ಬೆಂಗಳೂರು[ಜ.07]: ದಿನೇಶ್‌ ಗುಂಡೂರಾವ್‌ ಅವರು ರಾಜೀನಾಮೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಸಾಧ್ಯವಾದಷ್ಟುಶೀಘ್ರವಾಗಿ ನೂತನ ಅಧ್ಯಕ್ಷರನ್ನು ನೇಮಕ ಮಾಡಬೇಕು ಎಂಬುದು ರಾಜ್ಯ ಕಾಂಗ್ರೆಸ್‌ನ ಎಲ್ಲ ಹಿರಿಯ ನಾಯಕರ ಅಭಿಪ್ರಾಯ ಎಂದು ಮಾಜಿ ಸಚಿವ ಡಾ. ಜಿ. ಪರಮೇಶ್ವರ್‌ ಅವರು ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಅವರಿಗೆ ಮಾಹಿತಿ ನೀಡಿದ್ದಾರೆ.

ಕೆಪಿಸಿಸಿ ಅಧ್ಯಕ್ಷರ ನೇಮಕಾತಿ ಬಗ್ಗೆ ಭಾನುವಾರ ತಮ್ಮ ನಿವಾಸದಲ್ಲಿ ಹಿರಿಯ ಕಾಂಗ್ರೆಸ್ಸಿಗರ ಸಭೆ ನಡೆಸಿದ್ದ ಪರಮೇಶ್ವರ್‌ ಅವರು ಈ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯದ ಬಗ್ಗೆ ವೇಣುಗೋಪಾಲ್‌ ಅವರಿಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರು ತಮ್ಮ ರಾಜೀನಾಮೆ ವಿಚಾರದಲ್ಲಿ ದೃಢವಾಗಿದ್ದಾರೆ. ಹೀಗಾಗಿ ಹೊಸ ಅಧ್ಯಕ್ಷರನ್ನು ನೇಮಕ ಮಾಡಬೇಕಾಗುತ್ತದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೈಕಮಾಂಡ್‌ ಯಾರನ್ನೇ ನೇಮಕ ಮಾಡಿದರೂ ಅವರೊಂದಿಗೆ ಸಹಕರಿಸಲು ನಾಯಕರು ಒಪ್ಪಿದ್ದಾರೆ. ಆದರೆ, ಸಭೆಯಲ್ಲಿ ಕೆಲ ನಾಯಕರು ಹುದ್ದೆಗೆ ತಾವು ಆಕಾಂಕ್ಷಿ ಎಂದು ಹೇಳಿದ್ದಾರೆ. ಈ ಬಗ್ಗೆ ಹೈಕಮಾಂಡ್‌ ಜತೆಗೆ ನೇರವಾಗಿ ಚರ್ಚಿಸುವುದಾಗಿಯೂ ತಿಳಿಸಿದ್ದಾರೆ. ಆದರೆ, ಯಾರನ್ನೇ ಹೈಕಮಾಂಡ್‌ ಅಧ್ಯಕ್ಷರನ್ನಾಗಿ ನೇಮಕ ಮಾಡಿದರೂ ಸಹಕಾರ ನೀಡುವುದಾಗಿ ಸ್ಪಷ್ಟಪಡಿಸಿದ್ದಾರೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ಪ್ರಸಕ್ತ ರಾಜಕೀಯ ಪರಿಸ್ಥಿತಿಯಲ್ಲಿ ನಾಯಕತ್ವಕ್ಕಾಗಿ ಬಿಕ್ಕಟ್ಟು ಉಂಟಾದರೆ ಅದರಿಂದ ಪಕ್ಷ ದುರ್ಬಲವಾಗುತ್ತದೆ ಎಂಬ ಅರಿವು ಎಲ್ಲ ನಾಯಕರಿಗೂ ಇದೆ. ಹೀಗಾಗಿ ಒಗ್ಗೂಡಿ ಪಕ್ಷವನ್ನು ಸದೃಢಗೊಳಿಸಲು ನಾಯಕರು ಸಹಮತ ಹೊಂದಿದ್ದಾರೆ. ಆದರೆ, ಕೆಪಿಸಿಸಿ ಅಧ್ಯಕ್ಷ ಹುದ್ದೆಯ ಕುರಿತ ನಿರ್ಧಾರ ವಿಳಂಬವಾದರೆ ಇದರಿಂದ ವಿನಾಕಾರಣ ಗೊಂದಲಮಯ ಹೇಳಿಕೆಗಳು ಹೊರಬರುವ ಸಾಧ್ಯತೆಯಿದೆ. ಹೀಗಾಗಿ ಈ ನಿರ್ಧಾರ ಸಾಧ್ಯವಾದಷ್ಟುಶೀಘ್ರವಾಗಿ ಆಗಬೇಕು ಎಂಬುದು ನಾಯಕರ ನಿಲುವುದು ಎಂದು ಪರಮೇಶ್ವರ್‌ ಅವರು ವೇಣುಗೋಪಾಲ್‌ಗೆ ಮಾಹಿತಿ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.