ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತ ಮೆರವಣಿಗೆ ಆರಂಭವಾಯಿತು. 40 ಪರ್ಸೆಂಟ್‌ ಕಮಿಷನ್‌ ವಿಚಾರ, ಪಿಎಸ್‌ಐ ಹಗರಣ, ನಿರುದ್ಯೋಗ ಸಮಸ್ಯೆ, ಗುತ್ತಿಗೆದಾರ ಕೆಂಪಣ್ಣ ಬಂಧನ ವಿರೋಧ ಸೇರಿದಂತೆ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ನಡೆದ ಪ್ರತಿಭಟನೆ 

ಬೆಳಗಾವಿ(ಡಿ.27): ರಾಜ್ಯ ಸರ್ಕಾರದ ಭ್ರಷ್ಟಾಚಾರ ಸೇರಿದಂತೆ ವಿವಿಧ ಧೋರಣೆಗಳನ್ನು ವಿರೋಧಿಸಿ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಯುವಕಾಂಗ್ರೆಸ್‌ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ಯುವ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಮೊಹ್ಮದ್‌ ನಲಪಾಡ್‌ ಸೇರಿದಂತೆ ನೂರಾರು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ಇಲ್ಲಿಯ ಯಡಿಯೂರಪ್ಪ ಮಾರ್ಗದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಅಲಾರವಾಡ ಕ್ರಾಸ್‌ ಬಳಿ ತಲುಪುತ್ತಿದ್ದಂತೆ ಪೊಲೀಸರು ತಡೆದು ವಶಕ್ಕೆ ಪಡೆದರು. ಈ ವೇಳೆ ನಲಪಾಡ್‌ ಮತ್ತು ಪೊಲೀಸರ ಮಧ್ಯ ವಾಗ್ವಾದ ನಡೆಯಿತು. ಶಾಸಕಿ ಲಕ್ಷ್ಮಿ ಹೆಬ್ಬಾಳಕರ, ವಿಧಾನ ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ, ಯುವ ಕಾಂಗ್ರೆಸ್‌ ಮುಖಂಡರಾದ ಮೃಣಾಲ್‌ ಹೆಬ್ಬಾಳಕರ, ರಾಹುಲ್‌ ಜಾರಕಿಹೊಳಿ ಮೊದಲಾದವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

ಆರಂಭದಲ್ಲಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತ ಮೆರವಣಿಗೆ ಆರಂಭವಾಯಿತು. 40 ಪರ್ಸೆಂಟ್‌ ಕಮಿಷನ್‌ ವಿಚಾರ, ಪಿಎಸ್‌ಐ ಹಗರಣ, ನಿರುದ್ಯೋಗ ಸಮಸ್ಯೆ, ಗುತ್ತಿಗೆದಾರ ಕೆಂಪಣ್ಣ ಬಂಧನ ವಿರೋಧ ಸೇರಿದಂತೆ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಯಿತು. ಕೈಯಲ್ಲಿ ಫಲಕಗಳನ್ನು ಹಿಡಿದು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.

BELAGAVI WINTER SESSION: ‘ಶೇ.40 ಕಮಿಷನ್‌’ ಚರ್ಚೆಗೆ ಸಭಾಧ್ಯಕ್ಷ ಕಾಗೇರಿ ಅನುಮತಿ

ಈ ಸಂದರ್ಭದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ ಮಾತನಾಡಿ, ಯುವಕರಿಗೆ 2 ಕೋಟಿ ಉದ್ಯೋಗ ಕೊಡುತ್ತೇವೆ ಎಂದವರು ಪಲಾಯನ ಮಾಡಿದ್ದಾರೆ. ಬಿಜೆಪಿ ಸರ್ಕಾರ ಪ್ರತಿ ಹಂತದಲ್ಲೂ ಭ್ರಷ್ಟಾಚಾರ ಮಾಡುತ್ತಿದೆ. ಶೇ.40ರಿಂದ ಯುವಕರು ಹೆಚ್ಚು ನಿರುದ್ಯೋಗಿಯಾಗಿದ್ದಾರೆ. ಬಿಜೆಪಿ ಸರ್ಕಾರದ ದುರಾಡಳಿತ ವಿರುದ್ಧ ಯೂಥ್‌ ಕಾಂಗ್ರೆಸ್‌ ಧ್ವನಿ ಎತ್ತುತ್ತಿದೆ. ಪ್ರತಿ ಹಂತದಲ್ಲೂ ಯೂಥ್‌ ಕಾಂಗ್ರೆಸ್‌ಗೆ ನಮ್ಮ ಬೆಂಬಲ ಇರುತ್ತದೆ ಎಂದರು.

ಯೂಥ್‌ ಕಾಂಗ್ರೆಸ್‌ ಅಧ್ಯಕ್ಷ ಮಹಮ್ಮದ ನಲಪಾಡ್‌ ಮಾತನಾಡಿ, ಬಿಜೆಪಿ ಮೊದಲು ನಮ್ಮ ಉದ್ಯೋಗ ಕಸಿದುಕೊಂಡಿದೆ. ಈಗ ಚಿಲುಮೆ ಎಂಬ ಸಂಸ್ಥೆ ಮೂಲಕ ನಮ್ಮ ವೋಟ್‌ ಕದ್ದಿದೆ. ಪ್ರಜಾಪ್ರಭುತ್ವ ಕಗ್ಗೊಲೆ ಮಾಡುತ್ತಿದೆ. ಸರ್ಕಾರದ ವಿರುದ್ಧ ಮಾತನಾಡಲು ಜನ ಭಯ ಪಡುವಂತಾಗಿದೆ. ಈ ಶೇ.40 ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವವರೆಗೆ ಯೂಥ್‌ ಕಾಂಗ್ರೆಸ್‌ ಸುಮ್ಮನಿರುವುದಿಲ್ಲ ಎಂದು ಗುಡುಗಿದರು.

ಶೇ.40 ಕಮಿಷನ್‌ ವಿರುದ್ಧ ಧ್ವನಿ ಎತ್ತಿದ ಗುತ್ತಿಗೆದಾರ ಸಂಘದ ಅಧ್ಯಕ್ಷರನ್ನು ಬಂಧಿಸಿದರು. ಈ ಸರ್ಕಾರ ಪ್ರತಿ ಹಂತದಲ್ಲೂ ಸ್ಕ್ಯಾಮ್‌ ಮಾಡುತ್ತಿದೆ. ಈ ಅಧಿವೇಶನ ಮಾಡುತ್ತಿರುವುದು ಜನರ ಸಮಸ್ಯೆ ಆಲಿಸಲು ಅಲ್ಲ. ಅವರ ಶೇ.40 ಕಮಿಷನ್‌ ಬಗ್ಗೆ ಮಾತಾಡಲು. ಹಾಗಾಗಿ ಇದನ್ನು ಪ್ರತಿಭಟಿಸಿ ಸುವರ್ಣ ವಿಧಾನಸೌಧ ಮುತ್ತಿಗೆ ಹಾಕಲಾಗುತ್ತಿದೆ ಎಂದು ತಿಳಿಸಿದರು.

ಬೆಳಗಾವಿ: ಸುವರ್ಣಸೌಧದಲ್ಲಿ ಬರೀ ರೆಡ್ಡಿ ಪಕ್ಷದ್ದೇ ಚರ್ಚೆ..!

ವಿಧಾನ ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಬಿಜೆಪಿ ಉದ್ಯೋಗ ನೀಡಲು ವಿಫಲವಾಗಿದೆ. ಭ್ರಷ್ಟಾಚಾರ, ಬೆಲೆ ಏರಿಕೆ, ದುರಾಡಳಿತ ವಿರೋಧಿಸಿ ಯುವಕರು ಧ್ವನಿ ಎತ್ತಬೇಕು. ಕೇಂದ್ರ, ಕರ್ನಾಟಕ ಎಂದು ಬಂದಾಗ ದ್ವಂದ್ವ ನೀತಿ ಅನುಸರಿಸುತ್ತಿದೆ. ಬಿಜೆಪಿಯ ದ್ವಂದ್ವ ನೀತಿ ಕುರಿತು ಮುಂದೆ ಬೃಹತ್‌ ಹೋರಾಟ ಮಾಡೋಣ ಎಂದರು.

10 ಅಡಿ ಆಳದ ಚರಂಡಿಯಲ್ಲಿ ಬಿದ್ದವನ ರಕ್ಷಣೆ:

ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿ 10 ಅಡಿ ಆಳದ ಚರಂಡಿಯಲ್ಲಿ ಬಿದ್ದಿದ್ದ ಯುವ ಕಾರ್ಯಕರ್ತನೋರ್ವನ್ನು ಪೊಲೀಸರು ರಕ್ಷಣೆ ಮಾಡಿದರು. ಬಿ.ಎಸ್‌.ಯಡಿಯೂರಪ್ಪ ಮಾರ್ಗ ಬಳ್ಳಾರಿ ನಾಲಾ ಬ್ರಿಡ್ಜ್‌ ಬಳಿ ಅನಾಹುತ ತಪ್ಪಿತು. ಇದೇ ವೇಳೆ, ಅಲ್ಲಿಯೇ ಪ್ರತಿಭಟನೆ ಮುಂದೆ ಸಾಗುತ್ತಿದ್ದಂತೆ ಡಿಸಿಪಿ ರವೀಂದ್ರ ಗಡಾದಿ ನೇತೃತ್ವದಲ್ಲಿ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದರು.