ರಾಯಚೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಶ್ರೀರಾಮುಲು ವಾಸ್ತವ್ಯ
ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಎದುರಾಗುವ ಮೂಲಭೂತ ಸೌಕರ್ಯಗಳು ಹಾಗೂ ಅಲ್ಲಿನ ಸ್ಥಿತಿಗತಿಗಳನ್ನು ಅರಿತುಕೊಳ್ಳಲು ಆಸ್ಪತ್ರೆಗಳಲ್ಲಿ ವಾಸ್ತವ್ಯ ಮಾಡುತ್ತಿದ್ದೇನೆ ಎಂದ ಸಚಿವ ಬಿ.ಶ್ರೀರಾಮುಲು| ವಾಸ್ತವ್ಯ ಮಾಡುವುದರಿಂದ ಆಸ್ಪತ್ರೆಯ ಕೊರತೆಗಳ ಬಗ್ಗೆ ತಿಳಿದುಕೊಳ್ಳಬಹುದು| ರೋಗಿಗಳ ಸಮಸ್ಯೆಗಳನ್ನು ಅರಿತು ಅವುಗಳು ಪುನಾರಾವರ್ತನೆಯಾಗದಂತೆ ನೋಡಿಕೊಳ್ಳಲು ಸಂಬಂಧಿಸಿದ ಆಸ್ಪತ್ರೆ ಮುಖ್ಯಸ್ಥರಿಗೆ ನಿರ್ದೇಶನ ನೀಡಿಬಹುದು| ರಿಮ್ಸ್ ಆಸ್ಪತ್ರೆಯ ಒಳರೋಗಿಗಳನ್ನು ಬೆಂಗಳೂರು ಹಾಗೂ ಬಳ್ಳಾರಿಗೆ ಕಳುಹಿಸದೆ ಇಲ್ಲೆಯೇ ಚಿಕಿತ್ಸೆ ನೀಡುವಂತೆ ನಿರ್ದೇಶನ ನೀಡಲಾಗಿದೆ|
ರಾಯಚೂರು[ಅ. 15]: ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಎದುರಾಗುವ ಮೂಲಭೂತ ಸೌಕರ್ಯಗಳು ಹಾಗೂ ಅಲ್ಲಿನ ಸ್ಥಿತಿಗತಿಗಳನ್ನು ಅರಿತುಕೊಳ್ಳಲು ಆಸ್ಪತ್ರೆಗಳಲ್ಲಿ ವಾಸ್ತವ್ಯ ಮಾಡುತ್ತಿದ್ದೇನೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ನಗರದ ರಿಮ್ಸ್ ಬೋಧಕ ಆಸ್ಪತ್ರೆಯಲ್ಲಿ ವಾಸ್ತವ್ಯ ಹೂಡುವುದಕ್ಕು ಮುಂಚೆ ಸುದ್ದಿಗಾರರೊಂದಿಗೆ ಸೋಮವಾರ ರಾತ್ರಿ ಮಾತನಾಡಿದರು. ಈ ರೀತಿಯಾಗಿ ವಾಸ್ತವ್ಯ ಮಾಡುವುದರಿಂದ ಆಸ್ಪತ್ರೆಯ ಕೊರತೆಗಳ ಬಗ್ಗೆ ತಿಳಿದುಕೊಳ್ಳಬಹುದು. ರೋಗಿಗಳ ಸಮಸ್ಯೆಗಳನ್ನು ಅರಿತು ಅವುಗಳು ಪುನಾರಾವರ್ತನೆಯಾಗದಂತೆ ನೋಡಿಕೊಳ್ಳಲು ಸಂಬಂಧಿಸಿದ ಆಸ್ಪತ್ರೆ ಮುಖ್ಯಸ್ಥರಿಗೆ ನಿರ್ದೇಶನ ನೀಡಿಬಹುದು. ರಿಮ್ಸ್ ಆಸ್ಪತ್ರೆಯ ಒಳರೋಗಿಗಳನ್ನು ಬೆಂಗಳೂರು ಹಾಗೂ ಬಳ್ಳಾರಿಗೆ ಕಳುಹಿಸದೆ ಇಲ್ಲೆಯೇ ಚಿಕಿತ್ಸೆ ನೀಡುವಂತೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದ್ದಾರೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ವಚ್ಛತೆಗೆ ಆದ್ಯತೆ
ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದೆ. ಸರ್ಕಾರಿ ಆಸ್ಪತ್ರೆಗಳನ್ನು ಕಾರ್ಪೋರೇಟ್ ಮಾದರಿಯ ಆಸ್ಪತ್ರೆಗಳಂತೆ ಹಾಗೂ ಅವುಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಪ್ರತಿಸ್ಪರ್ಧಿಯಾಗುವ ರೀತಿಯಲ್ಲಿ ಅವುಗಳನ್ನು ರೂಪಿಸಲು ಕ್ರಮ ಕೈಗೊಳ್ಳಲಾಗುವುದು.
ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಒಬ್ಬರನ್ನೆ ಮಂತ್ರಿಯನ್ನಾಗಿ ನೇಮಕ ಮಾಡಿದರೆ ರಿಮ್ಸ್ ಮಾದರಿಯ ಆಸ್ಪತ್ರೆಯಗಳಲ್ಲಿ ಉತ್ತಮ ಚಿಕಿತ್ಸೆ ನೀಡಬಹುದಾಗಿದೆ. ಆ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವದಾಗಿ ತಿಳಿಸಿದ ಅವರು ಆ ಮೂಲಕ ಇಲ್ಲಿರುವ ಏಕಸ್ವಾಮ್ಯವನ್ನು ತಪ್ಪಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಯಾವುದೇ ಕಾರಣಕ್ಕೂ ರೋಗಿಗಳಿಗೆ ಹೊರಗಿನಿಂದ ಔಷಧಿ ಅಥವಾ ಅಗತ್ಯ ಪರಿಕರಗಳನ್ನು ತರದಂತೆ ಇಲ್ಲಿಯೇ ಪೂರೈಸಬೇಕು. ಜಿಲ್ಲೆಗೆ ಅಗತ್ಯವಿರುವ ತಜ್ಞ ವೈದ್ಯರ ಸೇವೆಯನ್ನು ಕಲ್ಪಿಸಲಾಗುವುದು. ಅದಕ್ಕಾಗಿ ಆಯಾ ಜಿಲ್ಲೆಗಳಲ್ಲಿ ಎಂಬಿಬಿಎಸ್ ಶಿಕ್ಷಣ ಪೂರೈಸಿದ ವೈದ್ಯರನ್ನು ನೇಮಕ ಮಾಡಿಕೊಳ್ಳುವಂತೆ ಹಾಗೂ ಸಾದ್ಯವಾದಷ್ಟುಬೇಗ ದಂತ ವೈದ್ಯರನ್ನು ನೇಮಕ ಮಾಡಿಕೊಳ್ಳುವಂತೆ ಆರೋಗ್ಯ ಇಲಾಖೆಯ ಕಾರ್ಯದರ್ಶಿಯವರಿಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.
10 ಕೊಟಿ ವೆಚ್ಚದಲ್ಲಿ ಪ್ರಯೋಗಾಲಯ ಸ್ಥಾಪನೆಗೆ ಚಿಂತನೆ
ಮಹಿಳೆಯರಿಗೆ ಬರುವ ಕ್ಯಾನ್ಸರ್‌ನ್ನು ಪರೀಕ್ಷಿಸಲು 10 ಕೊಟಿ ವೆಚ್ಚದಲ್ಲಿ ಪ್ರಯೋಗಾಲಯ ಸ್ಥಾಪನೆಗೆ ಚಿಂತಿಸಲಾಗಿದೆ. ಸರ್ಕಾರಿ ವೈದ್ಯರು ಕಡ್ಡಾಯವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಬೇಕು. ಖಾಸಗಿ ಕ್ಲೀನಿಕ್‌ಗಳಲ್ಲಿ ಸೇವೆ ಮಾಡುವುದು ಕಂಡು ಬಂದರೆ ಅವರ ವಿರುದ್ಧ ನಿರ್ದಾಕ್ಷ್ಯಿಣ್ಯ ಕ್ರಮ ಕೈಗೊಳ್ಳಲಾಗುವುದು. ಸರ್ಕಾರಿ ನೌಕರರು ಖಾಸಗಿ ಆಸ್ಪತ್ರೆಗಳಲ್ಲಿ ಸೇವೆ ಮಾಡುವ ಸಾಕ್ಷ್ಯ ನೀಡಿದರೆ ಅವರ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ವೇಳೆ ಶಾಸಕ ಡಾ.ಶಿವರಾಜ ಪಾಟೀಲ್, ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೇ, ಡಿಸಿ ಆರ್.ವೆಂಕಟೇಶ ಕುಮಾರ, ಎಸ್ಪಿ ಡಾ.ಸಿ.ಬಿ.ವೇದಮೂರ್ತಿ, ಸಿಇಒ ಲಕ್ಷ್ಮೇಕಾಂತ ರೆಡ್ಡಿ, ಜಿಲ್ಲಾ ಶಸ್ತ್ರಚಿಕಿತ್ಸಕ ವಿಜಯ ಶಂಕರ, ರಿಮ್ಸ್ ಹಾಗೂ ಆರೋಗ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಇದ್ದರು.