ಸದನದಿಂದ ಅಮಾನತುಗೊಂಡಿರುವ ಬಿಜೆಪಿಯ ಹದಿನೆಂಟು ಮಂದಿ ಶಾಸಕರ ಕುರಿತು ತೀರ್ಮಾನ ಮಾಡಲು ಮೇ.25ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಿಧಾನಸಭೆ ಸಭಾಧ್ಯಕ್ಷರಾದ ಯು.ಟಿ. ಖಾದರ್‌ ನೇತೃತ್ವದಲ್ಲಿ ಸಭೆ ನಡೆಯಲಿದೆ ಎಂದು ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.  

ಬೆಂಗಳೂರು (ಮೇ.23): ಸದನದಿಂದ ಅಮಾನತುಗೊಂಡಿರುವ ಬಿಜೆಪಿಯ ಹದಿನೆಂಟು ಮಂದಿ ಶಾಸಕರ ಕುರಿತು ತೀರ್ಮಾನ ಮಾಡಲು ಮೇ.25ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಿಧಾನಸಭೆ ಸಭಾಧ್ಯಕ್ಷರಾದ ಯು.ಟಿ. ಖಾದರ್‌ ನೇತೃತ್ವದಲ್ಲಿ ಸಭೆ ನಡೆಯಲಿದೆ ಎಂದು ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.  ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಚಿವ ಸಂಪುಟ ಸಭೆಯಲ್ಲಿ ಅಮಾನತುಗೊಂಡ ಶಾಸಕರ ಬಗ್ಗೆ ಚರ್ಚಿಸಲಾಯಿತು. 

ಈ ವೇಳೆ ಶಾಸಕರ ಅಮಾನತು ಬಗ್ಗೆ ತೀರ್ಮಾನಿಸಲು ಮುಖ್ಯಮಂತ್ರಿಗಳಿಗೆ ಅಧಿಕಾರ ನೀಡಲಾಗಿದೆ ಎಂದು ಹೇಳಿದರು.  ಮೇ 25 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನಸಭೆ ಸಭಾಧ್ಯಕ್ಷರಾದ ಯು.ಟಿ. ಖಾದರ್‌, ಪ್ರತಿಪಕ್ಷ ನಾಯಕರು, ಕಾನೂನು ಮತ್ತು ಸಂಸದೀಯ ಸಚಿವರು ಎಲ್ಲರೂ ಸೇರಿ ಸೂಕ್ತ ನಿರ್ಧಾರ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.

ಸ್ಪೀಕರ್‌ಗೆ ಮನವಿ: ಪಕ್ಷದ 18 ಶಾಸಕರ ಅಮಾನತು ಆದೇಶ ವಾಪಸ್ ಪಡೆಯುವಂತೆ ಕೋರಿ ಪ್ರತಿಪಕ್ಷ ಬಿಜೆಪಿ ನಾಯಕರ ನಿಯೋಗ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಅವರನ್ನು ಸೋಮವಾರ ಭೇಟಿ ಮಾಡಿ ಮನವಿ ಸಲ್ಲಿಸಿದೆ. ಪ್ರತಿಪಕ್ಷದ ನಾಯಕ ಆರ್‌.ಅಶೋಕ್ ನೇತೃತ್ವದಲ್ಲಿ ಶಾಸಕರಾದ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಸಿ.ಕೆ.ರಾಮಮೂರ್ತಿ, ಮುನಿರಾಜು ಮತ್ತಿತರರು ವಿಧಾನಸೌಧದಲ್ಲಿ ಸ್ಪೀಕರ್ ಕಚೇರಿಗೆ ತೆರಳಿ ಕೆಲಕಾಲ ಚರ್ಚೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್‌, ವಿಧಾನಸಭೆಯಲ್ಲಿ ನಡೆದ ಘಟನೆ ವಿಧಾನಸಭೆಗೆ ಸೀಮಿತವಾಗಬೇಕಿತ್ತು. ಇದು ಮುಂದುವರೆದು ಸಮಿತಿ ಸಭೆಗಳಿಗೂ ಅಮಾನತು ಆದೇಶ ಅನ್ವಯಯವಾಗುವಂತೆ ಮಾಡಿರುವುದು ಸರಿಯಲ್ಲ ಎಂದರು.

ನಮ್ಮ ಆನೆಗಳನ್ನು ಚೆನ್ನಾಗಿ ನೋಡಿಕೊಳ್ಳಿ; ಪವನ್‌ ಕಲ್ಯಾಣ್‌ಗೆ ಸಚಿವ ಈಶ್ವರ್‌ ಖಂಡ್ರೆ ಮನವಿ

ಈ ರೀತಿಯ ಘಟನೆ ಇದೇ ಮೊದಲ ಬಾರಿ ನಡೆದಿಲ್ಲ. ಹಿಂದೆಯೂ ಇಂಥ ಅನೇಕ ಘಟನೆಗಳು ನಡೆದಿವೆ. ಸ್ಪೀಕರ್ ಸ್ಥಾನಕ್ಕೆ ಅಗೌರವ ತೋರುವ ಉದ್ದೇಶ ಪಕ್ಷದ ಶಾಸಕರಿಗೆ ಇರಲಿಲ್ಲ. ಸಚಿವ ಕೆ.ಎನ್‌. ರಾಜಣ್ಣ ಅವರ ಹನಿಟ್ರ್ಯಾಪ್‌ ವಿಷಯ ಮುಂದಿಟ್ಟುಕೊಂಡು ನಾವು ಒಂದು ಪ್ರತಿಪಕ್ಷವಾಗಿ ಹೋರಾಟ ಮಾಡಿದ್ದೇವೆ ಅಷ್ಟೇ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದು ಹೇಳಿದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅಶೋಕ್‌, ಈ ಬಗ್ಗೆ ಪರಿಶೀಲಿಸಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರೊಂದಿಗೆ ಚರ್ಚಿಸಿ ತಿಳಿಸುವುದಾಗಿ ಸ್ಪೀಕರ್ ಖಾದರ್ ಅವರು ಭರವಸೆ ನೀಡಿದ್ದಾರೆ. ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.