ಬೆಂಗಳೂರು, (ಜ.24): ವಿಶ್ವ ಆರ್ಥಿಕ ಸಮ್ಮೇಳನದಲ್ಲಿ ಪಾಲ್ಗೊಂಡು 5 ದಿನಗಳ ಕಾಲ ದಾವೋಸ್ ಪ್ರವಾಸ ಮುಗಿಸಿಕೊಂಡು ಸಿಎಂ ಬಿಎಸ್ ಯಡಿಯೂರಪ್ಪ  ಇಂದು (ಶುಕ್ರವಾರ) ಮಧ್ಯಾಹ್ನ ಬೆಂಗಳೂರಿಗೆ ಬಂದಿಳಿದರು.

"

ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಯಡಿಯೂರಪ್ಪ ಅವರನ್ನು ಡಿಸಿಎಂ ಅಶ್ವಥ್ ನಾರಾಯಣ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸೇರಿದಂತೆ ಹಲವು ನಾಯಕರು ಬರಮಾಡಿಕೊಂಡರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಬಿಎಸ್‌ ಯಡಿಯೂರಪ್ಪ, ಇನ್ನು ಮೂರ್ನಾಲ್ಕು ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂದು ಸ್ಪಷ್ಟಪಡಿಸಿದರು.

ವಿದೇಶದಿಂದ ಬಂದು 2 ದಿನಕ್ಕೆ ಸಂಪುಟ ವಿಸ್ತರಣೆ: ಬಿಎಸ್‌ವೈ

ಈ ಮೂಲಕ ಸಿಎಂ ಬರುವಿಕೆಗೆ ಕಾದು ಕುಳಿತ್ತಿದ್ದ ಸಚಿವಾಕಾಂಕ್ಷಿಗಳು ಒಂದು ರೀತಿಯಲ್ಲಿ ನಿಟ್ಟುಸಿರು ಬಿಡುವಂತಾಗಿದೆ. ಸಂಪುಟ ವಿಸ್ತರಣೆ ಈ ವಾರ ಆಗುತ್ತೆ ಮುಂದಿನ ವಾರ ಆಗುತ್ತೆ ಅಂತ ಆಕಾಂಕ್ಷಿಗಳು ಚಾತಕ ಪಕ್ಷಿಗಳಂತೆ ಕಾದು ಕುಳಿತ್ತಿದ್ದಾರೆ.

ಇತ್ತೀಚೆಗೆ ರಾಜ್ಯ ಅಮಿತ್ ಶಾ ಆಗಮಿಸಿದ್ದ ವೇಳೆ ಸಂಪುಟ ವಿಸ್ತರಣೆ ಬಗ್ಗೆ ಬಿಎಸ್‌ವೈ ಮಾತಕತೆ ನಡೆಸಿ ಫೈನಲ್ ಮಾಡಿಕೊಂಡಿದ್ದಾರೆ. ಆದ್ರೆ, ದಾವೋಸ್ ಪ್ರವಾಸ ಇರುವುದರಿಂದ ಸಂಪುಟ ವಿಸ್ತರಣೆ ಮುಂದೂಡಲಾಗಿತ್ತು. ಅದರಂತೆ ಇದೀಗ ಬಿಎಸ್‌ವೈ ವಾಪಸ್ ಆಗಿದ್ದು, ಸಂಪುಟ ವಿಸ್ತರಣೆಯ ಚಟುವಟಿಕೆಗಳು ಗರಿಗೆದರಿದೆ. 

ಬಹುಮುಖ್ಯವಾಗಿ ಇದೇ ವೇಳೆ ಉಪಚುನಾವಣೆಯಲ್ಲಿ ಸೋತವರಿಗೆ ಬಿಎಸ್‌ವೈ ಪರೋಕ್ಷವಾಗಿ ಶಾಕ್ ಕೊಟ್ಟರು. ಅದೇನಂದ್ರೆ, ಸಂಪುಟ ವಿಸ್ತರಣೆಯಲ್ಲಿ ಸೋತವರಿಗೆ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಗೆದ್ದವರ ಬಗ್ಗೆ ಕೇಳಿ ಎಂದು ಹೇಳುವ ಮೂಲಕ ಉಪಚುನಾವಣೆ ಸೋತ ಎಚ್.ವಿಶ್ವನಾಥ್ ಹಾಗೂ ಎಂಟಿಬಿ ನಾಗರಾಜ್‌ಗೆ ಆಘಾತವನ್ನುಂಟು ಮಾಡಿದರು.

ಉಪ ಚುನಾವಣೆಯಲ್ಲಿ ಗೆದ್ದ 12 ಶಾಸಕರು ಪೈಕಿ 11ಶಾಸಕರಿಗೆ ಮಂತ್ರಿ ಮಾಡಲಾಗುವುದು ಎಂದು ಈಗಾಗಲೇ ಬಿಎಸ್‌ವೈ ಹೇಳಿದ್ದಾರೆ. ಆದ್ರೆ, ಸೋತವರೂ ಕೂಡ ನಮ್ಮನ್ನು ಕೈಬಿಡಬೇಡಿ ಎಂದು ದುಂಬಾಲು ಬಿದ್ದಿದ್ದಾರೆ. ಅಷ್ಟೇ ಅಲ್ಲದೇ ಮತ್ತೊಂದೆಡೆ ಮೂಲ ಬಿಜೆಪಿ ಶಾಸಕರು ಸಹ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.

ದಾವೋಸ್‌ಗೆ ಹೋಗುವ ಮುನ್ನವೇ ವಿದೇಶ ಪ್ರವಾಸ ಮುಗಿಸಿಕೊಂಡು ಬಂದ ಎರಡು ದಿನಗಳಲ್ಲಿ ಸಂಪುಟ ವಿಸ್ತರಣೆ ಮಾಡುತ್ತೇನೆಂದು ಸ್ವತಃ ಯಡಿಯೂರಪ್ಪನವರೇ ಹೇಳಿದ್ದನ್ನು ಇಲ್ಲಿ ಸ್ಮರಸಬಹುದು.

ಒಟ್ಟಿನಲ್ಲಿ 5 ವಿದೇಶ ಸಂಭ್ರಮ ಮುಗಿಸಿಕೊಂಡು ಬಂದ ಸಿಎಂ ಸಂಪುಟ ವಿಸ್ತರಣೆಯ ಕಗ್ಗಂಟಿನಿಂದ ಹೇಗೆ ಪರಾಗುತ್ತಾರೆ ಎನ್ನುವುದನ್ನು ಕಾದುನೋಡಬೇಕಿದೆ.