Job Crisis| 30 ವರ್ಷ ಬಳಿಕ ಸಿಕ್ಕ ಹುದ್ದೆ, 80 ಲಕ್ಷ ಪರಿಹಾರ!
* ಕೋರ್ಟ್‌ನಲ್ಲಿ ಈಗ ಜಾನ್‌ಗೆ ಜಯ
* ಗೆರಾಲ್ಡ್ ಜಾನ್ ‘ಮೆರಿಟ್ ಲಿಸ್ಟ್’ನಲ್ಲಿ ಟಾಪ್ ಇದ್ದರೂ ಶಿಕ್ಷಕ ಹುದ್ದೆ ಸಿಕ್ಕಿರಲಿಲ್
ಡೆಹ್ರಾಡೂನ್(ನ.21): ಮೆರಿಟ್ ಲಿಸ್ಟ್‌ನಲ್ಲಿ (Merit List) ಟಾಪರ್ ಆಗಿದ್ದರೂ, ಶಿಕ್ಷಕ ಹುದ್ದೆ ವಂಚಿತರಾಗಿದ್ದ ವ್ಯಕ್ತಿಯೊಬ್ಬರಿಗೆ 30 ವರ್ಷ ಬಳಿಕ ಹುದ್ದೆ ಮತ್ತು 80 ಲಕ್ಷ ರು. ಪರಿಹಾರ ಸಿಕ್ಕಿದ ಅಚ್ಚರಿಯ ಪ್ರಕರಣ ಉತ್ತರಾಖಂಡ್‌ನ ಡೆಹ್ರಾಡೂನ್‌ನಲ್ಲಿ (Dehradun, Uttarakhand) ನಡೆದಿದೆ.
ಗೆರಾಲ್ಡ್ ಜಾನ್ (Gerald John) ಎಂಬುವವರಿಗೆ ತಮ್ಮ 24ನೇ ವಯಸ್ಸಿನಲ್ಲಿ ಕೆಲಸ ವಂಚಿತರಾಗಿದ್ದ ವ್ಯಕ್ತಿಗೆ 55ನೇ ವಯಸ್ಸಿನಲ್ಲಿ ಹುದ್ದೆ ಸಿಕ್ಕಿದೆ. ಜೊತೆಗೆ ಪರಿಹಾರವೂ ಹುಡುಕಿಕೊಂಡು ಬಂದಿದೆ.
ಪ್ರಕರಣ ಹಿನ್ನೆಲೆ:
1989ರಲ್ಲಿ ಅಂದಿನ ಉತ್ತರಪ್ರದೇಶ ಸರ್ಕಾರದ (Uttar Pradesh Govt) ‘ಸಿಎನ್‌ಐ ಬಾಯ್ಸ್ ಇಂಟರ್ ಕಾಲೇಜಿ’ನ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿತ್ತು. 24 ವರ್ಷದ ಗೆರಾಲ್ಡ್ ಜಾನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಸಂದರ್ಶನದ ಬಳಿಕ ಮೆರಿಟ್ ಲಿಸ್ಟ್‌ನಲ್ಲಿ ಟಾಪರ್ ಆಗಿದ್ದರು. ಆದರೆ ಹುದ್ದೆ ಮಾತ್ರ ಸಿಕ್ಕಿರಲಿಲ್ಲ. ಅಧಿಕಾರಿಗಳನ್ನು ಕೇಳಿದಾಗ, ಸ್ಟೆನೋಗ್ರಾಫಿ ಕೌಶಲ್ಯ (Cynography Skill) ಇರುವವರಿಗೆ ಹುದ್ದೆ ನೀಡಲಾಗಿದೆ ಎಂದಿದ್ದರು. ಆದರೆ ಜಾಹೀರಾತಿನಲ್ಲಿ ಆ ಅಂಶ ಇರಲಿಲ್ಲ ಎಂಬ ಜಾನ್ ವಾದವನ್ನು ಅಧಿಕಾರಿಗಳು ಆಲಿಸಿರಲಿಲ್ಲ.
ಹೀಗಾಗಿ 1990ರಲ್ಲಿ ಜಾನ್, ಅಲಹಾಬಾದ್ ಹೈಕೋರ್ಟ್ (Allahabad High Court) ಮೊರೆ ಹೋಗಿದ್ದರು. 2000ರಲ್ಲಿ ಉತ್ತರಾಖಂಡ ಪ್ರತ್ಯೇಕ ರಾಜ್ಯವಾದ ಬಳಿಕ ಪ್ರಕರಣ ಅಲ್ಲಿಗೆ ವರ್ಗ ಆಗಿತ್ತು. 2007ರಲ್ಲಿ ಉತ್ತರಾಖಂಡ ಹೈಕೋರ್ಟ್‌ನ ಏಕಸದಸ್ಯ ಪೀಠ, ಜಾನ್ ವಿರುದ್ಧವಾಗಿ ತೀರ್ಪು ನೀಡಿತ್ತು. ಬಳಿಕ ಜಾನ್ ಸುಪ್ರೀಂಕೋರ್ಟ್ (Supreme Court) ಮೆಟ್ಟಿಲೇರಿದ್ದರು. ಅಲ್ಲಿ ಇವರ ಪರವಾಗಿ ಹಿರಿಯ ಕಾಂಗ್ರೆಸ್ ನಾಯಕ, ವಕೀಲ ಸಲ್ಮಾನ್ ಖುರ್ಷಿದ್ (Salman Khurshid) ಉಚಿತವಾಗಿ ವಾದಿಸಿದ್ದರು. ಈ ವಾದ ಆಲಿಸಿದ ಸುಪ್ರೀಕೋರ್ಟ್, ಉತ್ತರಾಖಂಡದ ದ್ವಿಸದಸ್ಯ ಪೀಠದಲ್ಲಿ ಇದನ್ನು ಪ್ರಶ್ನಿಸುವಂತೆ ಸೂಚಿಸಿತ್ತು. ಕೊನೆಗೆ ಅಲ್ಲಿ ವಿಚಾರಣೆ ನಡೆದು 2020ರ ಡಿಸೆಂಬರ್‌ನಲ್ಲಿ ತೀರ್ಪು ನೀಡಿದ ಕೋರ್ಟ್, ಜಾನ್‌ರನ್ನು ಶಿಕ್ಷಕರಾಗಿ ನೇಮಿಸುವಂತೆ ಮತ್ತು 80 ಲಕ್ಷ ರು. ಪರಿಹಾರ ನೀಡುವಂತೆ ಸೂಚಿಸಿತು.
ಅದರಂತೆ 2021ರ ಜನವರಿಯಲ್ಲಿ ಜಾನ್ ಅವರನ್ನು ಅದೇ ಕಾಲೇಜಿನ ಶಿಕ್ಷಕರಾಗಿ ನೇಮಿಸಲಾಯ್ತು. ಜೊತೆಗೆ ಯುಪಿ ಸರ್ಕಾರ 73 ಲಕ್ಷ ರು. ಪರಿಹಾರ ಪಾವತಿಸಿತು. ಇನ್ನು ಕಳೆದ ಏಪ್ರಿಲ್‌ನಲ್ಲಿ ಕಾಲೇಜಿನ ಪ್ರಿನ್ಸಿಪಾಲ್ ನಿವೃತ್ತಿಯಾದ ಬಳಿಕ ಜಾನ್ ಅವರನ್ನೇ ಪ್ರಿನ್ಸಿಪಾಲ್ ಆಗಿ ನೇಮಕ ಮಾಡಲಾಗಿದೆ. ಜೊತೆಗೆ ಉತ್ತರಾಖಂಡ ಸರ್ಕಾರ ಬಾಕಿ 7 ಲಕ್ಷ ರು.ಗಳನ್ನು ಇತ್ತೀಚೆಗೆ ಜಾನ್ ಅವರಿಗೆ ಪಾವತಿ ಮಾಡಿದೆ.