ಟ್ವಿಟ್ಟರ್‌ ಉದ್ಯೋಗಿಗಳು ಅತ್ಯಂತ ಹಾರ್ಡ್‌ಕೋರ್ ಆಗಿರಬೇಕು. ಇದು ಹೆಚ್ಚಿನ ತೀವ್ರತೆಯಲ್ಲಿ ದೀರ್ಘ ಗಂಟೆಗಳ ಕೆಲಸ ಮಾಡುವುದು ಎಂದರ್ಥ. ಅಸಾಧಾರಣ ಕಾರ್ಯಕ್ಷಮತೆ ಮಾತ್ರ ಉತ್ತೀರ್ಣ ದರ್ಜೆಯನ್ನು ರೂಪಿಸುತ್ತದೆ ಎಂದು ಎಲಾನ್‌ ಮಸ್ಕ್ ಹೇಳಿದ್ದರು.

ಮೈಕ್ರೋ ಬ್ಲಾಗಿಂಗ್ ಜಾಲತಾಣ ಟ್ವಿಟ್ಟರ್‌ (Twitter) ಅನ್ನು ಸ್ವಾಧೀನಪಡಿಸಿಕೊಂಡ ಬಳಿಕ ಎಲಾನ್‌ ಮಸ್ಕ್‌ (Elon Musk) ಸಾವಿರಾರು ಉದ್ಯೋಗಿಗಳನ್ನು ಕಿತ್ತೊಗೆದರು. ಅಲ್ಲದೆ, ವರ್ಕ್‌ ಫ್ರಮ್‌ ಹೋಮ್‌ (Work From Home) ನೀತಿಯನ್ನು ಕಿತ್ತುಹಾಕಿ ಎಲ್ಲರೂ ಕಚೇರಿಯಲ್ಲೇ (Office) ಹೆಚ್ಚು ಹೊತ್ತು ಕೆಲಸ ಮಾಡಬೇಕೆಂದು ಆದೇಶಿಸಿದ್ದರು. ಅಲ್ಲದೆ, ಹೆಚ್ಚು ಕೆಲಸ ಮಾಡುವುದನ್ನು ಒಪ್ಪದಿದ್ದರೆ ಕಂಪನಿ ಬಿಟ್ಟು ಹೋಗಬಹುದು ಎಂದು ಡೆಡ್‌ಲೈನ್‌ ಅನ್ನೂ ನೀಡಲಾಗಿತ್ತು. ಒತ್ತಡಕ್ಕೆ ಬೇಸತ್ತ ಹಲವರು ಎಲಾನ್‌ ಮಸ್ಕ್‌ ಮೀಟಿಂಗ್ ನಡುವೆಯೇ ಕಂಪನಿ ತೊರೆದಿದ್ದರು. ಈ ಸಾಮೂಹಿಕ ರಾಜೀನಾಮೆಯ ಬಳಿ ಟ್ವಿಟ್ಟರ್‌ ಪ್ರಧಾನ ಕಚೇರಿಯ (Twitter Headquarters) ಕೆಲ ಕೊಠಡಿಗಳನ್ನು ಬೆಡ್‌ರೂಂ (Bedroom) ಆಗಿ ಪರಿವರ್ತಿಸಲಾಗಿದೆ ಎಂದು ವರದಿಯಾಗಿದೆ. 

ದೀರ್ಘಾವಧಿಯ ಕೆಲಸದ ಸಮಯ ಮತ್ತು ಅಗತ್ಯವಿದ್ದಾಗ ಕಚೇರಿಯಲ್ಲಿ ಉಳಿಯುವುದನ್ನು ಒಳಗೊಂಡಿರುವ ಸಂಸ್ಕೃತಿಗೆ ಒಪ್ಪಿಕೊಳ್ಳಬೇಕೆಂದು ಎಲಾನ್‌ ಮಸ್ಕ್‌ ಉದ್ಯೋಗಿಗಳನ್ನು ಕೇಳಿಕೊಂಡಿದ್ದರು. ಇದನ್ನು ಒಪ್ಪಿ ಟ್ವಿಟ್ಟರ್‌ನಲ್ಲಿಯೇ ಉಳಿದುಕೊಂಡ ನೌಕರರಿಗೆ ಈಗ ಎಲಾನ್‌ ಮಸ್ಕ್‌ ನಿಜವಾಗಿಯೂ ಬೆಡ್‌ರೂಂಗಳನ್ನೇ ಸ್ಥಾಪಿಸಿದ್ದಾರೆ. ಹೌದು, ಅಮೆರಿಕದ ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿರುವ (San Francisco) ಟ್ವಿಟ್ಟರ್‌ ಪ್ರಧಾನ ಕಚೇರಿಯ ಕೆಲ ಕೊಠಡಿಗಳನ್ನು ಮಲಗುವ ಕೋಣೆಗಳನ್ನಾಗಿ (Sleeping Rooms) ಪರಿವರ್ತಿಸಲಾಗಿದೆ ಎಂದು ತಿಳಿದುಬಂದಿದೆ. 
ವೀಕೆಂಡ್ ನಂತರ ಸೋಮವಾರ ಕೆಲಸಕ್ಕೆ ಮರಳಿದ ಉದ್ಯೋಗಿಗಳು ಹಾಸಿಗೆಗಳು, ಕರ್ಟನ್‌ ಮತ್ತು ದೈತ್ಯ ಕಾನ್ಫರೆನ್ಸ್-ರೂಮ್ ಟೆಲಿಪ್ರೆಸೆನ್ಸ್ ಮಾನಿಟರ್‌ಗಳನ್ನು ಹೊಂದಿರುವ ಮಲಗುವ ಕೋಣೆಗಳನ್ನು ಕಂಡು ಅಚ್ಚರಿಗೊಳಗಾಗಿದ್ದಾರೆ ಎಂದು ಫೋರ್ಬ್ಸ್ ವರದಿ ಮಾಡಿದೆ. ಕಂಪನಿಯ ಪ್ರಾಡಕ್ಟ್‌ ಲೀಡ್‌ ಎಸ್ತರ್ ಕ್ರಾಫೋರ್ಡ್ ಇತ್ತೀಚೆಗೆ ಕಚೇರಿಯಲ್ಲಿಸ್ಲೀಪಿಂಗ್‌ ಬ್ಯಾಗ್‌ಗಳ ಮೇಲೆ ಮಲಗಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.

ಇದನ್ನು ಓದಿ: ನಾನು ಯಾವುದೇ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳಲ್ಲ ಎಂದ ನಂ. 1 ಶ್ರೀಮಂತ ಎಲಾನ್‌ ಮಸ್ಕ್..!

ಅದರ ನಂತರ ಈ ವರದಿಗಳು ಬಂದಿದ್ದು, ಮಲಗುವ ಕೋಣೆಗಳು ಖಂಡಿತವಾಗಿಯೂ ಹೆಚ್ಚು ಆರಾಮದಾಯಕವಾಗಿವೆ ಎಂದು ತಿಳಿದುಬಂದಿದೆ. ಟ್ವಿಟ್ಟರ್‌ನ ಸ್ಯಾನ್‌ ಫ್ರಾನ್ಸಿಸ್ಕೋ ಪ್ರಧಾನ ಕಚೇರಿಯಲ್ಲಿರುವ ಮಲಗುವ ಕೋಣೆಗಳು ಪ್ರಕಾಶಮಾನವಾದ ಕಿತ್ತಳೆ ಬಣ್ಣದ ಕಾರ್ಪೆಟ್‌, ಮರದ ಹಾಸಿಗೆಯ ಪಕ್ಕದ ಮೇಜು ಮತ್ತು ಕ್ವೀನ್‌ ಸೈಜ್‌ ಹಾಸಿಗೆ, ಟೇಬಲ್ ಲ್ಯಾಂಪ್ ಮತ್ತು 2 ಕಚೇರಿ ಆರ್ಮ್‌ ಚೇರ್‌ಗಳನ್ನು ಹೊಂದಿವೆ ಎಂದೂ ಫೋರ್ಬ್ಸ್‌ ವರದಿ ಮಾಡಿದೆ.

ಇನ್ನು, ಉದ್ಯೋಗಿಗಳಿಗೆ ಈ ಮಲಗುವ ಕೋಣೆಗಳ ಬಗ್ಗೆ ಮಾಹಿತಿ ನೀಡಿರದಿದ್ದರೂ, ಹೆಚ್ಚು ಕೆಲಸ ಮಾಡುವವರಿಗೆ ಕೊಠಡಿಗಳನ್ನು ಸ್ಥಾಪಿಸಲಾಗಿದೆ ಎಂದು ಅವರು ಭಾವಿಸಿದ್ದಾರೆ. ಹಾಗೂ, ಈ ಬೆಳವಣಿಗೆ ಕೆಲ ಉದ್ಯೋಗಿಗಳಿಗೆ ಇಷ್ಟವಾಗಿಲ್ಲ ಎಂದೂ ತಿಳಿದುಬಂದಿದೆ.

ಇದನ್ನೂ ಓದಿ: Twitterಗೆ ಮತ್ತಷ್ಟು ಜನ ವಿದಾಯ: ಹಲವು ಕಡೆ ಕಚೇರಿಗಳೇ ಬಂದ್‌..!

ಕಳೆದ ತಿಂಗಳು, ಮಸ್ಕ್ ಅವರು ಟ್ವಿಟ್ಟರ್‌ನಲ್ಲಿ "ಹಾರ್ಡ್‌ಕೋರ್" ಸಂಸ್ಕೃತಿಗೆ ಬದ್ಧರಾಗಲು ಇಲ್ಲದಿದ್ದರೆ ವೇತನದೊಂದಿಗೆ ಹೊರಡುವಂತೆ ಉದ್ಯೋಗಿಗಳಿಗೆ ಮೇಲ್‌ ಮಾಡಿದ್ದರು. ಹಾಗೂ, ಉದ್ಯೋಗಿಗಳಿಗೆ ಆನ್‌ಲೈನ್ ಫಾರ್ಮ್‌ವೊಂದಕ್ಕೆ ಸಹಿ ಹಾಕುವಂತೆಯೂ ಆದೇಶಿಸಿದ್ದರು. ಹೆಚ್ಚಿನ ತೀವ್ರತೆಯಲ್ಲಿ ದೀರ್ಘ ಗಂಟೆಗಳವರೆಗೆ ಕೆಲಸ ಮಾಡಲು ಬದ್ಧರಾಗಿರಬೇಕು ಎಂದು ಇದರಲ್ಲಿ ಸೂಚಿಸಲಾಗಿತ್ತು.

ಇಮೇಲ್‌ನಲ್ಲಿ, ಟ್ವಿಟ್ಟರ್‌ ಉದ್ಯೋಗಿಗಳು ಅತ್ಯಂತ ಹಾರ್ಡ್‌ಕೋರ್ ಆಗಿರಬೇಕು ಎಂದು ಎಲಾನ್‌ ಮಸ್ಕ್ ಹೇಳಿದ್ದರು. ಇದು ಹೆಚ್ಚಿನ ತೀವ್ರತೆಯಲ್ಲಿ ದೀರ್ಘ ಗಂಟೆಗಳ ಕೆಲಸ ಮಾಡುವುದು ಎಂದರ್ಥ. ಅಸಾಧಾರಣ ಕಾರ್ಯಕ್ಷಮತೆ ಮಾತ್ರ ಉತ್ತೀರ್ಣ ದರ್ಜೆಯನ್ನು ರೂಪಿಸುತ್ತದೆ ಎಂದೂ ಹೇಳಿದ್ದರು.

ಇದನ್ನೂ ಓದಿ: Twitter ನೌಕರರಿಗೆ ವಾರಕ್ಕೆ 80 ತಾಸುಗಳ ಕೆಲಸ: ಉಚಿತ ಊಟ, ತಿಂಡಿ ಸೌಲಭ್ಯ ಕಟ್‌..!

ಇನ್ನೊಂದೆಡೆ, ಎಲಾನ್‌ ಮಸ್ಕ್ ಈ ಹಿಂದೆ ಟ್ವಿಟ್ಟರ್ ಉದ್ಯೋಗಿಗಳಿಗೆ ಮನೆಯಿಂದ ಕೆಲಸ ಮಾಡುವುದನ್ನು ಕೊನೆಗೊಳಿಸಿದ್ದರು. ಹಾಗೂ, ವಾರಕ್ಕೆ ಕನಿಷ್ಠ 40 ಗಂಟೆಗಳ ಕಾಲ ಕಚೇರಿಯಲ್ಲಿ ಕಳೆಯಲು ಉದ್ಯೋಗಿಗಳಿಗೆ ಕೇಳಿಕೊಂಡರು. ಹಾಗೆ, ಮುಂದಿನ ಹಾದಿಯು ಪ್ರಯಾಸದಾಯಕವಾಗಿದೆ ಮತ್ತು ಯಶಸ್ವಿಯಾಗಲು ತೀವ್ರವಾದ ಕೆಲಸದ ಅಗತ್ಯವಿರುತ್ತದೆ ಎಂದೂ ಎಲಾನ್‌ ಮಸ್ಕ್ ನೌಕರರಿಗೆ ತನ್ನ ಹಿಂದಿನ ಇಮೇಲ್‌ನಲ್ಲಿ ತಿಳಿಸಿದ್ದಾರೆ.

ಆದರೆ, ಈ ಇಮೇಲ್ ಬಹಳಷ್ಟು ಉದ್ಯೋಗಿಗಳಿಗೆ ಇಷ್ಟವಾಗದ ಕಾರಣ, ಅವರು ಫಾರ್ಮ್‌ಗೆ ಸಹಿ ಮಾಡಲು ನಿರಾಕರಿಸಿದರು ಮತ್ತು 3 ತಿಂಗಳ ವೇತನದೊಂದಿಗೆ ಕಂಪನಿಯಿಂದ ಹೊರಡಲು ನಿರ್ಧರಿಸಿದರು. ಸುಮಾರು 1200 ಉದ್ಯೋಗಿಗಳು ಸ್ವಯಂಪ್ರೇರಣೆಯಿಂದ ಹೊರಹೋಗಲು ನಿರ್ಧರಿಸಿದ್ದಾರೆ ಎಂದೂ ವರದಿಗಳು ಹೇಳುತ್ತವೆ.