ನವದೆಹಲಿ(ನ.11): ಬಿಹಾರ ಚುನಾವಣೆಯಲ್ಲಿ ಆರ್‌ಜೆಡಿ-ಕಾಂಗ್ರೆಸ್‌ ಮಹಾಗಠಬಂಧನವು ಅಧಿಕಾರದ ಚುಕ್ಕಾಣಿ ಹಿಡಿಯದೇ ಇರುವುದರಿಂದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಮತ್ತೊಮ್ಮೆ ಪಕ್ಷದ ಅಧ್ಯಕ್ಷ ಪಟ್ಟಕ್ಕೇರಿಸುವ ಅವರ ಬೆಂಬಲಿಗರ ಪ್ರಯತ್ನಗಳಿಗೆ ತೊಡಕಾಗುವ ಸಾಧ್ಯತೆ ಇದೆ.

ಆಗಸ್ಟ್‌ ಕೊನೆಯ ವಾರ ದಿಲ್ಲಿಯಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕಾರಿಣಿ ಸಮಿತಿ ಸಭೆಯಲ್ಲಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು 6 ತಿಂಗಳು ಮುಂದುವರಿಯಬೇಕು ಎಂದು ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿತ್ತು. ಬಳಿಕ ಅಧ್ಯಕ್ಷ ಪದವಿಗೆ ಚುನಾವಣೆ ನಡೆಸಲು ತೀರ್ಮಾನಿಸಿತ್ತು. ಜನವರಿ ಅಥವಾ ಫೆಬ್ರವರಿಯಲ್ಲಿ ಚುನಾವಣೆ ಪ್ರಕ್ರಿಯೆ ನಡೆಸಲು ಸಿದ್ಧತೆಗಳು ಈಗಾಗಲೇ ಆರಂಭವಾಗಿವೆ.

ಈ ನಡುವೆ ರಾಹುಲ್‌ ಮನವೊಲಿಸಿ ಅವರಿಗೆ ಪುನಃ ಪಟ್ಟಕಟ್ಟುವ ಯತ್ನಗಳು ನಡೆದಿವೆ. ಅದರೆ ಬಿಹಾರ ಚುನಾವಣಾ ಫಲಿತಾಂಶವು ಈ ಯತ್ನಕ್ಕೆ ಹಿನ್ನಡೆ ಉಂಟು ಮಾಡುವ ಸಾಧ್ಯತೆ ಇದೆ. ಇದಲ್ಲದೆ ಪಕ್ಷವನ್ನು ಅಧಿಕಾರಕ್ಕೆ ತರಲು ಇಡೀ ಬಿಹಾರ ಸುತ್ತಬೇಕಿದ್ದ ರಾಹುಲ್‌ ಕೇವಲ 8 ರಾರ‍ಯಲಿ ನಡೆಸಿರುವುದು ಕೂಡ ಅವರ ಭವಿಷ್ಯವನ್ನು ಮಂಕಾಗಿಸಿದೆ ಎಂಬ ವಿಶ್ಲೇಷಣೆ ಕೇಳಿಬಂದಿದೆ. ರಾಹುಲ್‌ಗೆ ವಿರುದ್ಧವಾಗಿ ಪ್ರಧಾನಿ ನರೇಂದ್ರ ಮೋದಿ 12 ರಾರ‍ಯಲಿ ಉದ್ದೇಶಿಸಿ ಮಾತನಾಡಿದ್ದು ಇಲ್ಲಿ ಗಮನಾರ್ಹ.