Asianet Suvarna News Asianet Suvarna News

ರಾಜ್ಯ ಸಚಿವ ಸಂಪುಟ ವಿಸ್ತರಣೆ ಜಿಜ್ಞಾಸೆ : ಹೊಸಬರೋ, ಹಳಬರೋ..?

  • ಹಳಬರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲೂ ಮುಂದುವರೆಸಬೇಕೆ
  • ಹೆಚ್ಚಿನವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಬೇಕೆ ಎಂಬ ಜಿಜ್ಞಾಸೆ
  • ಬಿಜೆಪಿ ಪಾಳಯಕ್ಕೀಯ ಶುರುವಾಗಿ ಹೊಸ ಸಚಿವ ಸಂಪುಟ ರಚನೆಯ ಗೊಂದಲ
who will get chance in Karnataka New Cabinet  snr
Author
Bengaluru, First Published Jul 31, 2021, 7:18 AM IST
  • Facebook
  • Twitter
  • Whatsapp

ವರದಿ : ವಿಜಯ್‌ ಮಲಗಿಹಾಳ

 ಬೆಂಗಳೂರು (ಜು.31):  ಬಿ.ಎಸ್‌.ಯಡಿಯೂರಪ್ಪ ಸಂಪುಟದಲ್ಲಿ ಸಚಿವರಾಗಿದ್ದವರನ್ನು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲೂ ಮುಂದುವರೆಸಬೇಕೆ ಅಥವಾ ಹೆಚ್ಚಿನವರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ನೀಡಬೇಕೆ ಎಂಬ ಜಿಜ್ಞಾಸೆ ಬಿಜೆಪಿ ಪಾಳೆಯದಲ್ಲಿ ಮೂಡಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಹಳಬರನ್ನು ಕೈಬಿಟ್ಟರೆ ಅವರದ್ದೇ ಒಂದು ಗುಂಪು ಸೃಷ್ಟಿಯಾಗಿ ಅದರಿಂದ ಹೊಸದೊಂದು ತಲೆನೋವು ಶುರುವಾಗಬಹುದು. ಸರ್ಕಾರದ ಅವಧಿ ಇನ್ನೂ ಒಂದೂವರೆ ವರ್ಷ ಇರುವುದರಿಂದ ಮೂರ್ನಾಲ್ಕು ಮಂದಿಯನ್ನು ಕೈಬಿಟ್ಟು ಇನ್ನುಳಿದ ಎಲ್ಲರನ್ನೂ ಮುಂದುವರಿಸುವುದೇ ಸೂಕ್ತ ಎಂಬ ಅಭಿಪ್ರಾಯವನ್ನು ಪಕ್ಷದ ಕೆಲವು ನಾಯಕರು ಹೈಕಮಾಂಡ್‌ ಗಮನಕ್ಕೆ ತಂದಿದ್ದಾರೆ.

ಆದರೆ, ಹೆಚ್ಚೂ ಕಡಮೆ ಅರ್ಧದಷ್ಟು ಹಳಬರನ್ನು ಕೈಬಿಟ್ಟು ಭವಿಷ್ಯದ ದೃಷ್ಟಿಯಿಂದ ಯುವಕರಿಗೆ ಹಾಗೂ ಪ್ರಬಲ ಹಿಂದುತ್ವದ ಪ್ರತಿಪಾದನೆ ಮಾಡುವ ಸಂಘದ ಹಿನ್ನೆಲೆಯುಳ್ಳವರಿಗೆ ಅವಕಾಶ ನೀಡಬೇಕು ಎಂಬ ಪ್ರಸ್ತಾಪವನ್ನು ಸಂಘ ಪರಿವಾರ ಮೂಲದ ಮುಖಂಡರು ಮುಂದಿಟ್ಟಿದ್ದಾರೆ.

ವಾರದಲ್ಲಿ ಸಂಪುಟ : ಸಿಎಂ- ಇಂದು ಪಕ್ಷದ ಹೈಕಮಾಂಡ್‌ನಿಂದ

ಈ ಕಾರಣಕ್ಕಾಗಿಯೇ ಬೊಮ್ಮಾಯಿ ನೇತೃತ್ವದ ಸಂಪುಟ ರಚನೆ ಹೇಗಾಗಬಹುದು? ಎಷ್ಟುಮಂದಿ ಹಳಬರನ್ನು ಕೈಬಿಡಬಹುದು ಎಂಬುದು ಕುತೂಹಲಕರವಾಗಿದೆ. ಇದೇ ಕಾರಣದಿಂದಾಗಿ ಸಂಪುಟ ರಚನೆಯಾದರೂ ಮೊದಲ ಹಂತದಲ್ಲಿ ಹೆಚ್ಚಿನ ಸ್ಥಾನಗಳನ್ನು ಖಾಲಿ ಉಳಿಸಿಕೊಂಡು ವಿಧಾನಮಂಡಲದ ಅಧಿವೇಶನದ ಬಳಿಕ ಉಳಿದ ಸ್ಥಾನಗಳನ್ನು ಭರ್ತಿ ಮಾಡುವ ಚಿಂತನೆಯೂ ನಡೆದಿದೆ ಎಂದು ತಿಳಿದು ಬಂದಿದೆ.

ಏಕಾಏಕಿ ಹಳಬರ ಪೈಕಿ ಹೆಚ್ಚಿನವರನ್ನು ಕೈಬಿಟ್ಟರೂ ಕಷ್ಟ, ಬಿಡದಿದ್ದರೂ ಕಷ್ಟಎಂಬಂತಾಗಿದೆ. ಮೇಲಾಗಿ ಹಳಬರ ಪೈಕಿ ಅನೇಕರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಪ್ತ ಬಳಗಕ್ಕೆ ಸೇರಿದವರು. ಅವರನ್ನು ಕೈಬಿಟ್ಟರೆ ಯಡಿಯೂರಪ್ಪ ಅವರೂ ಬೇಸರಗೊಳ್ಳಬಹುದು. ಅದರ ಬದಲು ಈಗ ಹಳಬರನ್ನೇ ಹೆಚ್ಚಾಗಿ ಮುಂದುವರೆಸಿ ಮುಂಬರುವ 2023ರ ಸಾರ್ವತ್ರಿಕ ಚುನಾವಣೆ ಬಳಿಕ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಆಗ ಯುವಕರಿಗೆ ಹಾಗೂ ಹೊಸಬರಿಗೆ ಪ್ರಾತಿನಿಧ್ಯ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳುವುದು ಸೂಕ್ತ. ಇಲ್ಲದಿದ್ದರೆ ಅನಗತ್ಯ ಗೊಂದಲಕ್ಕೆ ನಾಂದಿಯಾಗಬಹುದು ಎಂಬ ಆತಂಕವನ್ನು ಹಲವರು ಹೊರಹಾಕಿದ್ದಾರೆ ಎನ್ನಲಾಗಿದೆ.

ಎರಡು ಅಥವಾ ಮೂರು ಬಾರಿ ಸಚಿವರಾಗಿದ್ದ ಹಿರಿಯರನ್ನು ಕೈಬಿಟ್ಟು ಹೊಸಬರಿಗೆ ಅವಕಾಶ ಕೊಡಬೇಕು ಎಂಬ ಈಗ ಬಿಜೆಪಿ ಪಾಳೆಯದಲ್ಲಿ ಜೋರಾಗಿಯೇ ಕೇಳಿಬರುತ್ತಿದೆ. ಇದಕ್ಕೆ ಪೂರಕವಾಗಿ ಅನೇಕ ಆಕಾಂಕ್ಷಿಗಳು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ. ಇನ್ನು ಕೆಲವರು ಪಕ್ಷದ ವರಿಷ್ಠರನ್ನು ಭೇಟಿಯಾಗಿ ಬೇಡಿಕೆ ಇಟ್ಟಿದ್ದಾರೆ.

ಹೀಗಾಗಿ, ಹಿರಿಯರು ಅಥವಾ ಎರಡು-ಮೂರು ಬಾರಿ ಸಚಿವರಾಗಿದ್ದವರು ಎಂಬ ಕಾರಣ ಮುಂದಿಟ್ಟುಕೊಂಡು ಕೈಬಿಟ್ಟರೆ ಮುಂಬರುವ ಚುನಾವಣೆಗಳಲ್ಲಿ ಪಕ್ಷಕ್ಕೆ ಧಕ್ಕೆ ಉಂಟಾಗಬಹುದು. ಅದರ ಬದಲು ವಿವಿಧ ಆರೋಪಗಳು ಕೇಳಿಬರುತ್ತಿರುವ ಹಾಗೂ ತಮಗೆ ನೀಡಿದ್ದ ಖಾತೆಗಳಲ್ಲಿ ಉತ್ತಮ ಸಾಧನೆ ತೋರದ ಹಿನ್ನೆಲೆಯಲ್ಲಿ ಮೂರ್ನಾಲ್ಕು ಮಂದಿಯನ್ನು ಕೈಬಿಟ್ಟು ಸಂಘ ಪರಿವಾರದ ಹಿನ್ನೆಲೆಯುಳ್ಳ ಹಾಗೂ ಪ್ರಬಲ ಆಕಾಂಕ್ಷಿಗಳಾಗಿರುವರನ್ನು ಸಂಪುಟದಲ್ಲಿ ಹೊಸದಾಗಿ ಸೇರ್ಪಡೆ ಮಾಡಿಕೊಳ್ಳಬಹುದು. ಆ ಮೂಲಕ ಈಗ ಉದ್ಭವಿಸಿರುವ ಸಂಪುಟ ಸಂಕಟದಿಂದ ಹೊರಬರಬಹುದು ಎಂಬ ಚಿಂತನೆ ಪಕ್ಷದ ವರಿಷ್ಠರಲ್ಲಿ ನಡೆಯುತ್ತಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ವಲಸಿಗರು ಬಹುತೇಕ ಸೇಫ್‌

ಕಾಂಗ್ರೆಸ್‌ ಮತ್ತು ಜೆಡಿಎಸ್‌ನಿಂದ ವಲಸೆ ಬಂದು ಬಿಜೆಪಿ ಸರ್ಕಾರ ರಚನೆಗೆ ಕಾರಣರಾಗಿದ್ದವರ ಪೈಕಿ ಬಹುತೇಕರಿಗೆ ಸಚಿವ ಸ್ಥಾನ ಮುಂದುವರೆಯುವ ಸಾಧ್ಯತೆಯಿದ್ದು, ಖಾತೆಗಳಲ್ಲಿ ಬದಲಾವಣೆ ಆಗಬಹುದು ಎಂದು ಮೂಲಗಳು ತಿಳಿಸಿವೆ.

ಈ ಪೈಕಿ ಒಬ್ಬರು ಅಥವಾ ಇಬ್ಬರನ್ನು ಕೈಬಿಡುವ ಬಗ್ಗೆ ಚರ್ಚೆ ನಡೆಯುತ್ತಿದ್ದರೂ ಅದೂ ಬೇಡ ಎಂಬ ನಿಲುವು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಪಾಳೆಯದಿಂದ ಹೊರಬಿದ್ದಿದೆ. ಇದಕ್ಕೆ ಪೂರಕವಾಗಿ, ಸರ್ಕಾರ ರಚನೆಗೆ ಕಾರಣರಾಗಿದ್ದವರನ್ನು ಕೈಬಿಟ್ಟರೆ ಮಾತಿಗೆ ತಪ್ಪಿದಂತಾಗುತ್ತದೆ ಎಂಬ ಅಭಿಪ್ರಾಯ ಪಕ್ಷದಿಂದಲೂ ವ್ಯಕ್ತವಾಗುತ್ತಿದೆ. ಹೀಗಾಗಿ, ಬಹುತೇಕ ವಲಸಿಗರು ಬೊಮ್ಮಾಯಿ ಅವರ ಸಂಪುಟದಲ್ಲೂ ಸಚಿವ ಸ್ಥಾನ ಅಲಂಕರಿಸಲಿದ್ದಾರೆ.

Follow Us:
Download App:
  • android
  • ios