Asianet Suvarna News Asianet Suvarna News

ತುಮಕೂರಿನಲ್ಲಿ ಯಾರಾಗುತ್ತಾರೆ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ: ಸೋಮಣ್ಣನಾ! ಕುಮಾರಣ್ಣನಾ

ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಇನ್ನು ಕೆಲವು ದಿವಸಗಳಲ್ಲಿ ಚುನಾವಣಾ ಆಯೋಗ ಚುನಾವಣೆ ನಡೆಸುವ ಸಂಬಂಧ ಕ್ಯಾಲೆಂಡರ್‌ ಹಾಕಲಿದ್ದು ಆಗಲೇ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಾರಾಗಬೇಕೆಂಬ ಚರ್ಚೆ ಆರಂಭವಾಗಿದೆ. 
 

Who will be the BJP JDS alliance candidate in Tumakuru Lok Sabha Constituency gvd
Author
First Published Feb 26, 2024, 10:23 PM IST

ಉಗಮ ಶ್ರೀನಿವಾಸ್

ತುಮಕೂರು (ಫೆ.26): ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಇನ್ನು ಕೆಲವು ದಿವಸಗಳಲ್ಲಿ ಚುನಾವಣಾ ಆಯೋಗ ಚುನಾವಣೆ ನಡೆಸುವ ಸಂಬಂಧ ಕ್ಯಾಲೆಂಡರ್‌ ಹಾಕಲಿದ್ದು ಆಗಲೇ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಾರಾಗಬೇಕೆಂಬ ಚರ್ಚೆ ಆರಂಭವಾಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಯಾಗಿ ದೇವೇಗೌಡರು ಸ್ಪರ್ಧಿಸಿದ್ದರು. ಆದರೆ ಆ ಚುನಾವಣೆಯಲ್ಲಿ ದೇವೇಗೌಡರು ಪರಾಭವಗೊಂಡಿದ್ದರು. ಕಾಂಗ್ರೆಸ್ ನ ಟಿಕೆಟ್ ಆಕಾಂಕ್ಷಿಯಾಗಿದ್ದ ಮುದ್ದಹನುಮೇಗೌಡರು ಟಿಕೆಟ್ ಸಿಗದೆ ಆ ಚುನಾವಣೆಯಲ್ಲಿ ತಟಸ್ಥರಾಗಿ ಉಳಿದರು. ಮುಂದೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದರು.

ಇನ್ನು ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಹತ್ತು ಹಲವಾರು ಮಂದಿ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಬಿಜೆಪಿ ತೊರೆದು ಬೆಂಗಳೂರಿನಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿರುವ ಮುದ್ದಹನುಮೇಗೌಡರು ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಹಾಗೆಯೇ ಮುರಳೀಧರ ಹಾಲಪ್ಪ, ನಿಖೇತ್ ರಾಜ್ ಮೌರ್ಯ ಸೇರಿದಂತೆ ಹಲವಾರು ಮಂದಿ ಟಿಕೆಟ್‌ಗಾಗಿ ಕಸರತ್ತು ನಡೆಸಿದ್ದಾರೆ. ಇನ್ನು ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಯಾರಾಗುತ್ತಾರೆ ಎಂಬ ಚರ್ಚೆ ಮತ್ತಷ್ಟು ಕಾವು ಪಡೆದುಕೊಂಡಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೇ ಸ್ಪರ್ಧಿಯಾಗುತ್ತಾರೆಂಬ ಕೂಗು ಎದ್ದಿದೆ. ಕಳೆದ ಬಾರಿ ಮೈತ್ರಿ ಅಭ್ಯರ್ಥಿ ದೇವೇಗೌಡರು ಸೋತಿದ್ದರು. 

ವಿಜ್ಞಾನ ಕೇಂದ್ರ ಉನ್ನತೀಕರಿಸಲು ಸಚಿವ ಸಂಪುಟ ಒಪ್ಪಿಗೆ: ಸಚಿವ ಬೋಸರಾಜು

ಆದ ಕಾರಣ ಕುಮಾರಸ್ವಾಮಿ ಅವರನ್ನು ಗೆಲ್ಲಿಸುವ ಪಣವನ್ನು ಜೆಡಿಎಸ್ ನವರು ತೊಟ್ಟಿದ್ದು ಶತಾಯಗತಾಯ ಮೈತ್ರಿ ಅಭ್ಯರ್ಥಿಯಾಗಿ ಕುಮಾರಸ್ವಾಮಿ ಅಖಾಡಕ್ಕೆ ಇಳಿಯುತ್ತಾರೆ ಎಂದು ವ್ಯಾಖ್ಯಾನಿಸುತ್ತಿದ್ದಾರೆ. ಇನ್ನು ಬಿಜೆಪಿಯಿಂದ ವಿ. ಸೋಮಣ್ಣಗೆ ಟಿಕೆಟ್ ಖಾತರಿ ಎಂಬಂತೆ ಕ್ಷೇತ್ರವನ್ನು ಸುತ್ತುತ್ತಿದ್ದಾರೆ. ಈಗಾಗಲೇ ಹಲವಾರು ಜಾತಿ ಮುಖಂಡರ ಮನೆ ಬಾಗಿಲು ತಟ್ಟಿದ್ದಾರೆ. ಅಲ್ಲದೇ ಎಲ್ಲ ಸಮಾರಂಭಗಳಿಗೂ ಎಡತಾಕುವ ಮೂಲಕ ಪ್ರಚಾರವನ್ನು ಆರಂಭಿಸಿದ್ದಾರೆ. ಇನ್ನು ಬಿಜೆಪಿಯಿಂದ ಮಾಜಿ ಸಚಿವ ಮಾಧುಸ್ವಾಮಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿ ಹೆಬ್ಬಾಕ, ಸ್ಪೂರ್ತಿ ಡೆವೆಲಪರ್ಸ್ ನ ಚಿದಾನಂದ, ಎಚ್.ಎಚ್. ಚಂದ್ರಶೇಖರ್‌, ವಿನಯ ಬಿದರೆ ಮುಂತಾದವರು ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ಬೆಂಗಳೂರಿನ ಭವಿಷ್ಯದ ಉಪನಗರಿಯಾಗಿರುವ ತುಮಕೂರು ಯಾವತ್ತೂ ಕೂಡ ಜಿದ್ದಾ ಜಿದ್ದಿನ ರಾಜಕಾರಣಕ್ಕೆ ಹೆಸರು ವಾಸಿಯಾಗಿದೆ. ಕಳೆದ ವಿಧಾನಸಭಾ ಕ್ಷೇತ್ರದಲ್ಲಿ ತುಮಕೂರು ಜಿಲ್ಲೆಯ 11 ವಿಧಾನಸಭಾ ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಉಳಿದಂತೆ ಬಿಜೆಪಿ ಮತ್ತು ಜೆಡಿಎಸ್ ತಲಾ 2 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಕಳೆದ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಬಿಜೆಪಿ ಪಾಲಾಗಿತ್ತು. ಹೀಗಾಗಿ ಈ ಬಾರಿಯೂ ಕ್ಷೇತ್ರ ಉಳಿಸಿಕೊಳ್ಳುವ ಜರೂರು ಬಿಜೆಪಿಗೆ ಇದೆ. ಹಾಗೆಯೇ ತುಮಕೂರು ಜಿಲ್ಲೆಯಲ್ಲಿ ಕೆ.ಎನ್. ರಾಜಣ್ಣ ಹಾಗೂ ಡಾ.ಜಿ. ಪರಮೇಶ್ವರ್‌ ರಂತಹ ಪ್ರಭಾವಿ ಸಚಿವರಿದ್ದು ಕ್ಷೇತ್ರವನ್ನು ಬಿಜೆಪಿಯವರಿಂದ ಕಿತ್ತುಕೊಳ್ಳಬೇಕಾಗಿದೆ.

ಶೀಘ್ರದಲ್ಲೇ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಸಚಿವ ಕೆ.ಎನ್.ರಾಜಣ್ಣ

ವಾಸ್ತವವಾಗಿ ತುಮಕೂರು ಜಿಲ್ಲೆಯಲ್ಲಿ11 ವಿಧಾನಸಭಾ ಕ್ಷೇತ್ರಗಳಿದ್ದರೂ ಲೋಕಸಭಾ ವ್ಯಾಪ್ತಿಯಲ್ಲಿ 8 ವಿಧಾನಸಭಾ ಕ್ಷೇತ್ರಗಳು ಮಾತ್ರ ಬರುತ್ತದೆ. ಶಿರಾ, ಪಾವಗಡ ಚಿತ್ರದುರ್ಗ ಕ್ಷೇತ್ರಕ್ಕೆ ಹಾಗೂ ಕುಣಿಗಲ್ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಹೋಗುತ್ತದೆ. ಹೀಗಾಗಿ 8 ಕ್ಷೇತ್ರದ ಜನರು ತುಮಕೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಭವಿಷ್ಯವನ್ನು ಬರೆಯಲಿದ್ದಾರೆ. ಈಗಾಗಲೇ ಚುನಾವಣೆಗೆ ಜಿಲ್ಲಾಡಳಿತ ತಯಾರಿ ಮಾಡಿಕೊಳ್ಳುತ್ತಿದೆ. ಇನ್ನೊಂದೆಡೆ ಆಕಾಂಕ್ಷಿಗಳು ಟಿಕೆಟ್ ಪಡೆಯಲು ದೊಡ್ಡ ಮಟ್ಟದಲ್ಲಿ ಕಸರತ್ತು ನಡೆಸಿದ್ದಾರೆ. ಈಗಾಗಲೇ ಬಿಜೆಪಿ, ಕಾಂಗ್ರೆಸ್ ಪಕ್ಷದ ವತಿಯಿಂದ ಕ್ಯಾಂಪೇನ್ ನಡೆಸಿದ್ದು ತುಮಕೂರು ಗದ್ದುಗೆ ಹಿಡಿಯಲು ಶತಾಯಗತಾಯ ಹೋರಾಟ ನಡೆಸಿದ್ದಾರೆ.

Follow Us:
Download App:
  • android
  • ios