Asianet Suvarna News Asianet Suvarna News

ಕಾರ್ಯಕರ್ತರೇ ಕಾಂಗ್ರೆಸ್‌ ಪಕ್ಷದ ಜೀವಾಳ: ಸಚಿವ ಮುನಿಯಪ್ಪ

ಕಾಂಗ್ರೆಸ್‌ ಕಾರ್ಯಕರ್ತರೇ ಪಕ್ಷದ ಜೀವಾಳ. 10 ವರ್ಷಗಳಿಂದ ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲಲು ಸಾಧ್ಯವಾಗದ ಕ್ಷೇತ್ರದಲ್ಲಿ ಕೇವಲ 15 ದಿನಗಳಲ್ಲಿ ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಿಸುವುದು ಮಾತ್ರವಲ್ಲದೇ ದೇವನಹಳ್ಳಿ ಕ್ಷೇತ್ರಕ್ಕೆ ಸಚಿವ ಸ್ಥಾನ ತರುವಲ್ಲಿ ಈ ಕ್ಷೇತ್ರದ ಕಾರ್ಯಕರ್ತರು ಯಶಸ್ವಿಯಾಗಿದ್ದಾರೆ. 
 

Workers are lifeblood of Congress party Says Minister KH Muniyappa gvd
Author
First Published May 22, 2023, 8:44 PM IST

ವಿಜಯಪುರ (ಮೇ.22): ಕಾಂಗ್ರೆಸ್‌ ಕಾರ್ಯಕರ್ತರೇ ಪಕ್ಷದ ಜೀವಾಳ. 10 ವರ್ಷಗಳಿಂದ ಕಾಂಗ್ರೆಸ್‌ ಅಭ್ಯರ್ಥಿ ಗೆಲ್ಲಲು ಸಾಧ್ಯವಾಗದ ಕ್ಷೇತ್ರದಲ್ಲಿ ಕೇವಲ 15 ದಿನಗಳಲ್ಲಿ ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಿಸುವುದು ಮಾತ್ರವಲ್ಲದೇ ದೇವನಹಳ್ಳಿ ಕ್ಷೇತ್ರಕ್ಕೆ ಸಚಿವ ಸ್ಥಾನ ತರುವಲ್ಲಿ ಈ ಕ್ಷೇತ್ರದ ಕಾರ್ಯಕರ್ತರು ಯಶಸ್ವಿಯಾಗಿದ್ದಾರೆ. ಕಡಿಮೆ ಸಮಯದಲ್ಲಿ ಕ್ಷೇತ್ರದ ಮುಖಂಡರು, ಕಾರ್ಯಕರ್ತರು ಸ್ಪಂದಿಸಿದ ರೀತಿ, ವಿರೋಧ ಪಕ್ಷಗಳವರ ಅಪಪ್ರಚಾರದ ನಡುವೆಯೂ ಪಕ್ಷ ಗೆದ್ದುಬಂದಿದೆ. ಮುಂದಿನ ದಿನಗಳಲ್ಲಿ ದೇವನಹಳ್ಳಿ ಮತ್ತು ವಿಜಯಪುರ ಪಟ್ಟಣಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಸಚಿವ ಕೆ.ಎಚ್‌.ಮುನಿಯಪ್ಪ ಹೇಳಿದರು.

ಪಟ್ಟಣದಲ್ಲಿ ಬ್ಲಾಕ್‌ ವ್ಯಾಪ್ತಿಯಲ್ಲಿನ ಕಾಂಗ್ರೆಸ್‌ ಕಾರ್ಯಕರ್ತರು ಹಾಗೂ ಮುಖಂಡರು ಏರ್ಪಡಿಸಿದ್ದ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಮಾಜಿ ಪ್ರಧಾನಿ ದಿ.ರಾಜೀವ್‌ಗಾಂಧಿ ಅವರ ಪುಣ್ಯಸ್ಮರಣೆ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು. ಕೆಪಿಸಿಸಿ ಕಾರ್ಯದರ್ಶಿ ವಿ.ಮಂಜುನಾಥ್‌ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರದ ದುರಾಡಳಿತವನ್ನು ಕೊನೆಗಾಣಿಸಿರುವ ರಾಜ್ಯದ ಜನತೆ, ಕಾಂಗ್ರೆಸ್‌ ಮೇಲೆ ಅಪಾರ ಭರವಸೆ ಇಟ್ಟಿದ್ದಾರೆ. 5 ವರ್ಷಗಳಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸಲಿದೆ. ಕ್ಷೇತ್ರದಲ್ಲಿ ಇದುವರೆಗೂ ಶಾಸಕರಾಗಿದ್ದ ಯಾರಿಗೂ ಸಚಿವ ಸ್ಥಾನ ಸಿಕ್ಕಿರಲಿಲ್ಲ. ಆದರೆ, ಈ ಬಾರಿ ಕ್ಷೇತ್ರದಿಂದ ಕೆ.ಎಚ್‌.ಮುನಿಯಪ್ಪ ಅವರು, ಮಂತ್ರಿಯಾಗುವ ಮೂಲಕ ಕ್ಷೇತ್ರಕ್ಕೆ ಇದ್ದ ಶಾಪವನ್ನು ತೊಲಗಿಸಿದ್ದಾರೆ. 

ರಾಜ್ಯ ರಾಜಕಾರಣದಲ್ಲಿ ಹೊಸ ಇನ್ನಿಂಗ್ಸ್‌ ಆರಂಭಿಸಿದ ಕೆ.ಎಚ್‌.ಮುನಿಯಪ್ಪ

ಬಿಜೆಪಿ ಮುಖಂಡರು ಹೇಳಿದಂತೆ ಡಬಲ್‌ ಎಂಜಿನ್‌ ಸರ್ಕಾರ, ಅವರದ್ದಲ್ಲ, ಕೇಂದ್ರ ನಾಯಕರಾಗಿ, ರಾಜ್ಯದ ಸಚಿವರಾಗಿ ದೇವನಹಳ್ಳಿ ಕ್ಷೇತ್ರದಲ್ಲಿ ಡಬಲ್‌ ಎಂಜಿನ್‌ ಸರ್ಕಾರದಂತೆ ಕೆ.ಎಚ್‌.ಮುನಿಯಪ್ಪ ಅವರು ಕಾರ್ಯನಿರ್ವಹಿಸಲಿದ್ದಾರೆ. ಕ್ಷೇತ್ರದಲ್ಲಿ ಆಗಬೇಕಾಗಿರುವ ಅಭಿವೃದ್ಧಿ ಕಾರ್ಯಗಳ ಕುರಿತು ತಿಳಿಸಿದರು. ಅಲ್ಪಸಂಖ್ಯಾತ ವಿಭಾಗದ ಜಿಲ್ಲಾಧ್ಯಕ್ಷ ಗೌಸ್‌ಖಾನ್‌ ಮಾತನಾಡಿ, ಈ ಭಾಗದಲ್ಲಿನ ಬಹುತೇಕ ಜನರು ರೇಷ್ಮೆ ಉದ್ಯಮದಿಂದ ಜೀವನ ನಡೆಸುತ್ತಿದ್ದಾರೆ. ಉದ್ಯಮಕ್ಕೆ ಹೆಚ್ಚಿನ ಪ್ರೋತ್ಸಾಹ ಸಿಗಬೇಕು. ನೂಲು ಬಿಚ್ಚಾಣಿಕೆ ಘಟಕಗಳಿಗೆ ಉಚಿತ ವಿದ್ಯುತ್‌ ಸೌಲಭ್ಯವನ್ನು ಸರ್ಕಾರ ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವಿ.ರಾಮಚಂದ್ರಪ್ಪ ಮಾತನಾಡಿ, ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್‌ ಸರ್ಕಾರ, ಜನರಿಗೆ ನೀಡಿರುವ 5 ಭರವಸೆಗಳನ್ನು ಈಡೇರಿಸುವ ಕುರಿತು ಮೊದಲ ಸಚಿವ ಸಂಪುಟ ಸಭೆಯಲ್ಲಿ ತಾತ್ವಿಕ ಒಪ್ಪಿಗೆ ನೀಡಿದೆ. ಕ್ಷೇತ್ರದಲ್ಲಿ 20 ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಲ್ಲಿ ಗೆಲ್ಲುವಂತಹ ನಿರೀಕ್ಷೆಯನ್ನು ನಾವು ಇಟ್ಟುಕೊಂಡಿದ್ದೆವು. ಆದರೆ, ಕಡಿಮೆ ಅಂತರದಲ್ಲಿ ಗೆಲುವು ಸಾಧಿಸಿದ್ದೇವೆ. ಮುಂದಿನ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವುದು ನಮ್ಮ ಮಾನದಂಡವಾಗಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಅಧ್ಯಕ್ಷರಾದ ಜಿ.ಲಕ್ಷ್ಮೀನಾರಾಯಣಪ್ಪ, ಬಿ.ರಾಜಣ್ಣ, ಅನಂತಕುಮಾರಿ ಚಿನ್ನಪ್ಪ, ಜಿಲ್ಲಾ ಎಸ್‌.ಸಿ.ಘಟಕದ ಅಧ್ಯಕ್ಷ ಲೋಕೇಶ್‌ ಮಾತನಾಡಿದರು. ಮಾಜಿ ಸಂಸದ ಸಿ.ನಾರಾಯಣಸ್ವಾಮಿ, ಪುರಸಭೆ ಸದಸ್ಯ ಎಂ.ಸತೀಶ್‌ ಕುಮಾರ್‌, ಸವಿತಾ ವೆಂಕಟಸ್ವಾಮಿ, ಟೌನ್‌ ಕಾಂಗ್ರೆಸ್‌ ಅಧ್ಯಕ್ಷ ವಿ.ಎಂ.ನಾಗರಾಜ್‌, ಪ್ರಧಾನ ಕಾರ್ಯದರ್ಶಿ ಎಸ್‌.ಮಂಜುನಾಥ್‌, ದೇವನಹಳ್ಳಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಪ್ರಸನ್ನಕುಮಾರ್‌, ಬಿ.ವಿ.ಕೃಷ್ಣಪ್ಪ, ಪುರಸಭಾ ಸದಸ್ಯರಾದ ಹನೀಪುಲ್ಲಾ, ರಾಜಣ್ಣ, ಎಂ.ನಾರಾಯಣಸ್ವಾಮಿ, ಕೆಪಿಸಿಸಿ ಸದಸ್ಯ ಎ.ಚಿನ್ನಪ್ಪ, ಕೆ.ಎಂ.ಮಧುಮಹೇಶ್‌, ಎಂ.ನಾರಾಯಣಸ್ವಾಮಿ, ಮಂಡಿಬೆಲೆ ದೇವರಾಜಪ್ಪ, ಅಕ್ಕಯಮ್ಮ, ಚೈತ್ರಾವೀರೇಗೌಡ, ರಾಮ್‌ ಪ್ರಸಾದ್‌, ಸಿ.ಕೆ.ರಾಮಚಂದ್ರಪ್ಪ, ಸೀನಪ್ಪ, ಮುನಿಚಿನ್ನಪ್ಪ ಮುಂತಾದವರು ಹಾಜರಿದ್ದರು.

ಡಿ.ಕೆ.​ಶಿ​ವ​ಕು​ಮಾರ್‌ ಡಿಸಿಎಂ: ರಾಮನಗರ ಜಿಲ್ಲೆಯಲ್ಲಿ ಮೂಡಿದ ಅಭಿ​ವೃದ್ಧಿ ನಿರೀಕ್ಷೆಗಳು

ಕ್ಷೇತ್ರದಲ್ಲಿ ಯಾವುದೇ ಮುಖಂಡರು ಅಥವಾ ಕಾರ್ಯಕರ್ತರು, ಅಧಿಕಾರದ ವ್ಯಾಮೋಹದಿಂದ ಯಾವುದೇ ಪಕ್ಷದ ಕಾರ್ಯಕರ್ತರು, ಮುಖಂಡರ ಮೇಲೆ ದೌರ್ಜನ್ಯ, ದಬ್ಬಾಳಿಕೆ ನಡೆಸಬಾರದು. ಒಂದು ವೇಳೆ ಪಕ್ಷವನ್ನು ದುರುಪಯೋಗ ಮಾಡಿಕೊಂಡರೆ ಸಹಿಸಿಕೊಳ್ಳುವುದಿಲ್ಲ. ಎಲ್ಲರನ್ನು ಪಕ್ಷಾತೀತವಾಗಿ ಗೌರವದಿಂದ ನಡೆಸಿಕೊಳ್ಳಬೇಕು.
-ಕೆ.ಎಚ್‌.ಮುನಿಯಪ್ಪ, ಸಚಿವರು

Follow Us:
Download App:
  • android
  • ios