Karnataka Assembly Election 2023: ಕಾಂಗ್ರೆಸ್‌ನ ಒಂದೇ ಟಿಕೆಟ್‌ಗಾಗಿ 16 ಜನರ ಪೈಪೋಟಿ: ಅರ್ಜಿ ಸಲ್ಲಿಕೆ
2023ರ ವಿಧಾನಸಭಾ ಚುನಾವಣೆಗೆ ಇನ್ನೂ 5-6 ತಿಂಗಳು ಬಾಕಿಯಿದೆ. ಚುನಾವಣೆ ತಯಾರಿಗಾಗಿ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಗಾಗಿ ಅರ್ಜಿ ಆಹ್ವಾನಿಸಿತ್ತು. ಅದಕ್ಕೆ ರಾಯಚೂರು ನಗರದ ವಿಧಾನಸಭಾ ಕ್ಷೇತ್ರದಿಂದ ಸರಿಸುಮಾರು 16 ಜನರು ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್, ರಾಯಚೂರು
ರಾಯಚೂರು (ನ.23): 2023ರ ವಿಧಾನಸಭಾ ಚುನಾವಣೆಗೆ ಇನ್ನೂ 5-6 ತಿಂಗಳು ಬಾಕಿಯಿದೆ. ಚುನಾವಣೆ ತಯಾರಿಗಾಗಿ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆಗಾಗಿ ಅರ್ಜಿ ಆಹ್ವಾನಿಸಿತ್ತು. ಅದಕ್ಕೆ ರಾಯಚೂರು ನಗರದ ವಿಧಾನಸಭಾ ಕ್ಷೇತ್ರದಿಂದ ಸರಿಸುಮಾರು 16 ಜನರು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಈಗ ಇಡೀ ಜಿಲ್ಲೆಯ ತುಂಬಾ ಬರೀ ರಾಯಚೂರು ನಗರ ಕ್ಷೇತ್ರಕ್ಕೆ ಯಾರಿಗೆ ಟಿಕೆಟ್ ಹೈಕಮಾಂಡ್ ನೀಡುತ್ತೆ ಎಂಬ ಚರ್ಚೆ ಶುರುವಾಗಿದೆ. ಅದರಲ್ಲೂ ಒಂದೇ ಟಿಕೆಟ್‌ಗಾಗಿ ಅಪ್ಪ-ಮಗ, ಅಣ್ಣ-ತಮ್ಮ, ಅಕ್ಕ-ತಮ್ಮ, ಸಂಬಂಧಿಕರು ಸೇರಿದಂತೆ ಆಕಾಂಕ್ಷೆಗಳು ಅರ್ಜಿ ಹಾಕಿ ಕ್ಷೇತ್ರದಲ್ಲಿ ಓಡಾಟ ಶುರು ಮಾಡಿದ್ದಾರೆ. ರಾಯಚೂರು ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳಿಗೆ 39 ಅರ್ಜಿ ಸಲ್ಲಿಕೆಯಾಗಿದ್ದು, ರಾಯಚೂರು ನಗರ ಕ್ಷೇತ್ರ ಒಂದಕ್ಕೆ ಇದುವರೆಗೆ ಅತೀ ಹೆಚ್ಚು ಅಂದ್ರೆ 16 ಅರ್ಜಿಗಳು ಸಲ್ಲಿಕೆಯಾಗಿವೆ.
ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವ ರಾಯಚೂರು ನಗರ ಕ್ಷೇತ್ರದಲ್ಲಿ 13 ಜನ ಮುಸ್ಲಿಂ (Muslims), 4 ಜನ ಇತರರು ಅರ್ಜಿ ಸಲ್ಲಿಸಿದ್ದಾರೆ. ಮಾಜಿ ಶಾಸಕ ಸೈಯದ್ ಯಾಸಿನ್ ಅವರ ಪುತ್ರ ಸೈಯದ್ ಸೋಹೆಲ್, ಮಾಜಿ ಶಾಸಕ ಎನ್.ಎಸ್ ಬೋಸರಾಜು ಅವರ ಪುತ್ರ ರವಿ ಬೋಸರಾಜು, ಮಾಜಿ ಶಾಸಕ ಬಸವರಾಜ್ ಪಾಟೀಲ್ ಇಟಗಿ ಸೇರಿ 16 ಜನ ಅರ್ಜಿ ಸಲ್ಲಿಸಿದ್ದು, ಇನ್ನೂ ರಾಯಚೂರು ನಗರ ಕ್ಷೇತ್ರದಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಾಗಿರುವುದರಿಂದ ಟಿಕೆಟ್ ಬೇರೆಯವರ ಪಾಲಾಗಬಾರದು ಅಂತ ಹೆಚ್ಚು ಜನ ಮುಸ್ಲಿಮರೇ ರೇಸ್‌ಗಿಳಿದಿದ್ದಾರೆ. ಈ ಕ್ಷೇತ್ರದಲ್ಲಿ ಮುಸ್ಲಿಮರಿಗೆ ಹೆಚ್ಚು ಬಾರಿ ಟಿಕೆಟ್ ಕೊಟ್ಟಿರುವ ಇತಿಹಾಸವೂ ಇದೆ. ಆದ್ರೆ ಈ ಬಾರಿ ಯಾರಿಗೆ ಸಿಗುತ್ತೊ ಅನ್ನೋ ಕುತೂಹಲ ಇಡೀ ಜಿಲ್ಲೆಯ ಜನರಲ್ಲಿ ಹೆಚ್ಚಾಗಿದೆ.
Karnataka Assembly Elections 2023: 224 ಕ್ಷೇತ್ರಕ್ಕೆ ಕಾಂಗ್ರೆಸ್ಸಿಗರಿಂದ 1350 ಅರ್ಜಿ ಸಲ್ಲಿಕೆ..!
ಒಂದೇ ಟಿಕೆಟ್‌ಗಾಗಿ 16 ಜನರಿಂದ ಅರ್ಜಿ ಸಲ್ಲಿಕೆ, ಯಾರಿಗೆ ಸಿಗಲಿದೆ ರಾಯಚೂರು ನಗರದ ಕಾಂಗ್ರೆಸ್ ಟಿಕೆಟ್!
ರಾಯಚೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಸದ್ಯ ಬಿಜೆಪಿ ಶಾಸಕ ಡಾ.ಶಿವರಾಜ್ ಪಾಟೀಲ್ ಇದ್ದಾರೆ. ಮುಂದೆಯೂ ಬಿಜೆಪಿಯಿಂದ ಹಾಲಿ ಶಾಸಕ ಡಾ.ಶಿವರಾಜ್ ಪಾಟೀಲ್ ಸ್ಪರ್ಧೆಗೆ ಎಲ್ಲಾ ರೀತಿಯ ತಯಾರಿ ನಡೆಸಿದ್ದಾರೆ. ಹಾಲಿ ಶಾಸಕರಿಗೆ ಫೈಟ್ ನೀಡುವ ಅಭ್ಯರ್ಥಿ ಕಣಕ್ಕೆ ಇಳಿಸಲು ಕಾಂಗ್ರೆಸ್ ಅಳೆದು ತೂಗಿ ಟಿಕೆಟ್ ನೀಡಲು ಚಿಂತನೆ ನಡೆಸಿದೆ. ಕಾಂಗ್ರೆಸ್ ಟಿಕೆಟ್ ಗಾಗಿ ಅರ್ಜಿ ಸಲ್ಲಿಕೆ ಮಾಡಿದವರ ಪರಿಚಯ ಹೀಗಿದೆ.
1) ಮುಜೀಬುದ್ದೀನ್
ರಾಯಚೂರು ಜಿಲ್ಲೆ ತುಂಬಾ ಗುತ್ತಿಗೆದಾರ ಎಂದು ಜನಪ್ರಿಯತೆ ಗಳಿಸಿದ ವ್ಯಕ್ತಿ ಮುಜೀಬುದ್ದೀನ್. ಇತ್ತೀಚಿಗೆ ಅಷ್ಟೇ ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ಕೋವಿಡ್ ವೇಳೆಯಲ್ಲಿ ಹತ್ತಾರು ಸಾಮಾಜಿಕ ಕಾರ್ಯಗಳು ಮಾಡಿ ಇಡೀ ಕ್ಷೇತ್ರದ ಜನರಿಗೆ ಚಿರಪರಿಚಿತರು ಆಗಿದ್ದಾರೆ. ಕಾಂಗ್ರೆಸ್ ಸೇರ್ಪಡೆ ಆದ ಬಳಿಕ ಯಾವುದೇ ಹಬ್ಬ - ಹರಿದಿನಗಳು ಬಂದಾಗ ಸಾವಿರಾರು ರೂಪಾಯಿ ಖರ್ಚು ಮಾಡಿ ದೊಡ್ಡ - ದೊಡ್ಡ ಕಟೌಟ್‌ಗಳನ್ನು ಹಾಕಿ ವಿಶ್ ಮಾಡುವುದು ಶುರು ಮಾಡಿದ್ದಾರೆ. ಭಾರತ್ ಜೋಡೋ ಯಾತ್ರೆ ವೇಳೆಯಲ್ಲಿ ಮುಜೀಬುದ್ದೀನ್ ಕಾಂಗ್ರೆಸ್ ಹೈಕಮಾಂಡ್ ಜೊತೆಗೆ ಇರುವ ನೂರಾರು ಬ್ಯಾನರ್‌ಗಳು ಹಾಕಿ ನಾಯಕರ ಮನಸೆಳೆಯಲು ಯತ್ನಿಸಿದರು. ಈಗ ಟಿಕೆಟ್‌ಗಾಗಿ ಅರ್ಜಿ ಹಾಕಿದ ಬಳಿಕ ರಾಯಚೂರು ನಗರದ ವ್ಯಾಪ್ತಿಯಲ್ಲಿ ಬರುವ ವಾರ್ಡ್‌ಗಳಿಗೆ ತೆರಳಿ ವಾರ್ಡ್‌ನ ಮತದಾರ ಸಮಸ್ಯೆ ಆಲಿಸಿ ಪರಿಹರಿಸುವ ಭರವಸೆ ನೀಡುತ್ತಾ ಮನಸೆಳೆಯಲು ಕಸರತ್ತು ನಡೆಸಿದ್ದಾರೆ.
2) ಬಶೀರುದ್ದೀನ್
ಬಶೀರುದ್ದೀನ್ ಕಾಂಗ್ರೆಸ್‌ನ ಮುಖಂಡರು. ಹತ್ತಾರು ವರ್ಷಗಳಿಂದ ಪಕ್ಷದಲ್ಲಿ ಗುರುತಿಸಿಕೊಂಡ ನಾಯಕರಲ್ಲಿ ಒಬ್ಬರು. ಒಂದು ಬಾರಿ ನಗರಸಭೆ ಸದಸ್ಯ ಹಾಗೂ ಯರಗೇರಾ ಜಿ.ಪಂ. ಸದಸ್ಯರಾಗಿ ಅಧಿಕಾರ ಮಾಡಿದ ಕೀರ್ತಿ ಬಶೀರುದ್ದೀನ್ ಕುಟುಂಬಕ್ಕೆ ಇದೆ. ರಾಯಚೂರು ನಗರದ ಪ್ರಮುಖ ಮುಸ್ಲಿಂ ಮುಖಂಡರ ಪಟ್ಟಿಯಲ್ಲಿ ಬಶೀರುದ್ದೀನ್ ಇದ್ದಾರೆ. ವ್ಯಾಪಾರ - ವ್ಯವಹಾರಗಳಿಂದ ಸದಾಕಾಲ ಜನರ ಮಧ್ಯೆ ಇರುವ ನಾಯಕರು ಆಗಿದ್ದಾರೆ. ಕಷ್ಟ ಅಂತ ಬಂದವರಿಗೆ ಬಶೀರುದ್ದೀನ್ ಕೈಲಾದ ಸಹಾಯ ಮಾಡುವ ಗುಣ ಬಶೀರುದ್ದೀನ್ ಹೊಂದಿದ್ದಾರೆ.
3) ಸಾಜೀದ್ ಸಮೀರ್
ಸಾಜೀದ್ ಸಮೀರ್ ರಾಯಚೂರು ನಗರದ ವಾರ್ಡ್ ನಂಬರ್ 15ರ ಹಾಲಿ ಸದಸ್ಯರು. ಕಾಂಗ್ರೆಸ್‌ನ ಮುಖಂಡ ರವಿ ಬೋಸರಾಜು ಬಣದಲ್ಲಿ ಗುರುತಿಸಿಕೊಂಡವರು. ಇತ್ತೀಚಿಗೆ ನಡೆದ ರಾಯಚೂರು ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿ ಸೋಲು ಅನುಭವಿಸಿದ್ದಾರೆ. ಈ ಹಿಂದೆಯೂ ಎರಡು ಬಾರಿ ನಗರಸಭೆ ಸದಸ್ಯ ಸ್ಥಾನಕ್ಕೆ ಸ್ಪರ್ಧೆ ಮಾಡಿ ಚುನಾವಣೆಯಲ್ಲಿ ಸೋಲು ಅನುಭವಿಸಿದರು. ಆದ್ರೂ ರಾಜಕೀಯ ಜೊತೆಗೆ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಗುರುತಿಸಿಕೊಂಡ ನಾಯಕ ಸಾಜೀದ್ ಸಮೀರ್, ಚುನಾವಣೆಯಲ್ಲಿ ಸೋತರು ಪಕ್ಷದ ಕೆಲಸ - ಕಾರ್ಯಗಳು ಮಾಡುತ್ತಾ ಕಾಂಗ್ರೆಸ್ ನ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷರಾಗಿ ಸಕ್ರೀಯ ರಾಜಕಾರಣದಲ್ಲಿ ಇದ್ದಾರೆ.
4) ಮೊಹಮ್ಮದ್ ಶಾಲಂ
ಮೊಹಮ್ಮದ್ ಶಾಲಂ ಅವರು ಕಾಂಗ್ರೆಸ್ ನ ಮಾಜಿ ನಗರಸಭೆ ಸದಸ್ಯರು. ಸಿವಿಲ್ ಗುತ್ತಿಗೆದಾರರು ಆದ ಮಹಮ್ಮದ್ ಶಾಲಂ, ಹಿಂದೆ ಮಾಜಿ ಶಾಸಕ ಪಾಪರೆಡ್ಡಿ ಗರಡಿಯಲ್ಲಿ ಬೆಳೆದವರು. ಬದಲಾದ ರಾಜಕೀಯ ಬೆಳವಣಿಗೆಯಿಂದ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡು ಈಗ ರವಿ ಬೋಸರಾಜು ಆಪ್ತರ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದಾರೆ.
5) ಸೈಯದ್ ಜಾವೀದ್ ಉಲ್ ಹಕ್
ಸೈಯದ್ ಜಾವೀದ್ ಉಲ್ ಹಕ್ ಕಾನೂನು ಪದವೀಧರರು. ವೃತ್ತಿಯಲ್ಲಿ ವಕೀಲರು. ಜಿಲ್ಲಾ ಸರ್ಕಾರಿ ವಕೀಲರಾಗಿ ಸೇವೆ ಸಲ್ಲಿಸಿದ ಅನುಭವವಿದೆ. ಜಿಲ್ಲಾ ಕಾಂಗ್ರೆಸ್ ಪಕ್ಷಕ್ಕೆ ಕಾನೂನು ಸಲಹೆಗಾರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಮಾಜಿ ವಿಧಾನ ಪರಿಷತ್ ಸದಸ್ಯಎನ್. ಎಸ್.ಬೋಸರಾಜು ಮತ್ತು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ವಿ.ನಾಯಕ ಆಪ್ತರು ಆಗಿದ್ದಾರೆ. ಕೆಪಿಸಿಸಿ ಮುಖಂಡರ ಜೊತೆಗೆ ನಿರಂತರವಾಗಿ ಸಂಪರ್ಕದಲ್ಲಿ ಸೈಯದ್ ಜಾವೀದ್ ಉಲ್ ಹಕ್ ಇದ್ದಾರೆ.
6) ಅಸ್ಲಂ ಪಾಶಾ
ಅಸ್ಲಂ ಪಾಶಾ ಅವರು ಮೂಲತಃ ರಾಯಚೂರು ಜಿಲ್ಲೆಯ ಸಿರವಾರ ಜಿ.ಪಂ.ಮಾಜಿ ಸದಸ್ಯರು, ಜಿಲ್ಲಾ ಯುವ ಕಾಂಗ್ರೆಸ್‌ನ ಗೌರವ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವವಿದೆ. ಜಿಲ್ಲಾ ಕಾಂಗ್ರೆಸ್ ವಕ್ತಾರರಾಗಿದ್ದು, ರವಿ ಬೋಸರಾಜು ಆಪ್ತರಲ್ಲಿ ಒಬ್ಬರು ಆಗಿದ್ದಾರೆ. ಅಷ್ಟೇ ಅಲ್ಲದೇ ಕಾಂಗ್ರೆಸ್‌ನ ಹೈಕಮಾಂಡ್‌ನಲ್ಲಿನ ಅಲ್ಪಸಂಖ್ಯಾತ ಮುಖಂಡರಾದ ಸಲೀಂ ಅಹ್ಮದ್ ಸೇರಿದಂತೆ ಇತರೆ ಅಲ್ಪಸಂಖ್ಯಾತ ಮುಖಂಡರ ಜೊತೆಗೆ ಉತ್ತಮ ಒಡನಾಟ ಇಟ್ಟುಕೊಂಡಿದ್ದಾರೆ. ಇಬ್ಬರೂ ಸಹೋದರರು ಗುತ್ತಿಗೆದಾರರು ಆಗಿದ್ದು, ರಾಯಚೂರು ನಗರದ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಸಿಕ್ಕರೆ ಚುನಾವಣೆ ಮಾಡಲು ಹಣ ಬಲವೂ ಇದೆ. ಆದ್ರೆ ರಾಯಚೂರು ನಗರದ ವಿಧಾನಸಭಾ ಕ್ಷೇತ್ರದಲ್ಲಿ ಅಷ್ಟು ಪ್ರಭಾವವಿಲ್ಲ. ಆದ್ರೂ ರಾಯಚೂರು ನಗರದಲ್ಲಿ ಮುಸ್ಲಿಂ ಮತದಾರರು ಹೆಚ್ವಾಗಿ ಇರುವುದರಿಂದ ಟಿಕೆಟ್ ಸಿಕ್ಕರೇ ಚುನಾವಣೆಯಲ್ಲಿ ನಾನು ಗೆಲ್ಲಬಹುದು ಎಂಬ ನಂಬಿಕೆಯಿಂದ ಟಿಕೆಟ್ ಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
7) ಎಂ.ಡಿ. ಅಮ್ಜದ್ ಹಟ್ಟಿ
ಮೂಲತಃ ರಾಯಚೂರು ಲಿಂಗಸೂಗೂರು ತಾಲೂಕಿನ ಹಟ್ಟಿ ಗ್ರಾಮದವರು. ತಾಯಿ ಜಿಲ್ಲಾ ಪಂಚಾಯತ ಸದಸ್ಯರು ಆಗಿದ್ರು, ಹೀಗಾಗಿ ರಾಜಕೀಯ ರುಚಿ ಕಂಡ ಎಂ.ಡಿ. ಅಮ್ಜದ್ ಹಟ್ಟಿ, ಗುತ್ತಿಗೆದಾರರು ಆಗಿದ್ರೂ ವಿಧಾನಸಭಾ ಚುನಾವಣೆ ಕಾಂಗ್ರೆಸ್ ಟಿಕೆಟ್‌ಗಾಗಿ ಅರ್ಜಿ ಸಲ್ಲಿಕೆ ಮಾಡಿ ಹೈಕಮಾಂಡ್ ನಾಯಕರ ಮನೆಗಳಿಗೆ ಸುತ್ತಾಟ ನಡೆಸಿ ಟಿಕೆಟ್ ಪಡೆಯಲು ಕಸರತ್ತು ನಡೆಸಿದ್ದಾರೆ.
8) ಡಾ.ರಝಾಕ್ ಉಸ್ತಾದ್
ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಮುಖಂಡರು. 15 ವರ್ಷಗಳ ಕಾಲ ಇಂಜಿನಿಯರ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಆ ಬಳಿಕ ಡಾ. ರಝಾಕ್ ಉಸ್ತಾದ್ ಅವರು 2018ರಲ್ಲಿ ಈಶಾನ್ಯ ಪದವೀಧರ ಕ್ಷೇತ್ರಕ್ಕೆ ಸ್ಪರ್ಧೆ ಮಾಡಿ ಸೋಲು ಅನುಭವಿಸಿದರು. ಕಲ್ಯಾಣ ಕರ್ನಾಟಕದ ಹಕ್ಕು ಗಳಿಗಾಗಿ ಹೋರಾಟ ಮಾಡುತ್ತಾ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮಾಡಿ ಸಾಮಾಜಿಕ ಸೇವೆಯಲ್ಲಿ ತೊಡಗಿದ್ದಾರೆ. ಅಷ್ಟೇ ಅಲ್ಲದೇ ಶಿಕ್ಷಣ ಸಂಸ್ಥೆ ಗಳಿಗೆ ಮಾರ್ಗದರ್ಶಕರು ಸಹ ಆಗಿದ್ದಾರೆ. ಕಲಬುರಗಿ ವಿವಿಯ ಸಿಂಡಿಕೇಟ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದ ಡಾ.ರಝಾಕ್ ಉಸ್ತಾದ್. ರಾಯಚೂರು ಜಿಲ್ಲೆಗೆ ವಿಶ್ವವಿದ್ಯಾಲಯ ಬೇಕು ಅಂತ ಬೃಹತ್ ಹೋರಾಟ ಮಾಡಿದ ಮುಖಂಡರ ಪಟ್ಟಿಯಲ್ಲಿ ರಝಾಕ್ ಉಸ್ತಾದ್ ಕೂಡ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಕಳೆದ 25 ವರ್ಷಗಳಿಂದ ಹೋರಾಟ ಮಾಡುತ್ತಾ ರಾಯಚೂರು ಜನತೆಗೆ ಚಿರಪರಿಚಿತ ವ್ಯಕ್ತಿ ಆಗಿದ್ದಾರೆ. ಉತ್ತಮ ವಾಗ್ಮಿಯಾದ ಡಾ.ರಝಾಕ್ ಉಸ್ತಾದ್. ರಾಯಚೂರು ಜಿಲ್ಲೆಯ ರಾಜಕೀಯ ಹತ್ತಿರದಿಂದ ತಿಳಿದವರು ಆಗಿದ್ದಾರೆ. ಹೀಗಾಗಿ ರಾಯಚೂರು ನಗರದ ಕಾಂಗ್ರೆಸ್ ಟಿಕೆಟ್‌ಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
Ticket Fight: ಮಂಡ್ಯ ಜಿಲ್ಲೆ ಹಳೆ ಹುಲಿಗಳಿಗೆ ಹೊಸ ಕಲಿಗಳ ಟಕ್ಕರ್
9) ಎಂ. ಕೆ. ಬಾಬರ್
ರಿಯಲ್ ಎಸ್ಟೇಟ್ ವ್ಯವಹಾರದ ಜೊತೆಗೆ ಕಾಂಗ್ರೆಸ್ ಪಕ್ಷ ಸಂಘಟನೆ ಮಾಡುತ್ತಾ ಇದ್ದಾರೆ. ಸ್ಥಳೀಯ ಮುಖಂಡ ವಸಂತಕುಮಾರ್ ಆಪ್ತರ ವಲಯದಲ್ಲಿ ಗುರುತಿಸಿಕೊಂಡ ಎಂ.ಕೆ.ಬಾಬರ್. ನಾಲ್ಕು ಬಾರಿ ರಾಯಚೂರು ನಗರದ ವಾರ್ಡ್ ನಂಬರ್ 15 ರಿಂದ ನಗರಸಭೆ ಸದಸ್ಯರಾದ ಹೆಗ್ಗಳಿಕೆ ಎಂ.ಕೆ.ಬಾಬರ್ ಕುಟಂಬಕ್ಕೆ ಇದೆ. ಎರಡು ಬಾರಿ ಎಂ.ಕೆ. ಬಾಬರ್ ಪತ್ನಿ ನಗರಸಭೆ ಸದಸ್ಯರಾಗಿದ್ರೆ, ಒಂದು ಬಾರಿ ಎಂ.ಕೆ. ಬಾಬರ್ ತಾಯಿ ನಗರಸಭೆ ಸದಸ್ಯರಾಗಿದ್ರು. ಹೀಗಾಗಿ ರಾಯಚೂರು ನಗರ ಶಾಸಕರು ಆಗಬೇಕು ಅಂತ ಕನಸು ಕಂಡು ರಾಯಚೂರು ನಗರದ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
10) ಸೈಯದ್ ಯಾಸೀನ್
ಕೇಂದ್ರ ಮಾಜಿ ಸಚಿವರ ಜಾಫರ್ ಶರೀಫ್ ಅಳಿಯ. 1999, 2008 ಎರಡು ಬಾರಿ ರಾಯಚೂರು ನಗರದ ಶಾಸಕರು ಆಗಿದ್ರು, ನಾಲ್ಕು ಬಾರಿ ರಾಯಚೂರು ನಗರದಿಂದ ಚುನಾವಣೆ ಸ್ಪರ್ಧೆ ಮಾಡಿ ಸೋಲು ಕಂಡ ರಾಜಕಾರಣಿ. ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ರು. ಕೇಂದ್ರದ ಕಾಂಗ್ರೆಸ್ ಹೈಕಮಾಂಡ್ ಜೊತೆಗೆ ಉತ್ತಮ ಸಂಬಂಧ ಹೊಂದಿದ್ದರು. ಆದ್ರೆ ಅನಾರೋಗ್ಯದಿಂದ ಕಳೆದ ನಾಲ್ಕು ವರ್ಷಗಳಿಂದ ಸಕ್ರೀಯ ರಾಜಕಾರಣದಿಂದ ಕ್ಷೇತ್ರದಲ್ಲಿ ಓಡಾಟ ಕಡಿಮೆ ಮಾಡಿದ್ದಾರೆ. ಆದ್ರೂ ಸಹ ಮತ್ತೊಂದು ಅವಕಾಶಕ್ಕಾಗಿ ಅರ್ಜಿ ಸಲ್ಲಿಕೆ ಮಾಡಿ ನನಗೆ ಟಿಕೆಟ್ ನೀಡಿ ಅಂತ ಹೈಕಮಾಂಡ್ ಕದತಟ್ಟಿದ್ದಾರೆ.
11) ಅಬ್ದುಲ್ ಕರೀಮ್
ಅಬ್ದುಲ್ ಕರೀಮ್ ರಾಯಚೂರಿನ ಹಿರಿಯ ಕಾಂಗ್ರೆಸ್ ಮುಖಂಡರು. ಈ ಹಿಂದೆ ಅಂದ್ರೆ 2018ರಲ್ಲಿ ಆರ್‌ಡಿಎ ಅಧ್ಯಕ್ಷರು ಆಗಿದ್ರು. ಒಂದು ವರ್ಷಗಳ ಕಾಲ ಆರ್ ಡಿಎ ಅಧ್ಯಕ್ಷರಾಗಿ ಅಬ್ದುಲ್ ಕರೀಮ್ ಇದ್ರು. ಹೀಗಾಗಿ ಕಾಂಗ್ರೇಸ್‌ನ ಸ್ಥಳೀಯ ನಾಯಕರು ಹಾಗೂ ಮುಖಂಡರ ಜೊತೆಗೆ ಸ್ನೇಹಭಾವದಿಂದ ಇದ್ದಾರೆ. ಅದರಲ್ಲೂ ಎನ್.ಎಸ್ .ಬೋಸರಾಜು ಮತ್ತು ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಬಿ.ವಿ.ನಾಯಕ ಆಪ್ತರ ವಲಯದಲ್ಲಿ ಗುರುತಿಸಿಕೊಂಡ ಮುಖಂಡರು ಎಂದು ಹೇಳಬಹುದು. ಹೀಗಾಗಿ ತನಗೂ ಒಂದು ಅವಕಾಶ ಸಿಗಬಹುದು ಅಂತ ಕಾಂಗ್ರೆಸ್ ಟಿಕೆಟ್‌ಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
12) ಸೈಯದ್ ಸೋಯಲ್
ರಾಯಚೂರು ನಗರದ ಮಾಜಿ ಶಾಸಕ ಸೈಯದ್ ಯಾಸೀನ್ ಅವರ ಮಗ ಸೈಯದ್ ಸೋಯಲ್. ಈ ಹಿಂದೆ ಅಂದ್ರೆ 2015ರಲ್ಲಿ ವಕ್ಫ್ ಮಂಡಳಿಯಲ್ಲಿ ಜಿಲ್ಲಾ ಸಲಹಾ ಸಮಿತಿಯ ಅಧ್ಯಕ್ಷರು ಆಗಿದ್ರು. ಈಗ ತಂದೆ ಸೈಯದ್ ಯಾಸೀನ್ ಅವರಿಗೆ ಟಿಕೆಟ್ ಸಿಗದಿದ್ದರೆ ನನಗೆ ಟಿಕೆಟ್ ನೀಡಿ ಅಂತ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
13) ಎನ್. ಎಸ್. ಬೋಸರಾಜು
ಎನ್.ಎಸ್. ಬೋಸರಾಜು ರಾಯಚೂರಿನ ಕಾಂಗ್ರೆಸ್‌ನ ಪ್ರಭಾವಿ ನಾಯಕ. ಮಾನವಿ ವಿಧಾನಸಭಾ ಕ್ಷೇತ್ರದಿಂದ ಶಾಸಕರಾಗಿ ರಾಜಕೀಯದಲ್ಲಿ ಹೆಸರು ವಾಸಿಯಾಗಿದ್ರು. ಆ ಬಳಿಕ ವಿಧಾನ ಪರಿಷತ್ ಸದಸ್ಯರು ಸಹ ಆಗಿದ್ರು. ಸುಮಾರು 40 ವರ್ಷಗಳ ರಾಜಕೀಯ ಅನುಭವ ಇರುವ ಎನ್.ಎಸ್. ಬೋಸರಾಜು, ಸದ್ಯ ಎಐಸಿಸಿ ಕಾರ್ಯದರ್ಶಿ ಆಗಿದ್ದಾರೆ. ಈಗ ಜಿಲ್ಲೆಯ ಪ್ರಭಾವಿ ಕಾಂಗ್ರೆಸ್ ನಾಯಕರು ಎನ್. ಎಸ್. ಬೋಸರಾಜು. ಮಾನವಿ ಕ್ಷೇತ್ರ ಎಸ್ ಟಿ ಮೀಸಲು ಕ್ಷೇತ್ರ ಆಗಿದ್ದರಿಂದ ರಾಯಚೂರು ನಗರ ಕ್ಷೇತ್ರಕ್ಕೆ ವಲಸೆ ಬಂದು ರಾಯಚೂರು ನಗರಕ್ಕೆ ಸ್ಪರ್ಧೆ ಮಾಡಬೇಕು ಅಂತ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಅಪಾರ ರಾಜಕೀಯ ಅನುಭವ ಹೊಂದಿರುವ ಎನ್.ಎಸ್. ಬೋಸರಾಜು. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಅನುಭವವೂ ಇದ್ದು, ತುಂಗಾಭದ್ರಾ ಕಾಡಾ ಅಧ್ಯಕ್ಷರಾಗಿದ್ದರು. ಮಾಜಿ ಸಿಎಂ ಧರಂಸಿಂಗ್ ಅವರು ಮುಖ್ಯಮಂತ್ರಿಗಳು ಆಗಿದ್ದಾಗ ರಾಜಕೀಯ ಕಾರ್ಯದರ್ಶಿ ಆಗಿದ್ದ ಅನುಭವವೂ ಎನ್. ಎಸ್.ಬೋಸರಾಜು ಅವರಿಗೆ ಇದೆ. ಸದ್ಯ ತೆಲಂಗಾಣ ಕಾಂಗ್ರೆಸ್ ಉಸ್ತುವಾರಿ ಆಗಿದ್ದು, ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಯಶಸ್ವಿಗೊಳಿಸಿದ ಕೀರ್ತಿಯೂ ಎನ್. ಎಸ್ .ಬೋಸರಾಜು ಸಲ್ಲುತ್ತದೆ. ಕಾಂಗ್ರೆಸ್ ಹೈಕಮಾಂಡ್ ಮತ್ತು ಸಿದ್ದರಾಮಯ್ಯ ಆಪ್ತರು ಆಗಿದ್ದಾರೆ.
14) ರವಿ ಬೋಸರಾಜು
ಎನ್.ಎಸ್. ಬೋಸರಾಜು ಅವರ ಮಗ ರವಿ ಬೋಸರಾಜು. ರಾಯಚೂರು ನಗರದಲ್ಲಿ ಯುವಕರ ಪಡೆ ಕಟ್ಟಿಕೊಂಡು ರಾಜಕಾರಣ ಮಾಡುವ ಚಾಲಾಕಿ ರಾಜಕಾರಣಿ ರವಿ ಬೋಸರಾಜು. ಬೆಂಗಳೂರಿನಲ್ಲಿ ಹತ್ತಾರು ವ್ಯವಹಾರ ಹೊಂದಿರುವ ಬುದ್ಧಿವಂತ ರಾಜಕಾರಣಿ, ಇಲ್ಲಿವರೆಗೂ ಪಕ್ಷದಲ್ಲಿ ಯಾವುದೇ ಸ್ಥಾನಮಾನ ಇಲ್ಲದಿದ್ದರೂ, ಹೈಕಮಾಂಡ್ ನಾಯಕರೊಂದಿಗೆ ಸದಾಕಾಲ ಓಡಾಟ ಮಾಡುವ ರವಿ ಬೋಸರಾಜು, ರಾಯಚೂರಿನ ಸ್ಥಳೀಯ ಸಮಸ್ಯೆ ಇಟ್ಟುಕೊಂಡು ಹೋರಾಟ ಮಾಡಿ ಜನರ ಗಮನ ಸೆಳೆಯಲು ಯತ್ನಿಸಿದರು. ಈಗ ಕಾಂಗ್ರೆಸ್ ಟಿಕೆಟ್‌ಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
15) ಯಂಕಣ್ಣ ಯಾದವ್
ಯಂಕಣ್ಣ ಯಾದವ್ ರಾಯಚೂರು ನಗರದ ಯಾದವ್ ಸಮುದಾಯದ ಮುಖಂಡರು ಹಾಗೂ ಡಿಕೆ ಸುರೇಶ್ ಅವರ ಆಪ್ತರು. ಒಂದು ಬಾರಿ ಜಿ.ಪಂ. ಸದಸ್ಯರು ಆಗಿದ್ದವರು. ಅಷ್ಟೇ ಅಲ್ಲದೆ 2016-18ರಲ್ಲಿ ಕೆಪಿಸಿಸಿ ಕಾರ್ಯದರ್ಶಿ ಆಗಿ ಪಕ್ಷಕ್ಕೆ ದುಡಿದವರು. ಸದ್ಯ ತಮ್ಮ ವ್ಯಾಪಾರ ಮತ್ತು ಹೋಟೆಲ್ ಉದ್ಯಮ ಮಾಡಿಕೊಂಡು ಪಕ್ಷದ ಸಂಘಟನೆಯಲ್ಲಿ ಇದ್ದಾರೆ.
Congress Ticket: ಟಿಕೆಟ್ ಅರ್ಜಿಯಿಂದ ‘ಕಾಂಗ್ರೆಸ್’ಗೆ 18 ಕೋಟಿ ಕಲೆಕ್ಷನ್!
16) ಬಸವರಾಜ್ ಪಾಟೀಲ್ ಇಟಗಿ
ಎರಡು ಬಾರಿ ವಿಧಾನ ಪರಿಷತ್ ಸದಸ್ಯರು, ದೇವದುರ್ಗ ತಾಲೂಕಿನ ಇಟಗಿ ಗ್ರಾಮದವರು, ಲಿಂಗಾಯತ ಸಮುದಾಯ ಮುಖಂಡರು. ದೇವದುರ್ಗ ತಾಲೂಕಿನಲ್ಲಿ ಕಾಂಗ್ರೆಸ್ ಕಟ್ಟಿ ಬೆಳೆಸಿದ ಕೀರ್ತಿ ಇವರಿಗೆ ಇದೇ.ಶಹಾಪೂರ ಶಾಸಕ ಶರಣಬಸಪ್ಪ ದರ್ಶಾಪೂರ ಇವರ ಸಂಬಂಧಿ ಆಗಿದ್ದರಿಂದ ಪಕ್ಷದಲ್ಲಿ ತನ್ನದೇ ಸ್ಥಾನಮಾನ ಹೊಂದಿದ್ದಾರೆ.
ಒಟ್ಟಿನಲ್ಲಿ ರಾಯಚೂರು ನಗರದ ವಿಧಾನಸಭಾ ಕ್ಷೇತ್ರಕ್ಕಾಗಿ 16 ಜನರು ಅರ್ಜಿ ಸಲ್ಲಿಕೆ ಮಾಡಿ, ಕೆಲ ಮುಖಂಡರು ಕ್ಷೇತ್ರದಲ್ಲಿ ಓಡಾಟ ನಡೆಸಿದ್ದಾರೆ. ಇನ್ನೂ ಕೆಲವರು ಹೈಕಮಾಂಡ್‌ನ ಭೇಟಿ ಮಾಡಿ ತನ್ನದೇ ಟಿಕೆಟ್ ನೀಡಿ ಅಂತ ಕೇಳಿಕೊಳ್ಳುತ್ತಾ ತಿರುಗಾಟ ನಡೆಸಿದ್ದಾರೆ. ಆದ್ರೆ ಕಾಂಗ್ರೆಸ್ ಹೈಕಮಾಂಡ್ 16 ಜನರಲ್ಲಿ ಯಾರಿಗೆ ಯಾವ ಆಧಾರದ ಮೇಲೆ ಟಿಕೆಟ್ ನೀಡುತ್ತೆ ಎಂಬುವುದೇ ಕುತೂಹಲ ಕಾಡುತ್ತಿದೆ.