Asianet Suvarna News Asianet Suvarna News

ಜೂನ್‌ ಒಳಗೆ 8 ಲಕ್ಷ ಬಿಪಿಎಲ್‌ ಕಾರ್ಡ್‌: ಸಚಿವ ಉಮೇಶ್‌ ಕತ್ತಿ

ಬರುವ ಜೂನ್‌ ಒಳಗಾಗಿ ಬಾಕಿ ಇರುವ 4.25 ಲಕ್ಷ ಅರ್ಜಿ ಹಾಗೂ ಹೊಸದಾಗಿ ಅರ್ಜಿ ಸಲ್ಲಿಸಿರುವ ಸುಮಾರು 4 ಲಕ್ಷಕ್ಕೂ ಅಧಿಕ ಅರ್ಜಿಗಳಿಗೆ ಬಿಪಿಎಲ್‌ ಕಾರ್ಡ್‌ಗಳನ್ನು ವಿತರಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ್‌ ಕತ್ತಿ ಭರವಸೆ ನೀಡಿದ್ದಾರೆ.

will distribute 8 lakh bpl card by june says minister umesh katti gvd
Author
Bangalore, First Published Mar 29, 2022, 3:09 AM IST

ವಿಧಾನ ಪರಿಷತ್‌ (ಮಾ.29): ಬರುವ ಜೂನ್‌ ಒಳಗಾಗಿ ಬಾಕಿ ಇರುವ 4.25 ಲಕ್ಷ ಅರ್ಜಿ ಹಾಗೂ ಹೊಸದಾಗಿ ಅರ್ಜಿ ಸಲ್ಲಿಸಿರುವ ಸುಮಾರು 4 ಲಕ್ಷಕ್ಕೂ ಅಧಿಕ ಅರ್ಜಿಗಳಿಗೆ ಬಿಪಿಎಲ್‌ ಕಾರ್ಡ್‌ಗಳನ್ನು (BPL Card) ವಿತರಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ್‌ ಕತ್ತಿ (Umesh Katti) ಭರವಸೆ ನೀಡಿದ್ದಾರೆ. ಕಾಂಗ್ರೆಸ್‌ನ ಯು.ಬಿ. ವೆಂಕಟೇಶ್‌ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕೋವಿಡ್‌ ಲಾಕ್ಡೌನ್‌ ಅವಧಿಯಲ್ಲಿ ಹೊಸ ಪಡಿತರ ಚೀಟಿ ಕೋರಿ ಸಲ್ಲಿಸಿರುವ ಅರ್ಜಿಗಳ ಸ್ಥಳ ಪರಿಶೀಲನೆ ಕಾರ್ಯ ನಿಧಾನವಾಗಿದೆ ಮತ್ತು ಈ ಅವಧಿಯಲ್ಲಿ ಬಯೋಮೆಟ್ರಿಕ್‌ ಬಳಕೆಯನ್ನು ಹಿಂಪಡೆದ ಕಾರಣ ಪಡಿತರ ಚೀಟಿ (Ration Card) ವಿತರಣೆ ಕಾರ್ಯವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. 

ಈಗ ಪಡಿತರ ಚೀಟಿ ನೀಡುವ ಕಾರ್ಯ ಆರಂಭವಾಗಿದ್ದು, ಅರ್ಜಿಗಳ ಹಿರಿತನದ ಮೇಲೆ ನೀಡಲಾಗುತ್ತಿದೆ ಎಂದರು. ಈ ಮಧ್ಯ ಬಿಪಿಎಲ್‌ ಕಾರ್ಡ್‌ ಹೊಂದಿದ್ದ ಆದಾಯ ತೆರಿಗೆ ಪಾವತಿದಾರರು, ಸರ್ಕಾರಿ ನೌಕರರು ಮುಂತಾದವರನ್ನು ಪತ್ತೆ ಹಚ್ಚಿ ಸುಮಾರು 3 ಲಕ್ಷ ಪಡಿತರ ಚೀಟಿಯನ್ನು ರದ್ದು ಮಾಡಲಾಗಿದೆ ಎಂದರು. ಈಗಾಗಲೇ ಪರಿಶೀಲನೆ ಮಾಡಿದ ಅರ್ಜಿಗಳಿಗೆ ಒಂದು ತಿಂಗಳೊಳಗೆ ಪಡಿತರ ಚೀಟಿ ನೀಡಲಾಗುವುದು, ಉಳಿದವುಗಳಿಗೆ ಜೂನ್‌ ಒಳಗೆ ವಿತರಿಸಲಾಗುವುದು ಎಂದು ಸಚಿವರು ಹೇಳಿದರು.

Chikkodi: ಆಹಾರ ಸಚಿವ ಉಮೇಶ್ ಕತ್ತಿ ತವರಲ್ಲೇ ಊಟಕ್ಕಾಗಿ ಮಕ್ಕಳ ಪರದಾಟ!

ರಾಜ್ಯದಲ್ಲಿ ಮನೆಮನೆಗೆ ಪಡಿತರ ವಿತರಣೆ ಇಲ್ಲ: ಮನೆ ಮನೆಗೆ ಪಡಿತರ ಒದಗಿಸುವ ತನ್ನ ಮಹತ್ವಾಕಾಂಕ್ಷಿ ಯೋಜನೆಯಿಂದ ರಾಜ್ಯ ಸರ್ಕಾರ ಹಿಂದೆ ಸರಿದಿದೆ. ಈ ಯೋಜನೆ ಕೈಬಿಡಲಾಗಿದೆ ಎಂದು ಆಹಾರ ಮತ್ತು ಅರಣ್ಯ ಖಾತೆ ಸಚಿವ ಉಮೇಶ ಕತ್ತಿ ತಿಳಿಸಿದ್ದಾರೆ. ಹುಕ್ಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಂಧ್ರಪ್ರದೇಶ ಹಾಗೂ ತಮಿಳುನಾಡಿನಲ್ಲಿ  ಮನೆಮನೆಗೆ ಪಡಿತರ ತಲುಪಿಸುವ ಯೋಜನೆ ಯಶಸ್ವಿಯಾಗದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಈ ಯೋಜನೆ ಕೈಬಿಡಲಾಗಿದೆ ಎಂದು ಹೇಳಿದರು.

ಈಗಿರುವ ಪಡಿತರ ಅಂಗಡಿಗಳ ಮೂಲಕವೇ ರೇಷನ್‌ ವಿತರಿಸಲಾಗುತ್ತದೆ. ಬಡ ಕುಟುಂಬಗಳಿಗೆ ಏ.1ರಿಂದ ಪೊರ್ಟಿಫೈಡ್‌ ರೈಸ್‌ ವಿತರಣೆ ಮಾಡಲಾಗುವುದು ಎಂದೂ ಕತ್ತಿ ತಿಳಿಸಿದರು. ರಾಜ್ಯದಲ್ಲಿ ಶೀಘ್ರ ಪಡಿತರ ಸೇರಿದಂತೆ ಅನೇಕ ಸವಲತ್ತುಗಳನ್ನು ಫಲಾನುಭವಿಗಳ ಮನೆ ಬಾಗಿಲಿಗೇ ತಲುಪಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಇತ್ತೀಚೆಗೆ ಘೋಷಿಸಿದ್ದರು. ಆದರೆ ಈ ಯೋಜನೆ ಕೈಬಿಡಲಾಗಿದೆ ಎಂದು ಸಚಿವ ಉಮೇಶ್‌ ಈಗ ಕತ್ತಿ ತಿಳಿಸಿದ್ದಾರೆ.

ಬಿಇಡಿ ಕಾಲೇಜು ಶಿಕ್ಷಣ ವ್ಯವಸ್ಥೆ ಮರು ರಚನೆಗೆ ಚಿಂತನೆ: ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟುಬದಲಾವಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಿಇಡಿ ಕಾಲೇಜುಗಳ ಶಿಕ್ಷಣ ವ್ಯವಸ್ಥೆಯ ಮರು ರಚನೆಗೆ ಸರ್ಕಾರ ಚಿಂತನೆ ಮಾಡುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥ ನಾರಾಯಣ ತಿಳಿಸಿದ್ದಾರೆ. ಜೆಡಿಎಸ್‌ ಸದಸ್ಯ ಎಸ್‌.ಎಲ್‌. ಭೋಜೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಗುಣಮಟ್ಟದ ಶಿಕ್ಷಣ ನೀಡಲು ಇತ್ತೀಚಿನ ದಿನಗಳಲ್ಲಿ ಅನೇಕ ಬದಲಾವಣೆ ಮಾಡಲಾಗಿದೆ. ಹೀಗಿರುವಾಗ ಅದಕ್ಕೆ ತಕ್ಕಂತೆ ಬಿಇಡಿ ಶಿಕ್ಷಣವನ್ನು ಇನ್ನಷ್ಟುಉನ್ನತ ಮಟ್ಟಕ್ಕೆ ಏರಿಸಲು, ಬಿಇಡಿ ಶಿಕ್ಷಣವನ್ನು ಮರು ರಚನೆ ಮಾಡುವುದು ಅಗತ್ಯವಾಗಿದೆ ಎಂದರು.

ರಾಜ್ಯದಲ್ಲಿ ಮನೆಮನೆಗೆ ಪಡಿತರ ವಿತರಣೆ: ಸಚಿವ ಉಮೇಶ್‌ ಕತ್ತಿ ಹೇಳಿದ್ದಿಷ್ಟು

ರಾಜ್ಯದಲ್ಲಿ ಒಟ್ಟು 54 ಅನುದಾನಿತ ಬಿಇಡಿ, 6 ಸರ್ಕಾರಿ ಬಿಇಡಿ ಕಾಲೇಜುಗಳಿದ್ದು, ಅನುದಾನಿತ ಬಿಇಡಿ ಕಾಲೇಜುಗಳಲ್ಲಿ ಒಟ್ಟು 236 ಬೋಧಕರ ಹುದ್ದೆ, ಸರ್ಕಾರಿ ಬಿಇಡಿ ಕಾಲೇಜುಗಳಲ್ಲಿ 33 ಉಪನ್ಯಾಸಕ ಹುದ್ದೆಗಳು ಖಾಲಿ ಇವೆ. ಕೋವಿಡ್‌ ಕಾರಣದಿಂದ ಅನುದಾನಿತ ಹುದ್ದೆಗಳ ಭರ್ತಿಗೆ ನಿರ್ಬಂಧವಿದ್ದ ಕಾರಣ ಭರ್ತಿ ಮಾಡಲು ಸಾಧ್ಯವಾಗಿರುವುದಿಲ್ಲ. ಈ ಸಂಬಂಧ ಆಡಳಿತ ಮಂಡಳಿಗಳಿಂದ ಸ್ವೀಕೃತವಾಗುವ ಪ್ರಸ್ತಾವನೆಗಳನ್ನು ಪರಿಶೀಲಿಸಿ ಆಯುಕ್ತಾಲಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದಲ್ಲಿ, ಹುದ್ದೆಗಳ ಭರ್ತಿಗೆ ನಿಯಮಾನುಸರ ಕ್ರಮ ವಹಿಸಲಾಗುವುದು, ಸರ್ಕಾರಿ ಬಿಇಡಿ ಕಾಲೇಜುಗಳಲ್ಲಿ ಖಾಲಿ ಇರುವ ಉಪನ್ಯಾಸಕರ ಹುದ್ದೆಗಳನ್ನು ಕಾಲ ಕಾಲಕ್ಕೆ ಭರ್ತಿ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

Follow Us:
Download App:
  • android
  • ios