ಬೆಂಗಳೂರು, (ಸೆ.12): ಕೊನೆಗೂ ರಾಜ್ಯ ಸಚಿವ ಸಂಪುಟಕ್ಕೆ ಮುಹೂರ್ತ ಕೂಡಿಬಂದಂತಿದೆ. ಸಿಎಂ ಬಿಎಸ್ ಯಡಿಯೂರಪ್ಪ ಅವರ ದೆಹಲಿ ಭೇಟಿಗೆ ಫ್ಲೈಟ್ ಬುಕ್ ಆಗಿದ್ದು, ಇದೇ ಇದೇ ಸೆಪ್ಟೆಂಬರ್ 17ರಂದು ದಿಲ್ಲಿಗೆ ತೆರಳಲಿದ್ದಾರೆ.

ಕೊರೋನಾ ಸಂಕಷ್ಟದ ನಡುವೆಯೂ ರಾಜ್ಯದಲ್ಲಿ ಸಂಪುಟ  ವಿಸ್ತರಣೆಯ ಕಸರತ್ತು ಗರಿ ಗೆದರಿದೆ. ಈಗಾಗಲೇ ಸಚಿವ ಸ್ಥಾನಕ್ಕಾಗಿ ಲಾಭಿ ಕೂಡ ಶಾಸಕರಲ್ಲಿ ಶುರುವಾಗಿತ್ತು. ಇದರ ಮಧ್ಯೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ದಿಲ್ಲಿಗೆ ತೆರಳಿ ವರಿಷ್ಠರು, ಬಿಜೆಪಿ ಹೈಕಮಾಂಡ್ ಭೇಟಿಗೆ ಸಿದ್ಧರಾಗಿದ್ದಾರೆ.

ಸಿಎಂ ಬಿಎಸ್‌ವೈ ಮತ್ತೊಂದು ಲಂಚ್ ಮೀಟಿಂಗ್: ಈ ಬಾರಿ ಕಾಂಗ್ರೆಸ್ ಶಾಸಕರು ಭಾಗಿ..!

ಸೆ.21ರಿಂದ ವಿಧಾನಸಭೆಯ ಅಧಿವೇಶನಗಳು ಆರಂಭವಾಗಲಿದೆ. ಇದಕ್ಕೂ ಮೊದಲು ಸಿಎಂ ಬಿಎಸ್ ವೈ ಸಚಿವ ಸಂಪುಟ ವಿಸ್ತರಣೆ ಮಾಡುವ ಯೋಜನೆಯಲ್ಲಿದ್ದಾರೆ ಎನ್ನಲಾಗಿದೆ.

 ಸೆಪ್ಟೆಂಬರ್ 17ರಂದು ದೆಹಲಿಗೆ ತೆರಳಲಿರುವ ಸಿಎಂ ಬಿಎಸ್ ವೈ, ಸಂಪುಟ ವಿಸ್ತರಣೆ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಹೈಕಮಾಂಡ್‌ ಜೊತೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗುತ್ತಿದೆ. ಇದರಿಂದ ಕೆಲವರಲ್ಲಿ ಸಂತೋಷ ಮನೆ ಮಾಡಿದ್ರೆ, ಇನ್ನೂ ಕೆಲವರಿಗೆ ಆತಂಕ ಶುರುವಾಗಿದೆ.

 ವಿಧಾನಪರಿಷತ್ ಸದಸ್ಯರಾದ ಆರ್. ಶಂಕರ್ ಮತ್ತು ಎಂಟಿಬಿ ನಾಗರಾಜ್‌ಗೆ ಸಚಿವ ಸ್ಥಾನ ಫಿಕ್ಸ್ ಎನ್ನಲಾಗಿದೆ. ಇನ್ನುಳಿದ ಯಾರಿಗೆಲ್ಲಾ ಮಂತ್ರಿ ಭಾಗ್ಯ ಸಿಗಲಿದೆ ಎನ್ನುವುದು ಭಾರೀ ಕುತೂಹಲ ಮೂಡಿಸಿದೆ. ಅದರಲ್ಲೂ ಎಚ್.ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ಸಿಗುತ್ತೋ ಇಲ್ವೋ ಎನ್ನುವುದೇ ರೋಚಕವಾಗಿದೆ.