ಬಿಜೆಪಿಗೆ ಕುಮಾರಸ್ವಾಮಿ ಬೆಂಬಲ: ಪಕ್ಷದ ನಡೆಗೆ ಸಿಡಿದೆದ್ದ ಮತ್ತೋರ್ವ ಜೆಡಿಎಸ್ ನಾಯಕ...!
ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಬಿಜೆಪಿಗೆ ಬೆಂಬಲ ಸೂಚಿಸುತ್ತಿರುವುದರಿಂದ ಜೆಡಿಎಸ್ ಹಿರಿಯ ನಾಯಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ, (ಡಿ.25): ಆಡಳಿತರೂಢ ಬಿಜೆಪಿ ಸರ್ಕಾರಕ್ಕೆ ಒಂದಿಲ್ಲೊಂದು ವಿಚಾರದಲ್ಲಿ ಕುಮಾರಸ್ವಾಮಿ ಅವರು ಬೆಂಬಲ ಕೊಡುತ್ತಿದ್ದಾರೆ. ಇದರು ಜೆಡಿಎಸ್ ಇನ್ನುಳಿದ ನಾಯಕರುಗಳಿಗೆ ಬೇಸರ ಉಂಟುಮಾಡಿದೆ.
ಈಗಾಗಲೇ ಈ ಬಗ್ಗೆ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್, ಸ್ವಪಕ್ಷದ ನಡೆಗೆ ವಿರೋಧ ವ್ಯಕ್ತಪಡಿಸಿದ್ದು, ಬಿಜೆಪಿ ಜೊತೆ ಮೈತ್ರಿಯಾದರೆ ಜೆಡಿಎಸ್‌ನಲ್ಲಿ ಇರುವುದಿಲ್ಲ ಎಂದು ಬಹಿರಂಗವಾಗಿಯೇ ಹೇಳಿದ್ದಾರೆ. ಇದೀಗ ಜೆಡಿಎಸ್ ಹಿರಿಯ ನಾಯಕ ವೈ.ಎಸ್.ವಿ.ದತ್ತಾ ಸ್ವಪಕ್ಷದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಜೆಡಿಎಸ್, ಕಾಂಗ್ರೆಸ್ ಲೀಡರ್ಸ್ ಜಂಟಿ ಸುದ್ದಿಗೋಷ್ಠಿ: ಕುಮಾರಸ್ವಾಮಿಗೆ ಸೆಡ್ಡು ಹೊಡೆದ ನಾಯಕ
ಇಂದು (ಶುಕ್ರವಾರ) ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಯಾವುದೇ ಪಕ್ಷಕ್ಕಾದರೂ ಒಂದು ಸ್ಪಷ್ಟ ನಿಲುವಿರಬೇಕು. ಇಲ್ಲದೇ ಇದ್ದರೆ ನಾವು ಜನರ ಮಧ್ಯೆ ನಗೆ ಪಾಟಲಿಗೀಡಾಗಬೇಕಾಗುತ್ತದೆ. ಆಗ ತನ್ನಿಂತಾನೆ ಪಕ್ಷ ದುರ್ಬಲವಾಗುತ್ತದೆ ಎಂದು ಜೆಡಿಎಸ್ ಪಕ್ಷದ ಹಿರಿಯ ನಾಯಕ ವೈ.ಎಸ್.ವಿ.ದತ್ತಾ ಸ್ವಪಕ್ಷದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ, ಗೋ ಹತ್ಯೆ ನಿಷೇಧ ಕಾಯ್ದೆ ವಿಷಯದಲ್ಲಿ ನಮ್ಮ ಪಕ್ಷ ತೆಗೆದುಕೊಂಡ ತೀರ್ಮಾನ ಸರಿಯಲ್ಲ ಎಂದು ಟೀಕಿಸಿದರು.
ನಾವು ದೆಹಲಿ ಹೈಕಮಾಂಡ್ ಸಂಸ್ಕೃತಿಯನ್ನು ವಿರೋಧಿಸಿದವರು. ಈಗಲೂ ನಾವು ಅದಕ್ಕೇ ಬದ್ಧರಾಗಿರಬೇಕು. ಧಾರ್ಮಿಕ ಹಾಗೂ ಭಾವನಾತ್ಮಕತೆ ನಮಗೆ ಮುಖ್ಯವಲ್ಲ ಎಂದು ನಾವು ಸಾರಬೇಕಿದೆ. ನಮಗೆ ಅಧಿಕಾರವಿರಲಿ ಇಲ್ಲದಿರಲಿ ಅದಕ್ಕೆ ತಲೆಕೆಡಿಸಿಕೊಳ್ಳಬಾರದು. ಜನರೇ ನಮ್ಮನ್ನು ಗುರುತಿಸುವಂತಾಗಬೇಕು ಎಂದು ವೈಎಸ್ ವಿ ದತ್ತ ಹೇಳಿದರು.