Karnataka Assembly Elections 2023: ಸಿದ್ದುಗೆ ಕೋಲಾರ ಟಿಕೆಟ್‌ ನಿರಾಕರಿಸಿದ್ದು ಏಕೆ?

2 ಕ್ಷೇತ್ರಕ್ಕೆ ಕಟ್ಟಿ ಹಾಕುವ ವಿಪಕ್ಷಗಳ ತಂತ್ರ ವಿಫಲಕ್ಕೆ ಹೈಕಮಾಂಡ್‌ ಪ್ರತಿತಂತ್ರ, ಕುನುಗೋಲು ವರದಿ ಆಧರಿಸಿ ವರುಣ ಕ್ಷೇತ್ರಕ್ಕೆ ಸಿದ್ದು ಸೀಮಿತ. 

Why Kolar Ticket Denied to Siddaramaiah grg

ಎಸ್‌.ಗಿರೀಶ್‌ ಬಾಬು

ಬೆಂಗಳೂರು(ಏ.16):  ಕೋಲಾರದಿಂದ ಸ್ಪರ್ಧಿಸುವ ತೀವ್ರ ಬಯಕೆ ಹೊಂದಿದ್ದ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್‌ ಹೈಕಮಾಂಡ್‌ ಟಿಕೆಟ್‌ ನಿರಾಕರಿಸಿರುವುದು ಕಾಂಗ್ರೆಸ್‌ ವಲಯದಲ್ಲಿ ಹಲವು ವ್ಯಾಖ್ಯಾನಗಳಿಗೆ ಕಾರಣವಾಗಿದೆ. ಇದು ಸಿದ್ದರಾಮಯ್ಯ ಅವರಿಗೆ ಹಿನ್ನಡೆ ಎಂದು ಅವರ ವಿರೋಧಿ ಬಣ ವಾದಿಸಿದರೆ, ಕೃತಕ ಪೈಪೋಟಿ ಹುಟ್ಟುಹಾಕಿ ರಾಜ್ಯಾದ್ಯಂತ ಪ್ರಚಾರಕ್ಕೆ ಲಭ್ಯರಾಗದಂತೆ ಅವರನ್ನು ಕ್ಷೇತ್ರದಲ್ಲಿ ಕಟ್ಟಿಹಾಕುವ ಪ್ರತಿಪಕ್ಷಗಳ ಕಾರ್ಯತಂತ್ರ ವಿಫಲಗೊಳಿಸಲು ಹೈಕಮಾಂಡ್‌ ತೋರಿದ ಜಾಣ ನಡೆ ಎಂದು ಆಪ್ತ ಪಡೆ ಬಣ್ಣಿಸುತ್ತಿದೆ.

ವಾಸ್ತವವಾಗಿ ಕಾಂಗ್ರೆಸ್‌ ಹೈಕಮಾಂಡ್‌ ರಾಜ್ಯದಲ್ಲಿ ಚುನಾವಣಾ ತಂತ್ರಗಾರಿಕೆಗಾಗಿ ನೇಮಕ ಮಾಡಿಕೊಂಡಿದ್ದ ಸುನೀಲ್‌ ಕುನಗೋಲು ತಂಡದಿಂದ ಕೋಲಾರದ ಸ್ಥಿತಿ ಬಗ್ಗೆ ವರದಿ ಪಡೆದಿತ್ತು. ಈ ತಂಡವು ಸಿದ್ದರಾಮಯ್ಯ ಭಾವಿಸಿದಂತೆ ಕೋಲಾರ ಸುಲಭದ ತುತ್ತಲ್ಲ. ಅಲ್ಲಿ ಅವರು ಗೆಲ್ಲಬೇಕಾದರೆ ಕ್ಷೇತ್ರದಲ್ಲಿ ಹಲವು ದಿನಗಳ ಕಾಲ ನೆಲೆ ನಿಂತು ಪ್ರಚಾರ ನಡೆಸಬೇಕಾಗುತ್ತದೆ ಎಂಬ ವರದಿ ನೀಡಿತ್ತು. ಇದು ಕೋಲಾರ ವಿಚಾರದಲ್ಲಿ ಹೈಕಮಾಂಡ್‌ ಮಧ್ಯಪ್ರವೇಶಿಸುವಂತೆ ಮಾಡಲು ಮುಖ್ಯ ಕಾರಣ.

ಸಿದ್ದು-ಡಿಕೆಶಿ ಕಟ್ಟಿ ಹಾಕಲು ಕಮಲಾಧಿಪತಿಗಳ ಮೆಗಾ ಪ್ಲಾನ್! ಬಿಜೆಪಿಗೆ ಬ್ರಹ್ಮಾಸ್ತ್ರ ಸಿದ್ಧಪಡಿಸಿದ ಕಾಂಗ್ರೆಸ್!

ಇದರ ಜತೆಗೆ, ರಾಜ್ಯ ನಾಯಕರು ಸಹ ಸಿದ್ದರಾಮಯ್ಯ ಸವಾಲುಗಳಿರುವ ಕ್ಷೇತ್ರದ ಬದಲಾಗಿ ಸುರಕ್ಷಿತ ಕ್ಷೇತ್ರದಿಂದ ಸ್ಪರ್ಧಿಸಿದರೆ ಕಾಂಗ್ರೆಸ್‌ ಪಕ್ಷದ ಒಟ್ಟಾರೆ ಹಿತಕ್ಕೆ ಪೂರಕ ಎಂದು ಅಭಿಪ್ರಾಯ ಮಂಡಿಸಿದ್ದರು. ಹೀಗಾಗಿ ರಾಹುಲ್‌ ಗಾಂಧಿ ನೇರವಾಗಿ ಸಿದ್ದರಾಮಯ್ಯ ಜೊತೆ ಮಾತನಾಡಿ ಕೋಲಾರ ಬಗ್ಗೆ ಮರು ಚಿಂತನೆ ನಡೆಸುವಂತೆ ಹೇಳಿದರು. ಹೀಗಾಗಿ, ಕೋಲಾರ ಹೊರತಾದ ಕ್ಷೇತ್ರದಲ್ಲೂ ಸ್ಪರ್ಧಿಸುವ ಚಿಂತನೆ ಸಿದ್ದರಾಮಯ್ಯ ಆರಂಭಿಸಿದರು. ಆಗ ಸೂಕ್ತವಾಗಿ ಕಂಡಿದ್ದೇ ತಮ್ಮ ಪುತ್ರ ಡಾ.ಯತೀಂದ್ರ ಶಾಸಕರಾಗಿರುವ ವರುಣ ಕ್ಷೇತ್ರ.

ಆದರೆ, ಮಗನ ರಾಜಕೀಯ ಭವಿಷ್ಯ ಕಾಪಾಡಲು ಅವರು ವರುಣದಲ್ಲಿ ಸ್ಪರ್ಧಿಸಲು ಹಿಂಜರಿದರು. ಈ ವೇಳೆ, ವರುಣದ ಜೊತೆ ಕೋಲಾರದಲ್ಲೂ ಸ್ಪರ್ಧಿಸಿ, ಎರಡರಲ್ಲೂ ಗೆದ್ದರೆ ವರುಣ ಕ್ಷೇತ್ರವನ್ನು ಮಗನಿಗೆ ಬಿಟ್ಟುಕೊಡಿ ಎಂದು ಕೆಲ ಆಪ್ತರು ಹೇಳಿದ್ದು ಸಿದ್ದುಗೆ ಹೌದೆನ್ನಿಸಿತು. ಆದರೆ, ಈ ಕಾರ್ಯತಂತ್ರ ಕಾಂಗ್ರೆಸ್‌ನ ಇತರ ಬಹುತೇಕ ನಾಯಕರಿಗೆ ರುಚಿಸಲಿಲ್ಲ. ಹಿಂದೆ ಸಿದ್ದು ಮುಖ್ಯಮಂತ್ರಿಯಾಗಿದ್ದಾಗ ಚಾಮುಂಡೇಶ್ವರಿ ಮತ್ತು ಬಾದಾಮಿ ಎರಡೂ ಕಡೆ ಸ್ಪರ್ಧಿಸಿದ್ದರು. ಈಗಲೂ ಎರಡು ಕಡೆ ಸ್ಪರ್ಧಿಸಿದರೆ ಮುಂದಿನ ಮುಖ್ಯಮಂತ್ರಿ ಎಂಬ ಸಂದೇಶ ರವಾನೆಯಾಗಬಹುದು ಎಂಬ ಚಿಂತೆ ಬೇರೆ ನಾಯಕರನ್ನು ಕಾಡಿತ್ತು. ಇದೇ ವೇಳೆ, ಡಾ.ಜಿ.ಪರಮೇಶ್ವರ್‌, ಡಿ.ಕೆ.ಶಿವಕುಮಾರ್‌ ಅವರ ಬೆಂಬಲಿಗರೂ ತಮ್ಮ ನಾಯಕರು ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಲಿ ಎನ್ನತೊಡಗಿದರು.

ಎರಡೂ ಪಕ್ಷಗಳಿಂದ ನನ್ನ ಮುಗಿಸಲು ಯತ್ನ: ನಾನು ಮಾಡಿದ ತಪ್ಪೇನು?

ಮೂಲಗಳ ಪ್ರಕಾರ ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್‌, ಪರಮೇಶ್ವರ್‌, ಬಿ.ಕೆ.ಹರಿಪ್ರಸಾದ್‌ ಸೇರಿದಂತೆ ಬಹುತೇಕ ಎಲ್ಲ ನಾಯಕರು ಸಿದ್ದರಾಮಯ್ಯಗೆ 2 ಕ್ಷೇತ್ರದಲ್ಲಿ ಅವಕಾಶ ನೀಡುವುದನ್ನು ವಿರೋಧಿಸಿದ್ದರು. ಅದರ ಜೊತೆಗೆ, 2 ಕ್ಷೇತ್ರದಲ್ಲಿ ಸ್ಪರ್ಧೆಗೆ ಅವಕಾಶ ನೀಡಿದರೆ ಸಿದ್ದರಾಮಯ್ಯ ರಾಜ್ಯಾದ್ಯಂತ ಪ್ರಚಾರಕ್ಕೆ ಸಿಗುವುದಿಲ್ಲ ಎಂಬ ಆತಂಕ ಹೈಕಮಾಂಡನ್ನು ಕಾಡಿತ್ತು. ಹೀಗಾಗಿಯೇ ಅವರ ಕೋಲಾರ ಸ್ಪರ್ಧೆಯನ್ನು ತುಸು ನಿಷ್ಠುರವಾಗಿಯೇ ಹೈಕಮಾಂಡ್‌ ಹತ್ತಿಕ್ಕಿದೆ.
ಇದು ಮೇಲುನೋಟಕ್ಕೆ ಅವರಿಗೆ ಹಿನ್ನಡೆ ಹಾಗೂ 2 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಮೂಲಕ ಮುಂದಿನ ಮುಖ್ಯಮಂತ್ರಿ ಹುದ್ದೆಗೆ ತಾವೇ ಅಗ್ರ ದಾವೆದಾರ ಎಂಬ ಪ್ರತಿಪಾದನೆ ತಡೆಗಟ್ಟುವಲ್ಲಿ ಪಕ್ಷದ ಇತರ ನಾಯಕರಿಗೆ ದೊರೆತ ಗೆಲುವು ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ಆದರೆ, ಬಂಡಾಯ ಸ್ವಭಾವದ ಸಿದ್ದು ಕೋಲಾರ ಬಯಕೆ ಕೈಬಿಟ್ಟು ಹೈಕಮಾಂಡ್‌ ಆದೇಶ ಪಾಲಿಸಿದ್ದಾರೆ. ಇದು ಪಕ್ಷ ಸ್ವ ಸಾಮರ್ಥ್ಯದಿಂದ ಅಧಿಕಾರಕ್ಕೆ ಬಂದಲ್ಲಿ ಸಿದ್ದರಾಮಯ್ಯ ಅವರ ಸಿಎಂ ಹುದ್ದೆ ಪ್ರತಿಪಾದನೆಯನ್ನು ಹೈಕಮಾಂಡ್‌ ಮೃದುವಾಗಿ ಪರಿಗಣಿಸುವಂತೆ ಮಾಡುತ್ತದೆ ಎಂಬುದು ಸಿದ್ದು ಆಪ್ತರ ವ್ಯಾಖ್ಯಾನ.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

Latest Videos
Follow Us:
Download App:
  • android
  • ios