ಬೆಂಗಳೂರು, (ಜ.12): ದೆಹಲಿಯ ರಾಮ್ ಲೀಲಾ ಮೈದಾನದಲ್ಲಿ ನಡೆಯುತ್ತಿರುವ ಬಿಜೆಪಿ ಕೌನ್ಸಿಲ್ ಸಭೆಯಲ್ಲಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ಕರ್ನಾಟಕ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪರ ಅನುಕಂಪದ ಮಾತುಗಳನ್ನಾಡಿದ್ದಾರೆ.

ತಮ್ಮ ಭಾಷಣದಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ , ಕಾಂಗ್ರೆಸ್ ಪಕ್ಷದೊಂದಿಗೆ ಸೇರಿ ಸಮ್ಮಿಶ್ರ ಸರ್ಕಾರ ನಡೆಸುತ್ತಿರುವ ಜೆಡಿಎಸ್ ನ ಕುಮಾರಸ್ವಾಮಿ ನಿಜವಾಗಲೂ ಕಷ್ಟ ಅನುಭವಿಸುತ್ತಿದ್ದಾರೆ ಎಂದು ಕನಿಕರದ ಮಾತುಗಳನ್ನಾಡಿದ್ದಾರೆ.

ಕುಮಾರಣ್ಣ ಸಿಎಂ? ಅಥವಾ ಕ್ಲರ್ಕ್?: ಮೋದಿ ಲೇವಡಿ!

ಕುಮಾರಸ್ವಾಮಿ ಕರ್ನಾಟಕದ ಮುಖ್ಯಮಂತ್ರಿಯೋ ಅಥವಾ ಕ್ಲರ್ಕ್ ಎಂಬುದು ಗೊತ್ತಾಗುತ್ತಿಲ್ಲ ಎನ್ನುವ ಮೋದಿಯ ಈ ಅನುಕಂಪ ಮಾತುಗಳು ಇದೀಗ ರಾಜ್ಯ ರಾಜಕಾರಣದಲ್ಲಿ ಹೊಸ ವಿಶ್ಲೇಷಣೆಗೆ ದಾರಿ ಮಾಡಿಕೊಟ್ಟಿದೆ.

ಬಹಿರಂಗವಾಗಿಯೇ ಕುಮಾರಸ್ವಾಮಿ ಪರ ಬ್ಯಾಟಿಂಗ್​ ಮಾಡಿರುವ ಮೋದಿ, ಕಾಂಗ್ರೆಸ್​​ ಅಧಿಕಾರ ಮುಕ್ತಗೊಳಿಸಲು ಜೆಡಿಎಸ್​​ಗೆ ಪರೋಕ್ಷವಾಗಿ ಆಹ್ವಾನ ನೀಡಿದ್ರಾ ಎನ್ನುವ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಕಾಂಗ್ರೆಸ್ ನಿಂದಾಗಿ ಕಿರುಕುಳ ಅನುಭವಿಸುತ್ತಿರುವ ಕುಮಾರಸ್ವಾಮಿ ಮುಂದಿನ ದಿನಗಳಲ್ಲಿ ಬಿಜೆಪಿಗೆ ಸಾಥ್ ನೀಡಲಿದ್ದಾರೆ ಎನ್ನುವ ಮಾತುಗಳು ಈಗಾಗಲೇ ರಾಜ್ಯ ರಾಜಕಾರಣ ಪಡಸಾಲೆಗಳಲ್ಲಿ ಹರಿದಾಡುತ್ತಿದೆ.

ಇದಕ್ಕೆ ಪೂರಕವೆಂಬಂತೆ ಮೋದಿ ಅವರು ಕುಮಾರಸ್ವಾಮಿ ಪರ ಮಾತುಗಳನ್ನಾಡಿದ್ದು, ಮುಂಬರುವ ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಜೆಡಿಎಸ್ ಪರ ಮಿತ್ರತ್ವ ಬೆಳೆಸಲು ಮುಂದಾದ್ರಾ ಎನ್ನುವ ಕುತೂಹಲ ಮೂಡಿಸಿದೆ.

ನಿಮ್ಮನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತೇವೆ. ಕಾಂಗ್ರೆಸ್​ ಮೈತ್ರಿ ಮುರಿದುಕೊಂಡು ಹೊರಬನ್ನಿ ಅನ್ನೋ ಸಂದೇಶ ಕೊಟ್ರಾ? ಎನ್ನುವ ಪ್ರಶ್ನೆಗಳು ರಾಜಕಾರಣದಲ್ಲಿ ಉದ್ಭವಿಸಿವೆ.