ಮೈಕ್ರೋಸಾಫ್ಟ್‌ನಲ್ಲಿ ಮತ್ತೊಂದು ಸುತ್ತಿನ ಉದ್ಯೋಗ ಕಡಿತವಾಗುತ್ತಿದೆ. ಈ ಬಾರಿ 9,000 ಉದ್ಯೋಗಿಗಳನ್ನು ತೆಗೆದು ಹಾಕಲಾಗುತ್ತಿದೆ. ಇದೀಗ ಐಟಿ ಕ್ಷೇತ್ರದಲ್ಲಿ ಮತ್ತೆ ಆತಂಕ ಮನೆ ಮಾಡುತ್ತಿದೆ. 

ನವದೆಹಲಿ (ಜು.02) ಪ್ರತಿಷ್ಠಿತ ಮೈಕ್ರೋಸಾಫ್ಟ್ ಕಂಪನಿಯಲ್ಲಿ ಮತ್ತೆ ಬಿರುಗಾಳಿ ಬೀಸುತ್ತಿದೆ. ಇದೀಗ ಕಂಪನಿ ಉದ್ಯೋಗ ಕಡಿತಕ್ಕೆ ಮುಂದಾಗಿದೆ. ಈ ಬಾರಿ ಬರೋಬ್ಬರಿ 9,000 ಉದ್ಯೋಗ ಕಡಿತ ಮಾಡುತ್ತಿದೆ. ಈಗಾಗಲೇ ಲಿಸ್ಟ ತಯರಾಗಿದ್ದು ಹಂತ ಹಂತವಾಗಿ ಉದ್ಯೋಗ ಕಡಿತಗೊಳ್ಳಲಿದೆ. ಈ ಮೂಲಕ ಮೈಕ್ರೋಸಾಫ್ಟ್ ಇದೇ ವರ್ಷ ಮೂರನೇ ಬಾರಿಗೆ ಉದ್ಯೋಗ ಕಡಿತ ಮಾಡುತ್ತಿದೆ. ಮೈಕ್ರೋಸಾಫ್ಟ್ ಕಂಪನಿಯ ಒಟ್ಟು ಉದ್ಯೋಗಿಗಳ ಪೈಕಿ ಇದೀಗ ಶೇಕಡಾ 4 ರಷ್ಟು ಉದ್ಯೋಗಿಗಳನ್ನು ಕಡಿತ ಮಾಡುತ್ತಿದೆ.

ಸೇಲ್ಸ್ ಆ್ಯಂಡ್ ಮಾರ್ಕೆಟಿಂಗ್ ವಿಭಾಗದಿಂದ ಬಹುತೇಕ ಉದ್ಯೋಗ ಕಡಿತ

ಮೈಕ್ರೋಸಾಫ್ಟ್ ವಿಶ್ವಾದ್ಯಂತ 2,28,000 ಉದ್ಯೋಗಿಗಳನ್ನು ಹೊಂದಿದೆ. ಇದರಲ್ಲಿ 9,000 ಉದ್ಯೋಗಿಗಳ ಕಡಿತವಾಗಲಿದೆ. ವರ್ಷದ ಮೂರನೇ ಉದ್ಯೋಗ ಕಡಿತ ಪ್ರಮುಖವಾಗಿ ಸೇಲ್ಸ್ ಆ್ಯಂಡ್ ಮಾರ್ಕೆಟಿಂಗ್ ವಿಭಾಗದಲ್ಲಿ ನಡೆಯಲಿದೆ. ಮೈಕ್ರೋಸಾಫ್ಟ್ ಮಾರ್ಕೆಂಟಿಂಗ್ ಹಾಗೂ ಸೇಲ್ಸ್ ವಿಭಾಗದಲ್ಲಿ ಒಟ್ಟು 45,000 ಉದ್ಯೋಗಿಗಳಿದ್ದಾರೆ. ಮೈಕ್ರೋಸಾಫ್ಟ್ ಈ ನಿರ್ಧಾರ ಇದೀಗ ಐಟಿ ಕ್ಷೇತ್ರದ ಮೇಲೆ ಆತಂಕ ಹೆಚ್ಚುವಂತೆ ಮಾಡಿದೆ.

2025ರಲ್ಲಿ ಈಗಾಗಲೇ ಎರಡು ಬಾರಿ ಮೈಕ್ರೋಸಾಫ್ಟ್ ಉದ್ಯೋಗ ಕಡಿತ ಮಾಡಿದೆ. ಮೇ ತಿಂಗಳಲ್ಲಿ 6,000 ಉದ್ಯೋಗಿಗಳನ್ನು ಕಡಿತ ಮಾಡಿತ್ತು. ಇದಾದ ಒಂದೇ ವಾರಕ್ಕೆ ಮತ್ತೆ 600 ಉದ್ಯೋಗಿಗಳ ಕಡಿತ ಮಾಡಿತ್ತು. ಇದೀಗ ಜುಲೈ ತಿಂಗಳಲ್ಲಿ ಮೈಕ್ರೋಸಾಫ್ಟ್ 9,000 ಉದ್ಯೋಗಿಗಳನ್ನು ಕಡಿತ ಮಾಡುತ್ತಿದೆ.

ಹಲವು ಐಟಿ ಕಂಪನಿಗಳು ಉದ್ಯೋಗ ಕಡಿತ ಮಾಡುತ್ತಿದೆ. ಹಂತ ಹಂತವಾಗಿ ಉದ್ಯೋಗ ಕಡಿತವಾಗುತ್ತಿದೆ. ಇದು ಉದ್ಯೋಗ ಮಾರುಕಟ್ಟೆಯನ್ನು ಕದಡಲಿದೆ. ಪ್ರಮುಖವಾಗಿ ಉದ್ಯೋಗ ಕಳೆದುಕೊಂಡವರ ಪೈಕಿ ಹೊಸ ಉದ್ಯೋಗ ಅಥವಾ ವೃತ್ತಿಯಲ್ಲಿ ಮುಂದುವರಿಯಲು ಹರಸಾಹಸ ಪಡಬೇಕಾಗುತ್ತದೆ. ಜೊತೆಗೆ ಮಾರುಕಟ್ಟೆಯಲ್ಲಿ ಮಾನವ ಸಂಪಲನ್ಮೂನ ಪ್ರಮಾಣ ಹೆಚ್ಚಾಗುವ ಕಾರಣ ನಿರುದ್ಯೋಗ ಸೇರಿದಂತೆ ಇತರ ಸಮಸ್ಯೆಗಳು ಹೆಚ್ಚಾಗಲಿದೆ. ಕಾರ್ಪೋರೇಟ್ ಅಮೆರಿಕಾ ಸೇರಿದಂತೆ ಹಲವು ಕಂಪನಿಗಳು ಉದ್ಯೋಗ ಕಡಿತವನ್ನು ಹಂತ ಹಂತವಾಗಿ ಮಾಡುತ್ತಿದೆ.

ಮೈಕ್ರೋಸಾಫ್ಟ್ ಇದೀಗ ಕೈಗೊಂಡಿರುವ ಉದ್ಯೋಗ ಕಡಿತ ಭಾರಿ ಹೊಡೆತ ನೀಡಲಿದೆ. ಈಗಾಗಲೇ ಹಲವು ಪ್ರತಿಷ್ಠಿತ ಕಂಪನಿಗಳು ಉದ್ಯೋಗ ಕಡಿತ ಮಾಡಿದೆ. ಅಮೆರಿಕದಲ್ಲಿ ಎದುರಾಗಿರುವ ಅಘೋಷಿತ ಆರ್ಥಿಕ ಹಿಂಜರಿತ, ರಷ್ಯಾ-ಉಕ್ರೇನ್ ಯುದ್ಧ, ಇರಾನ್ ಇಸ್ರೇಲ್ ಯುದ್ಧ ಸೇರಿದಂತೆ ಹಲವು ಸಂಘರ್ಷಗಳುು, ಜಾಗತಿಕ ಮಾರುಕಟ್ಟೆಯಲ್ಲಿ ಆಗಿರುವ ಕುಸಿತ ಸೇರಿದಂತೆ ಹಲವು ಕಾರಣಗಳು ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.