ಬಿ.ಎಸ್‌.ಯಡಿಯೂರಪ್ಪ ಅವರು ಉತ್ತಮವಾಗಿಯೇ ಕೆಲಸ ಮಾಡಿದ್ದರು ಕೋವಿಡ್‌ ಅನ್ನು ಸರಿಯಾಗಿಯೇ ನಿರ್ವಹಣೆ ಮಾಡಿದ್ದರು ಎಂದಾದರೆ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದು ಯಾಕೆ ಬಿಜೆಪಿ ನಾಯಕರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಪ್ರಶ್ನೆ ಮಾಡಿದ್ದಾರೆ

ಹುಬ್ಬಳ್ಳಿ/ಬೆಳಗಾವಿ (ಆ.30): ಬಿ.ಎಸ್‌.ಯಡಿಯೂರಪ್ಪ ಅವರು ಉತ್ತಮವಾಗಿಯೇ ಕೆಲಸ ಮಾಡಿದ್ದರು, ಕೋವಿಡ್‌ ಅನ್ನು ಸರಿಯಾಗಿಯೇ ನಿರ್ವಹಣೆ ಮಾಡಿದ್ದರು ಎಂದಾದರೆ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದು ಯಾಕೆ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಪ್ರಶ್ನಿಸಿದ್ದಾರೆ.

ಹುಬ್ಬಳ್ಳಿ ಹಾಗೂ ಬೆಳಗಾವಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪದತ್ಯಾಗ ಮಾಡುವಾಗ ಯಡಿಯೂರಪ್ಪ ಗಳಗಳನೇ ಅತ್ತಿದ್ಯಾಕೆ ಎಂಬ ಪ್ರಶ್ನೆಗೆ ಈವರೆಗೂ ಉತ್ತರ ಸಿಕ್ಕಿಲ್ಲ. ಮುಖ್ಯಮಂತ್ರಿ ಬದಲಾವಣೆ ಎಂದರೆ ಎಲ್ಲೋ ಒಂದು ಕಡೆ ಏನೋ ತೊಂದರೆಯಾಗಿದೆ ಎಂದೇ ಅರ್ಥವಲ್ಲವೇ? ಅವರು ಕೋವಿಡ್‌ ಅನ್ನು ಉತ್ತಮವಾಗಿ ನಿರ್ವಹಣೆ ಮಾಡಿರಲಿಲ್ಲವೇ? ಭ್ರಷ್ಟಾಚಾರ ನಡೆದಿತ್ತೇ ಎಂಬ ಪ್ರಶ್ನೆ ಮೂಡುತ್ತದೆ ಎಂದರು.

'ಬಿಜೆಪಿ ಸರ್ಕಾರದಲ್ಲಿ ಯಾರು ಸೇಫ್ ಅಲ್ಲ ಎನ್ನುವುದಕ್ಕೆ ಮೈಸೂರಿನ ಪ್ರಕರಣವೇ ಸಾಕ್ಷಿ'

ಸಿ.ಟಿ.ರವಿಗೆ ಟಾಂಗ್‌: ಕಾಂಗ್ರೆಸ್‌ನಲ್ಲಿ ಪ್ರಮೋಷನ್‌ ಬೇಕಿದ್ದರೆ ಜೈಲಿಗೆ ಹೋದ ಸರ್ಟಿಫಿಕೇಟ್‌ ಇರಬೇಕು ಎಂಬ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿಕೆಗೆ ಡಿ.ಕೆ.ಶಿವಕುಮಾರ್‌ ಕಿಡಿಕಿಡಿಯಾಗಿದ್ದಾರೆ. ಪಾಪ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಉಮಾಭಾರತಿ ಅವರಿಗೂ ಒಂದು ಸರ್ಟಿಫಿಕೇಟ್‌ ಇತ್ತು. ಇನ್ನೂ ಬಹಳಷ್ಟುಹೆಸರುಗಳಿವೆ, ಈಗ ಅವೆಲ್ಲ ಬೇಡ ಬಿಡಿ ಎಂದು ವ್ಯಂಗ್ಯವಾಡಿದರು.

ಇದೇ ವೇಳೆ, ಎಂಇಎಸ್‌ ಪಕ್ಷ ಕಾಂಗ್ರೆಸ್‌ನ ಬಿ ಟೀಂ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಉತ್ತರಿಸಿದ ಅವರು, ಅವರ ಸ್ವಂತಕ್ಕೆ ಏನು ಬೇಕಾದರೂ ಅಂದುಕೊಳ್ಳಲಿ. ನಾವು ಯಾರನ್ನೂ ಅಗೌರವದಿಂದ ಕಾಣುವುದಿಲ್ಲ. ಬಿಜೆಪಿಯವರನ್ನೂ ಗೌರವದಿಂದ ಕಾಣುತ್ತೇವೆ. ಎಂಇಎಸ್‌ನವರನ್ನೂ ಗೌರವಿಸುತ್ತೇವೆ ಎಂದರು.

ವಿನಾಯ್ತಿ ಕೊಡ್ತೇವೆ: ಕೋವಿಡ್‌ ಕಾರಣದಿಂದ ರಾಜ್ಯದಲ್ಲಿ ವ್ಯಾಪಾರ, ವಹಿವಾಟು ಸಂಪೂರ್ಣ ಕುಸಿದುಹೋಗಿದೆ. ಹೀಗಾಗಿ ಜನತೆ ತೆರಿಗೆ ಕಟ್ಟಲಾರದ ಸ್ಥಿತಿಯಲ್ಲಿದ್ದಾರೆ. ಹುಬ್ಬಳ್ಳಿ- ಧಾರವಾಡ, ಕಲಬುರಗಿ, ಬೆಳಗಾವಿ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದರೆæ ಆಸ್ತಿ ತೆರಿಗೆ, ವ್ಯಾಪಾರ ತೆರಿಗೆ ಸೇರಿ ಎಲ್ಲ ತೆರಿಗೆಯಲ್ಲಿ ಶೇ.50ರಷ್ಟುವಿನಾಯಿತಿ ಕೊಡುತ್ತೇವೆ ಎಂದು ಡಿಕೆಶಿ ಆಶ್ವಾಸನೆ ನೀಡಿದರು.