Asianet Suvarna News Asianet Suvarna News

ಶಿಗ್ಗಾಂವಿ: ಕೈಗೆ ಖಾದ್ರಿ ಕಗ್ಗಂಟು : ಸಿಎಂ ಬೊಮ್ಮಾಯಿ ಕಟ್ಟಿಹಾಕಲು ಕಾಂಗ್ರೆಸ್‌ ನಡೆಸುತ್ತಿರುವ ತಂತ್ರಕ್ಕೆ ಬಗ್ಗದ ಅಜ್ಜಂಪೀರ

 ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕಟ್ಟಿಹಾಕಲು ಶಿಗ್ಗಾಂವಿ-ಸವಣೂರು ಕ್ಷೇತ್ರದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಕಣಕ್ಕಿಳಿಸಿ ಪಂಚಮಸಾಲಿ ಅಸ್ತ್ರ ಪ್ರಯೋಗಿಸಲು ಹೊರಟಿರುವ ಕಾಂಗ್ರೆಸ್ಸಿಗೆ ಮಾಜಿ ಶಾಸಕ ಅಜ್ಜಂಫೀರ್‌ ಖಾದ್ರಿ ಮಗ್ಗಲು ಮುಳ್ಳಾಗಿದ್ದಾರೆ. ಟಿಕೆಟ್‌ ಕೈತಪ್ಪಿದರೆ ಪಕ್ಷೇತರರಾಗಿ ಸ್ಪರ್ಧಿಸಲು ಚಿಂತನೆ ನಡೆಸಿರುವುದು ಕಾಂಗ್ರೆಸ್ಸನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದೆ.

Will the Congress Plan to Defeat CM Bommai Succeed at shiggavi rav
Author
First Published Mar 24, 2023, 1:04 PM IST

ನಾರಾಯಣ ಹೆಗಡೆ

ಹಾವೇರಿ (ಮಾ.24) : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕಟ್ಟಿಹಾಕಲು ಶಿಗ್ಗಾಂವಿ-ಸವಣೂರು ಕ್ಷೇತ್ರದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಕಣಕ್ಕಿಳಿಸಿ ಪಂಚಮಸಾಲಿ ಅಸ್ತ್ರ ಪ್ರಯೋಗಿಸಲು ಹೊರಟಿರುವ ಕಾಂಗ್ರೆಸ್ಸಿಗೆ ಮಾಜಿ ಶಾಸಕ ಅಜ್ಜಂಫೀರ್‌ ಖಾದ್ರಿ ಮಗ್ಗಲು ಮುಳ್ಳಾಗಿದ್ದಾರೆ. ಟಿಕೆಟ್‌ ಕೈತಪ್ಪಿದರೆ ಪಕ್ಷೇತರರಾಗಿ ಸ್ಪರ್ಧಿಸಲು ಚಿಂತನೆ ನಡೆಸಿರುವುದು ಕಾಂಗ್ರೆಸ್ಸನ್ನು ಇಕ್ಕಟ್ಟಿನಲ್ಲಿ ಸಿಲುಕಿಸಿದೆ.

2008ರಿಂದ ಸತತ ಮೂರು ಬಾರಿ ಶಿಗ್ಗಾಂವಿ-ಸವಣೂರು ಕ್ಷೇತ್ರ(Shiggavi-savanuru assembly constiutency)ದಿಂದ ಗೆದ್ದಿರುವ ಬಸವರಾಜ ಬೊಮ್ಮಾಯಿ(Basavara Bommai) ವಿರುದ್ಧ ಸ್ಪರ್ಧಿಸಲು 14 ಆಕಾಂಕ್ಷಿಗಳು ಕಾಂಗ್ರೆಸ್‌ ಟಿಕೆಟ್‌(Congress Ticket)ಗಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಈಗ ಅವರೆಲ್ಲರನ್ನು ಬಿಟ್ಟು ಮಾಜಿ ಸಚಿವ, ಪಂಚಮಸಾಲಿ ಸಮಾಜದ ಮುಖಂಡ ವಿನಯ ಕುಲಕರ್ಣಿ(Vinaya kulkarni) ಅವರನ್ನು ಶಿಗ್ಗಾಂವಿ ಕ್ಷೇತ್ರದಲ್ಲಿ ಕಣಕ್ಕಿಳಿಸುವ ಬಗ್ಗೆ ಕಾಂಗ್ರೆಸ್‌ ನಾಯಕರು ತಂತ್ರ ರೂಪಿಸಿದ್ದಾರೆ. ಆ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪೈಪೋಟಿ ನೀಡಿ, ಅವರನ್ನು ಪ್ರಚಾರದ ಸಂದರ್ಭದಲ್ಲಿ ಇಲ್ಲಿಯೇ ಕಟ್ಟಿಹಾಕುವ ಚಿಂತನೆ ಕಾಂಗ್ರೆಸ್‌ ನಾಯಕರದ್ದು. ಆದರೆ, ಈ ತಂತ್ರಗಾರಿಕೆ ವರ್ಕೌಟ್‌ ಆಗಬೇಕೆಂದರೆ ಮಾಜಿ ಶಾಸಕ ಅಜ್ಜಂಫೀರ್‌ ಖಾದ್ರಿ(Ajjamfir Qadri) ಬೆಂಬಲ ಬೇಕು. ಸ್ವತಃ ಕೈ ಟಿಕೆಟ್‌ ಆಕಾಂಕ್ಷಿಯಾಗಿರುವ ಖಾದ್ರಿ ಸುಲಭವಾಗಿ ಕ್ಷೇತ್ರ ಕೈಬಿಡಲು ತಯಾರಿಲ್ಲದ್ದರಿಂದ ಆ ಪಕ್ಷದ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಶಿಗ್ಗಾಂವಿ ಕೋಟೆ ಭದ್ರಪಡಿಸಿಕೊಳ್ಳಲು ಸಿಎಂ ಮಾಸ್ಟರ್‌ ಪ್ಲ್ಯಾನ್‌: ಬೊಮ್ಮಾಯಿ ಸ್ಟಾಟರ್ಜಿಗೆ 'ಕೈ' ಸುಸ್ತು..?

ಪಂಚಮಸಾಲಿ ಅಸ್ತ್ರ:

ಶಿಗ್ಗಾಂವಿ ಕ್ಷೇತ್ರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಪೈಪೋಟಿ ನೀಡುವಂತಹ ಅಭ್ಯರ್ಥಿಗಾಗಿ ಹುಡುಕಾಟ ನಡೆಸಿದ್ದ ಕಾಂಗ್ರೆಸ್‌, ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ಸಿಎಂ ವಿರುದ್ಧ ಕಣಕ್ಕಿಳಿಸುವ ಕಾರ್ಯತಂತ್ರ ರೂಪಿಸಿದೆ. ಮೀಸಲಾತಿ ವಿಚಾರವಾಗಿ ಮುನಿಸಿಕೊಂಡಿರುವ ಪಂಚಮಸಾಲಿ ಸಮಾಜದವರು ಶಿಗ್ಗಾಂವಿ ಕ್ಷೇತ್ರದಲ್ಲಿ ನಿರ್ಣಾಯಕರು ಆಗಿರುವುದರಿಂದ ಅದನ್ನೇ ಅಸ್ತ್ರವಾಗಿ ಪ್ರಯೋಗಿಸಲು ಕಾಂಗ್ರೆಸ್‌ ಹೊರಟಿದೆ. ಬಿಜೆಪಿಯಿಂದ ಕಾಂಗ್ರೆಸ್‌ಗೆ ಹೋಗಿರುವ ಸೋಮಣ್ಣ ಬೇವಿನಮರದ ಪಂಚಮಸಾಲಿ ಮುಖಂಡರಾಗಿದ್ದರೂ ವಿನಯ ಕುಲಕರ್ಣಿಯೇ ಸಮರ್ಥ ಎಂಬ ನಿಲುವಿಗೆ ಬಂದಿರುವ ಕಾಂಗ್ರೆಸ್‌ ನಾಯಕರು, ಅದಕ್ಕಾಗಿ ಎಲ್ಲ ರೀತಿಯ ಪ್ರಯತ್ನ ನಡೆಸಿದ್ದಾರೆ. ಅದಕ್ಕಾಗಿ ಕೆಲವು ದಿನಗಳ ಹಿಂದೆ ದೆಹಲಿಯಲ್ಲಿ ವಿನಯ ಕುಲಕರ್ಣಿ ಕರೆಸಿಕೊಂಡು ಕೈ ನಾಯಕರು ಚರ್ಚಿಸಿದ್ದಾರೆ. ಇದೇ ವೇಳೆ ಮಾಜಿ ಶಾಸಕ ಅಜ್ಜಂಫೀರ್‌ ಖಾದ್ರಿ ಅವರನ್ನೂ ಕರೆಸಿ ಮನವೊಲಿಕೆ ಪ್ರಯತ್ನ ನಡೆಸಿದ್ದಾರೆ. ಆದರೆ, ಇದಕ್ಕೆ ಖಾದ್ರಿ ಒಪ್ಪಲಿಲ್ಲ ಎನ್ನಲಾಗಿದೆ. ಹಾಗಾಗಿ ಖಾದ್ರಿ ಮನವೊಲಿಸುವ ಕೆಲಸವನ್ನು ಜಮೀರ್‌ ಅಹ್ಮದ್‌ ಅವರಿಗೆ ವಹಿಸಿದೆ.

ಖಾದ್ರಿ ಮೂರು ಸೋಲು:

ಅಜ್ಜಂಫೀರ್‌ ಖಾದ್ರಿ ಸಿಎಂ ಬೊಮ್ಮಾಯಿ ವಿರುದ್ಧ ಮೂರು ಬಾರಿ ಸೇರಿದಂತೆ ಸತತ ನಾಲ್ಕು ಸಲ ಪರಾಭವಗೊಂಡಿದ್ದಾರೆ. ಅದಕ್ಕಾಗಿ ಈ ಸಲ ಖಾದ್ರಿ ಬದಲಿಸಬೇಕು ಎಂಬುದು ಅನೇಕರ ಒತ್ತಾಯವಾಗಿದೆ. ಸಿದ್ದರಾಮಯ್ಯ, ಜಮೀರ್‌ ಅಹ್ಮದ್‌ ಬೆಂಬಲಿಗರಾಗಿರುವ ಖಾದ್ರಿ ಈ ಸಲ ಮತ್ತೊಂದು ಚಾನ್ಸ್‌ಗಾಗಿ ಪ್ರಯತ್ನ ನಡೆಸಿದ್ದಾರೆ. ಅದಕ್ಕಾಗಿ ತನಗೇ ಟಿಕೆಟ್‌ ನೀಡಬೇಕು ಎಂಬುದು ಖಾದ್ರಿ ಅಭಿಪ್ರಾಯವಾಗಿದೆ. ಖಾದ್ರಿ ಅವರಿಗೆ ಟಿಕೆಟ್‌ ನೀಡಿದರೆ ಕೇವಲ ಅಲ್ಪಸಂಖ್ಯಾತರ ಮತಗಳಷ್ಟೇ ಸೀಮಿತವಾಗಬಹುದು ಎಂಬ ಲೆಕ್ಕಾಚಾರದಲ್ಲಿ ವಿನಯ ಕುಲಕರ್ಣಿ ತರುವ ಪ್ಲಾನ್‌ ಕಾಂಗ್ರೆಸ್‌ ಮಾಡಿದೆ. ಇದನ್ನು ಖಾದ್ರಿ ಬೆಂಬಲಿಸಿದರೆ ಬೊಮ್ಮಾಯಿ ಅವರಿಗೆ ಪೈಪೋಟಿ ಎದುರಾಗುವುದು ನಿಶ್ಚಿತ. ಆದರೆ, ಖಾದ್ರಿ ಪಕ್ಷೇತರರಾಗಿ ಅಥವಾ ಜೆಡಿಎಸ್‌ನಿಂದ ಸ್ಪರ್ಧಿಸಿದರೆ ಕಾಂಗ್ರೆಸ್‌ ಮತ ವಿಭಜನೆಯಾಗುವುದರಲ್ಲಿ ಅನುಮಾನವಿಲ್ಲ. ಇದೇ ಕಾರಣಕ್ಕೆ ಖಾದ್ರಿ ಮನವೊಲಿಕೆಗೆ ಕಸರತ್ತು ನಡೆದಿದೆ.

 

ಶಿಗ್ಗಾಂವಿ ಬಿಡಲ್ಲ, ಕ್ಷೇತ್ರ ಬಿಡುತ್ತೇನೆಂದು ಯಾವನ್ರಿ ಹೇಳಿದ್ದು: ಸಿಎಂ ಬೊಮ್ಮಾಯಿ

ಪಕ್ಷಕ್ಕಾಗಿ ಯಾವ ತ್ಯಾಗ ಮಾಡಲೂ ಸಿದ್ಧನಿದ್ದೇನೆ. ವಿನಯ ಕುಲಕರ್ಣಿ, ಸಲೀಂ ಅಹ್ಮದ್‌ ಅವರಿಗೆ ಬೇಕಾದರೆ ಟಿಕೆಟ್‌ ಕೊಡಲಿ. ಆದರೆ, ಬಿಜೆಪಿ ಜತೆ ಇರುವ ಕಲೆಕ್ಷನ್‌ ಗಿರಾಕಿಗಳಿಗೆ ಕೊಟ್ಟರೆ ನಾನು ಕೇಳಲ್ಲ. ಆದರೆ, ನನ್ನ ವಿರುದ್ಧವೇ ನಮ್ಮ ಸಮಾಜದ ಪ್ರಾಮಾಣಿಕ ನಾಯಕರಾದ ಸಲೀಂ ಅಹ್ಮದ್‌ ನೆಗೆಟಿವ್‌ ಮಾತನಾಡಿ ನೋವು ಮಾಡಿದ್ದಾರೆ. ಕ್ಷೇತ್ರದಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್‌ ನೀಡಿ ಎಂದು ಹೇಳಿದ್ದೇನೆ.

ಅಜ್ಜಂಫೀರ್‌ ಖಾದ್ರಿ, ಮಾಜಿ ಶಾಸಕ

Follow Us:
Download App:
  • android
  • ios