ರಾಜ್ಯ ರಾಜಕೀಯದಲ್ಲಿ ಕ್ಷಣ ಕ್ಷಣವೂ ಮಹತ್ತರ ಬೆಳವಣಿಗೆಗಳಾಗುತ್ತಿವೆ. ಬಜೆಟ್‌ ಮಂಡನೆಗೂ ಮೊದಲು ಸಿಎಂ ಕುಮಾರಸ್ವಾಮಿ ಆಡಿಯೋ ಒಂದನ್ನು ಬಿಡುಗಡೆ ಮಾಡಿ ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಇದಾದ ಮರು ಕ್ಷಣವೇ ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್‌ ಯಡಿಯೂರಪ್ಪ ಕೂಡಾ ಸುದ್ದಿಗೋಷ್ಠಿ ನಡೆಸಿ ಆಡಿಯೋದಲ್ಲಿರುವ ಧ್ವನಿ ನನ್ನದೇ ಎಂದು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಘೋಷಿಸುವುದಾಗಿ ತಿಳಿಸಿದ್ದರು. ಈ ಎಲ್ಲಾ ಹೈಡ್ರಾಮಾ ನಡೆಯುತ್ತಿದ್ದಾಗಲೇ ಇಂದು ಧರ್ಮಸ್ಥಳಕ್ಕೆ ಭೇಟಿ ನೀಡಿರುವ ಎಚ್‌. ಡಿ ಕುಮಾರಸ್ವಾಮಿ ಆಡಿಯೋದಲ್ಲಿರುವ ಧ್ವನಿ ಬಿ..ಎಸ್‌ ಯಡಿಯೂರಪ್ಪನವರದ್ದು ಅಲ್ಲವೆಂದು ಸಾಬೀತಾದರೆ ನಾನೇ ರಾಜಕೀಯ ನಿವೃತ್ತಿ ಘೋಷಿಸುತ್ತೇನೆಂದು ಶಪಥ ಮಾಡಿದ್ದಾರೆ. 

ಹೌದು ಆಪರೇಷನ್ ಆಡಿಯೋ ವಾರ್ ತಾರಕ್ಕೇರಿದ್ದು, ರಾಜಕೀಯದ ಹೈಡ್ರಾಮಾದಲ್ಲಿ ಮತ್ತೆ ಧರ್ಮಸ್ಥಳ ಮಂಜುನಾಥನ ಸನ್ನಿಧಿ ಸದ್ದು ಮಾಡುತ್ತಿದೆ. ನಿನ್ನೆಯಷ್ಟೇ 'ಆಡಿಯೋದಲ್ಲಿರುವ ಧ್ವನಿ ನನ್ನದು ಎಂದು ಸಾಬೀತಾದರೆ ರಾಜಕೀಯ ನಿವೃತ್ತಿ ಘೋಷಿಸುತ್ತೇನೆ' ಎಂದಿದ್ದ ಬಿಎಸ್‌ವೈಗೆ ಎಚ್. ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಇಂದು ಧರ್ಮಸ್ಥಳಕ್ಕೆ ಭೇಟಿ ನೀಡಿ ಪ್ರತಿಕ್ರಿಯಿಸಿರುವ ಎಚ್‌ಡಿಕೆ 'ಆಡಿಯೋದಲ್ಲಿರುವುದು ಯಡಿಯೂರಪ್ಪ ಧ್ವನಿ ಎಂದು ನಾನು ಎಲ್ಲೂ ಹೇಳಿಲ್ಲ. ಆದರೆ ಕನಿಷ್ಟ ಜ್ಞಾನ ಇಲ್ಲದವನು ಕೂಡಾ ಆಡಿಯೋ ಕೇಳಿದ್ರೆ ಅಲ್ಲಿರುವುದು ಯಡಿಯೂರಪ್ಪನವರ ಧ್ವನಿ ಎಂದೇ ಹೇಳುತ್ತಾರೆ. ಒಂದು ವೇಳೆ ಆ ಧ್ವನಿ ಯಡಿಯೂರಪ್ಪನವರದು ಅಲ್ಲವೆಂದು ಸಾಬೀತಾದರೆ ನಾನೇ ರಾಜಕೀಯ ನಿವೃತ್ತಿ ಘೋಷಿಸುತ್ತೇನೆ. ಈ ಮಾತನ್ನು ಧರ್ಮಸ್ಥಳದಲ್ಲಿ ನಿಂತು ಹೇಳುತ್ತಿದ್ದೇನೆ’ ಎಂದು ಶಪಥ ಮಾಡಿದ್ದಾರೆ.

ಸದ್ಯ ರಾಜಕೀಯ ಮುಖಂಡರ ಕಿತ್ತಾಟದಲ್ಲಿ ಮತ್ತೆ ಧರ್ಮಸ್ಥಳ ಮಂಜುನಾಥ ಸನ್ನಿಧಿಯ ಶಪಥ ಸದ್ದು ಮಾಡಿದೆ. ಒಂದೆಡೆ ಬಿಎಸ್‌ವೈ ಧ್ವನಿ ಸಾಬೀತಾದರೆ ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದಿದ್ದರೆ, ಮತ್ತೊಂದೆಡೆ ಕುಮಾರಸ್ವಾಮಿ ಬಿಎಸ್‌ವೈ ಧ್ವನಿ ಎಂದು ಸಾಬೀತಾಗದಿದ್ದರೆ ತಾನೇ ನಿವೃತ್ತಿ ಪಡೆಯುತ್ತೇನೆ ಎಂದಿದ್ದಾರೆ. ಈ ಮೂಲಕ ರಾಜ್ಯದಲ್ಲಿ ನಿವೃತ್ತಿಯ ಮಾತು ಜೋರಾಗಿದೆ.