊಳ್ಳಬೇಕಾದ ಜಮೀನಿನ ಮಾಲೀಕರ ಜೊತೆಯಲ್ಲಿ ಚರ್ಚೆ ನಡೆಸಿದರು. ಕೊನೆಯಲ್ಲಿ ತಾಲೂಕ ಪಂಚಾಯತಿಯ ಹೊಸ ಕಟ್ಟಡ ವೀಕ್ಷಣೆ ಮಾಡಿ ಸಿಬ್ಬಂದಿ ಜೊತೆಯಲ್ಲಿ ಚರ್ಚೆ ‌ನಡೆಸಿದರು. ಎಲ್ಲ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ‌ನೀಡಿದರು. 

ಈ ವೇಳೆ ದೇವದುರ್ಗ ತಾ.ಪಂ. ‌ಇಒ ಪಂಪಾಪತಿ ಹಿರೇಮಠ, ಕಾರ್ಯನಿರ್ವಾಹಕ ಅಭಿಯಂತರರು, ಸಹಾಯಕ ನಿರ್ದೇಶಕರು (ನರೇಗಾ), ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು, ತಾಂತ್ರಿಕ ಸಂಯೋಜಕರು, ತಾಂತ್ರಿಕ ಸಹಾಯಕ ಅಭಿಯಂತರರು, ಗ್ರಾಮ ಪಂಚಾಯತ್ ಸಿಬ್ಬಂದಿ, ತಾಲೂಕ ಪಂಚಾಯಿತಿ ಸಿಬ್ಬಂದಿ, ಐಇಸಿ ಸಂಯೋಜಕರು ಉಪಸ್ಥಿತರಿದ್ದರು.

Follow Us:
Download App:
  • android
  • ios