Asianet Suvarna News Asianet Suvarna News

ಜೂ 27ರಿಂದ ಜುಲೈ 2ರವರೆಗೆ ಮಡಿಕೇರಿಯಲ್ಲಿ ಅಗ್ನಿವೀರ ನೇಮಕಾತಿ ರ್‍ಯಾಲಿ, ರಾಜ್ಯದ 14 ಜಿಲ್ಲೆಗಳ ಅಭ್ಯರ್ಥಿಗಳು ಭಾಗಿ

ರಾಜ್ಯದ 14 ಜಿಲ್ಲೆಗಳ ಅಭ್ಯರ್ಥಿಗಳು ಭಾಗಿ. ಜುಲೈ 2ರವರೆಗೆ ನಡೆಯಲಿದೆ ಮಡಿಕೇರಿಯಲ್ಲಿ ಅಗ್ನಿವೀರ ರ್‍ಯಾಲಿ 

Agniveer recruitment rally in Madikeri from June 27 to july 2nd gow
Author
First Published Jun 26, 2024, 11:37 AM IST | Last Updated Jun 26, 2024, 11:37 AM IST

ಬೆಂಗಳೂರು (ಜೂ.26): ಭಾರತೀಯ ಸೇನೆಯಲ್ಲಿ ಅಗ್ನಿವೀರ ನೇಮಕಾತಿಗಾಗಿ ಜೂನ್‌ 27ರಿಂದ ಜುಲೈ 2ರವರೆಗೆ ಮಡಿಕೇರಿಯಲ್ಲಿ ರಾಜ್ಯದ 14 ಜಿಲ್ಲೆಗಳ ಅಭ್ಯರ್ಥಿಗಳಿಗೆ ರ್‍ಯಾಲಿ ನಡೆಯಲಿದ್ದು ರ್‍ಯಾಲಿಗಾಗಿ ಸಕಲ ಸಿದ್ಧತೆ ನಡೆದಿದೆ. ಮಡಿಕೇರಿಯ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನೇಮಕಾತಿ ರ್‍ಯಾಲಿ ನಡೆಯಲಿದೆ. ಸಹಾಯಕರು, ಸ್ಟೋರ್ ಕೀಪರ್ ಟೆಕ್ನಿಕಲ್, ಅಗ್ನಿವೀರ್ ಟ್ರೇಡ್ಸ್‌ಮನ್ ಹುದ್ದೆಗಳಿಗೆ ಏ.22ರಿಂದ ಮೇ 7ರ ವರೆಗೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಇ) ನಡೆಸಲಾಗಿತ್ತು. ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವ ಅಭ್ಯರ್ಥಿಗಳನ್ನು ರ್‍ಯಾಲಿಗೆ ಆಹ್ವಾನಿಸಲಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಮಂಡ್ಯ, ಮೈಸೂರು, ಬಳ್ಳಾರಿ, ಚಾಮರಾಜನಗರ, ರಾಮನಗರ, ಕೊಡಗು, ಕೋಲಾರ, ಚಿಕ್ಕಬಳ್ಳಾಪುರ, ಹಾಸನ, ಚಿತ್ರದುರ್ಗ ಮತ್ತು ವಿಜಯನಗರ ಜಿಲ್ಲೆಗಳ ಅಭ್ಯರ್ಥಿಗಳಿಗೆ ರ್‍ಯಾಲಿ ಆಯೋಜಿಸಲಾಗಿದೆ ಎಂದು ಭಾರತೀಯ ಸೇನೆಯ ಬೆಂಗಳೂರು ಕಚೇರಿ ತಿಳಿಸಿದೆ.

ಸೇನಾ ನೇಮಕಾತಿ ರ‍್ಯಾಲಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಸೈನಿಕ ಕಲ್ಯಾಣ ಇಲಾಖೆಗೆ ಕೊಡಗು ಜಿಲ್ಲಾಧಿಕಾರಿ ವೆಂಕಟ್‌ ರಾಜಾ ಸೂಚಿಸಿದ್ದಾರೆ. ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಅಗ್ನಿವೀರ ಸೇನಾ ನೇಮಕಾತಿ ರ‍್ಯಾಲಿಯು ಒಂದು ವಿಶಿಷ್ಟ ಕಾರ್ಯಕ್ರಮವಾಗಿದ್ದು, ಯಾರಿಗೂ ಯಾವುದೇ ರೀತಿಯ ತೊಂದರೆಯಾಗದಂತೆ ಗಮನಹರಿಸಬೇಕು ಎಂದು ಸೂಚಿಸಿದ್ದಾರೆ. ವಸತಿ, ಊಟೋಪಚಾರ ಸೇರಿದಂತೆ ಹಲವು ಮೂಲ ಸೌಕರ್ಯಗಳನ್ನು ವ್ಯವಸ್ಥಿತವಾಗಿ ನಿರ್ವಹಿಸುವಂತೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.

ನೀವು ಈ ಉದ್ಯೋಗ ನೀಡದಿದ್ದರೆ ಬಾಲ್ಯದ ಗೆಳತಿ...,ಅಭ್ಯರ್ಥಿಯ ಉತ್ತರಕ್ಕೆ ಸಂಕಷ್ಟಕ್ಕೆ ಸಿಲುಕಿದ ಸಿಇಒ!

ಸೈನಿಕ ಭರ್ತಿ ಕಾರ್ಯಾಲಯದ ನಿರ್ದೇಶಕ ಕರ್ನಲ್‌ ಗೌರವ್‌ ತಾಪಾ ಮಾತನಾಡಿ, ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್‌ ಕಲ್ಪಿಸಬೇಕಿದೆ. ಲೋಕೋಪಯೋಗಿ, ಸೆಸ್ಕ್‌, ಪದವಿ ಪೂರ್ವ ಶಿಕ್ಷಣ ಇಲಾಖೆ, ಅಗ್ನಿಶಾಮಕ ದಳ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ವೈದ್ಯಕೀಯ ಶಿಕ್ಷಣ, ಸೆಸ್ಕ್‌, ಬಿಎಸ್‌ಎನ್‌ಎಲ್‌ ಹೀಗೆ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಅಗತ್ಯ ಸಹಕಾರ ನೀಡಬೇಕು ಎಂದು ನಿರ್ದೇಶನ ನೀಡಿದರು.

ಸೈನಿಕ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಹಾಗೂ ನೋಡಲ್‌ ಅಧಿಕಾರಿ ಮೇಜರ್‌ ಬಾಲಸುಬ್ರಹ್ಮಣ್ಯಂ ಅಗ್ನಿವೀರ ಸೇನಾ ನೇಮಕಾತಿ ರ‍್ಯಾಲಿಗೆ ಸಂಬಂಧಿಸಿದಂತೆ ಹಲವು ಮಾಹಿತಿ ನೀಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ, ಲೋಕೋಪಯೋಗಿ ಇಲಾಖೆಯ ಇಇ ಸಿದ್ದೇಗೌಡ, ನಗರಸಭೆ ಪೌರಾಯುಕ್ತ ವಿಜಯ್‌, ಪ್ರಾದೇಶಿಕ ಸಾರಿಗೆ ಅಧಿಕಾರಿ ನಾಗರಾಜಾ ಆಚಾರ್‌, ಸೆಸ್ಕ್‌ ಕಾರ್ಯಪಾಲಕ ಅಭಿಯಂತರ ಅನಿತಾ ಬಾಯಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿ.ಟಿ.ವಿಸ್ಮಯಿ, ಭಾರತೀಯ ದೂರ ಸಂಚಾರ ನಿಗಮದ ವ್ಯವಸ್ಥಾಪಕ ಪ್ರದೀಪ್‌ ಮೊದಲಾದವರು ಪೂರ್ವಭಾವಿ ಸಭೆಯಲ್ಲಿ ಉಪಸ್ಥಿತರಿದ್ದರು. 

ಬ್ಯಾಂಕ್‌ ಉದ್ಯೋಗ ಬಯಸುವವರಿಗೆ ಸುವರ್ಣಾವಕಾಶ, ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ 586 ಹುದ್ದೆ

ಸೇನಾ ಆಯ್ಕೆ ತರಬೇತಿ: ಭಾರತೀಯ ಸೇನೆ ಮತ್ತು ಇತರೆ ಸಮವಸ್ತ್ರ ಸೇವೆಗಳಿಗೆ ಸೇರಬಯಸುವ ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ1, 2(ಎ), 3(ಎ) ಹಾಗೂ 3(ಬಿ) ವರ್ಗಗಳ ಅರ್ಹ ಅಭ್ಯರ್ಥಿಗಳಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು 2024- 25ನೇ ಸಾಲಿನಲ್ಲಿ ಆಯ್ಕೆಯ ಸಿದ್ಧತೆ ಬಗ್ಗೆ ವೃತ್ತಿ ಮಾರ್ಗದರ್ಶನ ಹಾಗೂ ತರಬೇತಿ ನೀಡಲಿದೆ. ಈ ಸಂಬಂಧ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಬಾಲಕರು ಮಾತ್ರ ಅರ್ಜಿ ಸಲ್ಲಿಸಬಹುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪ್ರಕಟಣೆ ತಿಳಿಸಿದೆ.

ಅರ್ಜಿ ಸಲ್ಲಿಸಲು ಜುಲೈ 10 ಕೊನೆಯ ದಿನವಾಗಿದೆ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಯನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವೆಬ್‌ಸೈಟ್ https://bcwd.karnataka.gov.in ನಿಂದ ಪಡೆಯಬಹುದು. ಉತ್ತರ ಕನ್ನಡ ಜಿಲ್ಲೆಯ ಅಭ್ಯರ್ಥಿಗಳು ಮಾಹಿತಿಗಾಗಿ ದೂರವಾಣಿ ಸಂಖ್ಯೆ (08382) 226588 ನ್ನು ಕಚೇರಿ ವೇಳೆ ಸಂಪರ್ಕಿಸಬಹುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ತಿಳಿಸಿದ್ದಾರೆ.

ನಿರ್ಗಮನ ಪಥಸಂಚಲನ: ಬೆಳಗಾವಿಯಲ್ಲಿ ವಾಯು ಅಗ್ನಿವೀರ ತರಬೇತಿ ಪೂರ್ಣಗೊಳಿಸಿದ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಸಾಂಬ್ರಾದ ಏರ್‌ಮೆನ್‌ ಟ್ರೈನಿಂಗ್‌ ಸ್ಕೂಲ್‌ನಲ್ಲಿ ಇತ್ತೀಚೆಗೆ ನಡೆಯಿತು. ಪುರುಷ ಮತ್ತು ಮಹಿಳೆಯರು ಸೇರಿ ಒಟ್ಟು 2614 ಪ್ರಶಿಕ್ಷಣಾರ್ಥಿಗಳು 22 ವಾರಗಳ ಅವಧಿಯ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಪ್ರಶಿಕ್ಷಣಾರ್ಥಿಗಳು ಆಕರ್ಷಕ ಪಥಸಂಚಲನ ನಡೆಸಿದರು. ಅಲ್ಲದೇ, ಪ್ರಶಿಕ್ಷಣಾರ್ಥಿಗಳು ವಿವಿಧ ದೈಹಿಕ ಕೌಶಲ್ಯಗಳನ್ನು ಕೂಡ ಪ್ರದರ್ಶಿಸಿದರು. ಏರ್‌ ವೈಸ್‌ ಮಾರ್ಷಲ್‌ ಆರ್‌ ರವಿಶಂಕರ್‌ ಅವರು ಪಾಸಿಂಗ್ ಔಟ್‌ ಪರೇಡ್‌ ಪರಿಶೀಲಿಸಿ, ತರಬೇತಿ ಪೂರ್ಣಗೊಳಿಸಿದ ಪ್ರಶಿಕ್ಷಣಾರ್ಥಿಗಳನ್ನು ಅಭಿನಂದಿಸಿದರು. ಅಲ್ಲದೇ, ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆಗಾಗಿ ಪ್ರತಿಭಾನ್ವಿತ ಪ್ರಶಿಕ್ಷಣಾರ್ಥಿಗಳಿಗೆ ಟ್ರೋಫಿಗಳನ್ನು ನೀಡಿ ಗೌರವಿಸಿದರು. ಎಜಿವಿಟಿ ವಿವೇಕ್‌ ಸಿಂಗ್‌ ರಾವತ್‌ ಅವರಿಗೆ ಅತ್ಯುತ್ತಮ ಶೈಕ್ಷಣಿಕ ಪ್ರಶಸ್ತಿ, ಎಜಿವಿಟಿ ನೀತೇಶ್‌ ಬೆಸ್ಟ್ ಇನ್ ಗ್ರೌಂಡ್‌ ಸರ್ವಿಸ್‌ ಟ್ರೈನಿಂಗ್‌ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

- ಮಡಿಕೇರಿಯಲ್ಲಿ ಸೇನೆಯ ಅಗ್ನಿವೀರ ನೇಮಕಾತಿ ರ್‍ಯಾಲಿಗಾಗಿ ಸಕಲ ಸಿದ್ಧತೆ

- ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿರುವ ರ್‍ಯಾಲಿ

- ಸಹಾಯಕರು, ಸ್ಟೋರ್ ಕೀಪರ್ ಟೆಕ್ನಿಕಲ್, ಅಗ್ನಿವೀರ್ ಟ್ರೇಡ್ಸ್‌ಮನ್ ಹುದ್ದೆ

- ಏಪ್ರಿಲ್‌ 22ರಿಂದ ಮೇ 7ರ ವರೆಗೆ ನಡೆದಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ

- ವಸತಿ, ಊಟೋಪಚಾರ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಲು ನಿರ್ದೇಶನ

- ರಾಜ್ಯದ 14 ಜಿಲ್ಲೆಗಳ ಅರ್ಹ ಅಭ್ಯರ್ಥಿಗಳು ನೇಮಕಾತಿ ರ್‍ಯಾಲಿಯಲ್ಲಿ ಭಾಗಿ

Latest Videos
Follow Us:
Download App:
  • android
  • ios