ಚುನಾವಣಾ ರಣಾಂಗಣ: ಆದಿ ಉಡುಪಿ, ಹಿಜಾಬ್ ಕೇಸಿನಿಂದ ಉದ್ಭವಿಸಿದ ಬಿಜೆಪಿ ಅಭ್ಯರ್ಥಿ ಸುವರ್ಣ..!
ಆದಿ ಉಡುಪಿ ಘಟನೆ ನಂತರ ಯುವಕರ ನಡುವೆ ತೀವ್ರ ಪ್ರಭಾವಶಾಲಿಯಾಗುತ್ತಿದ್ದ ಅವರನ್ನು ಬಿಜೆಪಿ ತೆಕ್ಕೆಗೆಳೆದುಕೊಂಡಿತು. ಈ ಬಾರಿ ಯಶ್‌ಪಾಲ್ ಸುವರ್ಣ ಅವರು ಉಡುಪಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ.
ಸುಭಾಶ್ಚಂದ್ರ ಎಸ್.ವಾಗ್ಳೆ
ಉಡುಪಿ(ಏ.28): ಅದು 2005ರ ಮಾ.13ರ ನೀರವ ರಾತ್ರಿ. ಇಲ್ಲಿನ ಆದಿಉಡುಪಿ ಮೈದಾನದಲ್ಲಿ ದನಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಹಾಜಬ್ಬ ಮತ್ತು ಹಸನಬ್ಬ ಎಂಬವರನ್ನು ಗುಂಪೊಂದು ತಡೆದು, ಬಟ್ಟೆಕಳಚಿ ಥಳಿಸಿತು. ‘ಕನ್ನಡಪ್ರಭ’ ಈ ಬಗ್ಗೆ ಎಕ್ಸ್‌ಕ್ಲೂಸಿವ್ ಸಚಿತ್ರ ವರದಿಯನ್ನು ಮುಖಪುಟದಲ್ಲಿ ಪ್ರಕಟಿಸಿತು. ಇದರಿಂದ ಆಗಿನ ಕಾಂಗ್ರೆಸ್ ಸರ್ಕಾರ ಘಟನೆಯಿಂದ ತೀವ್ರ ಮುಜುಗರ ಅನುಭವಿಸಿತು, ನಂತರದ ಕೆಲ ತಿಂಗಳ ಕಾಲ ರಾಜ್ಯಾದ್ಯಂತ ಈ ಘಟನೆಗೆ ಪರ-ವಿರೋಧ ಪ್ರತಿಕ್ರಿಯೆಗಳು ನಡೆದವು. ಮುಂದೆ ಇದು ಗೋಹತ್ಯೆಯ ವಿರುದ್ಧ ರಾಜ್ಯಮಟ್ಟದಲ್ಲಿ ಚಳವಳಿ ಹುಟ್ಟುಹಾಕಿತು, ಅದೇ ಮುಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಗೋಹತ್ಯೆ ನಿಷೇಧ ಕಾಯ್ದೆಗೂ ಕಾರಣವಾಯಿತು.
ಘಟನೆಯಲ್ಲಿ ಬಂಧಿತರಾದ ಹಿಂದು ಯುವಸೇನೆಯ 12 ಯುವಕರು, ಮೂರು ವರ್ಷಗಳ ನಂತರ ದೋಷಮುಕ್ತರಾದರು. ಆಗ ಅವರ ನಡುವೆ ಒಬ್ಬ ನಾಯಕ ಹುಟ್ಟಿದ, ಆತನೇ ಯಶ್‌ಪಾಲ್ ಸುವರ್ಣ. ಆದಿ ಉಡುಪಿ ಘಟನೆ ನಂತರ ಯುವಕರ ನಡುವೆ ತೀವ್ರ ಪ್ರಭಾವಶಾಲಿಯಾಗುತ್ತಿದ್ದ ಅವರನ್ನು ಬಿಜೆಪಿ ತೆಕ್ಕೆಗೆಳೆದುಕೊಂಡಿತು. ಈ ಬಾರಿ ಅವರು ಉಡುಪಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ.
ಮೈಸೂರು: ರಾಜಕೀಯ ವ್ಯವಸ್ಥೆಯ ಸರ್ಜರಿಗೆ ಬಂದಿದ್ದಾರೆ ವೈದ್ಯ ರೇವಣ್ಣ..!
2021ರ ಡಿಸೆಂಬರ್ ತಿಂಗಳಲ್ಲಿ ಉಡುಪಿ ಬಾಲಕಿಯರ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ಹಿಜಾಬ್ ವಿವಾದ ಆರಂಭವಾಯಿತು. ನಂತರ ಇಡೀ ರಾಜ್ಯಕ್ಕೆ ಅದು ಹರಡಿತು. ಆಗ ಹಿಜಾಬ್ ವಿರುದ್ಧ ಗಟ್ಟಿಧ್ವನಿಯಲ್ಲಿ ಮಾತನಾಡಿದವರು ಇದೇ ಯಶ್‌ಪಾಲ್ ಸುವರ್ಣ, ಪರಿಣಾಮ ಅವರು ಜೀವ ಬೆದರಿಕೆಗೂ ಒಳಗಾಗಬೇಕಾಯಿತು. ಈ ವಿವಾದ ಕೂಡ ರಾಜ್ಯದ ಗಡಿ ದಾಟಿ ಪರ-ವಿರೋಧ ಚಳವಳಿಯ ರೂಪ ಪಡೆಯಿತು, ಮಾತ್ರವಲ್ಲ ಸರ್ಕಾರವು ಸಿಎಫ್‌ಐ-ಪಿಎಫ್‌ಐ ನಿಷೇಧಕ್ಕೆ ಕಾರಣವಾಯಿತು.
ಹೈಕಮಾಂಡ್ ಗಮನ ಸೆಳೆದರು:
ಪರೋಕ್ಷವಾಗಿ ಗೋಹತ್ಯೆ ನಿಷೇಧ ಮತ್ತು ಪಿಎಫ್‌ಐ-ಸಿಎಫ್‌ಐ ನಿಷೇಧಕ್ಕೆ ಕಾರಣರಾದ ಯಶ್‌ಪಾಲ್ ಅವರು ಬಿಜೆಪಿ ಹೈಕಮಾಂಡ್ ಗಮನ ಸೆಳೆದಿದ್ದರು. ಪರಿಣಾಮ ಅವರಿಗೆ ಬಿಜೆಪಿ ಈ ಬಾರಿ ಟಿಕೆಟ್ ಸಿಕ್ಕಿದೆ. ಎರಡು ದಶಕಗಳ ಹಿಂದೆ ದ.ಕ.ಸಹಕಾರಿ ಮೀನು ಮಾರಾಟ ಫೆಡರೇಶನ್ ಕೋಟ್ಯಂತರ ರುಪಾಯಿ ನಷ್ಟಕ್ಕೆ ಸಿಲುಕಿ ಆಸ್ತಿ ಮುಟ್ಟುಗೋಲಿಗೆ ಒಳಗಾಗುವ ಪರಿಸ್ಥಿತಿಗೆ ಬಂದಿತ್ತು. ಆಗ ಸ್ವತಃ ಮೀನುಗಾರರಾಗಿರುವ ಮೊಗವೀರ ಸಮುದಾಯದ ಯಶ್‌ಪಾಲ್ ಅದರ ಅಧ್ಯಕ್ಷರಾದರು. ಮೊದಲ ವರ್ಷದಲ್ಲೇ ಫೆಡರೇಶನ್‌ನ ನಷ್ಟಭರಿಸಿದ್ದಲ್ಲದೆ, ಇಂದು ಫೆಡರೇಶನ್ ವಾರ್ಷಿಕ .5 ಕೋಟಿಗೂ ಹೆಚ್ಚು ಲಾಭ ಗಳಿಸುತ್ತಿದೆ. ಅವರ ಅವಧಿಯಲ್ಲಿ ಫೆಡರೇಶನ್ ಗಳಿಸಿದ ರಾಷ್ಟ್ರೀಯ ಪ್ರಶಸ್ತಿಗಳು ಹತ್ತಾರು.
ಬರಿನೆಲದಲ್ಲಿ ಊಟ:
ಅವಿವಾಹಿತರಾಗಿರುವ ಅವರು ಅತೀವ ದೈವಭಕ್ತರು, ಪ್ರತಿ ಶನಿವಾರ ಉಡುಪಿ ಕೃಷ್ಣಮಠಕ್ಕೆ ಹೋಗಿ, ಗೋವುಗಳಿಗೆ ಚಾರ ತಿನ್ನಿಸಿ, ಬರಿ ನೆಲದಲ್ಲಿ (ಎಲೆ, ತಟ್ಟೆಹಾಸದೇ) ಅನ್ನ ಸಾರು ಬಡಿಸಿಕೊಂಡು ಊಟ ಮಾಡುವ ಸಂಪ್ರದಾಯವನ್ನು ಪಾಲಿಸುತ್ತಿದ್ದಾರೆ.