18 ತಿಂಗಳ ಬಳಿಕ ವಿಪ್ರೋ ವರ್ಕ್ ಫ್ರಂ ಹೋಂ ಭಾಗಶಃ ಅಂತ್ಯ!
* ಕೊರೋನಾ ಹಾವಳಿಯಿಂದಾಗಿ ಒಂದೂವರೆ ವರ್ಷದಿಂದ ‘ವರ್ಕ್ ಫ್ರಂ ಹೋಮ್’
* 18 ತಿಂಗಳ ಬಳಿಕ ವಿಪ್ರೋ ವರ್ಕ್ ಫ್ರಂ ಹೋಂ ಭಾಗಶಃ ಅಂತ್ಯ
* ನೌಕರರು ಇಂದಿನಿಂದ ಕಚೇರಿಗೆ ವಾರಕ್ಕೆ 2 ದಿನ ಕಚೇರಿಯಲ್ಲಿ ಕೆಲಸ
ಬೆಂಗಳೂರು(ಸೆ.13): ಕೊರೋನಾ ಹಾವಳಿಯಿಂದಾಗಿ ಒಂದೂವರೆ ವರ್ಷದಿಂದ ‘ವರ್ಕ್ ಫ್ರಂ ಹೋಮ್’ ಮಾಡುತ್ತಿದ್ದ ನೌಕರರು ಸೋಮವಾರದಿಂದಲೇ ಕಚೇರಿಗೆ ಆಗಮಿಸಿ ಕೆಲಸ ಮಾಡಲಿದ್ದಾರೆ ಬೆಂಗಳೂರು ಮೂಲದ ಮಾಹಿತಿ ತಂತ್ರಜ್ಞಾನ ಸಂಸ್ಥೆ ವಿಪ್ರೋ ಘೋಷಿಸಿದೆ.
ಆದಾಗ್ಯೂ, ನೌಕರರು ವಾರಪೂರ್ತಿ ಕಚೇರಿಗೆ ಬರುವಂತಿಲ್ಲ. ಬದಲಿಗೆ ವಾರಕ್ಕೆ 2 ದಿನವಷ್ಟೇ ಕಚೇರಿಗೆ ಬರಬೇಕಿದೆ ಎಂದು ವಿಪ್ರೋ ಅಧ್ಯಕ್ಷ ರಿಷದ್ ಪ್ರೇಮ್‌ಜೀ ಹೇಳಿದ್ದಾರೆ. ಕೊರೋನಾ ಹರಡುವಿಕೆಯ ತೀವ್ರತೆ ಕಡಿಮೆಯಾದ ಹಿನ್ನೆಲೆಯಲ್ಲಿ ಈ ವಿಪ್ರೋ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ.
ಈ ಸಂಬಂಧ ಭಾನುವಾರ ಟ್ವೀಟ್ ಮಾಡಿರುವ ರಿಷದ್ ಅವರು, ‘18 ತಿಂಗಳ ಕಾಲ ಮನೆಯಿಂದಲೇ ಕೆಲಸ ನಿರ್ವಹಣೆ ಮಾಡಿದ್ದ ನಮ್ಮ ವಿಪ್ರೋ ನಾಯಕರು ನಾಳೆ(ಸೋಮವಾರ)ಯಿಂದ ಕಚೇರಿಗೆ ಬರುತ್ತಿದ್ದಾರೆ. ಈಗಾಗಲೇ ಎರಡೂ ಡೋಸ್ ಲಸಿಕೆ ಪಡೆದಿರುವವರು ಕಚೇರಿಗೆ ಬರಲಿದ್ದು, ಅವರ ಸುರಕ್ಷತೆಗಾಗಿ ಸಾಮಾಜಿಕ ಅಂತರ ಸೇರಿದಂತೆ ಇನ್ನಿತರ ಕೋವಿಡ್ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಜೊತೆಗೆ ನಾವು ಸಹ ಈ ಸಂಬಂಧ ನಿಗಾ ವಹಿಸುತ್ತೇವೆ’ ಎಂದು ಹೇಳಿದ್ದಾರೆ.
ಅಲ್ಲದೆ ಕೋವಿಡ್ ಹರಡದಂತೆ ದೇಹದ ಉಷ್ಣತೆ ಪರೀಕ್ಷೆ, ಕ್ಯೂಆರ್ ಕೋಡ್ ಸ್ಕಾ್ಯನ್ ಸೇರಿದಂತೆ ವಿಪ್ರೋ ಆವರಣದಲ್ಲಿ ಕೈಗೊಳ್ಳಲಾದ ಸುರಕ್ಷತಾ ಕ್ರಮಗಳ ವಿವರಣೆಯುಳ್ಳ ವಿಡಿಯೋವನ್ನು ಹಂಚಿಕೊಂಡಿದ್ದಾರೆ.