ಆಗ ವಿಜಯೇಂದ್ರರನ್ನು ಹೊಗಳಿದ್ದ ಈಶ್ವರಪ್ಪ ಈಗ ಬದಲಾಗಿದ್ದು ಯಾಕೆ?: ಬಿ.ವೈ.ರಾಘವೇಂದ್ರ
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ರಾಜಾಹುಲಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರರನ್ನು ಮರಿ ಹುಲಿ ಎಂದು ಕೊಂಡಾಡಿದ್ದರು. ಆದರೆ ಇದೀಗ ಎರಡೇ ವಾರದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ವರಸೆ ಬದಲಾಗಿದ್ದು ಯಾಕೆ?
ಸೊರಬ(ಮಾ.30): ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ರಾಜಾಹುಲಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರರನ್ನು ಮರಿ ಹುಲಿ ಎಂದು ಕೊಂಡಾಡಿದ್ದರು. ಆದರೆ ಇದೀಗ ಎರಡೇ ವಾರದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ವರಸೆ ಬದಲಾಗಿದ್ದು ಯಾಕೆ? ಗುರುಗಳು, ಮಠಾಧೀಶರು ಆಶೀರ್ವಾದ ಮಾಡದಂತೆ ಬೆದರಿಕೆ ಹಾಕಿದ್ದೇನೆ ಎಂದು ಆರೋಪ ಮಾಡುತ್ತಿದ್ದಾರೆ. ಅದು ನಿಜವೇ ಆಗಿದ್ದರೆ ಚಂದ್ರಗುತ್ತಿ ಶ್ರೀ ರೇಣುಕಾಂಬೆ ಸನ್ನಿಧಿಗೆ ಬಂದು ಪ್ರಮಾಣ ಮಾಡಲಿ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಸವಾಲು ಹಾಕಿದರು.
ತಾಲೂಕಿನ ಚಂದ್ರಗುತ್ತಿಯ ಪುರಾಣ ಹಾಗೂ ಐತಿಹಾಸಿಕ ಪ್ರಸಿದ್ಧ ಶ್ರೀ ರೇಣುಕಾಂಬಾ ದೇವಸ್ಥಾನದಲ್ಲಿ ಶ್ರೀದೇವಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಟಿಕೆಟ್ ಹಂಚಿಕೆ ವಿಷಯ ಕೇಂದ್ರದ ನಾಯಕರು ತೀರ್ಮಾನಿಸುತ್ತಾರೆ. ತಮಗೂ ಕೂಡ ಕಾಂತೇಶ್ ರಿಗೆ ಟಿಕೆಟ್ ದೊರೆಯಲಿ ಎಂಬ ಅಭಿಲಾಷೆ ಇತ್ತು. ಕೇಂದ್ರದ ಚುನಾವಣಾ ಸಮಿತಿ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರಬೇಕು. ಇದರಲ್ಲಿ ನಮ್ಮ ಕುಟುಂಬದ ಹಸ್ತಕ್ಷೇಪ ಇಲ್ಲ ಎಂದರು.
ನನ್ನ ರಕ್ತದ ಕಣ ಕಣದಲ್ಲೂ ಕೇಸರಿ ಇದೆ: ಕೆ.ಎಸ್.ಈಶ್ವರಪ್ಪ
ಗುರುಗಳು, ಮಠಾಧೀಶರು ಆಶೀರ್ವಾದ ಮಾಡದಂತೆ ಬೆದರಿಕೆ ಹಾಕಿದ್ದೇನೆ. ಈ ವಿಚಾರವಾಗಿ ಮಠಾಧೀಶರು ಕಣ್ಣೀರಿಡುತ್ತಿದ್ದಾರೆ ಎಂದು ಈಶ್ವರಪ್ಪ ನನ್ನ ಮೇಲೆ ಮಾಡಿರುವ ಆರೋಪ ಸುಳ್ಳು. ಬೆದರಿಕೆ ಹಾಕಿರುವುದು ನಿಜವೇ ಆಗಿದ್ದರೆ ಈಶ್ವರಪ್ಪ ಅವರು ಚಂದ್ರಗುತ್ತಿ ಶ್ರೀ ರೇಣುಕಾಂಬೆ ಸನ್ನಿಧಿಗೆ ಬಂದು ಗಂಟೆ ಹೊಡೆದು ಪ್ರಮಾಣ ಮಾಡಲಿ ಎಂದರು.
ಬಿಜೆಪಿಯಲ್ಲಿ ಕುಟುಂಬ ರಾಜಕಾರಣದಿಂದ ಅನ್ಯಾಯ: ಕೆ.ಎಸ್.ಈಶ್ವರಪ್ಪ ಆರೋಪ
ವ್ಯಕ್ತಿತ್ವ ಬದಲಾದದ್ದು ಏಕೆ?:
ತಂದೆಯ ವಯಸ್ಸಿನವರಾದ ಈಶ್ವರಪ್ಪ ನಮ್ಮ ಕುಟುಂಬದ ವಿರುದ್ಧ ವಿನಾಕಾರಣ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಕಳೆದ ತಿಂಗಳು ಶಿಕಾರಿಪುರದಲ್ಲಿ ನಡೆದ ಸಮಾವೇಶ ವೇಳೆ ಯಡಿಯೂರಪ್ಪರನ್ನು ರಾಜಾಹುಲಿ, ವಿಜಯೇಂದ್ರರನ್ನು ಮರಿ ಹುಲಿ ಎಂದು ಕೊಂಡಾಡಿದ್ದರು. ವಿಶ್ವಾಸ ಇಲ್ಲದಿದ್ದರೆ ಅಂದೇ ಹೇಳಬಹುದಿತ್ತು. ಇದೀಗ ಕೇವಲ ಎರಡು ವಾರಗಳಲ್ಲಿ ಅವರ ವ್ಯಕ್ತಿತ್ವವೇ ಬದಲಾಗಿದೆ ಏಕೆ ಎಂದು ಪ್ರಶ್ನಿಸಿದರು.
ಈಶ್ವರಪ್ಪನವರಿಗೆ ಸಿಟ್ಟಿರುವುದು ವರಿಷ್ಠರ ಮೇಲೆ. ಆದರೆ ಹೈಕಮಾಂಡ್ ಬಗ್ಗೆ ಮಾತನಾಡಲಾಗುತ್ತಿಲ್ಲ. ಬದಲಾಗಿ ತಂದೆಯವರ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಇನ್ನೂ ಕಾಲಾವಕಾಶ ಇದೆ. ಮುಂದಿನ ದಿನಗಳಲ್ಲಿ ಅವರ ಆಶೀರ್ವಾದ ನಮ್ಮ ಮೇಲೆ ಇರುತ್ತದೆ ಎಂದು ಭಾವಿಸುತ್ತೇನೆ ಎಂದು ಮಾರ್ಮಿಕವಾಗಿ ನುಡಿದರು.