ಅಂಬಿಕಾಪತಿ ಮನೆಗೆ ಕೆಂಪಣ್ಣ ಹೋಗಿದ್ದೇಕೆ?: ಡಿ.ವಿ.ಸದಾನಂದಗೌಡ
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸೂಚನೆ ಮೇರೆಗೆ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಐಟಿ ದಾಳಿಗೆ ಒಳಗಾಗಿರುವ ಗುತ್ತಿಗೆದಾರ ಅಂಬಿಕಾಪತಿ ಅವರ ಮನೆಗೆ ಭೇಟಿ ನೀಡಿದ್ದರು ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಆಪಾದಿಸಿದ್ದಾರೆ.
ಬೆಂಗಳೂರು (ಅ.19): ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸೂಚನೆ ಮೇರೆಗೆ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಐಟಿ ದಾಳಿಗೆ ಒಳಗಾಗಿರುವ ಗುತ್ತಿಗೆದಾರ ಅಂಬಿಕಾಪತಿ ಅವರ ಮನೆಗೆ ಭೇಟಿ ನೀಡಿದ್ದರು ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಆಪಾದಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರ, ಲೂಟಿ ಕಾಂಗ್ರೆಸ್ಸಿನ ರಕ್ತದಲ್ಲಿದೆ. ಕಾಂಗ್ರೆಸ್, ರಾಜ್ಯದ ಅಭಿವೃದ್ಧಿಗೆ ಅನ್ಯಾಯ ಮಾಡುತ್ತಿದೆ. ಅಂಬಿಕಾಪತಿಗೆ ₹42 ಕೋಟಿ ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು.
ಈ ಪ್ರಕರಣವನ್ನು ಮುಚ್ಚಿಹಾಕಲು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳು ಮುಂದಾಗಿದ್ದಾರೆ ಎಂದು ಆರೋಪಿಸಿದರು. ಭ್ರಷ್ಟಾಚಾರ ಮಾಡೋದು ಕಾಂಗ್ರೆಸ್ ರಕ್ತದಲ್ಲೇ ಇದೆ. ಹೋಟೆಲ್‌ನಲ್ಲಿ ಆಹಾರಕ್ಕೆ ರೇಟ್ ಲೀಸ್ಟ್ ಹಾಕುತ್ತಾರೆ. ಆದರೆ ಕಾಂಗ್ರೆಸ್‌ನಲ್ಲಿ ಚಟ್ನಿ ಸಾಂಬಾರ್‌ಗೂ ರೇಟ್ ಲಿಸ್ಟ್ ಹಾಕಿದ್ದಾರೆ. ಗುತ್ತಿಗೆದಾರ ಅಂಬಿಕಾಪತಿ ಮನೆ ಮೇಲೆ ದಾಳಿಯಾಗಿದೆ. ಅಂಬಿಕಾಪತಿ ಮನೆಗೆ ಕೆಂಪಣ್ಣ ಯಾಕೆ ನಿನ್ನೆ ಹೋಗಿದ್ದರು? ಇದಕ್ಕೆ ಮದ್ದು ಅರೆಯುವ ಸಲುವಾಗಿ ಕೆಂಪಣ್ಣ ಹೋಗಿದ್ದಾರಾ? ಈ ಸರ್ಕಾರ ರಕ್ಷಿಸಲು ಹೋಗಿದ್ದರು ಎಂದು ಹರಿಹಾಯ್ದರು.
ಬಿಜೆಪಿ ಹಣ ಎನ್ನುವ ಶಿವಕುಮಾರ್ ಅವರಿಗೆ ನಾಚಿಕೆ ಆಗಬೇಕು: ಐಟಿ ದಾಳಿ ವೇಳೆ ಸಿಕ್ಕ ಹಣ ಬಿಜೆಪಿ ಗುತ್ತಿಗೆದಾರರದ್ದು ಎಂದಾದರೆ ತನಿಖೆ ಮಾಡಿಸಿ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಸವಾಲು ಎಸೆದಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹಣ ಎನ್ನುವ ಶಿವಕುಮಾರ್ ಅವರಿಗೆ ನಾಚಿಕೆ ಆಗಬೇಕು. ಉಪಮುಖ್ಯಮಂತ್ರಿಗಳ ಬಾಯಲ್ಲಿ ಬರುವ ಮಾತು ಇದಲ್ಲ ಎಂದು ತೀಕ್ಷ್ಣವಾಗಿ ಹೇಳಿದರು.
ಮುತ್ತತ್ತಿಯಿಂದ ಬನ್ನೇರುಘಟ್ಟದವರೆಗೆ ಬ್ಯಾರಿಕೇಡ್ ನಿರ್ಮಾಣ: ಸಂಸದ ಡಿ.ಕೆ.ಸುರೇಶ್
ಮೈಸೂರು ದಸರಾಕ್ಕೆ ಹೊರಟಿದ್ದ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಎಐಸಿಸಿ ಅಧ್ಯಕ್ಷರು ತಡೆದಿದ್ದಾರೆ. ಆದರೆ, ಅವರಿಗೆ ರಾಜ್ಯ ಸರ್ಕಾರದ ಭ್ರಷ್ಟಾಚಾರ ತಡೆಯಲು ಆಗುವುದಿಲ್ಲವೇ? ಸೋಮವಾರ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಮುಖಂಡರು ಸಭೆ ನಡೆಸಿದ್ದಾರೆ. ಐಟಿ ದಾಳಿ ವೇಳೆ ಅಪಾರ ಪ್ರಮಾಣದ ನಗದು ಸಿಕ್ಕ ಬಳಿಕ ಸಭೆ ಮಾಡಿದ್ದರ ಉದ್ದೇಶ ಏನು ಎಂದು ಸದಾನಂದಗೌಡರು ಖಾರವಾಗಿ ಪ್ರಶ್ನಿಸಿದರು.