ನಾನು ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರಿಗೆ ಅವಮಾನ ಮಾಡುವ ಉದ್ದೇಶದಿಂದ ಮಾತನಾಡಿಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಗ್ರಹಿಸಲಾಗಿದೆ. ಈ ಬಗ್ಗೆ ಕ್ಷಮೆಯಾಚಿಸುವ ಪ್ರಮೇಯವೇ ಇಲ್ಲ ಎಂದು ಯತೀಂದ್ರ ಸ್ಪಷ್ಟನೆ ನೀಡಿದ್ದಾರೆ.

ಮೈಸೂರು (ಜು.28): ನಾನು ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರಿಗೆ ಅವಮಾನ ಮಾಡುವ ಉದ್ದೇಶದಿಂದ ಮಾತನಾಡಿಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಗ್ರಹಿಸಲಾಗಿದೆ. ಈ ಬಗ್ಗೆ ಕ್ಷಮೆಯಾಚಿಸುವ ಪ್ರಮೇಯವೇ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮೈಸೂರು ಸೇರಿದಂತೆ ಇಡೀ ರಾಜ್ಯಕ್ಕೆ ನಾಲ್ವಡಿ ಕೃ ಒಡೆಯರ್‌ ಕೊಟ್ಟ ಕೊಡುಗೆಗಳು ಬಹಳಷ್ಟಿದೆ. ಅವರನ್ನು ಕಮ್ಮಿ ಮಾಡಿ ನಮ್ಮ ಕಾಂಗ್ರೆಸ್‌ ಸರ್ಕಾರ ಜಾಸ್ತಿ ಮಾಡಿದೆ ಎಂದು ಹೇಳಿಲ್ಲ. ಆದರೆ, ಸ್ವಾತಂತ್ರ್ಯ ನಂತರದಲ್ಲಿ ಮೈಸೂರಿಗೆ ಅತಿ ಹೆಚ್ಚು ಅನುದಾನ ಕೊಟ್ಟಿರುವುದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಎಂದಿದ್ದು, ನಮ್ಮ ತಂದೆ ಕೊಟ್ಟಷ್ಟು ಅನುದಾನವನ್ನು ಇನ್ಯಾವ ಮುಖ್ಯಮಂತ್ರಿಗಳೂ ಕೊಟ್ಟಿಲ್ಲ ಎಂದಷ್ಟೇ ಹೇಳಿದ್ದೇನೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಒಡೆಯರ್‌ ಕೊಟ್ಟಷ್ಟೇ ಕೊಡುಗೆ: ಮೈಸೂರಿನ ಅಭಿವೃದ್ಧಿಗೆ ನಾಲ್ವಡಿ ಮಹಾರಾಜರಿಗಿಂತ ಹೆಚ್ಚು ಅಥವಾ ಮಹಾರಾಜರಷ್ಟೇ ಅನುದಾನ ಕೊಟ್ಟು ಅಭಿವೃದ್ಧಿ ಮಾಡಿದ್ದು ಸಿದ್ದರಾಮಯ್ಯ ಮಾತ್ರ. ಸಾಕಷ್ಟು ಅಭಿವೃದ್ಧಿಯನ್ನು ಸಿದ್ದರಾಮಯ್ಯ ಅವರು ಮಾಡಿದ್ದಾರೆ. ಅಭಿವೃದ್ಧಿ ಮಾಡಿರುವುದಕ್ಕಾಗಿಯೇ ಸಾಧನಾ ಸಮಾವೇಶ ಮಾಡಿದ್ದು‌. ಸುಮ್ಮನೇ ವಿಪಕ್ಷಗಳು ಟೀಕೆ ಮಾಡುತ್ತಿವೆ ಎಂದು ಹೇಳಿದರು. ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಹೇಳಿದ್ದು ಐದು ವರ್ಷ ಸಿದ್ದರಾಮಯ್ಯ ಸಿಎಂ ಅಲ್ಲ ಅಂತ. ಬೇಸಿಕಲಿ, 5 ವರ್ಷ ಸಿದ್ದರಾಮಯ್ಯ ಸಿಎಂ ಹೌದೋ, ಅಲ್ಲವೋ ಎಂಬ ಚರ್ಚೆಯೇ ಸರಿ ಇಲ್ಲ. ಸಿದ್ದರಾಮಯ್ಯ ಎರಡೂವರೆ ವರ್ಷ ಮಾತ್ರ ಸಿಎಂ ಅಂತ ನಮ್ಮ ಪಕ್ಷದವರು ಯಾರಾದ್ರು ಹೇಳಿದ್ದಾರಾ?. ಇದು ವಿಪಕ್ಷಗಳು ಸೃಷ್ಟಿ ಮಾಡಿದ ಚರ್ಚೆ ಎಂದರು.

ಸೆಪ್ಟೆಂಬರ್‌ನಲ್ಲಿ ರಾಜಕೀಯ ಕ್ರಾಂತಿ ಆಗುತ್ತೆ ಅಂಥ ರಾಜಣ್ಣ ಹೇಳಿದ್ದಾರೆ. ಕ್ರಾಂತಿ ಅಂದ್ರೆ ಅದು ಸಿಎಂ ಬದಲಾವಣೆ ಅಂತ ಅರ್ಥನಾ?. ಯಾಕೆ ಕ್ರಾಂತಿಯನ್ನು ಸಿಎಂ ಬದಲಾವಣೆಗೆ ತಂದು ನಿಲ್ಲಿಸುತ್ತೀರಾ?. ಬೇರೆ ವಿಚಾರಕ್ಕೆ ಕ್ರಾಂತಿಯಾಗಬಹುದು. ಅದು ಏನು ಕ್ರಾಂತಿ ಅಂಥ ರಾಜಣ್ಣ ಅವರನ್ನೇ ಕೇಳಿ. ಕ್ರಾಂತಿ ಅಂದರೆ ಸಿಎಂ ಬದಲಾವಣೆ ಎನ್ನುವ ಅರ್ಥವನ್ನು ಮೊದಲು ಬಿಡಿ. ಹೈಕಮಾಂಡ್, ಕಾಂಗ್ರೆಸ್ ಶಾಸಕರು ಎಲ್ಲರೂ ಸಿದ್ದು ಪರವಾಗಿದ್ದಾರೆ. ಅಂದ ಮೇಲೆ ಅವರೇಕೆ ಬದಲಾಗುತ್ತಾರೆ ಎಂದರು.

ಮುಡಾ ವಿಚಾರವಾಗಿ ಮಾತನಾಡಿ, ಮುಡಾ ಕೇಸ್‌ ಸಂಬಂಧ ಸುಪ್ರೀಂಕೋರ್ಟ್‌ ನೀಡಿದ ತೀರ್ಪಿನಿಂದಾಗಿ ಸಿದ್ದುಗೆ ರಾಜಕೀಯವಾಗಿ ಮತ್ತಷ್ಟು ಶಕ್ತಿ ಹೆಚ್ಚಾಗಿರುವುದು ನಿಜ. ಅವರನ್ನು ನೈತಿಕವಾಗಿ ಕುಗ್ಗಿಸುವ ಪ್ರಯತ್ನ ನಡೆದಿತ್ತು. ಈಗ ಅದು ನಿವಾರಣೆಯಾಗಿದೆ. ಸಹಜವಾಗಿ ರಾಜಕೀಯವಾಗಿ ಅವರ ಶಕ್ತಿ ಮತ್ತಷ್ಟು ಹೆಚ್ಚಾಗಿದೆ. ಸಿದ್ದರಾಮಯ್ಯ ಕಾಂಗ್ರೆಸ್ ನಲ್ಲಿ ಮಾಸ್ ಲೀಡರ್. ಹೀಗಾಗಿ, ಸಿದ್ದರಾಮಯ್ಯ ಅವರನ್ನು ನೈತಿಕವಾಗಿ ಕುಗ್ಗಿಸಿದರೆ ಪಕ್ಷಕ್ಕೆ ಹಿನ್ನಡೆಯಾಗುತ್ತೆ ಎಂಬ ಕಾರಣಕ್ಕೆ ಸಿದ್ದರಾಮಯ್ಯ ಟಾರ್ಗೆಟ್ ಆಗಿದ್ದಾರೆ. ಆದರೆ, ಎಲ್ಲವನೂ ಮೀರಿ ಈಗ ನಿಲ್ಲುತ್ತಿದ್ದೇವೆ ಎಂದು ಹೇಳಿದರು.