ಅಗ್ನಿವೀರರಿಗೆ ಕಾರ್ಪೋರೆಟ್ ನೌಕರಿ ಆಫರ್: ಟಿವಿಎಸ್, ಬಯೋಕಾನ್, ಅಪೋಲೋದ ಬೆಂಬಲ!
* ಉದ್ಯೋಗ ನೀಡುವುದಾಗಿ ಮಹೀಂದ್ರ, ಗೋಯೆಂಕಾ ಘೋಷಣೆ
* ಅಗ್ನಿವೀರರಿಗೆ ಕಾರ್ಪೋರೆಟ್ ನೌಕರಿ ಆಫರ್
* ‘ಅಗ್ನಿಪಥ’ಕ್ಕೆ ಟಿವಿಎಸ್, ಬಯೋಕಾನ್, ಅಪೋಲೋದ ಬೆಂಬಲ
ನವದೆಹಲಿ(ಜೂ.21): 4 ವರ್ಷಗಳ ಅಲ್ಪಾವಧಿಗೆ ಸೇನಾ ಯೋಧರನ್ನು ನೇಮಕ ಮಾಡಿಕೊಳ್ಳುವ ‘ಅಗ್ನಿಪಥ’ ಯೋಜನೆ ವಿರೋಧಿಸಿ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿರುವಾಗಲೇ, ದೇಶದ ಕಾರ್ಪೋರೆಟ್ ದಿಗ್ಗಜರು ಈ ಯೋಜನೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. 4 ವರ್ಷ ಸೇವಾವಧಿ ಮುಗಿಸಿ ಬರುವ ಅಗ್ನಿವೀರರಿಗೆ ಉದ್ಯೋಗ ನೀಡುವ ಘೋಷಣೆಯನ್ನೂ ಮಾಡಿದ್ದಾರೆ.
ಮಹೀಂದ್ರಾ ಗ್ರೂಪ್ ಚೇರ್‌ಮನ್ ಆನಂದ್ ಮಹೀಂದ್ರಾ, ಆರ್‌ಪಿಜಿ ಎಂಟರ್‌ಪ್ರೈಸಸ್ ಚೇರ್‌ಮನ್ ಹರ್ಷ ಗೋಯೆಂಕಾ ಹಾಗೂ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಮತ್ತಿತರರು ಅಗ್ನಿಪಥ ಯೋಜನೆಗೆ ಬೆಂಬಲ ಪ್ರಕಟಿಸಿದ್ದು, ಕಾರ್ಪೋರೆಟ್ ಕ್ಷೇತ್ರದಲ್ಲಿ ಅಗ್ನಿವೀರರಿಗೆ ಸಾಕಷ್ಟುಉದ್ಯೋಗವಕಾಶಗಳಿವೆ ಎಂದಿದ್ದಾರೆ.
ಅಗ್ನಿಪಥ ಯೋಜನೆಯಡಿ ತರಬೇತಿ ಹೊಂದಿದ, ಸಮರ್ಥ ಹಾಗೂ ಯುವ ಸಮುದಾಯವನ್ನು ನೇಮಕಾತಿ ಮಾಡಿಕೊಳ್ಳುವ ಅವಕಾಶವನ್ನು ನಾವು ಸ್ವಾಗತಿಸುತ್ತೇವೆ ಎಂದು ಆನಂದ್ ಮಹೀಂದ್ರಾ ಸಾಮಾಜಿಕ ಜಾಲತಾಣ ಟ್ವೀಟರ್‌ನಲ್ಲಿ ಘೋಷಿಸಿದ್ದಾರೆ. ಯಾವ ಉದ್ಯೋಗ ಕೊಡುತ್ತೀರಿ ಎಂದು ಬಳಕೆದಾರರೊಬ್ಬರು ಕೇಳಿರುವ ಪ್ರಶ್ನೆಗೆ, ಅಗ್ನಿವೀರರಿಗೆ ಕಾರ್ಪೋರೆಟ್ ವಲಯದಲ್ಲಿ ಬೃಹತ್ ಅವಕಾಶಗಳಿವೆ. ನಾಯಕತ್ವ, ಟೀಮ್‌ವರ್ಕ್ ಹಾಗೂ ಭೌತಿಕ ತರಬೇತಿ ಹೊಂದಿರುವ ಅಗ್ನಿವೀರರು ಆಡಳಿತ ಹಾಗೂ ಸಾಗಣೆ ನಿರ್ವಹಣೆ ಸೇರಿದಂತೆ ವ್ಯವಹಾರದ ಎಲ್ಲ ವಲಯದಲ್ಲೂ ಮಾರುಕಟ್ಟೆಗೆ ಸಿದ್ಧವಾಗಿರುವ ವೃತ್ತಿಪರರಾಗಿ ಲಭಿಸುತ್ತಾರೆ ಎಂದು ಹೇಳಿದ್ದಾರೆ.
ಅಗ್ನಿಪಥ್ ಎಷ್ಟು ಯೋಧರಿಗೆ ಕೆಲಸ ಕೊಟ್ಟಿದ್ದೀರಿ?
ಈ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಆರ್‌ಪಿಜಿ ಗ್ರೂಪ್‌ನ ಗೋಯೆಂಕಾ, ಅಗ್ನಿವೀರರ ನೇಮಕಾತಿಗೆ ತಮ್ಮ ಕಂಪನಿಯೂ ಸಿದ್ಧ. ಇತರೆ ಕಾರ್ಪೋರೆಟ್ ಕಂಪನಿಗಳು ಕೂಡ ನಮ್ಮ ಜತೆಗೂಡಿ ನಮ್ಮ ಯುವಕರಿಗೆ ಭವಿಷ್ಯದ ಭರವಸೆ ನೀಡಬೇಕಿದೆ ಎಂದಿದ್ದಾರೆ.
ಇದೇ ವೇಳೆ, ಕೈಗಾರಿಕಾ ಉದ್ಯೋಗ ಮಾರುಕಟ್ಟೆಯಲ್ಲಿ ಅಗ್ನಿವೀರರಿಗೆ ವಿಶಿಷ್ಟಅನುಕೂಲವಿದೆ ಎಂದು ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಹೇಳಿದ್ದರೆ, ಶಿಸ್ತು ಹಾಗೂ ಕೌಶಲ್ಯ ಕಲಿತಿರುವ ಅಗ್ನಿವೀರರು ಮಾರುಕಟ್ಟೆಗೆ ಸಿದ್ಧವಾಗಿರುವ ವೃತ್ತಿಪರರಾಗಿರುತ್ತಾರೆ. ಅಂತಹ ಯುವಕರನ್ನು ಉದ್ಯಮಗಳು ನೇಮಕಾತಿ ಮೂಲಕ ಬೆಂಬಲಿಸುತ್ತವೆ ಎಂಬ ವಿಶ್ವಾಸವಿದೆ ಎಂದು ಅಪೋಲೋ ಆಸ್ಪತ್ರೆ ಸಮೂಹದ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಸಂಗೀತಾ ರೆಡ್ಡಿ ಟ್ವೀಟ್ ಮಾಡಿದ್ದಾರೆ. ಈ ನಡುವೆ, ರಾಷ್ಟ್ರ ನಿರ್ಮಾಣಕ್ಕೆ ಮಹಾನ್ ಕೊಡುಗೆ ನೀಡುವುದರ ಜತೆಗೆ ಸಮಾಜದಲ್ಲಿ ಗಮನಾರ್ಹ ಧನಾತ್ಮಕ ಬದಲಾವಣೆಯನ್ನು ಅಗ್ನಿಪಥ ಯೋಜನೆ ತರಲಿದೆ ಎಂದು ಟಿವಿಎಸ್ ಮೋಟರ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ ಸುದರ್ಶನ್ ವೇಣು ತಿಳಿಸಿದ್ದಾರೆ.
ಅಗ್ನಿವೀರರಿಗೆ ಜಾಬ್ ಆಫರ್ ನೀಡಿದ ಆನಂದ್ ಮಹಿಂದ್ರಾ
ಅಗ್ನಿಪತ್ ಯೋಜನೆ ಬಗ್ಗೆ ದೇಶದ್ಯಾಂತ ತೀವ್ರ ಖಂಡನೆ ವ್ಯಕ್ತವಾದ ಬೆನ್ನಲ್ಲೇ, ಆನಂದ್ ಮಹಿಂದ್ರಾ ಟ್ವೀಟ್ ಮಾಡಿ, ಈ ಯೋಧರಿಗೆ ಕೆಲಸ ಕೊಡುವುದಾಗಿ ಭರವಸೆ ನೀಡಿದ್ದರು. ಆ ಬೆನ್ನಲ್ಲೇ ಹಲವು ಉದ್ಯಮಿಗಳು ಆನಂದ್ ಮಹಿಂದ್ರಾ ಅವರನ್ನು ಬೆಂಬಲಿಸಿದ್ದು ತಮ್ಮ ಕಂಪನಿಗಳಲ್ಲಿಯೂ ಕೆಲಸ ಕೊಡುವುದಾಗಿ ಹೇಳಿದ್ದರು. ಅದರೊಂದಿಗೇ ಕೆಲವು ಯೋಧರು ಇದುವರೆಗೆ ಎಷ್ಟು ಯೋಧರಿಗೆ ತಮ್ಮ ಕಂಪನಿಯಲ್ಲಿ ಕೆಲಸ ಕೊಟ್ಟಿದ್ದೀರ ಎಂಬ ಲೆಕ್ಕ ಕೊಡಬಹುದಾ ಕೇಳಿ, ಮಹೀಂದ್ರಾ ಕಾಲೆಳೆದಿದ್ದರು.
ಒಟ್ಟಿನಲ್ಲಿ ವಿಆರ್‌ಎಸ್ ತಗೆದುಕೊಂಡು ಕೆಲಸಕ್ಕಾಗಿ ಪರದಾಡುವ ನಿವೃತ್ಥ ಯೋಧರಿಗೆ ಇನ್ನೂದರೂ ಒಂದು ಕೆಲಸ ಸಿಗುವ ವ್ಯವಸ್ಥೆ ಆಗಬಹುದಾ ಕಾದು ನೋಡಬೇಕು. ಕೈಯಲ್ಲಿ ಶಕ್ತಿ ಇದ್ದರೂ ಸೂಕ್ತ ಕೆಲಸ ಸಿಗದೇ ಪರದಾಡುವ ನಿವೃತ್ತ ಯೋಧರಿಗೊಂದು ನೆಲೆ ಕಂಡು ಕೊಳ್ಳಲು ಸಹಕರಿಸುವ ಕೆಲಸಕ್ಕೆ ಕೆಲವು ಖಾಸಗಿ ಕಂಪನಿಗಳು ಮುಂದಾದರೆ ಒಳ್ಳೆಯದು ಎಂಬುವುದು ಹಲವರ ಅಭಿಪ್ರಾಯ ಅಲ್ಲದೇ ತಮ್ಮ ಸೋಷಿಯೋ ಕಾರ್ಪೋರೇಟ್ ಅಡಿಯಲ್ಲಿ ಕೆಲಸ ಮಾಡಲು ಈ ಯೋಧರು ಸೂಕ್ತ ಅಭ್ಯರ್ಥಿಗಳಾಗುವುದರಿಂದ ಕೆಲಸಕ್ಕೆ ಕನ್ಸಿಡರ್ ಮಾಡಬಹುದು ಎಂಬುವುದು ನಿವೃತ್ಥ ಯೋಧರ ಅಭಿಪ್ರಾಯವೂ ಹೌದು.