Asianet Suvarna News Asianet Suvarna News

ಗಣ್ಯರು, ಅಭಿಮಾನಿಗಳ ಜತೆ ಯಡಿಯೂರಪ್ಪ ಜನ್ಮದಿನ: ಬಿಜೆಪಿ ಗೆಲ್ಲಿಸಲು ಬಿಎಸ್‌ವೈ ರಾಜ್ಯಾದ್ಯಂತ ಪ್ರವಾಸ

*ಪಕ್ಷ ಸಂಘಟನೆ, ಸಾಮೂಹಿಕ ಪ್ರಯತ್ನದಡಿ ಗೆಲುವಿಗೆ ಯತ್ನ
*ಹುಟ್ಟುಹಬ್ಬದ ದಿನ ಮಾಜಿ ಮುಖ್ಯಮಂತ್ರಿ ರಾಜ್ಯ ಪ್ರವಾಸದ ಸಂಕಲ್ಪ
*ಫೋನ್‌ ಮಾಡಿ ಶುಭಾಶಯ ಹೇಳಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ
*ಸಿಎಂ, ಅನೇಕ ಸಚಿವರಿಂದ ಯಡಿಯೂರಪ್ಪ ಭೇಟಿ

will tour across Karnataka to bring BJP back to power in 2023 says BS Yediyurappa on His Birthday mnj
Author
Bengaluru, First Published Feb 28, 2022, 5:26 AM IST | Last Updated Feb 28, 2022, 5:38 AM IST

ಬೆಂಗಳೂರು (ಫೆ. 28):  ಮುಂಬರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲು ಸಾಮೂಹಿಕವಾಗಿ ಪ್ರಯತ್ನ ನಡೆಸಿ, ಜನಾಶೀರ್ವಾದ ಪಡೆದುಕೊಳ್ಳುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ. ಭಾನುವಾರ ‘ಕಾವೇರಿ’ ನಿವಾಸದಲ್ಲಿ ಅಭಿಮಾನಿಗಳು ಹಾಗೂ ಬೆಂಬಲಿಗರೊಂದಿಗೆ ತಮ್ಮ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು. ನನಗೆ ಅಧಿಕಾರ ಇಲ್ಲದಿದ್ದರೂ ಸಹ ಸಾವಿರಾರು ಮಂದಿ ಬಂದು ಆಶೀರ್ವಾದ ಮಾಡಿದ್ದಾರೆ ಎಂದು ಭಾವುಕರಾದರು.

ಬಜೆಟ್‌ ಅಧಿವೇಶನ ಬಳಿಕ ರಾಜ್ಯದಲ್ಲಿ ಮತ್ತೊಮ್ಮೆ ಪ್ರವಾಸ ಕೈಗೊಳ್ಳುತ್ತೇನೆ. ಪಕ್ಷವನ್ನು ಮತ್ತಷ್ಟುಸಂಘಟನೆಗೊಳಿಸಿ ಮತ್ತೆ ಅಧಿಕಾರಕ್ಕೆ ತರುವ ಪ್ರಯತ್ನವನ್ನು ಸಾಮೂಹಿಕವಾಗಿ ಮಾಡಲಾಗುವುದು. ರಾಜ್ಯದಲ್ಲಿ ಪ್ರವಾಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರಲು ಶಕ್ತಿ ಮೀರಿ ಕೆಲಸ ಮಾಡುತ್ತೇವೆ. ಜನ ನಿಶ್ಚಿತವಾಗಿ ನಮಗೆ ಆಶೀರ್ವಾದ ಮಾಡಲಿದ್ದಾರೆ ಎಂಬ ವಿಶ್ವಾಸ ಇದೆ. ಕಾಂಗ್ರೆಸ್‌ನವರ ಯಾವುದೇ ಬೂಟಾಟಿಕೆ ನಡೆಯುವುದಿಲ್ಲ ಎಂದು ಹೇಳಿದರು.

ಕಾಂಗ್ರೆಸ್‌ನ ಬೂಟಾಟಿಕೆ ನಡೆಯದು:  ಬಜೆಟ್‌ ಅಧಿವೇಶನ ಬಳಿಕ ರಾಜ್ಯದಲ್ಲಿ ಮತ್ತೊಮ್ಮೆ ಪ್ರವಾಸ ಕೈಗೊಳ್ಳುತ್ತೇನೆ. ಜನ ನಿಶ್ಚಿತವಾಗಿ ನಮಗೆ ಆಶೀರ್ವಾದ ಮಾಡಲಿದ್ದಾರೆ. ಕಾಂಗ್ರೆಸ್‌ನವರ ಬೂಟಾಟಿಕೆ ನಡೆಯುವುದಿಲ್ಲ - ಬಿ.ಎಸ್‌.ಯಡಿಯೂರಪ್ಪ

ಇದನ್ನೂ ಓದಿ: BSY ಮಾರ್ಗದರ್ಶನದಲ್ಲೇ ಮುಂದಿನ ಚುನಾವಣೆ: ಸಿಎಂ ಬೊಮ್ಮಾಯಿ

ಗಣ್ಯರು, ಅಭಿಮಾನಿಗಳ ಜತೆ ಬಿಎಸ್‌ವೈ ಜನ್ಮದಿನ: ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಕಾವೇರಿ ನಿವಾಸದಲ್ಲಿ ಸಚಿವರು, ಕಾರ್ಯಕರ್ತರು, ಅಭಿಮಾನಿಗಳ ಸಮ್ಮುಖದಲ್ಲಿ ಬೃಹತ್‌ ಗಾತ್ರದ ಕೇಕ್‌ ಕತ್ತರಿಸುವ ಮೂಲಕ ತಮ್ಮ 79ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

ಭಾನುವಾರ ಕಾವೇರಿ ನಿವಾಸಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಸಚಿವರು, ಅಭಿಮಾನಿಗಳು, ಬಂಧು-ಬಳಗದವರು ತೆರಳಿ ಯಡಿಯೂರಪ್ಪ ಅವರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು. ಈ ವೇಳೆ ಬೃಹತ್‌ ಗಾತ್ರದ ಕೇಕ್‌ ಕತ್ತರಿಸಿ ಸಂಭ್ರಮಿಸಿದರು. ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ, ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ, ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿಗಳು ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ, ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌, ಅಬಕಾರಿ ಸಚಿವ ಗೋಪಾಲಯ್ಯ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ ಸೇರಿದಂತೆ ಹಲವು ಗಣ್ಯರು ಶುಭಾಶಯ ಕೋರಿದರು.

ಈ ವೇಳೆ ಮಾತನಾಡಿದ ಮಾತನಾಡಿದ ಬಿಡಿಎ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌, ಯಡಿಯೂರಪ್ಪ ಎಂದರೆ ಚೈತನ್ಯದ ಚಿಲುಮೆ ಅವರನ್ನು ನೋಡಿದರೆ ನಮಗೆ ನೂರು ಪಟ್ಟು ಶಕ್ತಿ ತುಂಬಿದಂತಾಗುತ್ತದೆ. ರಾಜ್ಯದಲ್ಲಿ ಮುಂದಿನ ಚುನಾವಣೆಗಳು ಯಡಿಯೂರಪ್ಪ ನೇತೃತ್ವದಲ್ಲಿ ನಡೆಯಬೇಕು. ನಮ್ಮೆಲ್ಲರಿಗೆ ಶಕ್ತಿ ತುಂಬಲು ಅವರು ಮತ್ತೊಮ್ಮೆ ಜನತೆಯ ಸೇವೆ ಮಾಡುವಂತಾಗಬೇಕು ಎಂದರು. ಇದೇ ವೇಳೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ದೂರವಾಣಿ ಕರೆ ಮಾಡಿ ಹುಟ್ಟುಹಬ್ಬದ ಶುಭ ಕೋರಿದರು. ಪಕ್ಷಕ್ಕೆ ಉತ್ತಮ ಕೊಡುಗೆ ನೀಡಿದ್ದೀರಿ, ಇನ್ನಷ್ಟುಸೇವೆಯ ಅಗತ್ಯವಿದೆ ಎಂದು ಹೇಳಿದರು.

ಇದನ್ನೂ ಓದಿ: 'ತನುಜಾ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಮಾಜಿ ಸಿಎಂ ಯಡಿಯೂರಪ್ಪ!

ಗೋಪೂಜೆ: ಈ ನಡುವೆ, ತಮ್ಮ ನಿವಾಸದಲ್ಲಿ ಹುಟ್ಟುಹಬ್ಬ ಪ್ರಯುಕ್ತ ಯಡಿಯೂರಪ್ಪ ಅವರು ಗೋ ಪೂಜೆ ಸಲ್ಲಿಸಿದರು. ಅಲ್ಲದೇ, ಪುತ್ರಿಯರು ತಮ್ಮ ತಂದೆಗೆ ಆರತಿ ಬೆಳಗಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದರು. ಇದಕ್ಕೂ ಮೊದಲು ಯಡಿಯೂರಪ್ಪ ಅವರು ಸಂಜಯನಗರದ ರಾಧಾಕೃಷ್ಣ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಪುತ್ರರಾದ ಬಿ.ವೈ.ವಿಜಯೇಂದ್ರ, ಬಿ.ವೈ.ರಾಘವೇಂದ್ರ, ಮಾಜಿ ಸಚಿವ ಕಟ್ಟಾಸುಬ್ರಹ್ಮಣ್ಯ ನಾಯ್ಡು ಸೇರಿದಂತೆ ಇತರರು ಸಾಥ್‌ ನೀಡಿದ್ದರು.

25 ರೈತರಿಗೆ ಉಚಿತ ಟ್ರ್ಯಾಕ್ಟರ್‌ ವಿತರಣೆ: ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹುಟ್ಟುಹಬ್ಬದ ಪ್ರಯುಕ್ತ ಯಡಿಯೂರಪ್ಪ ಅಭಿಮಾನಿ ಬಳಗದ ವತಿಯಿಂದ 25 ರೈತರಿಗೆ ಉಚಿತವಾಗಿ ಟ್ರ್ಯಾಕ್ಟರ್‌ ವಿತರಣೆ ಮಾಡಲಾಯಿತು. ಕಾವೇರಿ ನಿವಾಸದಲ್ಲಿ ಬಿಜೆಪಿ ಮುಖಂಡ ಎಂ.ರುದ್ರೇಶ್‌ ನೇತೃತ್ವದಲ್ಲಿ ಟ್ರ್ಯಾಕ್ಟರ್‌ ವಿತರಣೆ ಮಾಡಲಾಯಿತು. 

ಪಕ್ಷದ ಮುಖಂಡರಾದ ಮುನಿರಾಜು, ಜಯದೇವ್‌, ಲಿಂಗಮೂರ್ತಿ, ಶೈಲೇಂದ್ರ ಬೆಲ್ದಾಳೆ, ಚಂದು ಪಾಟೀಲ್‌ ಸಹ ರುದ್ರೇಶ್‌ ಜತೆ ಕೈ ಜೋಡಿಸಿ ರಾಮನಗರ ಕ್ಷೇತ್ರದ ವ್ಯಾಪ್ತಿಯ ಪಕ್ಷದ ನಿಷ್ಠಾವಂತ ರೈತ ಕಾರ್ಯಕರ್ತರಿಗೆ ಉಚಿತವಾಗಿ ಟ್ರ್ಯಾಕ್ಟರ್‌ ನೀಡಲಾಯಿತು.

ದೇಶದ ಮೊದಲ ಕೃಷಿ ಬಜೆಟ್‌ ರೂವಾರಿ ಎಂದೇ ಖ್ಯಾತಿ ಪಡೆದಿರುವ ಯಡಿಯೂರಪ್ಪ ಅವರ ರೈತಪರ ಕಾಳಜಿಯೇ ನಮಗೆ ಪ್ರೇರಣೆ. ಅತಿ ಹೆಚ್ಚು ರೈತಪರ ಯೋಜನೆಗಳನ್ನು ಜಾರಿಗೊಳಿಸಿದ ಕೀರ್ತಿ ಯಡಿಯೂರಪ್ಪಗೆ ಸೇರುತ್ತದೆ. ರೈತರಿಗೆ ಮಾತ್ರವಲ್ಲ, ಅವರ ಕುಟುಂಬದ ಏಳ್ಗೆಗೂ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ರೂಪಿಸಿದವರು. 

ಇಂತಹ ರೈತ ನಾಯಕರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ನಾನು ಮತ್ತು ನನ್ನ ಸ್ನೇಹಿತರು ನಿರ್ಧರಿಸಿ, ರಾಮನಗರ ಕ್ಷೇತ್ರದಲ್ಲಿ ಚಾಕಚಕ್ಯತೆಯೊಂದಿಗೆ ಪ್ರಾಮಾಣಿಕವಾಗಿ ಪಕ್ಷದ ಏಳ್ಗೆಗೆ ಶ್ರಮಿಸಿದ ರೈತ ಕಾರ್ಯಕರ್ತರನ್ನು ಗುರುತಿಸಿ ಟ್ರ್ಯಾಕ್ಟರ್‌ಗಳನ್ನು ವಿತರಣೆ ಮಾಡಲಾಗಿದೆ ಎಂದು ಬಿಜೆಪಿ ಮುಖಂಡ ಎಂ.ರುದ್ರೇಶ್‌ ಹೇಳಿದ್ದಾರೆ.

ಬಡವರಿಗೆ ಸೀರೆ ವಿತರಣೆ, ಅಂಗವಿಕಲರಿಗೆ ತ್ರಿಚಕ್ರ:  ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು, ಪಕ್ಷದ ನಾಯಕರು, ಕಾರ್ಯಕರ್ತರು ವಿವಿಧೆಡೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಮಾಜಿ ಸಚಿವ ಕಟ್ಟಾಸುಬ್ರಹ್ಮಣ್ಯ ನಾಯ್ಡು ಅವರ ನೇತೃತ್ವದಲ್ಲಿ ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಬಡವರಿಗೆ ಸೀರೆ ವಿತರಣೆ ಮಾಡಲಾಯಿತು. ಅಬಕಾರಿ ಸಚಿವ ಗೋಪಾಲಯ್ಯ ಅವರು ಮಹಾಲಕ್ಷ್ಮೇ ಲೇಔಟ್‌ ವಿಧಾನಸಭಾ ಕ್ಷೇತ್ರದ ನಂದಿನಿ ಬಡಾವಣೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಅಂಗವಿಕಲರಿಗೆ ತ್ರಿಚಕ್ರವಾಹನಗಳನ್ನು ವಿತರಣೆ ಮಾಡಿದರು. ಹಲವೆಡೆ ಅಭಿಮಾನಿಗಳು ಯಡಿಯೂರಪ್ಪ ಅವರಿಗೆ ಆಯುಷ್ಯಾರೋಗ್ಯ ನೀಡುವಂತೆ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

Latest Videos
Follow Us:
Download App:
  • android
  • ios