ಮನೆಯಿಂದ ಕೆಲಸ ಮಾಡ್ತಿರುವವರು ಸೋಮಾರಿಗಳಾ?: Microsoft ಸಿಇಒ ಏನ್ ಹೇಳಿದ್ರು ನೋಡಿ
ವರ್ಕ್ ಫ್ರಮ್ ಹೋಮ್‌ನಿಂದಾಗಿ ಉದ್ಯೋಗಿಗಳು ಸೋಮಾರಿಗಳಾಗಿದ್ದಾರಾ? ಹೌದು ಎಂದು ಹೇಳ್ತಿದ್ದಾರೆ ಮೈಕ್ರೋಸಾಫ್ಟ್ ಸಿಇಒ ಸತ್ಯಾ ನಡೆಲ್ಲಾ. ಈ ಕುರಿತ ಒಂದು ವರದಿ ಇಲ್ಲಿದೆ
ನವದೆಹಲಿ: ಕೋವಿಡ್ ಸಮಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ಆರಂಭವಾದ ಈ ವರ್ಕ್ ಫ್ರಮ್ ಹೋಮ್ ಅಥವಾ ಮನೆಯಿಂದ ಕೆಲಸ ಮಾಡುವ ಪದ್ಧತಿ ಉದ್ಯೋಗಿಗಳ ಕೆಲಸದ ರೀತಿಗೆ ಹೊಸ ಆಯಾಮವನ್ನೇ ನೀಡಿದೆ. ಅನೇಕರ ಜೀವನಶೈಲಿಯನ್ನೇ ಇದು ಬದಲಿಸಿದೆ. ಹೊಸ ಸಾಧ್ಯತೆಗಳ ಬಗ್ಗೆ ಅದು ಬೆಳಕು ಚೆಲ್ಲಿದೆ. ಆದರೆ ಈ ವರ್ಕ್ ಫ್ರಮ್ ಹೋಮ್‌ನಿಂದಾಗಿ ಉದ್ಯೋಗಿಗಳು ಸೋಮಾರಿಗಳಾಗಿದ್ದಾರಾ? ಹೌದು ಎಂದು ಹೇಳ್ತಿದ್ದಾರೆ ಮೈಕ್ರೋಸಾಫ್ಟ್ ಸಿಇಒ ಸತ್ಯಾ ನಡೆಲ್ಲಾ.
ಮೈಕ್ರೋಸಾಫ್ಟ್ ಮ್ಯಾನೇಜರ್‌ಗಳಿಗೆ (Microsoft managers) ಈ ಅನುಭವ ಆಗಿದೆಯಂತೆ ಇದು ನಿಜ, ಮನೆಯಿಂದ ಕೆಲಸ ಮಾಡುವ ಉದ್ಯೋಗಿಗಳು ಸೋಮಾರಿಗಳಾಗುತ್ತಿದ್ದಾರೆ ಎಂದು ಸತ್ಯಾ ನಡೆಲ್ಲಾ (Satya Nadella) ಹೇಳಿದ್ದಾರೆ. ವರ್ಕ್ ಫ್ರಮ್ ಹೋಂ ಸಂಸ್ಕೃತಿ ಬಗ್ಗೆ ಸತ್ಯಾ ನಡೆಲ್ಲಾ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಪ್ರಸ್ತುತ ಮೈಕ್ರೋಸಾಫ್ಟ್ ಕಂಪನಿ ತನ್ನ ಉದ್ಯೋಗಿಗಳಿಗೆ ಹೈಬ್ರೀಡ್ ಪದ್ಧತಿಯನ್ನು (ಹೈಬ್ರೀಡ್ ಎಂದರೆ ಸ್ವಲ್ಪ ದಿನ ಮನೆಯಲ್ಲಿ ಸ್ವಲ್ಪ ದಿನ ಕಚೇರಿಯಲ್ಲಿ ಕೆಲಸ) ನೀಡಿದೆ. ಇದರ ಪ್ರಕಾರ ಶೇಕಡಾ 50 ರಷ್ಟು ಮನೆಯಲ್ಲಿ ಉಳಿದ 50 ತಮಗೆ ಬೇಕೆನಿಸಿದ ಜಾಗದಿಂದ ಕೆಲಸ ಮಾಡಬಹುದು.
ಕಣ್ಣಿಲ್ಲದ ಟೆಕ್ಕಿಗೆ ವಾರ್ಷಿಕ 47 ಲಕ್ಷ ವೇತನದ ಕೆಲಸ: ಆಫರ್ ನೀಡಿದ ಮೈಕ್ರೋಸಾಫ್ಟ್ ಕಂಪನಿ
ಪ್ರಸ್ತುತ ಕೋವಿಡ್ ಸಂಪೂರ್ಣವಾಗಿ ಕಡಿಮೆ ಆಗಿದ್ದು, ಬಹುತೇಕ ಕಂಪನಿಗಳು ತಮ್ಮ ವಲಯವನ್ನು ಲೆಕ್ಕಿಸದೇ ಉದ್ಯೋಗಿಗಳನ್ನು ಕೆಲಸಕ್ಕೆ ಕಚೇರಿಗೆ ಬರುವಂತೆ ಕರೆಯುತ್ತಿವೆ. ವಿಶೇಷವಾಗಿ ಟೀಮ್ ಲೀಡರ್‌ಗಳು (Team leaders), ಮ್ಯಾನೇಜರ್‌ಗಳು ಉದ್ಯೋಗಿಗಳನ್ನು ಕಚೇರಿಗೆ ಕರೆಸಲು ಬಯಸುತ್ತಿದ್ದಾರೆ. ಆದರೆ ಬಹುತೇಕ ಉದ್ಯೋಗಿಗಳು ದಿನವೂ ಕಚೇರಿಗೆ ಬರಲು ಹೆಣಗಾಡುತ್ತಿದ್ದಾರೆ. ಈ ಮಧ್ಯೆ ಮೈಕ್ರೋಸಾಫ್ಟ್ ಸಿಇಒ ಸತ್ಯ ನಡೆಲ್ಲಾ ಈ ಬಗ್ಗೆ ಮಾತನಾಡಿದ್ದು, ಸಂಸ್ಥೆಯಲ್ಲಿರುವ ಮ್ಯಾನೇಜರ್‌ಗಳು ಉದ್ಯೋಗಿಗಳು ಕಚೇರಿಗೆ ಬಂದು ಕೆಲಸ ಮಾಡಬೇಕೆಂದು ಹೇಳುತ್ತಿದ್ದಾರೆ. ಏಕೆಂದರೆ ಮನೆಯಿಂದಲೇ ಕೆಲಸ ಮಾಡುವ ಉದ್ಯೋಗಿಗಳು ಸೋಮಾರಿಗಳಾಗಿದ್ದಾರೆ ಎಂದು ಮ್ಯಾನೇಜರ್‌ಗಳು ಭಾವಿಸಿದ್ದಾರೆ ಎಂದು ಹೇಳಿದರು.
ವಿಂಡೋಸ್ ಸೆಂಟ್ರಲ್ ವರದಿ ಪ್ರಕಾರ, ಕೆಲವು ಬಾಸ್‌ಗಳು ವರ್ಕ್ ಫ್ರಮ್ ಹೋಮ್ ಸಂಸ್ಕೃತಿ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ನಾವು (ಉತ್ಪಾದಕತೆ ಮತಿವಿಕಲ್ಪತೆ) productivity paranoia ಎಂದು ಏನನ್ನು ವಿವರಿಸುತ್ತಿದ್ದೇವೋ ಅದರಿಂದ ಹೊರಗೆ ಬರಬೇಕು. ನಮ್ಮ ಬಳಿ ಇರುವ ಎಲ್ಲಾ ದಾಖಲೆಗಳು ತೋರಿಸುವಂತೆ 80 ಶೇಕಡಾಕ್ಕಿಂತಲೂ ಹೆಚ್ಚು ಉದ್ಯೋಗಿಗಳು ತಾವುಗಳು ಕೆಲಸದ ವಿಚಾರದಲ್ಲಿ ಬಹಳ ಸೃಜನಶೀಲರು (very productive) ಎಂದು ಭಾವಿಸಿದ್ದಾರೆ. ಆದರೆ ಅವರ ನಿರ್ವಾಹಕರು ಅವರು ಪ್ರಡಕ್ಟಿವ್ ಅಲ್ಲ ಎಂದು ಯೋಚಿಸುತ್ತಾರೆ ಎಂದು ನಡೆಲ್ಲಾ ಹೇಳಿದ್ದನ್ನು ಉಲ್ಲೇಖಿಸಿ ವಿಂಡೋಸ್ ಸೆಂಟ್ರಲ್ ವರದಿ ಮಾಡಿದೆ.
ದಿವ್ಯಾಂಗರ ಸಹಾಯಕ್ಕೆ ನಿಂತ ಮೈಕ್ರೋಸಾಫ್ಟ್, 1 ಲಕ್ಷ ಉದ್ಯೋಗಾವಕಾಶ ಸೃಷ್ಟಿ!
ಅಲ್ಲದೇ ವರ್ಕ್ ಫ್ರಮ್ ಹೋಮ್ ಸಂಸ್ಕೃತಿ ಬಗ್ಗೆ ಇಡೀ ದೇಶದಲ್ಲಿ ಮೈಕ್ರೋಸಾಫ್ಟ್ ಕೈಗೊಂಡ ದೊಡ್ಡ ಮಟ್ಟದ ಸಮೀಕ್ಷೆ ಬಗ್ಗೆ ಪ್ರತಿಕ್ರಿಯಿಸಿದ ನಡೆಲ್ಲಾ ಅವರು, ಸರ್ವೆಯ ಪ್ರಕಾರ, ಶೇಕಡಾ 87 ರಷ್ಟು ಮೈಕ್ರೊಸಾಫ್ಟ್ ಉದ್ಯೋಗಿಗಳು ತಾವು ಮನೆಯಿಂದಲೇ ಕೆಲಸ ಮಾಡುವುದರಿಂದ ಹೆಚ್ಚು ಕೆಲಸ ಮಾಡುತ್ತೇವೆ ಎಂದು ಭಾವಿಸಿದ್ದಾರೆ. ಆದರೆ ಶೇಕಡಾ 80 ರಷ್ಟು ಮೈಕ್ರೊಸಾಫ್ಟ್ ಮ್ಯಾನೇಜರ್‌ಗಳು, ಮನೆಯಿಂದಲೇ ಕೆಲಸ ಮಾಡುವ ಉದ್ಯೋಗಿಗಳು ಕಡಿಮೆ ಕೆಲಸ ಮಾಡುತ್ತಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ ವರ್ಕ್ ಫ್ರಮ್ ಹೋಮ್ ವಿಚಾರವಾಗಿ ಮೈಕ್ರೋಸಾಫ್ಟ್ ಕಂಪನಿಯಲ್ಲಿ ಒಮ್ಮತವಿಲ್ಲ.
ಪ್ರಸ್ತುತ ಮೈಕ್ರೋಸಾಫ್ಟ್ ಸಂಸ್ಥೆಯಲ್ಲಿ ಹೈಬ್ರೀಡ್ ಕೆಲಸದ ಸಂಸ್ಕೃತಿ ಇದೆ. ಇದರಂತೆ 50 ಶೇಕಡಾದಷ್ಟು ಕೆಲಸ ಮನೆಯಿಂದ ಇನ್ನುಳಿದ 50 ಶೇಕಡಾದಷ್ಟು ಕೆಲಸವನ್ನು ಕಚೇರಿಗೆ ಬಂದು ಮಾಡಬೇಕಿದೆ. ಅದೇನೆ ಇರಲಿ ಒಟ್ಟಿನಲ್ಲಿ ಈ ವರ್ಕ್‌ಫ್ರಮ್ ಕೆಲಸದ ಹೊಸ ಸಾಧ್ಯತೆಯನ್ನು ಜಗತ್ತಿಗೆ ತೋರಿಸಿದ್ದಂತು ನಿಜ. ಬೆಳಗ್ಗೆ ಬೇಗ ಎದ್ದು ಊಟ ಉಪಹಾರ ಮಾಡಿ ಬುತ್ತಿ ಕಟ್ಟಿಕೊಂಡು ಓಡುತ್ತಿರುವ ಬಸ್ ಹಿಡಿದು ಕಚೇರಿಗೆ ತಲುಪಿ ಕಂಪ್ಯೂಟರ್ ಮುಂದೆ ಕುಳಿತು ಕುಟ್ಟುವ ಕೆಲಸದ ರೀತಿಯನ್ನು ಇದು ಬದಲಿಸಿದೆ. ಮೊದಲೆಲ್ಲಾ ಬೆಳಗ್ಗೆ 9 ರಿಂದ ಸಂಜೆ 6ಕ್ಕೆ ಮೀಸಲಿದ್ದ ಈ ಕೆಲಸವನ್ನು ಉದ್ಯೋಗಿಗಳು ಮಧ್ಯೆ ಮಧ್ಯೆ ಬ್ರೇಕ್ ತೆಗೆದುಕೊಂಡು ರಾತ್ರಿಯವರೆಗೂ ಮಾಡುತ್ತಿದ್ದಾರೆ.