ಬೆಂಗಳೂರು[ಮಾ.17]: ಕಾಂಗ್ರೆಸ್‌ ಪಕ್ಷವನ್ನು ‘ಮಾಸ್‌ ಬೇಸ್‌’ ಮಾಡುವುದಕ್ಕಿಂತ ‘ಕೇಡರ್‌ ಬೇಸ್‌’ ಪಕ್ಷವನ್ನಾಗಿ ಮಾಡುತ್ತೇನೆ. ಜಾತಿ-ನೀತಿಗಿಂತ ಎಲ್ಲ ಸಮುದಾಯಗಳಿಗೂ ಮೊದಲ ಆದ್ಯತೆ ನೀಡಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಕಾಂಗ್ರೆಸ್‌ ಭವನದಲ್ಲಿ ಸೋಮವಾರ ವಿಶೇಷ ಪೂಜೆ ಸಲ್ಲಿಸಿ ಕಾರ್ಯಾಧ್ಯಕ್ಷರ ಜತೆ ಸಭೆ ನಡೆಸಿದ ಅವರು, ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಹೈಕಮಾಂಡ್‌ ನಮಗೆ ಅಧ್ಯಕ್ಷ, ಕಾರ್ಯಾಧ್ಯಕ್ಷ ಹುದ್ದೆಗಳನ್ನು ಅಧಿಕಾರಕ್ಕಾಗಿ ನೀಡಿಲ್ಲ. ಪಕ್ಷ ಬಲಪಡಿಸುವುದಕ್ಕಾಗಿ ನೀಡಿರುವ ಜವಾಬ್ದಾರಿಯನ್ನು ಸಂಘಟನಾತ್ಮಕವಾಗಿ ಮಾಡುವ ಮೂಲಕ ಕಾಂಗ್ರೆಸ್‌ನಲ್ಲಿ ಹೊಸ ಅಧ್ಯಾಯ ಬರೆಯಲಿದ್ದೇವೆ. ನನಗೆ ಅಧ್ಯಕ್ಷನಾಗಬೇಕೆಂಬ ಆಸೆ ಇರಲಿಲ್ಲ. ಕಾರ್ಯಕರ್ತರು ಹಾಗೂ ಮುಖಂಡರ ಅಭಿಪ್ರಾಯ ತಿಳಿದು ಹೈಕಮಾಂಡ್‌ ಅವಕಾಶ ಕೊಟ್ಟಿದೆ. ಕಾರ್ಯಾಧ್ಯಕ್ಷರ ಜತೆ ಸೇರಿ ಪಕ್ಷ ಸಂಘಟಿಸುತ್ತೇನೆ. ಇದಕ್ಕೆ ಪಕ್ಷದ ಹಿರಿಯ ನಾಯಕರು ಹಾಗೂ ಕಾರ್ಯಕರ್ತರು ಸಹ ತಮ್ಮ ಜವಾಬ್ದಾರಿ ನಿಭಾಯಿಸಬೇಕಿದೆ ಎಂದು ಸಹಕಾರ ಕೋರಿದರು.

ಪಕ್ಷದ ಕಾರ್ಯಕರ್ತರ ಹುರುಪನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾದರೆ ಎಷ್ಟುಜನ ಇದ್ದಾರೆ ಎಂಬ ಕ್ವಾಂಟಿಟಿ ಮುಖ್ಯವಲ್ಲ. ಒಗ್ಗಟ್ಟಾಗಿ ಕೆಲಸ ಮಾಡುವ ಕ್ವಾಲಿಟಿ ಮುಖ್ಯ. ಇದಕ್ಕಾಗಿ ಎಲ್ಲ ಸಮುದಾಯಗಳಿಗೂ ಆದ್ಯತೆ ನೀಡಲಾಗುತ್ತದೆ. ಮಾಸ್‌ ಬೇಸ್‌ ಪಾರ್ಟಿಗಿಂತ ಕೇಡರ್‌ ಬೇಸ್‌ ಪಾರ್ಟಿ ಕಟ್ಟಿಶಿಸ್ತಿನ ಪಕ್ಷವನ್ನಾಗಿ ಮಾಡುತ್ತೇವೆ. ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವ ಮೂಲಕ ಜನರ ಭಾವನೆಗೆ ತಕ್ಕಂತೆ ಅಭಿವೃದ್ಧಿಶೀಲ ರಾಷ್ಟ್ರ ನಿರ್ಮಾಣ ಮಾಡಲು ಸಿದ್ಧತೆ ಮಾಡಲಿದ್ದೇವೆ ಎಂದು ಹೇಳಿದರು.

ಪಕ್ಷದಲ್ಲಿ ರೇಸೂ ಇಲ್ಲ, ಭಿನ್ನಾಭಿಪ್ರಾಯವೂ ಇಲ್ಲ. ಎಲ್ಲರೂ ನನ್ನ ಹೆಸರನ್ನು ಶಿಫಾರಸು ಮಾಡಿರುವುದರಿಂದಲೇ ಹೈಕಮಾಂಡ್‌ ಅವಕಾಶ ನೀಡಿದೆ. ಆದರೂ ಮಾಧ್ಯಮದವರಿಗೆ ಮಸಾಲೆ ಬೇಕಿದ್ದರಿಂದ ತಮಗೆ ಬೇಕಿದ್ದ ಹಾಗೆ ಸುದ್ದಿ ಪ್ರಸಾರ ಮಾಡಿದರು. ಸೂಕ್ತ ಸಮಯದಲ್ಲಿ ಇದಕ್ಕೆ ಉತ್ತರ ನೀಡುವ ಮೂಲಕ ಎಲ್ಲ ಗಾಳಿ ಸುದ್ದಿಗಳಿಗೆ ತೆರೆ ಎಳೆದಿದ್ದೇವೆ ಎಂದರು.

ಗಾಂಧಿ ಕುಟುಂಬದ ತ್ಯಾಗದಿಂದ ದೇಶ ರಕ್ಷಣೆ:

ರಾಷ್ಟ್ರ ಮಟ್ಟದಲ್ಲಿ ಜನರು ಬಿಜೆಪಿಗೆ ಅಧಿಕಾರ ನೀಡಿದ್ದರು. ಪಾಪ ಬಿಜೆಪಿಯವರು ದೇಶದ ಒಂದೊಂದೇ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಳ್ಳುತ್ತಿದ್ದಾರೆ. ಕಾಂಗ್ರೆಸ್‌ ಮುಕ್ತ ದೇಶ ಮಾಡುತ್ತೇವೆಂಬ ಬಿಜೆಪಿ ಕನಸು ಈಡೇರುವುದಿಲ್ಲ. ಗಾಂಧಿ ಕುಟುಂಬ ನಾಶವಾಗುವುದಿಲ್ಲ. ಗಾಂಧಿ ಕುಟುಂಬ ತ್ಯಾಗ ಮಾಡಿಯೇ ದೇಶವನ್ನು ಉಳಿಸುತ್ತಿದೆ ಎಂಬುದನ್ನು ಬಿಜೆಪಿಯವರು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಟಾಂಗ್‌ ನೀಡಿದರು.

ಅಧಿವೇಶನದ ಬಳಿಕ ಹೈಕಮಾಂಡ್‌ ಭೇಟಿ:

ವಿಧಾನಮಂಡಲ ಹಾಗೂ ಸಂಸತ್‌ ಅಧಿವೇಶನ ಮುಗಿದ ಬಳಿಕ ಕಾಂಗ್ರೆಸ್‌ ಹೈಕಮಾಂಡನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಲಿದ್ದೇನೆ. ನಾನು, ಕಾರ್ಯಾಧ್ಯಕ್ಷರು ಹಾಗೂ ಹಿರಿಯ ನಾಯಕರನ್ನು ಒಳಗೊಂಡ ಹತ್ತು ಜನರ ನಿಯೋಗ ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಲಿದೆ ಎಂದು ಹೇಳಿದರು.

ಜಂಟಿ ಸುದ್ದಿಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷರಾದ ಈಶ್ವರ್‌ ಖಂಡ್ರೆ, ಸಲೀಂ ಅಹ್ಮದ್‌ ಹಾಗೂ ಸತೀಶ್‌ ಜಾರಕಿಹೊಳಿ ಉಪಸ್ಥಿತರಿದ್ದರು.

ಎಂ.ಬಿ.ಪಾಟೀಲ್‌ ಭೇಟಿ ಮಾಡಿದ ಡಿಕೆಶಿ

ಕೆಪಿಸಿಸಿ ಅಧ್ಯಕ್ಷರಾಗಿ ನೇಮಕವಾದ ಬಳಿಕ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದಕ್ಕಾಗಿ ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡುತ್ತಿರುವ ಡಿ.ಕೆ. ಶಿವಕುಮಾರ್‌, ಸೋಮವಾರ ಹಿರಿಯ ನಾಯಕ ಎಂ.ಬಿ. ಪಾಟೀಲ್‌ ಅವರನ್ನು ಭೇಟಿ ಮಾಡಿ ಉಭಯ ಕುಶಲೋಪರಿ ನಡೆಸಿ ಸಹಕಾರ ಕೋರಿದರು. ಭೇಟಿ ಬಳಿಕ ಮಾತನಾಡಿದ ಎಂ.ಬಿ.ಪಾಟೀಲ್‌, ಪಕ್ಷದ ಅಧ್ಯಕ್ಷರಾಗಿ ಹಿರಿಯ ನಾಯಕರನ್ನು ಭೇಟಿ ಮಾಡುತ್ತಿರುವ ರೀತಿಯಲ್ಲಿ ಸೌಹಾರ್ದ ಭೇಟಿ ಮಾಡಿದ್ದಾರೆ. ಈ ಬೆಳವಣಿಗೆಯಿಂದ ಪಕ್ಷದ ಕಾರ್ಯಕರ್ತರಿಗೆ ಹೊಸ ಸಂದೇಶ ರವಾನೆಯಾಗಲಿದೆ. ಪಕ್ಷವನ್ನು ಬಲಪಡಿಸುವುದಕ್ಕಾಗಿ ಡಿಕೆಶಿ ಅವರಿಗೆ ಸಂಪೂರ್ಣ ಸಹಕಾರ ನೀಡಲಾಗುತ್ತದೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಪಕ್ಷ ಮತ್ತೆ ಅಧಿಕಾರಕ್ಕೆ ಬರಬೇಕಾದರೆ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಬೇಕಿದೆ. ಗುಂಪುಗಾರಿಕೆ, ಭಿನ್ನಾಭಿಪ್ರಾಯಗಳಿವೆ ಎಂಬ ಕಟ್ಟುಕತೆಗಳಿಗೆ ಈಗಾಗಲೇ ಇತಿಶ್ರೀ ಹಾಡಲಾಗಿದೆ. ಎಲ್ಲ ನಾಯಕರನ್ನು ಭೇಟಿ ಮಾಡಿದರೆ ವಾತಾವರಣ ತಿಳಿಯಾಗಲಿದೆ. ಉತ್ತರ ಕರ್ನಾಟಕ ಭಾಗದಲ್ಲಿರುವ ಜನನಾಯಕರು ಸೇರಿ ಪಕ್ಷಕ್ಕೆ ಶಕ್ತಿ ತುಂಬಲಿದ್ದೇವೆ ಎಂದು ಹೇಳಿದರು.