ಕರ್ನಾಟಕದ 8 ಜಿಲ್ಲೆಗಳಲ್ಲಿ ಇಂದು ಅಪ್ರೆಂಟಿಸ್ ಮೇಳ: ಕೆಲಸ ಇಲ್ಲಿದೆ
ನಿರುದ್ಯೋಗಿ ಯುವಕರಿಗೆ ವಿವಿಧ ಕಂಪನಿಗಳಲ್ಲಿ ತರಬೇತಿ ಕೊಡಿಸಲು ಕೇಂದ್ರ ಸರ್ಕಾರದ ವ್ಯವಸ್ಥೆ, ನಂತರ ಉದ್ಯೋಗ ಭಾಗ್ಯ, ದೇಶದ 25 ರಾಜ್ಯದ 197 ಜಿಲ್ಲೆಗಳಲ್ಲಿ ಉದ್ಯೋಗಾಕಾಂಕ್ಷಿಗಳ ಆಯ್ಕೆ, ತರಬೇತಿ ಪಡೆದವರಿಗೆ ಸರ್ಕಾರದ ಪ್ರಮಾಣಪತ್ರ.
ನವದೆಹಲಿ(ಡಿ.12): ಆಗಷ್ಟೇ ಓದು ಮುಗಿಸಿರುವ ಉದ್ಯೋಗಾಕಾಂಕ್ಷಿಗಳಿಗೆ ಭವಿಷ್ಯದಲ್ಲಿ ಉತ್ತಮ ನೌಕರಿ ಕೊಡಿಸುವ ಸಲುವಾಗಿ ಕೇಂದ್ರ ಸರ್ಕಾರ ಸೋಮವಾರ ದೇಶದ 25 ರಾಜ್ಯಗಳ 197 ಜಿಲ್ಲೆಗಳಲ್ಲಿ ‘ಅಪ್ರೆಂಟಿಸ್‌ಶಿಪ್ ಮೇಳ’ವನ್ನು ಹಮ್ಮಿಕೊಂಡಿದೆ. ಇದರಲ್ಲಿ ಕರ್ನಾಟಕದ 8 ಜಿಲ್ಲೆಗಳೂ ಸೇರಿದ್ದು, ಎಂಟೂ ಜಿಲ್ಲೆಗಳಲ್ಲಿ ಮೇಳಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬಳ್ಳಾರಿ, ಬೆಳಗಾವಿ, ಬೆಂಗಳೂರು ನಗರ, ಬೀದರ್, ಚಾಮರಾಜನಗರ, ಚಿಕ್ಕಮಗಳೂರು, ಗದಗ ಮತ್ತು ಕೋಲಾರ ಜಿಲ್ಲೆಯಲ್ಲಿ ಮೇಳ ನಡೆಯಲಿದೆ. ಉದ್ಯೋಗಾಕಾಂಕ್ಷಿಗಳು ಮತ್ತು ಉದ್ಯೋಗದಾತರ ನಡುವಿನ ಸಂಪರ್ಕ ಸೇತುವೆಯಾಗುವ ಸಲುವಾಗಿ ಸರ್ಕಾರವು ಮೇಳ ನಡೆಸಲಿದ್ದು, ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ಮೇಳ ನೆರವಾಗಲಿದೆ.
‘ಪ್ರಧಾನಮಂತ್ರಿ ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ಮೇಳ’ ಹೆಸರಿನ ಮೇಳಕ್ಕೆ ಸ್ಥಳೀಯ ಉದ್ಯಮಗಳು ಮತ್ತು ಕಂಪನಿಗಳನ್ನು ಆಹ್ವಾನಿಸಲಾಗಿದೆ. ಮೇಳದಲ್ಲಿ ಅರ್ಹ ಉತ್ತಮ ಅಭ್ಯರ್ಥಿಗಳನ್ನು ಕಂಪನಿಗಳು ಆಯ್ಕೆ ಮಾಡಿಕೊಂಡು ನಿರ್ದಿಷ್ಟಅವಧಿಗೆ ತರಬೇತಿ ನೀಡಲಿವೆ. ಇದರಲ್ಲಿ ಪಡೆಯುವ ಅನುಭವವು ಅಭ್ಯರ್ಥಿಗಳಿಗೆ ನೌಕರಿ ಗಿಟ್ಟಿಸಿಕೊಂಡು ಮುಂದಿನ ವೃತ್ತಿಜೀವನ ರೂಪಿಸಿಕೊಳ್ಳಲು ನೆರವಾಗಲಿದೆ.
Amazon Layoff: 20,000 ಉದ್ಯೋಗಿಗಳನ್ನು ವಜಾ ಮಾಡಲು ಸಿದ್ಧವಾದ ಅಮೆಜಾನ್
ತರಬೇತಿಯಲ್ಲಿ ಭಾಗಿಯಾದವರಿಗೆ ರಾಷ್ಟ್ರೀಯ ವೃತ್ತಿಪರ ಶಿಕ್ಷಣ ಮತ್ತು ತರಬೇತಿ ಮಂಡಳಿಯ ಮಾನ್ಯತೆ ಹೊಂದಿರುವ ಪ್ರಮಾಣ ಪತ್ರ ಸಿಗಲಿದೆ. ಇದು ಅವರಿಗೆ ಮುಂದಿನ ದಿನಗಳಲ್ಲಿ ಉದ್ಯೋಗಾವಕಾಶದ ಸಾಧ್ಯತೆ ಹೆಚ್ಚಿಸಲಿದೆ ಎಂದು ಮೇಳ ಹಮ್ಮಿಕೊಂಡಿರುವ ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತಾ ಸಚಿವಾಲಯ ಹೇಳಿದೆ.
ಅರ್ಜಿ ಸಲ್ಲಿಕೆ ಹೇಗೆ?:
ಆಸಕ್ತರು ವೆಬ್ ತಾಣಕ್ಕೆ ಭೇಟಿ ನೀಡಿ ತಮ್ಮ ಹೆಸರು ನೋಂದಾಯಿಸಬೇಕು. ಈ ವಿಳಾಸದಲ್ಲೇ ಅರ್ಜಿದಾರರಿಗೆ ಸಮೀಪದ ಯಾವ ಸ್ಥಳದಲ್ಲಿ ಮೇಳ ಆಯೋಜನೆಗೊಂಡಿದೆ ಎಂಬ ಮಾಹಿತಿ ಸಿಗಲಿದೆ.
ಏನೇನು ದಾಖಲೆ ಬೇಕು?:
ತಮ್ಮ ರೆಸ್ಯೂಮ್‌ನ 3 ಪ್ರತಿ, ಎಲ್ಲಾ ಅಂಕಪಟ್ಟಿ, ದಾಖಲೆಗಳ ತಲಾ 3 ಪ್ರತಿ, ಫೋಟೋ ಸಹಿತ ಗುರುತಿನ ಚೀಟಿ (ಆಧಾರ್, ಡಿಎಲ್, ಮತ್ತಿತರೆ), 3 ಪಾಸ್‌ಪೋರ್ಟ್ ಅಳತೆಯ ಫೋಟೋಗಳೊಂದಿಗೆ ಮೇಳದ ಸ್ಥಳಕ್ಕೆ ಆಸಕ್ತರು ತೆರಳಬೇಕು.
ಎಲ್ಲೆಲ್ಲಿ ಮೇಳ?
ಬಳ್ಳಾರಿ ಸರ್ಕಾರಿ ಐಟಿಐ ಕಾಲೇಜು, ಬಳ್ಳಾರಿ
ಬೆಳಗಾವಿ ಸರ್ಕಾರಿ ಐಟಿಐ ಕಾಲೇಜು, ಬೆಳಗಾವಿ
ಬೆಂಗಳೂರು ನಗರ ಸರ್ಕಾರಿ ಐಟಿಐ ಕಾಲೇಜು, ಹೊಸೂರು ರಸ್ತೆ
ಬೀದರ್ ಸರ್ಕಾರಿ ಐಟಿಐ ಕಾಲೇಜು, ಹುಮನಾಬಾದ್
ಚಾಮರಾಜನಗರ ಜೆಎಸ್‌ಎಸ್ ಐಟಿಐ, ಮರಿಯಾಲ
ಚಿಕ್ಕಮಗಳೂರು ಸರ್ಕಾರಿ ಐಟಿಐ ಕಾಲೇಜು, ಚಿಕ್ಕಮಗಳೂರು
ಗದಗ ಸರ್ಕಾರಿ ಐಟಿಐ ಕಾಲೇಜು, ಗದಗ
ಕೋಲಾರ ಸರ್ಕಾರಿ ಐಟಿಐ ಕಾಲೇಜು, ದೇವಸಮುದ್ರ, ಮುಳಬಾಗಲು/ಸರ್ಕಾರಿ ಐಟಿಐ ಕಾಲೇಜು, ಬೆಮೆಲ್ ನಗರ, ಕೆಜಿಎಫ್
Samsung India Hiring; ಬರೋಬ್ಬರಿ 1000 ಎಂಜಿನಿಯರ್‌ಗಳನ್ನು ನೇಮಿಸಿಕೊಳ್ಳಲಿದೆ ಸ್ಯಾಮ್‌ಸಂಗ್ ಇಂಡಿಯಾ
ಏನಿದು ಅಪ್ರೆಂಟಿಸ್ ಮೇಳ?
ಆಗಷ್ಟೇ ಓದು ಮುಗಿಸಿರುವ ಉದ್ಯೋಗಾಕಾಂಕ್ಷಿಗಳನ್ನು ಕಂಪನಿಗಳು ಆಯ್ಕೆ ಮಾಡಿಕೊಂಡು ಸೀಮಿತ ಅವಧಿಗೆ ತರಬೇತಿ ನೀಡುವ ಕಾರ್ಯಕ್ರಮ. ಇಲ್ಲಿ ಪಡೆದ ತರಬೇತಿಯಿಂದ ಆಕಾಂಕ್ಷಿಗಳಿಗೆ ಕೆಲಸದ ಅನುಭವ ಆಗುತ್ತದೆ. ಮುಂದೆ ಅವರು ವಿವಿಧ ಕಂಪನಿಗಳಲ್ಲಿ ನೌಕರಿ ಪಡೆಯಲು ಅಥವಾ ಸ್ವ ಉದ್ಯೋಗ ಮಾಡಲು ಇದರಿಂದ ನೆರವಾಗುತ್ತದೆ.
ಯಾರು ಅರ್ಹ?
5ರಿಂದ 12ನೇ ತರಗತಿ ಉತ್ತೀರ್ಣರಾದವರು, ಕೌಶಲ್ಯಾಭಿವೃದ್ಧಿ ತರಬೇತಿ ಪ್ರಮಾಣ ಪತ್ರ ಹೊಂದಿರುವವರು, ಐಟಿಐ, ಡಿಪ್ಲೊಮಾ ಪದವೀಧರರು, ಪದವೀಧರರು ಅಪ್ರೆಂಟಿಸ್‌ಶಿಪ್ ಮೇಳದಲ್ಲಿ ಭಾಗಿಯಾಗಲು ಅರ್ಜಿ ಸಲ್ಲಿಸಬಹುದಾಗಿದೆ.