ಬೆಂಗಳೂರು (ಡಿ.19):  ಚಾಮುಂಡೇಶ್ವರಿ ಚುನಾವಣೆ ಸೋಲಿನ ಎರಡೂವರೆ ವರ್ಷದ ನಂತರ ಆ ಬಗ್ಗೆ ಭಾವುಕ ಪರಾಮರ್ಶೆ ನಡೆಸಿದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ತಮ್ಮ ಸೋಲಿಗೆ ನಿಜಕ್ಕೂ ಹೊಣೆ ಮಾಡಿದ್ದು ಹಾಗೂ ದೂರಿದ್ದು ಯಾರನ್ನು ಎಂಬ ಚರ್ಚೆ ಕಾಂಗ್ರೆಸ್‌ ವಲಯದಲ್ಲಿ ಆರಂಭವಾಗಿದೆ.

"

ತಮ್ಮನ್ನು ಸೋಲಿಸಲು ಬಿಜೆಪಿ-ಜೆಡಿಎಸ್‌ ಒಗ್ಗೂಡಿದ್ದವು. ಅದಕ್ಕೆ ತಮ್ಮ ಪಕ್ಷದವರು ಕೂಡ ಸಾಥ್‌ ನೀಡಿದ್ದರು ಎಂದು ಸಿದ್ದರಾಮಯ್ಯ ಮೈಸೂರಿನಲ್ಲಿ ಶುಕ್ರವಾರ ಹೇಳಿಕೆ ನೀಡಿದ್ದಾರೆ. ಅಷ್ಟೇ ಅಲ್ಲ, ಈ ರೀತಿ ಪಕ್ಷದ ಅಭ್ಯರ್ಥಿ ಸೋಲಿಗೆ ಕೆಲಸ ಮಾಡಿದವರು ತಾವಾಗೇ ಪಕ್ಷವನ್ನು ತೊರೆದು ಹೋಗಬೇಕು ಎನ್ನುವ ಮೂಲಕ ಸೋಲಿಗೆ ಕಾರಣರಾದವರಿಗೆ ಪರೋಕ್ಷ ಎಚ್ಚರಿಕೆಯನ್ನೂ ನೀಡಿದ್ದಾರೆ.

ಇಷ್ಟಕ್ಕೂ ಸಿದ್ದರಾಮಯ್ಯ ಅವರು ಸೋಲಿನ ಎರಡೂವರೆ ವರ್ಷದ ನಂತರ ಈ ವಿಚಾರ ಪ್ರಸ್ತಾಪಿಸಿ ಯಾರನ್ನು ಟಾರ್ಗೆಟ್‌ ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಹುಟ್ಟುಕೊಂಡಿದೆ. ಸಿದ್ದರಾಮಯ್ಯ ಅವರ ಆಪ್ತರ ಪ್ರಕಾರ ಇದು ಪಕ್ಕಾ ಸ್ಥಳೀಯ ನಾಯಕರನ್ನು ಗುರಿಯಾಗಿಟ್ಟುಕೊಂಡು ನೀಡಿದ ಹೇಳಿಕೆ. ಕಳೆದ ಚುನಾವಣೆ ವೇಳೆ ಹಲವು ಸ್ಥಳೀಯ ನಾಯಕರು ಚುನಾವಣೆಯಲ್ಲಿ ಕೆಲಸ ನಿರ್ವಹಿಸಲು ಸಿದ್ದರಾಮಯ್ಯ ಅವರಿಂದ ಅಗತ್ಯ ಚುನಾವಣಾ ಸಾಮಗ್ರಿ ಪಡೆದುಕೊಂಡಿದ್ದರೂ ಅದನ್ನು ಜನರಿಗೆ ತಲುಪಿಸಿಲ್ಲ. ಗೆಲುವಿಗಾಗಿ ಶ್ರಮಿಸಿಲ್ಲ. ಜತೆಗಿದ್ದುಕೊಂಡೇ ಕೈಕೊಟ್ಟಇಂತಹ ಸ್ಥಳೀಯ ನಾಯಕರ ಬಗ್ಗೆ ಸಿದ್ದರಾಮಯ್ಯ ಅವರಿಗೆ ಮುನಿಸಿದೆ. ಈ ನಾಯಕರನ್ನು ಉದ್ದೇಶಿಸಿ ಸಿದ್ದರಾಮಯ್ಯ ಈ ಹೇಳಿಕೆ ನೀಡಿದ್ದಾರೆ ಎನ್ನುತ್ತಾರೆ ಅವರ ಆಪ್ತರು.

"

ಸಿದ್ದರಾಮಯ್ಯ ಸ್ಫೋಟಕ ಹೇಳಿಕೆಗೆ ಡಿಕೆ ಶಿವಕುಮಾರ್ ಕಕ್ಕಾಬಿಕ್ಕಿ...!

ಆದರೆ, ಸಿದ್ದರಾಮಯ್ಯ ಅವರು ಒಕ್ಕಲಿಗರಿಗೆ ನಾನು ಮತ್ತೆ ಮುಖ್ಯಮಂತ್ರಿಯಾಗುವುದು ಇಷ್ಟವಿರಲಿಲ್ಲ ಎಂದು ಹೇಳಿದ್ದಾರೆ. ತನ್ಮೂಲಕ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದ ಒಕ್ಕಲಿಗ ಸಮುದಾಯ ತಮ್ಮ ಪರ ನಿಲ್ಲದಂತೆ ಮಾಡಲಾಗಿದೆ ಎಂಬ ಪರೋಕ್ಷ ಬೇಸರವೂ ಅವರ ಮಾತಿನಲ್ಲಿ ಕಂಡುಬರುತ್ತಿದೆ. ಜತೆಗೆ, ಕ್ಷೇತ್ರದ ಇತರ ಪ್ರಮುಖ ಸಮುದಾಯಗಳಾದ ಪರಿಶಿಷ್ಟಪಂಗಡ ಹಾಗೂ ಪರಿಶಿಷ್ಟಜಾತಿ ಜನರು ಸಹ ಬೆಂಬಲ ನೀಡಿಲ್ಲ ಎಂಬ ಬೇಸರವೂ ಸಿದ್ದರಾಮಯ್ಯ ಅವರಿಗೆ ಇದೆ ಎನ್ನಲಾಗಿದೆ.

ಈ ಸಮುದಾಯಗಳು ಈ ರೀತಿ ವರ್ತಿಸಲು ಕಾಂಗ್ರೆಸ್‌ ಪಕ್ಷದ ನಾಯಕರು ಕಾರಣ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿರುವ ಮಾಜಿ ಸಂಸದ ವಿ. ಶ್ರೀನಿವಾಸ ಪ್ರಸಾದ್‌ ಅವರು ನೇರವಾಗಿ ಸಿದ್ದರಾಮಯ್ಯ ವಿರುದ್ಧ ಕೆಲಸ ಮಾಡಿದ್ದರು. ಇನ್ನು ಪರಿಶಿಷ್ಟರು ಹಾಗೂ ಒಕ್ಕಲಿಗರು ಕೈಕೊಟ್ಟಿರುವುದಕ್ಕೆ ಸಂಬಂಧಿಸಿದರಂತೆ ಕಾಂಗ್ರೆಸ್‌ ನಾಯಕರಾದ ಡಾ.ಜಿ. ಪರಮೇಶ್ವರ್‌, ಡಿ.ಕೆ.ಶಿವಕುಮಾರ್‌ ಅವರ ಹೆಸರು ತಳಕು ಹಾಕಿಕೊಂಡಿದೆ.