ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಶಾಸಕರಿಗೆ ಅನುದಾನ ನೀಡುತ್ತಾರೆಯೇ ಎಂಬುದನ್ನು ನೋಡಬೇಕು ಎಂದು ವಿಧಾನಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ವ್ಯಂಗ್ಯವಾಗಿ ಹೇಳಿದ್ದಾರೆ.
ಬೆಂಗಳೂರು (ಜು.17): ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಶಾಸಕರಿಗೆ ಅನುದಾನ ನೀಡುತ್ತಾರೆಯೇ ಎಂಬುದನ್ನು ನೋಡಬೇಕು ಎಂದು ವಿಧಾನಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ವ್ಯಂಗ್ಯವಾಗಿ ಹೇಳಿದ್ದಾರೆ. ಶಾಸಕರು, ಸಚಿವರೊಂದಿಗೆ ಸುರ್ಜೇವಾಲಾ ಸಭೆ ಕುರಿತಂತೆ ಸಚಿವ ಕೆ.ಎನ್.ರಾಜಣ್ಣ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಅವರ ಪುತ್ರ ಹಾಗೂ ವಿಧಾನಪರಿಷತ್ ಸದಸ್ಯ ರಾಜೇಂದ್ರ ಅವರು ಕೂಡ ಸುರ್ಜೇವಾಲಾ ಸಭೆ ಕುರಿತಂತೆ ಪರೋಕ್ಷವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ರಾಜೇಂದ್ರ, ಸಹಜವಾಗಿ ಶಾಸಕರು ಸಮಸ್ಯೆಗಳಿದ್ದರೆ ಮುಖ್ಯಮಂತ್ರಿ ಮತ್ತು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜತೆ ಚರ್ಚೆ ಮಾಡುತ್ತಾರೆ. ಅಲ್ಲದೆ, ಅವರಲ್ಲಿ ಅನುದಾನ ಕೇಳುವುದೂ ಸಹಜ. ಅದು ಹಿಂದಿನಿಂದಲೂ ನಡೆದು ಬಂದಿದೆ. ಈ ಬಾರಿ ಸುರ್ಜೇವಾಲಾ ಅವರು ಅಹವಾಲು ಸ್ವೀಕಾರ ಮಾಡುತ್ತಿದ್ದಾರೆ. ಇನ್ನು, ಸುರ್ಜೇವಾಲಾ ಅವರೊಂದಿಗೆ ಸಭೆಯಲ್ಲಿ ಪಾಲ್ಗೊಂಡ ಹಲವು ಹಿರಿಯ ಶಾಸಕರು ಅನುದಾನಕ್ಕೆ ಬೇಡಿಕೆ ಇಟ್ಟಿದ್ದೇವೆ ಎಂದು ಹೇಳುತ್ತಿದ್ದಾರೆ. ಸುರ್ಜೇವಾಲಾ ಅವರು ಅನುದಾನ ಕೊಡುತ್ತಾರೆಯೇ? ಆದರೂ, ಸಭೆ ನಡೆದಿದೆ. ಮುಂದೆ ಇದು ಯಾವ ರೀತಿ ತಿರುಗುತ್ತೆ ನೋಡಬೇಕು ಎಂದರು.
ನಾಯಕತ್ವ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಜೇಂದ್ರ, ಮುಖ್ಯಮಂತ್ರಿ ಬದಲಾವಣೆ ವಿಚಾರ ಹೈಕಮಾಂಡ್‌ಗೆ ಬಿಟ್ಟಿದ್ದು. ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ತಾವೇ 5 ವರ್ಷ ಇರುತ್ತೇನೆ ಎಂದು ಹೇಳಿದ್ದಾರೆ. ಮುಂದೆ ಏನಾದರೂ ಬದಲಾವಣೆ ಮಾಡಬೇಕು ಎಂದರೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಆ ತೀರ್ಮಾನಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ತಿಳಿಸಿದರು.
ರಾಜಣ್ಣ ವಿದೇಶ ಪ್ರವಾಸ ಎಲ್ಲರಿಗೂ ತಿಳಿದಿದೆ: ಸಚಿವ ರಾಜಣ್ಣ ಅವರು ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಸಭೆಯಲ್ಲಿ ಪಾಲ್ಗೊಳ್ಳದ ಕುರಿತು ಪ್ರತಿಕ್ರಿಯಿಸಿದ ಪುತ್ರ ರಾಜೇಂದ್ರ, ರಾಜಣ್ಣ ಅವರು ವಿದೇಶ ಪ್ರವಾಸದಲ್ಲಿದ್ದಾರೆ. ನಮ್ಮ ತಾಯಿ, ಸಂಬಂಧಿಕರ ಜತೆ ತೆರಳಿದ್ದಾರೆ. ಈ ಪ್ರವಾಸ ಒಂದೂವರೆ ತಿಂಗಳ ಹಿಂದೆಯೇ ನಿಗದಿಯಾಗಿತ್ತು. ಈ ಬಗ್ಗೆ ಸುರ್ಜೇವಾಲಾ, ಮುಖ್ಯಮಂತ್ರಿಗಳ ಅವರಿಗೆ ತಿಳಿಸಿಯೇ ಪ್ರವಾಸಕ್ಕೆ ಹೋಗಿದ್ದಾರೆ. ವಿದೇಶ ಪ್ರವಾಸದಿಂದ ವಾಪಾಸಾದ ನಂತರ ಸುರ್ಜೇವಾಲಾ ಅವರನ್ನು ಭೇಟಿಯಾಗಲಿದ್ದಾರೆ ಎಂದು ಸ್ಪಷ್ಟಪಡಿಸಿದರು.
