ಕರ್ನಾಟಕದ ತೆರಿಗೆ ಪಾಲನ್ನು ದೇವೇಗೌಡರೇಕೆ ಪ್ರಶ್ನಿಸುತ್ತಿಲ್ಲ: ಸಿದ್ದರಾಮಯ್ಯ
ರೈತರ ನಾಯಕ ಎಂದು ಹೇಳಿಕೊಳ್ಳುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮೊಮ್ಮಗ ಸಂಸದ ಪ್ರಜ್ವಲ್ ರೇವಣ್ಣ ಈವರೆಗೂ ಇದರ ಬಗ್ಗೆ ಚಕಾರವೆತ್ತದೆ ಮೌನವಾಗಿದ್ದಾರೆ. ಇಂತಹವರನ್ನು ಮತ್ತೆ ಲೋಕಸಭೆಗೆ ಆಯ್ಕೆ ಮಾಡುವ ಬಗ್ಗೆ ಮತದಾರರು ಚಿಂತನೆ ಮಾಡಬೇಕಿದೆ ಎಂದ ಸಿಎಂ ಸಿದ್ದರಾಮಯ್ಯ
ಬೇಲೂರು(ಏ.20): ಕರ್ನಾಟಕದ 223 ತಾಲೂಕಿನಲ್ಲಿ ಬರಗಾಲವಿದೆ ಎಂದು ರಾಜ್ಯ ಸರ್ಕಾರ ಆದೇಶ ಮಾಡಿ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರೂ ಈವರೆಗೆ ಒಂದು ನಯಾಪೈಸೆ ಅನುದಾನ ನೀಡಿಲ್ಲ. ರೈತರ ನಾಯಕ ಎಂದು ಹೇಳಿಕೊಳ್ಳುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮೊಮ್ಮಗ ಸಂಸದ ಪ್ರಜ್ವಲ್ ರೇವಣ್ಣ ಈವರೆಗೂ ಇದರ ಬಗ್ಗೆ ಚಕಾರವೆತ್ತದೆ ಮೌನವಾಗಿದ್ದಾರೆ. ಇಂತಹವರನ್ನು ಮತ್ತೆ ಲೋಕಸಭೆಗೆ ಆಯ್ಕೆ ಮಾಡುವ ಬಗ್ಗೆ ಮತದಾರರು ಚಿಂತನೆ ಮಾಡಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಬೇಲೂರು ಪಟ್ಟಣದ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಶುಕ್ರವಾರ ಕಾಂಗ್ರೆಸ್ ಚುನಾವಣೆ ಪ್ರಚಾರ ಬಹಿರಂಗ ಸಭೆಯಲ್ಲಿ ಮಾತನಾಡಿ, ‘ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಗೆಲ್ಲಿಸಿದ್ದೀರಿ. ಬಿಜೆಪಿಯಲ್ಲಿ ೨೫ ಲೋಕಸಭಾ ಸದಸ್ಯರನ್ನು ಗೆಲ್ಲಿಸಿದ್ದೀರಿ. ಪಕ್ಷೇತರರಾಗಿ ಗೆದ್ದ ಸುಮಾಲತಾ ಈಗ ಬಿಜೆಪಿಗೆ ಸೇರಿದ್ದಾರೆ. ಕರ್ನಾಟಕದಲ್ಲಿ ತೆರಿಗೆ ವಂಚನೆ ಅನ್ಯಾಯವಾಗಿದೆ. ಕೆಂದ್ರದ ೧೫ನೇ ಹಣಕಾಸು ಕೇಂದ್ರದ ಶಿಫಾರಸು ಆಯೋಗ ಅನ್ವಯ ಹಣವನ್ನು ನಮ್ಮ ರಾಜ್ಯಕ್ಕೆ ಏಕೆ ಕೊಟ್ಟಿಲ್ಲ ಎಂದು ಅವರು ಪ್ರಶ್ನಿಸಿಲ್ಲ. ಜೆಡಿಎಸ್‌ನವರು ಏಕೆ ಇದನ್ನು ಕೇಂದ್ರದ ಗಮನಕ್ಕೆ ತಂದಿಲ್ಲ’ ಎಂದು ಕಿಡಿಕಾರಿದರು.
ಕೇಂದ್ರ ಸರ್ಕಾರ ನಮ್ಮನ್ನು ಕೆಟ್ಟದಾಗಿ ನಡೆಸಿಕೊಂಡಿದೆ: ಚಲುವರಾಯಸ್ವಾಮಿ
‘ಮೋದಿಯವರಿಗೂ ನನಗೂ ಅವಿನಾಭಾವ ಸಂಭಂದ ಇದೆ ಎಂದು ದೇವೇಗೌಡರು ಹೇಳುತ್ತಾರೆ. ಬೆಂಗಳೂರಲ್ಲಿ ಕುಡಿಯಲು ನೀರಿಲ್ಲ, ಸುತ್ತಮುತ್ತಲಿನ ಜನರಿಗೆ ಮೇಕೆದಾಟುವಿನಲ್ಲಿ ವಿದ್ಯುತ್ ಉತ್ಪಾದನೆ ಮಾಡೋಕೆ ದೇವೇಗೌಡರು ಮುಂದಾಗಿಲ್ಲ. ಕಪ್ಪುಹಣ ೧೫ ಲಕ್ಷ ರು. ಹಾಕುತ್ತೀವಿ ಅಂದವರು ೧೫ ರು.ವನ್ನೂ ಹಾಕಿಲ್ಲ. ರೈತರ ಆದಾಯ ದುಪ್ಪಟ್ಟು ಮಾಡುವುದಾಗಿ ನೀಡಿದ ಭರವಸೆಯೂ ಕೂಡ ಈಡೇರಿಲ್ಲ. ಅಚ್ಚೇ ದಿನ್ ಆಯೇಗ ಎಂದು ಹೇಳಿದವರ ಆಡಳಿತದಲ್ಲಿ ಅಗತ್ಯ ವಸ್ತುಗಳು ಬೆಲೆ ಏರಿಕೆ, ಪೆಟ್ರೋಲ್ ಬೆಲೆ ಇಳಿಯಲಿಲ್ಲ. ಬಡವರು, ರೈತರಿಗೆ ಏನೂ ಮಾಡಿಲ್ಲ’ ಎಂದು ವ್ಯಂಗ್ಯವಾಡಿದರು.
‘ಗೌಡರು ಚುನಾವಣೆ ಆದ ಮೇಲೆ ಸರ್ಕಾರ ಬಿದ್ದು ಹೋಗುತ್ತೆ ಅಂತ ಭವಿಷ್ಯ ಹೇಳಿದ್ದಾರೆ, ಬೀಳಲು ಇದು ಮಡಿಕೆಯಲ್ಲ? ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಚುನಾವಣೆ ಬಳಿಕ ಗ್ಯಾರಂಟಿ ನಿಂತು ಹೋಗುತ್ತೆ ಅಂತ ಹೇಳುತ್ತಾರೆ. ನಮ್ಮ ಗ್ಯಾರಂಟಿ ಎಂದಿಗೂ ಶಾಶ್ವತ. ಮಾಧ್ಯಮದವರು ಬರೆದುಕೊಳ್ಳಿ ಹಾಸನ, ಮಂಡ್ಯ, ಕೋಲಾರ, ಬೆಂಗಳೂರು ಗ್ರಾಮಾಂತರದಲ್ಲೂ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸುತ್ತದೆ. ಇವತ್ತು ನ್ಪರ್‌ನಲ್ಲಿ ಜೆಡಿಎಸ್ ಬಿಜೆಪಿಯವರನ್ನು ಗೆಲ್ಲಿಸಿದರೆ ಜನತೆಗೆ ಚೊಂಬು ಸಿಗುತ್ತದೆ ಅಂತ ಜಾಹೀರಾತಿದೆ, ಅವರಿಗೆ ಮತಹಾಕಿದರೆ ಚೊಂಬು ಕೊಡುತ್ತಾರೆ, ಅವರದ್ದು ಭಾವನೆ, ನಮ್ಮದು ಬದುಕು’ ಎಂದು ಹೇಳಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ‘ಹಿಂದೆ ಬಿಜೆಪಿ ಸರ್ಕಾರ ರಾಷ್ಟ್ರದಲ್ಲಿ ಬಂದಿತ್ತು, ರಾಜ್ಯದಲ್ಲಿ 26 ಜನ ಬಿಜೆಪಿ ಸಂಸದರು ಇದ್ದರು. ರಾಹುಲ್ ಗಾಂಧಿ ಹಾಸನಕ್ಕೆ ಬಂದು ಜೆಡಿಎಸ್ ಬಿಜೆಪಿಯ ಬಿ ಟೀಂ ಅಂದಿದ್ದರು. ಈಗ ಬಿಜೆಪಿ ಜೊತೆ ಪಾರ್ಟ್‌ನರ್ ಆಗಿದ್ದಾರೆ. ಬಿಜೆಪಿಯವರು ಕೊಟ್ಟ ಮಾತು ಏನಾಯ್ತು? ನಾವು ನುಡಿದಂತೆ ನಡೆದಿದ್ದೇವೆ, ಕೊಟ್ಟ ಮಾತು ಉಳಿಸಿಕೊಂಡಿದ್ದೇವೆ’ ಎಂದು ಹೇಳಿದರು.
ಹಾಸನದಲ್ಲಿ ಈ ಬಾರಿ ನಮ್ಮ ಅಭ್ಯರ್ಥಿ ಗೆಲ್ತಾರೆ: ಸಿಎಂ
‘ನಾವು ಚುನಾವಣೆ ಮುಗಿದ ಮೇಲೆ ಎತ್ತಿನಹೊಳೆ ಮೊದಲ ಹಂತದಲ್ಲಿ ನೀರು ಹರಿಯುತ್ತಿದೆ. ಆದರೆ ಇದನ್ನು ದೇವೇಗೌಡರು, ಕುಮಾರಸ್ವಾಮಿ, ರೇವಣ್ಣ ಮಾಡಿಲ್ಲ, ಸಿದ್ದರಾಮಯ್ಯ ಅವರು ಈ ಕೆಲಸ ಮಾಡಿದ್ದಾರೆ. ಮುಂದಿನ ವರ್ಷ ಮೊದಲು ಬೇಲೂರಿಗೆ ನೀರು ಕೊಡುತ್ತೇವೆ. ಈಗಾಗಲೇ ದೇವೇಗೌಡರು ಮೊಮ್ಮಗನನ್ನು ಒಂದು ಬಾರಿ ಗೆಲ್ಲಿಸಿದ್ದೀರಿ, ಈಗ ನಡೆಯುವ ಚುನಾವಣೆಯಲ್ಲಿ ನಾವು ಒಂದು ಟಗರು ನಿಲ್ಲಿಸಿದ್ದೇವೆ. ಅವರ ತಾಯಿ ಅನುಪಮ ಎರಡು ಬಾರಿ ಸೋತಿದ್ದಾರೆ, ಅವರ ಮಡಿಲಗೆ ನಿಮ್ಮ ಮತ ಹಾಕಬೇಕು’ ಎಂದು ಹೇಳಿದರು.
ಲೋಕಸಭಾ ಚುನಾವಣೆ ಅಭ್ಯರ್ಥಿ ಶ್ರೇಯಸ್ ಪಟೇಲ್, ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ, ಕರ್ನಾಟಕ ಗೃಹಮಂಡಳಿ ಅಧ್ಯಕ್ಷ ಶಿವಲಿಂಗೇಗೌಡ, ಮುಖಂಡರಾದ ಚಂದ್ರಶೇಖರ್, ಸೋಮಶೇಖರ್, ಬಿ.ಶಿವರಾಂ, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.