Asianet Suvarna News Asianet Suvarna News

'ರೈತರಿಗೆ ದೀಪಾವಳಿ ಬಂಪರ್‌ ಕೊಡುಗೆ'

45.54 ಕೋಟಿ ಬೆಳೆವಿಮೆ ಪಾವತಿ| 17 ಸಾವಿರ ರೈತರಿಗೆ ಹಣ ಬಿಡುಗಡೆ| ಬ್ಯಾಂಕ್‌ ಮುಂದೆ ಸಾಲು ನಿಂತ ರೈತರು| ಮಳೆ ಇಲ್ಲದೇ ಕಳೆದ 3 ವರ್ಷಗಳಿಂದ ಭೀಕರ ಬರ ಆವರಿಸಿ ರೈತರು ಸಂಕಷ್ಟಕ್ಕೆ ಸಿಲುಕಿದ್ದರು| 

Good News to Farmers in Deepavali Festival
Author
Bengaluru, First Published Oct 26, 2019, 11:58 AM IST

ಲಿಂಗಸುಗೂರು(ಅ.26): ಪ್ರಸಕ್ತ ಸಾಲಿನ ಪ್ರಧಾನಮಂತ್ರಿ ಫಸಲ್‌ ಭಿಮಾ ಯೋಜನೆಯಡಿ ತಾಲೂಕಿನ 17,139 ರೈತರಿಗೆ 45.79 ಕೋಟಿ ಬೆಳೆವಿಮೆ ಹಣ ಬಿಡುಗಡೆಯಾಗಿದ್ದು, ರೈತರು ಬ್ಯಾಂಕ್‌ಗಳ ಮುಂದೆ ಸರದಿ ಸಾಲಿನಲ್ಲಿ ನಿಂತು ವಿಮೆ ಪಡೆಯುತ್ತಿದ್ದು ರೈತರಿಗೆ ದೀಪಾವಳಿ ಬಂಪರ್‌ ಕೊಡುಗೆಯಾಗಿದೆ.

ಭೀಕರ ಬರದಿಂದಾಗಿ ಈ ಭಾಗದ ಪ್ರಮುಖ ಬೆಳೆಗಳಾದ ಕಡಲೆ, ಜೋಳ ಬೆಳೆ ನಷ್ಟಕ್ಕೆ 16,755 ರೈತರಿಗೆ 44,79,98,420 ವಿಮೆ ಹಣ ಬಂದಿದೆ. ಇನ್ನೂ ಸೂರ್ಯಕಾಂತಿ, ಕುಸುಬಿ, ಅಗಸಿ ಬೆಳೆ ಹಾನಿಯಾದ 384 ರೈತರಿಗೆ 74,69,072 ಒಟ್ಟು 17,139 ರೈತರಿಗೆ 45,5,67,492 ಹಣ ಬಿಡುಗಡೆಯಾಗಿದೆ ಎಂದು ಕೃಷಿ ಇಲಾಖೆ ದೃಢಪಡಿಸಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಮಳೆ ಇಲ್ಲದೇ ಕಳೆದ 3 ವರ್ಷಗಳಿಂದ ಭೀಕರ ಬರ ಆವರಿಸಿ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಅಲ್ಲದೇ ವಿವಿಧ ಬೆಳೆಗಳಿಗೆ ಫಸಲ್‌ ಭಿಮಾ ಯೋಜನೆಯಡಿ ನಿರಂತರ ಹಣ ಕಟ್ಟುತ್ತಾ ಬಂದಿದ್ದರು. ಆದರೆ, ಬರಗಾಲ ಬಂದರೂ ಬೆಳೆವಿಮೆ ಪಾವತಿಯಾಗಿರಲಿಲ್ಲಾ ಪರಿಣಾಮ ರೈತರಿಗೆ ತೀವ್ರ ಸಂಕಷ್ಟ ಎದುರಾಗಿತ್ತು.

ಪ್ರಧಾನಮಂತ್ರಿ ಫಸಲ್‌ ಭಿಮಾ ಯೋಜನೆಯಡಿ ಬೆಳೆ ವಿಮೆ ಹಣ ಕಟ್ಟಿದ್ದರು. 3 ವರ್ಷಗಳ ಕಾಲ ಬರಗಾಲವಿದ್ದರೂ ರೈತರಿಗೆ ಹಣ ಬಿಡುಗಡೆಯಾಗಿರಲಿಲ್ಲ. ರೈತರ ಬೆಳೆ ನಷ್ಟವಾದ ಬಗ್ಗೆ ಕೇಂದ್ರದ ಉನ್ನತಾಧಿಕಾರಿಗಳ ತಂಡ ಬಂದು ವೀಕ್ಷಣೆ ಬೆಳೆ ನಷ್ಟದ ಕುರಿತು ಮಾಹಿತಿ ಸಂಗ್ರಹಿಸಿ ಕೇಂದ್ರಕ್ಕೆ ವರದಿ ನೀಡಿದ್ದರೂ ಮರು ಪಾವತಿಯಾಗಿರಲಿಲ್ಲ.

ಕೊನೆಗೂ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಫಸಲ್‌ ಭಿಮಾ ಯೋಜನೆಯಡಿ ತಾಲೂಕಿನ ರೈತರಿಗೆ ಬೆಳೆನಷ್ಟಕ್ಕೆ ಪರಿಹಾರದ ಮೊತ್ತವನ್ನು ನೇರವಾಗಿ ರೈತರ ಖಾತೆ ಜಮೆ ಮಾಡಿದೆ. ರೈತರಿಗೆ ಬೆಳೆ ವಿಮೆ ಹಣ ಬಂದ ಸುದ್ದಿ ತಿಳಿದು ಬ್ಯಾಂಕ್‌ಗಳತ್ತ ರೈತರು ಮುಖ ಮಾಡಿದ್ದು ಬ್ಯಾಂಕುಗಳ ಮುಂದೆ ಸರದಿ ಸಾಲಿನಲ್ಲಿ ನಿಂತು ಹಣ ಪಡೆಯುತ್ತಿದ್ದಾರೆ.

ದೀಪಾವಳಿಯ ನಿಮಿತ್ತ ಸಾಲು, ಸಾಲು ರಜೆಗಳ ಬರುವುದನ್ನು ಅರಿತ ರೈತರು ಹಬ್ಬದ ಮೊದಲೇ ಹಣ ಪಡೆಯಲು ಮುಂದಾಗಿದ್ದು ಪರಿಣಾಮ ಬ್ಯಾಂಕುಗಳ ಮುಂದೆ ರೈತರ ಸರದಿ ಸಾಲು ನೆರೆದಿದೆ. ಆದರೆ ಹಣ ಪಾವತಿ ಬ್ಯಾಂಕುಗಳಿಗೆ ಸಾಧ್ಯವಾಗುತ್ತಿಲ್ಲ ಲಕ್ಷಾಂತರ ವಿಮೆ ಹಣ ಬಂದರೂ ಬ್ಯಾಂಕುಗಳು ಕೆಲವಡೆ ಕೇವಲ 10 ಸಾವಿರ ಮಾತ್ರ ಪಾವತಿ ಮಾಡುತ್ತಿವೆ ಎಂದು ರೈತರ ಆರೋಪವಾಗಿದೆ. ಬೆಳೆ ನಷ್ಟವಾಗಿದೆ ಅದರ ಹಣವನ್ನು ಪಾವತಿ ಮಾಡಲು ಬ್ಯಾಂಕುಗಳ ಮೀನಾಮೇಷ ಮಾಡುತ್ತಿವೆ ಪರಿಣಾಮ ರೈತರಿಗೆ ಬಂದ ಅಷ್ಟೂ ಬೆಳೆ ಹಣ ಪಾವತಿಯಾಗುತ್ತಿಲ್ಲ ಎಂಬುದು ರೈತರ ಅಳಲಾಗಿದೆ.

2019-20ನೇ ಸಾಲಿನ ಹಿಂಗಾರು ಬೆಳೆಗಳಾದ ಜೋಳ, ಕಡಲೆ, ಹುರುಳಿ, ಅಗಸೆ, ಸೂರ್ಯಕಾಂತಿ, ಕುಸುಬೆ ಹಾಗೂ ಬೇಸಿಗೆ ಬೆಳೆಗಳಾದ ಭತ್ತ, ಶೇಂಗಾ, ಸೂರ್ಯಕಾಂತಿ ಬೆಳೆಗೆ ವಿಮೆ ಮಾಡಿಸಲು ಅವಕಾಶವಿದ್ದು ರೈತರು ವಿಮಾ ಮೊತ್ತ ತುಂಭಲು ಕೃಷಿ ಇಲಾಖೆ ಮನವಿ ಮಾಡಿದೆ. ಆಯಾ ಭಾಗದ ರೈತರು ಸಮೀಪದ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಲು ಕೋರಿದ್ದಾರೆ.

ಕೇಂದ್ರ ಸರ್ಕಾರ ಬೆಳೆ ನಷ್ಟವಾದ ರೈತರಿಗೆ ಪ್ರಧಾನಮಂತ್ರಿ ಫಸಲ್‌ ಭಿಮಾ ಯೋಜನೆಯಡಿ ಹಣ ಬಿಡುಗಡೆ ಮಾಡಿರುವುದು ಸಂತಸ ಉಂಟು ಮಾಡಿದೆ. ಇದರಂತೆ ನೆರೆ ಪೀಡಿತ ಪ್ರದೇಶದ ರೈತರಿಗೆ ಸೂಕ್ತ ಪರಿಹಾರ ನೀಡಿ ಸರ್ಕಾರ ನೆರವಿಗೆ ಧಾವಿಸಲಿ ಎಂದು ಲಿಂಗಸುಗೂರಿನ ರೈತ ಮುಖಂಡ ಅಮರಣ್ಣ ಗುಡಿಹಾಳ ಅವರು ಹೇಳಿದ್ದಾರೆ.  

ಇನ್ನು ಈ ಬಗ್ಗೆ ಮಾಹಿತಿ ನೀಡಿದ ಲಿಂಗಸುಗೂರಿನ ಸಹಾಯಕ ಕೃಷಿ ನಿರ್ದೇಶಕ ಮಹಾಂತೇಶ ಹವಾಲ್ದಾರ ಅವರು, ತಾಲೂಕಿನ ರೈತರಿಗೆ ಪ್ರಧಾನಮಂತ್ರಿ ಫಸಲ್‌ ಭಿಮಾ ಯೋಜನೆಯಡಿ ವಿಮೆ ಹಣ ನೇರವಾಗಿ ರೈತರ ಖಾತೆ ಜಮೆ ಮಾಡಲಾಗಿದೆ. ಇನ್ನೂ ಕೆಲ ರೈತರು ಹಣ ಬಂದಿಲ್ಲ ಎಂದು ಹೇಳುತ್ತಿದ್ದಾರೆ ಈ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. 
 

Follow Us:
Download App:
  • android
  • ios