ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದ್ದು, ಇನ್ನಷ್ಟು ಹರಡದಂತೆ ತಡೆಯಲು ಅನೇಕ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿವೆ. ಕೊರೋನಾ ವೈರಸ್ ಒಬ್ಬರಿಂದ ಒಬ್ಬರಿಗೆ ಹರಡುವ ಕಾರಣ ಆಫೀಸ್‍ನಲ್ಲಿ ಕೆಲಸ ಮಾಡೋದು ಖಂಡಿತಾ ಸುರಕ್ಷಿತವಲ್ಲ. ಈ ಹಿನ್ನೆಲೆಯಲ್ಲಿ ಉದ್ಯೋಗಿಗಳ ಆರೋಗ್ಯದ ಹಿತದೃಷ್ಟಿಯಿಂದ ವರ್ಕ್ ಫ್ರಂ ಹೋಂ ಅವಕಾಶ ನೀಡಿರುವುದು ಉತ್ತಮ ನಿರ್ಧಾರವೇ ಆಗಿದೆ. ಇನ್ನು ಟ್ರಾಫಿಕ್ ಕಿರಿಕಿರಿಯಿಲ್ಲದೆ ಮನೆಯೊಳಗೇ ಕುಳಿತು ಕೆಲಸ ಮಾಡೋದು ಬಹುತೇಕರಿಗೆ ಖುಷಿ ನೀಡಬಹುದು. ಜೊತೆಗೆ ಬಸ್, ಮೆಟ್ರೋ ಸೇರಿದಂತೆ ಸಾರ್ವಜನಿಕ ಸಾರಿಗೆಯಲ್ಲಿ ಸಂಚರಿಸುವಾಗ ಕೊರೋನಾ ಸೋಂಕು ತಗುಲಬಹುದೇನೋ, ಆಫೀಸ್‍ನಲ್ಲಿ ಯಾರಿಗಾದ್ರೂ ಈ ಸೋಂಕು ಬಂದಿರಬಹುದೇ? ನಂಗೂ ತಗುಲಬಹುದೇ ಎಂಬ ಆತಂಕವಿಲ್ಲದೆ ನಿರಾಳವಾಗಿ ಕೆಲಸದಲ್ಲಿ ತೊಡಗಬಹುದು. ಆದ್ರೆ ವರ್ಕ್ ಫ್ರಂ ಹೋಂ ಆಫೀಸ್‍ನಲ್ಲಿ ಕೆಲಸ ಮಾಡಿದಷ್ಟು ಸುಲಭವಲ್ಲ. ಇಡೀ ದಿನ ಮನೆಯಲ್ಲಿರುತ್ತೇವೆ ಎಂಬ ಖುಷಿಯಿದ್ದರೂ ಆಫೀಸ್‍ನಂತೆ ಕೆಲಸದ ಮೇಲೆ ಸಂಪೂರ್ಣ ಗಮನ ಕೇಂದ್ರೀಕರಿಸಲು ಸಾಧ್ಯವಾಗೋದಿಲ್ಲ. ನಿಮ್ಮ ಏಕಾಗ್ರತೆಗೆ ಭಂಗ ತರುವ ಹತ್ತಾರು ಸಂಗತಿಗಳಿರುತ್ತವೆ. ಈಗಂತೂ ಶಾಲೆಗಳಿಗೆ ರಜೆ ನೀಡಿರುವ ಹಿನ್ನೆಲೆಯಲ್ಲಿ ಮಕ್ಕಳು ಕೂಡ ಮನೆಯಲ್ಲಿರುವ ಕಾರಣ ಅವರ ಕಾಟವಂತೂ ಇದ್ದೇಇರುತ್ತೆ. ಗಮನಭಂಗ ಮಾಡುವ ಇಂಥ ಅನೇಕ ಸಂಗತಿಗಳ ನಡುವೆ ಮನೆಯಲ್ಲಿ ಚೆನ್ನಾಗಿ ಕೆಲಸ ಮಾಡಲು ಅನುಕೂಲವಾಗುವಂತಹ ವಾತಾವರಣ ಸೃಷ್ಟಿಸಿಕೊಳ್ಳೋದು ಹೇಗೆ?

ಬಾಸ್‍ಗೆ ಬಾಯ್ತುಂಬಾ ಬೈಯೋಕಾದ್ರೂ ಆಫೀಸ್‍ನಲ್ಲೊಬ್ಬ ಗೆಳೆಯನಿರಬೇಕು

ಆಫೀಸ್‍ನಲ್ಲಿರುವಂತೆ ಮೈಂಡ್ ಸೆಟ್ ಮಾಡ್ಕೊಳ್ಳಿ
ಬೆಳಗ್ಗೆ ಆಫೀಸ್‍ಗೆ ಹೋಗಬೇಕು ಎಂದು ರಾತ್ರಿ ಮಲಗುವಾಗಲೇ ಮೈಂಡ್ ಸೆಟ್ ಮಾಡ್ಕೊಳ್ಳಿ. ಇದರಿಂದ ಬೆಳಗ್ಗೆ ಆಫೀಸ್‍ಗೆ ಹೋಗುವಾಗ ಎದ್ದೇಳುತ್ತಿದ್ದ ಟೈಮ್‍ಗೆ ಏಳಲು ಸಾಧ್ಯವಾಗುತ್ತದೆ. ಮಹಿಳೆಯರಿಗೆ ಮನೆಗೆಲಸಗಳನ್ನು ಬೇಗನೆ ಮುಗಿಸಿ ಆಫೀಸ್ ಕೆಲಸಕ್ಕೆ ಕುಳಿತುಕೊಳ್ಳಲು ಸಾಧ್ಯವಾಗುತ್ತದೆ. ಪ್ರತಿದಿನ ಆಫೀಸ್‍ಗೆ ಲಾಗ್ ಇನ್ ಆಗುವ ಸಮಯಕ್ಕೆ ಸರಿಯಾಗಿಯೇ ಕೆಲಸ ಪ್ರಾರಂಭಿಸಿ. ಒಮ್ಮೆ ಕೆಲಸ ಮಾಡಲು ಕೂತ ಬಳಿಕ ತುರ್ತು ಸಂದರ್ಭಗಳನ್ನು ಹೊರತುಪಡಿಸಿ ಬೇರೆ ಯಾವುದೇ ಕಾರಣಕ್ಕೂ ರೂಮ್ ಬಿಟ್ಟು ಹೊರಗೆ ಬರಬೇಡಿ. ನೀವು ಆಫೀಸ್‍ನಲ್ಲೇ ಇದ್ದೀರಿ, ಇಷ್ಟು ಕೆಲಸವನ್ನು ಇಂದು ಮುಗಿಸಲೇಬೇಕು ಎಂದು ನಿಮಗೆ ನೀವೇ ಆಗಾಗ ಹೇಳಿಕೊಳ್ಳಿ. ಜೊತೆಗೆ ಅಂದಿನ ಕೆಲಸವನ್ನು ಅಂದೇ ಮಾಡಿ ಮುಗಿಸಿ. ಈ ವಿಷಯದಲ್ಲಿ ಯಾವುದೇ ರಾಜೀ ಮಾಡಿಕೊಳ್ಳಬೇಡಿ. 

ಸದ್ದುಗದ್ದಲ ಕೇಳಿಸದ ರೂಮ್ ಆಯ್ದುಕೊಳ್ಳಿ
ಕೆಲಸ ಮಾಡಲು ಮನೆಯಲ್ಲಿ ಸದ್ದುಗದ್ದಲ ಕೇಳಿಸದ ರೂಮ್ ಆಯ್ದುಕೊಳ್ಳಿ. ಕೆಲಸ ಮಾಡುವಾಗ ರೂಮ್ ಬಾಗಿಲನ್ನು ಒಳಗಿನಿಂದ ಲಾಕ್ ಮಾಡಿಕೊಳ್ಳಿ. ಅಗತ್ಯವಾದ ಕೆಲಸವೇನಾದ್ರೂ ಇದ್ರೆ ಮಾತ್ರ ಬಾಗಿಲು ತಟ್ಟುವಂತೆ ಮನೆ ಸದಸ್ಯರಿಗೆ ತಿಳಿಸಿ.ಹೀಗೆ ಮಾಡೋದ್ರಿಂದ ನಿಮ್ಮ ಮನಸ್ಸನ್ನು ಕೆಲಸದ ಮೇಲೆ ಕೇಂದ್ರೀಕರಿಸಲು ಸಾಧ್ಯವಾಗುತ್ತದೆ. 

ಮಂಡೆಬಿಸಿ ಮಾಡುವ Monday ಬ್ಲೂಸ್‍ಗೆ ಮದ್ದೇನು?

ಮಕ್ಕಳು ಕೆಲಸಕ್ಕೆ ಭಂಗ ತರದಂತೆ ಎಚ್ಚರ ವಹಿಸಿ
ಟಿವಿ ಆಂಕರ್ ಆಗಿರುವ ಅಪ್ಪನಿಗೆ ಮನೆಯಿಂದಲೇ ಕೆಲಸ ಮಾಡಲು ಮಕ್ಕಳು ಯಾವ ರೀತಿ ಕಾಟ ಕೊಡುತ್ತಾರೆ ಎಂಬ ವಿಡಿಯೋ ಇತ್ತೀಚೆಗೆ ವಾಟ್ಸ್ಆಪ್ ಸೇರಿದಂತೆ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಮಕ್ಕಳು ಕೆಲಸಕ್ಕೆ ಭಂಗ ತರುವ ತುಂಟಾಟಗಳನ್ನು ಮಾಡುತ್ತಲೇ ಇರುತ್ತಾರೆ. ಅದ್ರಲ್ಲೂ ನೀವು ಹೇಳಿದ್ದನ್ನು ಅರ್ಥೈಸಿಕೊಳ್ಳುವಂತಹ ವಯಸ್ಸಾಗದ ಮಕ್ಕಳಿದ್ರೆ ಕೆಲಸದ ಮೇಲೆ ಗಮನ ಕೇಂದ್ರೀಕರಿಸುವುದು ಸವಾಲಿನ ಕೆಲಸವೇ ಸರಿ. ಆದ್ರೆ ಮಕ್ಕಳನ್ನು ನೋಡಿಕೊಳ್ಳಲು ಮನೆಯ ಇತರ ಸದಸ್ಯರು ಅಥವಾ ಆಯಾ ಇದ್ರೆ ಈ ತೊಂದರೆಯನ್ನು ಕಡಿಮೆ ಮಾಡಿಕೊಳ್ಳಬಹುದು. 

ಆಫೀಸ್ ಕಾಲ್ ಮಾತ್ರ ಸ್ವೀಕರಿಸಿ
ಆಫೀಸ್ ಕೆಲಸ ಪ್ರಾರಂಭಿಸಿದ ಬಳಿಕ ಯಾವುದೇ ಕಾರಣಕ್ಕೂ ಸ್ನೇಹಿತರ, ಸಂಬಂಧಿಕರ ಅಥವಾ ಇನ್ಯಾರೋ ಕಾಲ್ ಮಾಡಿದ್ರೆ ರಿಸೀವ್ ಮಾಡಿ ಗಂಟೆಗಟ್ಟಲೆ ಮಾತನಾಡೋದು ಅಥವಾ ನೀವೇ ಕಾಲ್ ಮಾಡಿ ಮಾತನಾಡೋದು ಮಾಡ್ಬೇಡಿ. ಅದೇರೀತಿ ಮನೆಯಲ್ಲಿದ್ದೇನೆ ಎನ್ನುವ ಕಾರಣಕ್ಕೆ ಪದೇಪದೆ ವಾಟ್ಸ್ಆಪ್‍ನಲ್ಲಿ ಚಾಟ್ ಮಾಡೋದು ಇಲ್ಲ ಫೇಸ್‍ಬುಕ್ ನೋಡೋದು ಮಾಡ್ಬೇಡಿ. ಇದರಿಂದ ಟೈಮ್ ವೇಸ್ಟ್ ಆಗುವ ಜೊತೆಗೆ ಕೆಲಸವೂ ಮುಗಿಯದೆ ಒತ್ತಡ ಸೃಷ್ಟಿಯಾಗುತ್ತದೆ.ಆಫೀಸ್‍ಗೆ ಸಂಬಂಧಿಸಿದ ಕಾಲ್‍ಗಳನ್ನು ರಿಸೀವ್ ಮಾಡಿ.ಏನಾದ್ರೂ ಅನುಮಾನಗಳಿದ್ದರೆ ಬಾಸ್ ಅಥವಾ ಸಹೋದ್ಯೋಗಿಗಳಿಗೆ ಕರೆ ಮಾಡಿ ಮಾತನಾಡಿ, ಸಲಹೆ ಪಡೆದುಕೊಳ್ಳಿ. 

ಬಾಸ್ ಮೇಲಿನ ಕೀಳು ಜೋಕನ್ನು ಅವರಿಗೂ ಶೇರ್ ಮಾಡಿಕೊಂಡರೆ...!

ಬ್ರೇಕ್‍ಗೆ ಸಮಯ ನಿಗದಿಪಡಿಸಿ
ಮನೆಯಲ್ಲಿರುವಾಗ ರೂಮ್ ಒಳಗಡೆ ಲಾಕ್ ಮಾಡಿಕೊಂಡು ಕುಳಿತಿದ್ದರೂ ಆಗಾಗ ಹೊರಗೆ ಹೋಗಬೇಕು ಎಂದು ಮನಸ್ಸು ಹೇಳುತ್ತಿರುತ್ತದೆ. ಆದ್ರೆ ಹಾಗೆ ಮಾಡಿದ್ರೆ ನಿಮ್ಮ ಕೆಲಸದ ಹೊರೆ ನಾಳೆಗೆ ಶಿಫ್ಟ್ ಆಗುವುದರ ಜೊತೆಗೆ ಒತ್ತಡವೂ ಹೆಚ್ಚುತ್ತದೆ. ಆದಕಾರಣ ಪದೇಪದೆ ರೂಮ್‍ನಿಂದ ಹೊರಗೆ ಹೋಗಬೇಡಿ. ಅದರ ಬದಲು ಗಂಟೆಗೋ ಇಲ್ಲ ಎರಡು ಗಂಟೆಗೊಮ್ಮೆ ಪುಟ್ಟ ಬ್ರೇಕ್ ತೆಗೆದುಕೊಂಡು ಹೊರಗೆ ಹೋಗಿ 5-10 ನಿಮಿಷ ಸುತ್ತಾಡಿಕೊಂಡು, ಮಾತನಾಡಿಕೊಂಡು ಮತ್ತೆ ಕೆಲಸಕ್ಕೆ ಮರಳಿ. ಇದರಿಂದ ಮನಸ್ಸು ರಿಲ್ಯಾಕ್ಸ್ ಆಗುವ ಜೊತೆಗೆ ಕೆಲಸ ಮಾಡಲು ಮೂಡ್ ಬರುತ್ತದೆ.

ಕೊರೋನಾ ಭೀತಿ ಬಿಟ್ಹಾಕಿ
ಕೊರೋನಾ ವೈರಸ್ ಸೋಂಕಿಗೆ ಸಂಬಂಧಿಸಿದ ಸುದ್ದಿಗಳು ಆಗಾಗ ಕಿವಿ ಮೇಲೆ ಬೀಳುತ್ತಿರುವಾಗ ಮನಸ್ಸಿನಲ್ಲಿ ಭೀತಿ ಆವರಿಸುವುದು ಸಹಜ. ಈ ಭೀತಿಯಿಂದ ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ಸಾಧ್ಯವಾಗದೆ ಹೋಗಬಹುದು. ಇಂಥ ಸಮಯದಲ್ಲಿ ನಿಮ್ಮ ಭಯ, ಉದ್ವೇಗ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಿ. ಕುಳಿತಲ್ಲೇ ಆಗಾಗ ಧ್ಯಾನ, ಪ್ರಾಣಯಾಮ ಮಾಡಿ. ನೀವು ಮನೆಯೊಳಗಡೆ ಕುಳಿತು ಕೆಲಸ ಮಾಡುತ್ತಿರುವ ಕಾರಣ ನಿಮಗೆ ಕೊರೋನಾ ಸೋಂಕು ತಗಲುವ ಸಾಧ್ಯತೆಯಿಲ್ಲ. ಆದ್ರೆ ವೈದ್ಯರು, ಪೊಲೀಸ್ ಸಿಬ್ಬಂದಿ ಸೇರಿದಂತೆ ಕೆಲವು ಉದ್ಯೋಗಿಗಳಿಗೆ ಕೆಲಸದ ಸ್ಥಳಕ್ಕೆ ಹೋಗಿ ಕರ್ತವ್ಯ ನಿರ್ವಹಿಸಲೇಬೇಕಾದ ಅನಿವಾರ್ಯತೆಯಿದೆ. ಅವರಿಗಿಂತ ನೀವು ಅದೃಷ್ಟವಂತರು ಎಂದು ನಿಮಗೆ ನೀವೇ ಸಮಧಾನ ಮಾಡಿಕೊಂಡು ಕೆಲಸದ ಮೇಲೆ ಗಮನ ಕೇಂದ್ರೀಕರಿಸಿ.