ಬೆಂಗಳೂರು[ಫೆ.08]: ರಾಜ್ಯ ರಾಜಕೀಯದಲ್ಲಿ ಕ್ಷಣ ಕ್ಷಣವೂ ಮಹತ್ತರ ಬೆಳವಣಿಗೆಗಳಾಗುತ್ತಿವೆ. ಇಂದು ಬಜೆಟ್‌ಗೂ ಮೊದಲು ಸಿಎಂ ಕುಮಾರಸ್ವಾಮಿ ತುರ್ತು ಸುದ್ದಿಗೋಷ್ಠಿ ಆಯೋಜಿಸಿ ಯಡಿಯೂರಪ್ಪ ಹಾಗೂ ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ಇದರೊಂದಿಗೆ ಆಡಿಯೋ ರಿಲೀಸ್ ಮಾಡಿ ಬಿಎಸ್‌ವೈ ವಿರುದ್ಧ ಗಂಭೀರ ಆರೋಪವನ್ನೂ ಮಾಡಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಕೂಡಾ ಸುದ್ದಿಗೋಷ್ಠಿ ನಡೆಸಿ ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ. ಅಲ್ಲದೇ ತಮ್ಮ ಮೇಲೆ ಮಾಡಿದ ಆರೋಪ ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಘೋಷಿಸುವುದಾಗಿ ಸವಾಲೆಸೆದಿದ್ದಾರೆ. ಬಿಎಸ್‌ವೈ ಸುದ್ದಿಗೋಷ್ಠಿಯ ಹೈಲೈಟ್ಸ್.

ಸುಭಾಷ್ ಗುತ್ತೇದಾರ್‌ರಿಗೆ ಆಮಿಷ ನೀಡಿಲ್ಲವೇ?

ಸಿಎಂ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಬಿಎಸ್ ಯಡಿಯೂರಪ್ಪ 'ಕುಮಾರಸ್ವಾಮಿ ಸಿನಿಮಾ ವ್ಯಕ್ತಿ, ಏನು ಬೇಕಾದ್ರೂ ಬಿಡುಗಡೆ ಮಾಡ್ತಾರೆ, ರೆಕಾರ್ಡಿಂಗ್ ಮಾಡ್ತಾರೆ. ಅವರು ಅದರಲ್ಲಿ ನೈಪುಣ್ಯತೆ ಹೊಂದಿದ್ದಾರೆ. ಹಾಗಾದ್ರೆ ನಾನು ಅವರ ಬಳಿ ಒಂದು ಪ್ರಶ್ನೆ ಕೇಳುತ್ತೇನೆ ನಮ್ಮ ಬಿಜೆಪಿ ಶಾಸಕ ಸುಭಾಷ್ ಗುತ್ತೇದಾರ್‌ರಿಗೆ ಮಂತ್ರಿ ಸ್ಥಾನ ನೀಡು ಆಮಿಷ ಕೊಟ್ಟಿಲ್ಲವೇ? ಇದಕ್ಕೆ ದಾಖಲೆ ನೀಡಬೇಕಾ? ಖುದ್ದು ಸುಭಾಶ್ ಬಹಿರಂಗವಾಗಿ ಹೇಳಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಹಿಡಿದಿಡುವ ಕೆಲಸ ನೀವು ಮಾಡಬೇಕು’ ಎಂದಿದ್ದಾರೆ. 

ನಾಲ್ವರು ಕಾಂಗ್ರೆಸ್ ಅತೃಪ್ತ ಶಾಸಕರು ಅನರ್ಹ?

ನಿಮ್ಮ ಶಾಸಕರನ್ನು ಹಿಡಿದಿಡುವ ಜವಾಬ್ದಾರಿ ನಿಮ್ಮದು:

ಆಪರೇಷನ್ ಕಮಲದ ಬಗ್ಗೆ ಮಾತನಾಡಿದ ಯಡಿಯೂರಪ್ಪ 'ಕುಮಾರಸ್ವಾಮಿಯವರೇ ನೀವು ನಿಜಕ್ಕೂ ಪ್ರಮಾಣಿಕರಾಗಿದ್ದರೆ ನಿಮ್ಮ ಮೈತ್ರಿ ಸರ್ಕಾರದ ಸಚಿವರು ಹಾಗೂ ಶಾಸಕರನ್ನು ಒಟ್ಟಾಗಿಡಲು ಪ್ರಯತ್ನಿಸಿ. ಸಮ್ಮಿಶ್ರ ಸರ್ಕಾರದಲ್ಲಿ ಹೊಂದಾಣಿಕೆ ಇಲ್ಲ. 20ಕ್ಕೂ ಅಧಿಕ ಶಾಸಕರು ಕುಮಾರಸ್ವಮಿಯವರನ್ನು ಸಿಎಂ ಅಂತ ಒಪ್ಪಿಕೊಳ್ಳಲು ತಯಾರಿಲ್ಲ. ರೆಸಾರ್ಟ್‌ನಲ್ಲಿ ಶಾಸಕರನ್ನಿಟ್ಟುಕೊಂಡು ಹೊಡೆದಾಟ ಮಾಡಿಸಿದ್ದೀರಿ’ ಎಂದು ಗುಡುಗಿದ್ದಾರೆ.

ಇದೇ ಸಂದರ್ಭದಲ್ಲಿ ರಾಜ್ಯದ ಪರಿಸ್ಥಿತಿಯ ಬಗ್ಗೆ ಮಾತನಾಡಿದ ಬಿಎಸ್‌ವೈ 'ಸರ್ಕಾರ ಅಧಿಕಾರಕ್ಕೆ ಬಂದು 8 ತಿಂಗಳಾದ್ರೂ ಅಭಿವೃದ್ಧಿ ಇಲ್ಲ. ಸಾಲಮನ್ನಾ ಮಾಡುತ್ತೇವೆ ಎಂದು ಅದನ್ನೂ ಮಾಡಿಲ್ಲ. ಎಲ್ಲಾ ಕಾರ್ಯಗಳು ಸ್ಥಗಿತಗೊಂಡಿದೆ, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಈ ಸರ್ಕಾರಕ್ಕೆ ಕಿಂಚಿತ್ತಾದರೂ ಮಾನ ಮರ್ಯಾದೆ ಇದ್ದರೆ ನೈತಿಕತೆ ಇದ್ದರೆ ಗೌರವ ಇದ್ದರೆ ರಾಜೀನಾಮೆ ನೀಡಿ ಮನೆಗೆ ತೆರಳಲಿ. ರಾಜ್ಯದ ಜನರು ಹೀಗೆ ಅರಾಜಕತೆಯ ಆಡಳಿತದಲ್ಲಿ ಬದುಕುವುದನ್ನು ನಾವು ಸಹಿಸುವುದಿಲ್ಲ’ ಎಂದಿದ್ದಾರೆ. 

ದೇವರ ಹೆಸರಲ್ಲಿ ಯಡಿಯೂರಪ್ಪ ದೇವದುರ್ಗ ಭೇಟಿ ರಹಸ್ಯ ಬಯಲು

ಆರೋಪ ಸಾಬೀತುಪಡಿಸಿದ್ರೆ ರಾಜಕೀಯ ನಿವೃತ್ತಿ:

ಸಿಎಂ ಕುಮಾರಸ್ವಾಮಿ ಬಿಡುಗಡೆಗೊಳಿಸಿದ ಆಡಿಯೋ ಕುರಿತಾಗಿ ಪ್ರತಿಕ್ರಿಯಿಸಿದ ಬಿಎಸ್‌ವೈ 'ಜೆಡಿಎಸ್ MLA ನಾಗನಗೌಡರವರ ಮಗ ಶರಣಗೌಡ ನನ್ನೊಂದಿಗೆ ಮಾತುಕತೆ ನಡೆಸಿದ್ದಾರೆ ಎಂಬುವುದು ಸತ್ಯಕ್ಕೆ ದೂರವಾದ ಸಂಗತಿ. ನಾನು ದೇವಸ್ಥಾನಕ್ಕೆ ಭೇಟಿ ನೀಡಿ ತರಾತುರಿಯಲ್ಲಿ ವಾಪಾಸಾಗಿದ್ದೇನೆ. ಹೀಗಿರುವಾಗ ಕಥೆ ಕಟ್ಟಿ ಜನರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಬಿಡುಗಡೆ ಮಾಡಿದ್ದು ನಕಲಿ ಆಡಿಯೋ. ನಾನು ಯಾರನ್ನೂ ಭೇಟಿ ಮಾಡಲ್ಲ. ಸರ್ಕಾರದ ವೈಫಲ್ಯ ಮುಚ್ಚಿ ಹಾಕಲು ಮಾಡಿರುವ ಡೊಂಬರಾಟವಷ್ಟೇ. ಸ್ಪೀಕರ್‌ ಬುಕ್ ಮಾಡಿದ್ದೇವೆಂಬ ಆರೋಪ ಸಾಬೀತುಪಡಿಸಿದರೆ ನಾನು ರಾಜಕೀಯ ನಿವೃತ್ತಿ ಪಡೆದುಕೊಳ್ಳುತ್ತೇನೆ' ಎಂದು ಘೋಷಿಸಿದ್ದಾರೆ

ಬಜೆಟ್‌ನಲ್ಲಿ ಭಾಗಿಯಾಗುತ್ತೇವೆ:

ಬಜೆಟ್‌ ಅಧಿವೇಶನಕ್ಕೆ ಅಡ್ಡಿಪಡಿಸಿದ್ದೇವೆ ಆದರೆ ಬಜೆಟ್ ಅಧಿವೇಶನದಲ್ಲಿ ಭಾಗವಹಿಸುತ್ತೇವೆ. ಬಜೆಟ್ ಜನರ ಅಭಿವೃದ್ಧಿಗಾಗಿ ಮಂಡಿಸುವುದಾಗಿದೆ ಹೀಗಾಗಿ ಭಾಗವಹಿಸುತ್ತೇವೆ. ಚರ್ಚೆಯಲ್ಲೂ ಭಾಗವಹಿಸುತ್ತೇವೆ. ತರಾತುರಿಯಲ್ಲಿ ಚರ್ಚೆ ಮುಗಿಸದೆ ಮೂರು ದಿನ ಮಾಡಲಿ, ಸರ್ಕಾರದ ಎಲ್ಲಾ ಕರ್ಮಕಾಂಡವನ್ನು ಬಿಚ್ಚಿಡುತ್ತೇವೆ ಎಂದಿದ್ದಾರೆ.