ಪ್ರ್ಯಾಂಕ್‌ಸ್ಟರ್‌ ಜೋಡಿಯಾದ ರಾಹುಲ್‌ ಲಿಗ್ಮಾ ಹಾಗೂ ಡೇನಿಯಲ್‌ ಜಾನ್ಸನ್‌ ಅವರನ್ನು ಭೇಟಿಯಾದ ಬಳಿಕ ಚಿತ್ರವನ್ನು ಹಂಚಿಕೊಂಡ ಟ್ವಿಟರ್‌ ಮಾಲೀಕ ಎಲಾನ್‌ ಮಸ್ಕ್‌, ಇವರನ್ನು ಮತ್ತೆ ಟ್ವಿಟ್ಟರ್‌ಗೆ ಸೇರ್ಪಡೆ ಮಾಡಿಕೊಂಡಿರುವುದಾಗಿ ಹೇಳಿದ್ದರು. ಹೀಗೆ ಟ್ವೀಟ್‌ ಮಾಡುವ ಮೂಲಕ ಮಸ್ಕ್‌, ಜಗತ್ತಿನ ಮಾಧ್ಯಮಗಳನ್ನೇ ಟ್ರೋಲ್‌ ಮಾಡಿದ್ದಾರೆ.

ಸ್ಯಾನ್‌ ಫ್ರಾನ್ಸಿಸ್ಕೋ (ನ.17): ಸಾಮಾಜಿಕ ಮಾಧ್ಯಮ ದೈತ್ಯ ಕಂಪನಿಗಳಲ್ಲಿ ಒಂದಾದ ಟ್ವಿಟರ್‌ಅನ್ನು ಖರೀದಿ ಮಾಡಿದ ದಿನದಿಂದಲು ಎಲಾನ್‌ ಮಸ್ಕ್‌ ಪ್ರತಿ ದಿನ ಎನ್ನುವಂತೆ ಪತ್ರಿಕೆಗಳಲ್ಲಿ ಟಿವಿಗಳಲ್ಲಿ ಹೆಡ್‌ಲೈನ್‌ ಆಗಿದ್ದಾರೆ. ಕೆಲವೇ ವಾರಗಳ ಅಂತರದಲ್ಲಿ ಟ್ವಟರ್‌ನ ಆಡಳಿತ ಹಾಗೂ ಕಾರ್ಯನಿರ್ವಹಣೆಯಲ್ಲಿ ಸಂಪೂರ್ಣ ಬದಲಾವಣೆಯಾಗಿದೆ. ಈ ಎಲ್ಲಾ ಬದಲಾವಣೆಗಳನ್ನು ಸ್ವತಃ ಎಲಾನ್‌ ಮಸ್ಕ್‌ ತಮ್ಮ ಟ್ವೀಟ್‌ಗಳ ಮೂಲಕವೇ ತಿಳಿಸುತ್ತಿರುವುದು ಸಾಮಾನ್ಯ ವ್ಯಕ್ತಿಗಳಿಗೆ ಸಖತ್‌ ಮನರಂಜನೆ ನೀಡುತ್ತಿದೆ. ಕೇವಲ ಒಂದೇ ಒಂದು ಟ್ವೀಟ್‌ನಲ್ಲಿ ತಮ್ಮೆಲ್ಲಾ ನಿರ್ಧಾರಗಳನ್ನು ತಿಳಿಸುವ ಮಸ್ಕ್‌ ಅವರ ಮೊಂಡುತನ, ದಾರ್ಷ್ಟದ ವರ್ತನೆಯ ಬಗ್ಗೆ ಜಗತ್ತಿನ ಮಾಧ್ಯಮಗಳು ಸಾಕಷ್ಟು ನೆಗೆಟಿವ್‌ ಸುದ್ದಿಗಳನ್ನು ಬಿತ್ತರ ಮಾಡುತ್ತಿವೆ. ಈ ಮಾಧ್ಯಮಗಳನ್ನು ಕೂಡ ಮಸ್ಕ್‌ ತಮ್ಮ ಹ್ಯಾಂಡಲ್‌ನಲ್ಲಿ ಟ್ರೋಲ್‌ ಮಾಡುತ್ತಿದ್ದಾರೆ. ಅಂಥದ್ದೇ ಒಂದು ಪ್ರಕರಣದಲ್ಲಿ ಮಸ್ಕ್‌, ಜಾಗತಿಕ ಮಾಧ್ಯಮಗಳನ್ನು ಸಖತ್‌ ಆಗಿ ಟ್ರೋಲ್‌ ಮಾಡಿದ್ದಾರೆ. 

Scroll to load tweet…


ಕಂಪನಿಯನ್ನು ಖರೀದಿ ಮಾಡಿದ ಬಳಿಕ, ಹೊಸ ಕಂಪನಿ ಕುರಿತಾಗಿ ತಮ್ಮ ಐಡಿಯಾಗಳನ್ನು ಹೇಳಿದ್ದರು. ಅದರಲ್ಲಿ ಪ್ರಮುಖವಾಗಿ ಹಿರಿಯ ಅಧಿಕಾರಿಗಳನ್ನು ಕಂಪನಿಯಿಂದ ವಜಾ ಮಾಡಿದ್ದರು. ಅದರಲ್ಲಿ ಕಂಪನಿಯ ಸಿಇಒ ಆಗಿದ್ದ ಪರಾಗ್‌ ಅಗರ್ವಾಲ್‌ ಹೆಸರೇ ಪ್ರಮುಖವಾಗಿತ್ತು. ಈ ಎಲ್ಲಾ ಗದ್ದಲದ ಮಧ್ಯೆ ಪ್ರ್ಯಾಂಕ್‌ಸ್ಟರ್‌ ಜೋಡಿಯ ಸುದ್ದಿಯೊಂದು ಎಲ್ಲಾ ಮಾಧ್ಯಮಗಳು ಪ್ರಕಟ ಮಾಡಿದ್ದರು. ಬಹುಶಃ ಪರ್ಫೆಕ್ಟ್‌ ಟೈಮಿಂಗ್‌ ಇರುವ ಪ್ರ್ಯಾಂಕ್‌ಗೆ ಉದಾಹರಣೆಯಾಗಿ ಇದನ್ನು ನೀಡಬಹುದು. ರಾಹುಲ್‌ ಲಿಗ್ಮಾ ಹಾಗೂ ಡೇನಿಯಲ್‌ ಜಾನ್ಸನ್‌ ಪ್ರ್ಯಾಂಕ್‌ಸ್ಟರ್‌ ಜೋಡಿಯನ್ನು ಎಲಾನ್‌ ಮಸ್ಕ್‌ ಇತ್ತೀಚೆಗೆ ಸ್ವತಃ ಭೇಟಿಯಾಗಿದ್ದು ಮಾತ್ರವಲ್ಲದೆ ಅವರನ್ನು ಟ್ವಿಟರ್‌ಗೆ ಮರು ಸೇರ್ಪಡೆ ಮಾಡಿದ್ದಾಗಿ ಬರೆದುಕೊಂಡಿದ್ದಾರೆ. ಇದರ ಬಗ್ಗೆ ನಿಮಗೆ ವಿಷಯ ಗೊತ್ತಿಲ್ಲದೇ ಇದ್ದಲ್ಲಿ, ಅಂತರ್ಜಾಲದಲ್ಲಿ ಇತ್ತೀನ ಶ್ರೇಷ್ಠ ಪ್ರ್ಯಾಂಕ್‌ನ ಬಗ್ಗೆವಿವರ ಇಲ್ಲಿದೆ.

ಅಂದಾಜು ಒಂದು ವಾರದ ಹಿಂದೆ ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿದ್ದ ಟ್ವಿಟರ್‌ ಪ್ರಧಾನ ಕಚೇರಿಯ ಮುಂದೆ ನಿಂತಿದ್ದ ರಾಹುಲ್‌ ಲಿಗ್ಮಾ ಹಾಗೂ ಡೇನಿಯಲ್‌ ಜಾನ್ಸನ್‌, ತಮ್ಮನ್ನು ತಾವು ಟ್ವಿಟರ್‌ ಉದ್ಯೋಗಿಗಳು ಹಾಗೂ ಈಗ ತಾನೆ ನಮ್ಮನ್ನು ಮಸ್ಕ್‌ ಹುದ್ದೆಯಿಂದ ವಜಾ ಮಾಡಿದ್ದಾರೆ ಎನ್ನುವ ರೀತಿಯಲ್ಲಿ ಪ್ರ್ಯಾಂಕ್‌ ಮಾಡಿದ್ದರು. ಕಂಪನಿಯಿಂದ ಹೊರಬಂದಿರುವ ಅವರು ತಮ್ಮ ವಸ್ತುಗಳನ್ನು ಬಾಕ್ಸ್‌ನಲ್ಲಿ ಇಟ್ಟುಕೊಂಡು ಬಂದಿದ್ದಾಗಿ ತಿಳಿಸಿದ್ದರು. ಆ ಸಮಯದಲ್ಲಿ ಜಗತ್ತಿನ ಮಾಧ್ಯಮಗಳಿಗೆ ಇದು ತಮಾಷೆ ಎನ್ನುವುದು ಗೊತ್ತಾಗಿರಲಿಲ್ಲ. ಟ್ವಿಟರ್‌ನ ಕೆಲವೊಂದು ಡೇಟಾ ಇಂಜಿನಿಯರ್‌ಗಳನ್ನು ಮಸ್ಕ್‌ ವಜಾ ಮಾಡಿದ್ದಾರೆ ಎಂದು ವರದಿ ಮಾಡಿದ್ದರು. ಈ ಕುರಿತಾಗಿ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾದ ಬಳಿಕ ಎಲಾನ್‌ ಮಸ್ಕ್‌ ಕೂಡ ಇವರನ್ನು ಉದ್ದೇಶಿಸಿ ಕುಚೋದ್ಯದ ಟ್ವೀಟ್‌ ಮಾಡಿದ್ದರು.

ಇವರ ಪ್ರ್ಯಾಂಕ್‌ಗಳನ್ನು ಮಾಧ್ಯಮಗಳು ನಿಜ ಎಂದು ನಂಬಿಕೊಂಡು ವರದಿ ಮಾಡಿದ ರೀತಿಗೆ ಅಚ್ಚರಿ ಪಟ್ಟಿದ್ದ ಮಸ್ಕ್‌, ಸಿಎನ್‌ಬಿಎಸ್‌ ಪತ್ರಕರ್ತೆಯ ಟ್ವೀಟ್‌ಗೆ ಇದು ಅತ್ಯಂತ ಶ್ರೇಷ್ಠ ಟ್ರೋಲ್‌ ಎಂದು ಟ್ವೀಟ್‌ ಮಾಡಿದ್ದರು. 'ನೋಡುವಾಗಲೇ ಗೊತ್ತಾಗುತ್ತದೆ ಇವರಿಗೆ ಆಘಾತವಾಗಿದೆ ಎನ್ನುವುದು. ತಾವು ಟೆಸ್ಲಾ ಕಾರ್‌ನ ಮಾಲೀಕರಾಗಿದ್ದಾಗಿ ಡೇನಿಯಲ್‌ ಹೇಳುತ್ತಿದ್ದಾರೆ. ಮುಂದಿನ ಪೇಮೆಂಟ್‌ಗಳನ್ನು ಹೇಗೆ ಮಾಡುವುದು ಎನ್ನುವುದು ಗೊತ್ತಾಗುತ್ತಿಲ್ಲ ಎನ್ನುತ್ತಿದ್ದಾರೆ' ಎಂದು ಸಿಎನ್‌ಬಿಎಸ್‌ ಡಿಯರ್‌ಡ್ರಾ ಬರೆದಿದ್ದರು. ಇದಕ್ಕೆ ಮಸ್ಕ್‌ ಟ್ರೋಲ್‌ ಟ್ವೀಟ್‌ ಮಾಡಿದ್ದರು.

Twitter ಬ್ಲೂಟಿಕ್‌ಗೆ 8 ಡಾಲರ್‌ ಶುಲ್ಕಕ್ಕೆ ತಡೆ..! ನಕಲಿ ಖಾತೆಗಳು ಹೆಚ್ಚಿದ ಕಾರಣ ಅಮಾನತು..?

ಅದಾದ ಕೆಲ ಹೊತ್ತಿನಲ್ಲಿಯೇ ರಾಹುಲ್‌ ಲಿಗ್ಮಾ ಇನ್ನೊಂದು ವಿಡಿಯೋವನ್ನು ಪೋಸ್ಟ್‌ ಮಾಡಿದ್ದರು. ಅದರಲ್ಲಿ ಈ ವರ್ಷ ಉದ್ಯೋಗಿಗಳನ್ನು ವಜಾ ಮಾಡಿದ ಇನ್ನೆರಡು ಕಂಪನಿಗಳಾದ ವೆಬ್‌ 2.0 ಹಾಗೂ ಎಫ್‌ಟಿಎಕ್ಸ್‌ನಿಂದಲೂ ತಮ್ಮನ್ನು ಹೊರಹಾಕಲಾಗಿದೆ ಎಂದು ವಿಡಿಯೋ ಮಾಡಿದ್ದರು. ರಾಹುಲ್‌ ಲಿಗ್ಮಾ ಹಾಗೂ ಡೇನಿಯಲ್‌ ಜಾನ್ಸನ್‌ ಅವರ ಪರೋಡಿಗಳಿಗೆ ಇಂಟರ್ನೆಟ್‌ ಫಿದಾ ಆಗಿರುವುದನ್ನು ನೀಡಿದ ಮಸ್ಕ್‌, ತಾವೂ ಅವರೊಂದಿಗೆ ಸೇರಿಕೊಂಡಿದ್ದಾರೆ. ಪ್ರ್ಯಾಂಕ್‌ಸ್ಟರ್ ಜೋಡಿಯನ್ನು ಅಕ್ಕಪಕ್ಕದಲ್ಲಿ ನಿಲ್ಲಿಸಿಕೊಂಡು ಟ್ವಿಟರ್‌ ಲೋಗೋದ ಮುಂಭಾಗದಲ್ಲಿ ನಿಂತು ಅವರು ಫೋಟೋ ಕೂಡ ತೆಗೆಸಿಕೊಂಡಿದ್ದಾರೆ.

Twitter ನೌಕರರಿಗೆ ವಾರಕ್ಕೆ 80 ತಾಸುಗಳ ಕೆಲಸ: ಉಚಿತ ಊಟ, ತಿಂಡಿ ಸೌಲಭ್ಯ ಕಟ್‌..!

ಟ್ವಿಟರ್‌ನಲ್ಲಿ ಈ ಫೋಟೋ ಹಂಚಿಕೊಳ್ಳುವುದರೊಂದಿಗೆ ಅವರಿಬ್ಬರನ್ನೂ ಟ್ವಿಟರ್‌ನಲ್ಲಿ ಮರು ಸೇರ್ಪಡೆ ಮಾಡಿಕೊಳ್ಳಲಾಗಿದೆ ಎಂದು ಪ್ರ್ಯಾಂಕ್‌ ಮಾಡಿದ್ದರು. 'ಲಿಗ್ಮಾ ಹಾಗೂ ಜಾನ್ಸನ್‌ ಅವರನ್ನು ಮರಳಿ ಸೇರಿಸಿಕೊಳ್ಳುತ್ತಿದ್ದೇನೆ' ಎಂದು ಬರೆದಿರುವ ಮಸ್ಕ್‌, ನಾನು ತಪ್ಪು ಮಾಡಿದಾಗ ಅದನ್ನು ಒಪ್ಪಿಕೊಳ್ಳುವುದು ಕೂಡ ಮುಖ್ಯವಾಗುತ್ತದೆ ಇವರಿಬ್ಬರನ್ನು ವಜಾ ಮಾಡಿದ್ದು ನನ್ನ ಈವರೆಗಿನ ಅತಿದೊಡ್ಡ ತಪ್ಪು' ಎಂದು ಟ್ರೋಲ್‌ ಮಾಡಿದ್ದರು.