ಬಿಜೆಪಿ ರಾಜ್ಯಾಧ್ಯಕ್ಷರ ಅವಧಿ ಮುಗಿಯುತ್ತಿದ್ದು, ಮುಂದಿನ ಅವಧಿಗೆ ನಳೀನ್ ಕುಮಾರ್ ಕಟೀಲ್ ಅವರೇ ಮುಂದುವರಿಯುತ್ತಾರಾ? ಹೊಸಬರು ಬರುತ್ತಾರಾ? ವರಿಷ್ಠರ ಮುಂದಿನ ನಡೆ ಬಗ್ಗೆ ಕುತೂಹಲ ಹೆಚ್ಚಿದೆ. ಚುನಾವಣೆ ಹಿನ್ನೆಲೆ ಬಿಜೆಪಿ ನಿರ್ಧಾರ ನಿಗೂಢವಾಗಿದೆ.
ಬೆಂಗಳೂರು (ಆ.22) ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರ ಅಧಿಕಾರಾವಧಿ ಅಧಿಕೃತವಾಗಿ ಪೂರ್ಣಗೊಂಡಿದ್ದು, ಮುಂಬರುವ ವಿಧಾನಸಭಾ ಚುನಾವಣೆವರೆಗೆ ಅವರನ್ನೇ ಮುಂದುವರೆಸಲಾಗುತ್ತದೆಯೇ ಅಥವಾ ಇಲ್ಲವೇ ಎಂಬುದು ಕುತೂಹಲಕರವಾಗಿದೆ. ರಾಜ್ಯಾಧ್ಯಕ್ಷರ ಅವಧಿ ಮೂರು ವರ್ಷ. 2019ರ ಆಗಸ್ಟ್ 20ರಂದು ಕಟೀಲ್ ಅವರು ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು. ಆ ಪ್ರಕಾರ, ಶನಿವಾರ ಅವರ ಅವಧಿ ಪೂರ್ಣಗೊಂಡಿದೆ. ಹಾಗಂತ ಮೂರು ವರ್ಷಗಳ ಅವಧಿ ಮುಗಿದ ಕೂಡಲೇ ಬದಲಾಯಿಸಬೇಕು ಎಂಬುದೇನೂ ಇಲ್ಲ. ಚುನಾವಣಾ ವರ್ಷವಾಗಿದ್ದರೆ ಬದಲಾಯಿಸುವ ಸಾಧ್ಯತೆ ಕಡಮೆ ಇರುತ್ತದೆ. ಆಯಾ ರಾಜ್ಯದ ರಾಜಕೀಯ ಸನ್ನಿವೇಶ ಆಧರಿಸಿ ಚುನಾವಣಾ ವರ್ಷವಿದ್ದರೂ ಬದಲಾಯಿಸಿದ ಅನೇಕ ಉದಾಹರಣೆಗಳಿವೆ. ಹೀಗಾಗಿ, ಈಗ ಕಟೀಲ್ ಅವರನ್ನು ಮುಂದಿನ ಚುನಾವಣೆ ಮುಗಿಯುವವರೆಗೆ ಮುಂದುವರೆಸುತ್ತಾರೆಯೇ ಎಂಬುದು ಇನ್ನೂ ಅಧಿಕೃತವಾಗಿ ಹೊರಬಿದ್ದಿಲ್ಲದೇ ಇರುವುದರಿಂದ ಸಹಜವಾಗಿಯೇ ವದಂತಿಗಳು ಹಬ್ಬುತ್ತಿವೆ.
ಸಂಸದೀಯ ಮಂಡಳಿಲ್ಲಿ ಬಿಎಸ್‌ವೈಗೆ ಸ್ಥಾನ: ನಳಿನ್ ಕುಮಾರ್ ಕಟೀಲ್ ಸಂತಸ
ರಾಜ್ಯದಲ್ಲಿನ ಪಕ್ಷದ ಸಂಘಟನೆ ಹಾಗೂ ಸರ್ಕಾರದ ವರ್ಚಸ್ಸಿನ ಬಗ್ಗೆ ಹೇಳಿಕೊಳ್ಳುವಂಥ ಅಭಿಪ್ರಾಯ ರಾಷ್ಟ್ರೀಯ ಬಿಜೆಪಿ ನಡೆಸಿದ ಆಂತರಿಕ ಸಮೀಕ್ಷೆಯಲ್ಲಿ ವ್ಯಕ್ತವಾಗಿಲ್ಲ. ಈ ಕಾರಣಕ್ಕಾಗಿಯೇ ಕಳೆದ ವಾರ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ(B.S.Yadiyurappa) ಅವರಿಗೆ ಪಕ್ಷದ ಅತ್ಯುನ್ನತ ನಿರ್ಣಯಗಳನ್ನು ಕೈಗೊಳ್ಳುವ ಪರಮಾಧಿಕಾರ ಹೊಂದಿರುವ ಕೇಂದ್ರ ಸಂಸದೀಯ ಮಂಡಳಿ ಸದಸ್ಯತ್ವ ಹಾಗೂ ಚುನಾವಣಾ ಸಮಿತಿ ಸದಸ್ಯತ್ವ ನೀಡುವ ಮೂಲಕ ವರ್ಚಸ್ಸು ಹೆಚ್ಚಿಸಿಕೊಳ್ಳುವ ಪ್ರಯತ್ನ ನಡೆಸಿತು. ಇಷ್ಟರಿಂದಲೇ ಪಕ್ಷದ ವರಿಷ್ಠರು ಸಮಾಧಾನಗೊಳ್ಳುವರೇ ಎಂಬುದನ್ನು ಕಾದು ನೋಡಬೇಕು.
ಜಾತಿ ಸಮೀಕರಣ ಉದ್ದೇಶದಿಂದ ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಗೆ ಬೇರೊಬ್ಬರನ್ನು ನೇಮಕ ಮಾಡುತ್ತಾರೆ ಎಂಬ ಸುದ್ದಿ ಬಿಜೆಪಿ(BJP) ಪಾಳೆಯದಿಂದ ಆಗಾಗ ಕೇಳಿಬರುತ್ತಲೇ ಇದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ(C.T.Ravi), ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ(Shobha Karandlaje), ಇಂಧನ ಸಚಿವ ವಿ.ಸುನೀಲ್‌ಕುಮಾರ್(V.Sunil Kumar), ಶಾಸಕ ಅರವಿಂದ್ ಲಿಂಬಾವಳಿ(Aravind Limbavali) ಮೊದಲಾದವರ ಹೆಸರುಗಳು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೇಳಿಬರುತ್ತಿವೆಯಾದರೂ ಈಗಿರುವ ಅಧ್ಯಕ್ಷರ ಬದಲಾವಣೆ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರಬೀಳುತ್ತಿಲ್ಲ.
ಮೊಟ್ಟೆ ಎಸೆತದಲ್ಲಿ ಡಿಕೆಶಿ ಕೈವಾಡ: ನಳಿನ್‌ಕುಮಾರ್ ಕಟೀಲ್ ಶಂಕೆ
ಈಗ ರಾಜ್ಯಾಧ್ಯಕ್ಷರನ್ನು ಬದಲಾಯಿಸಿದರೆ ಸಹಜವಾಗಿಯೇ ಎಲ್ಲ ಹಂತದ ಪದಾಧಿಕಾರಿಗಳನ್ನೂ ಬದಲಾಯಿಸಬೇಕಾಗುತ್ತದೆ. ಚುನಾವಣೆ ಸಮೀಪಿಸಿರುವುದರಿಂದ ಬಿಜೆಪಿ ವರಿಷ್ಠರು ಇದಕ್ಕೆ ಕೈಹಾಕುತ್ತಾರೆಯೇ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ.
