Asianet Suvarna News Asianet Suvarna News

ಹಿರೇಕೆರೂರು: ಸರ್ವಜ್ಞನ ನಾಡಲ್ಲಿ ಕೌರವನ ವಿರುದ್ಧ ತೊಡೆ ತಟ್ಟೋರು ಯಾರು?

ಯು.ಬಿ.ಬಣಕಾರ ಕಾಂಗ್ರೆಸ್‌ ಸೇರ್ಪಡೆಯಿಂದ ಹಿರೇಕೆರೂರು ಕ್ಷೇತ್ರದಲ್ಲಿ ರಂಗೇರಿದ ರಾಜಕೀಯ, ಮಾಜಿ ಶಾಸಕ ಬನ್ನಿಕೋಡ ಮುಂದಿನ ನಡೆ ಬಗ್ಗೆ ಕುತೂಹಲ. 

Who is Contest Against BC Patil at Hirekerur in Haveri grg
Author
First Published Mar 5, 2023, 12:09 PM IST

ನಾರಾಯಣ ಹೆಗಡೆ

ಹಾವೇರಿ(ಮಾ.05):  ವರಕವಿ ಸರ್ವಜ್ಞನ ನಾಡು ಹಿರೇಕೆರೂರು ಕ್ಷೇತ್ರದಲ್ಲಿ ಚುನಾವಣಾ ಕಾವು ಏರತೊಡಗಿದೆ. 2018ರಲ್ಲಿ ಕಾಂಗ್ರೆಸ್‌ನಿಂದ ಗೆದ್ದು, ಬಳಿಕ, ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿ, 2019ರ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಜಯಭೇರಿ ಬಾರಿಸಿದ ಕೌರವ ಖ್ಯಾತಿಯ ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಈ ಸಲವೂ ಬಿಜೆಪಿಯಿಂದ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಟಿಕೆಟ್‌ ಸಿಕ್ಕರೆ ಗೆಲ್ಲುವ ಹುಮ್ಮಸ್ಸಿನಲ್ಲಿದ್ದಾರೆ. ಇತ್ತೀಚೆಗೆ ಕಾಂಗ್ರೆಸ್‌ ಸೇರಿರುವ ಯು.ಬಿ.ಬಣಕಾರ, ಅಖಾಡದಲ್ಲಿ ತೊಡೆ ತಟ್ಟಲು ಸಜ್ಜಾಗಿರುವುದು ಭಾರೀ ಕುತೂಹಲ ಮೂಡಿಸಿದೆ.

ಹಾವೇರಿ ಜಿಲ್ಲೆಯ ಉಳಿದೆಲ್ಲ ಕ್ಷೇತ್ರಗಳಿಗಿಂತ ಹಿರೇಕೆರೂರು ರಾಜಕೀಯ ವಿಭಿನ್ನ. ಇಲ್ಲಿ ಹೊಸಮುಖಗಳಿಗೆ ಆಸ್ಪದವಿಲ್ಲ. ಪಕ್ಷ ಮುಖ್ಯವಾದರೂ ಅಭ್ಯರ್ಥಿಯ ಸಾಮರ್ಥ್ಯ ನೋಡಿಯೇ ಜನ ಬೆಂಬಲಿಸುತ್ತಾರೆ. ಕಳೆದ 5 ಚುನಾವಣೆಗಳಲ್ಲಿ ನಾಲ್ಕು ಸಲ ಬಿ.ಸಿ.ಪಾಟೀಲರನ್ನು ಮತದಾರರು ಬೆಂಬಲಿಸಿದ್ದಾರೆ. ಕಳೆದ ಉಪಚುನಾವಣೆ ಹೊರತುಪಡಿಸಿ ಇಲ್ಲಿ ಕಳೆದ ಅನೇಕ ವರ್ಷಗಳಿಂದ ಬಣಕಾರ ಮತ್ತು ಬಿ.ಸಿ.ಪಾಟೀಲರ ನಡುವೆಯೇ ಜಿದ್ದಾಜಿದ್ದಿ ನಡೆದಿದೆ. ಕಾಂಗ್ರೆಸ್‌ ಮತ್ತು ಬಿಜೆಪಿ ಸಮಬಲ ಹೊಂದಿದ್ದು, ಜೆಡಿಎಸ್‌ ಲೆಕ್ಕಕ್ಕಿಲ್ಲ.

‘ಕಾಂಗ್ರೆಸ್‌’ ಯೋಜನೆಗಳಿಗೆ ಗ್ಯಾರಂಟಿ ಇಲ್ಲ: ಸಚಿವ ಬಿ.ಸಿ.ಪಾಟೀಲ್‌ ಗೇಲಿ

2004ರಲ್ಲಿ ಜೆಡಿಎಸ್‌ನಿಂದ ಗೆದ್ದು, ಬಳಿಕ, ಎರಡು ಸಲ ಕಾಂಗ್ರೆಸ್ಸಿನಿಂದ ಹಾಗೂ 2019ರ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಗೆದ್ದಿರುವ ಬಿ.ಸಿ.ಪಾಟೀಲ, ಕೃಷಿ ಸಚಿವರಾಗಿ ಸಾಮರ್ಥ್ಯ ಹೆಚ್ಚಿಸಿಕೊಂಡಿದ್ದಾರೆ. 2004ರಲ್ಲಿ ಜೆಡಿಎಸ್‌ನಿಂದ ಗೆದ್ದು ಮೀಸೆ ತಿರುವಿದ್ದ ಬಿ.ಸಿ.ಪಾಟೀಲ, 2008ರಲ್ಲಿ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿ ಬಣಕಾರ ವಿರುದ್ಧ ಗೆದ್ದಿದ್ದರು. 2013ರಲ್ಲಿ ಯಡಿಯೂರಪ್ಪನವರ ಜೊತೆ ಕೆಜೆಪಿ ಸೇರಿದ್ದ ಬಣಕಾರ ಗೆಲುವಿನ ದಡ ಸೇರಿದ್ದರು. 2018ರಲ್ಲಿ ಮತ್ತೆ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದ ಬಿ.ಸಿ.ಪಾಟೀಲ್‌, 555 ಮತಗಳ ಅಂತರದಿಂದ ಬಣಕಾರರನ್ನು ಸೋಲಿಸಿದ್ದರು. ಬಳಿಕ, ಮಂತ್ರಿಯಾಗಬೇಕೆಂಬ ಹಠಕ್ಕೆ ಬಿದ್ದಿದ್ದ ಬಿ.ಸಿ. ಪಾಟೀಲರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರಿ, 2019ರ ಉಪಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದರು. ಪ್ರತಿ ಚುನಾವಣೆಯಲ್ಲಿ ಬಿ.ಸಿ.ಪಾಟೀಲರಿಗೆ ಪೈಪೋಟಿ ನೀಡುತ್ತಿದ್ದ ಬಣಕಾರ ಆಗ ಬಿಜೆಪಿಯಲ್ಲೇ ಇದ್ದರು.

ಬಿಜೆಪಿಯಿಂದ ಈ ಸಲವೂ ಬಿ.ಸಿ.ಪಾಟೀಲರೇ ಕಣಕ್ಕಿಳಿಯುವುದು ಬಹುತೇಕ ನಿಶ್ಚಿತ. ಬಣಕಾರ ಈಗ ಬಿಜೆಪಿ ತೊರೆದು, ಕಾಂಗ್ರೆಸ್‌ ಸೇರಿದ್ದಾರೆ. ಕಾಂಗ್ರೆಸ್ಸಿನಿಂದ ಬಣಕಾರಗೆ ಟಿಕೆಟ್‌ ಫೈನಲ್‌ ಎಂಬ ಮಾತು ಕೇಳಿ ಬರುತ್ತಿದೆ. ಮಾಜಿ ಶಾಸಕ ಬಿ.ಎಚ್‌.ಬನ್ನಿಕೋಡ ಕೂಡ ‘ಕೈ’ ಟಿಕೆಟ್‌ಗೆ ಪೈಪೋಟಿ ನಡೆಸುತ್ತಿದ್ದಾರೆ. ಬಣಕಾರಗೆ ಟಿಕೆಟ್‌ ಕೊಟ್ಟರೆ ಬನ್ನಿಕೋಡ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದರ ಮೇಲೆ ಅಖಾಡದ ರಂಗು ಬದಲಾಗುವ ಸಾಧ್ಯತೆಯಿದೆ. ಪಿ.ಡಿ.ಬಸನಗೌಡ್ರ, ದಿಗ್ವಿಜಯ ಹತ್ತಿ, ಮಂಜುನಾಥ ತಂಬಾಕದ ಕೂಡ ‘ಕೈ’ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಜೆಡಿಎಸ್‌ನಿಂದ ಜಯಣ್ಣ ಜಾವಣ್ಣನವರಗೆ ಟಿಕೆಟ್‌ ಫೈನಲ್‌ ಆಗಿದೆ.

ದೇವತೆಗಳನ್ನು ಪೂಜಿಸುವ ಅರ್ಚಕರು ಮಹಾನ್‌ ಶಕ್ತಿವಂತರು: ಸಚಿವ ಬಿ.ಸಿ.ಪಾಟೀಲ

ಕ್ಷೇತ್ರದ ಹಿನ್ನೆಲೆ:

ಕೃಷಿ ಪ್ರಧಾನವಾದ, ದಾವಣಗೆರೆ, ಶಿವಮೊಗ್ಗ ಜಿಲ್ಲೆಯ ಗಡಿಯಂಚಿನಲ್ಲಿರುವ, ಬಹುತೇಕ ಮಲೆನಾಡ ಸೆರಗಿನಲ್ಲಿರುವ ಕ್ಷೇತ್ರವಿದು. 1957ರಿಂದ ಶಂಕರರಾವ್‌ ಗುಬ್ಬಿಯವರು ಕಾಂಗ್ರೆಸ್ಸಿನಿಂದ ಮೂರು ಸಲ, ಒಂದು ಸಲ ಪಕ್ಷೇತರರಾಗಿ ಸೇರಿ 4 ಸಲ ಕ್ಷೇತ್ರ ಪ್ರತಿನಿಧಿಸಿದ್ದಾರೆ. ಬಿ.ಜಿ. ಬಣಕಾರ ಅವರು ಒಂದು ಸಲ ಕಾಂಗ್ರೆಸ್ಸಿನಿಂದ, ಎರಡು ಬಾರಿ ಪಕ್ಷೇತರರಾಗಿ ಗೆದ್ದಿದ್ದಾರೆ. 1989ರಲ್ಲಿ ಜನತಾದಳದಿಂದ ಬನ್ನಿಕೋಡ ಗೆದ್ದರೆ, 1994ರಲ್ಲಿ ಯು.ಬಿ.ಬಣಕಾರ ಬಿಜೆಪಿಯಿಂದ ಗೆದ್ದು, ಜಿಲ್ಲೆಯಲ್ಲಿ ಮೊದಲ ಬಾರಿಗೆ ಕಮಲ ಅರಳಿಸಿದ್ದರು. 1999ರಲ್ಲಿ ಪಕ್ಷೇತರರಾಗಿ ಬನ್ನಿಕೋಡ ಆಯ್ಕೆಯಾದರು. 2004ರಲ್ಲಿ ಮೊದಲ ಬಾರಿ ಬಿ.ಸಿ.ಪಾಟೀಲ ಜೆಡಿಎಸ್‌ನಿಂದ ಸ್ಪರ್ಧಿಸಿ ಗೆದ್ದರು. ಬಿ.ಸಿ.ಪಾಟೀಲರು ಈಗ ಬಿಜೆಪಿಯಲ್ಲಿದ್ದರೆ, ಬಣಕಾರ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ.

ಜಾತಿ ಲೆಕ್ಕಾಚಾರ:

ಹಿರೇಕೆರೂರು ಅಘೋಷಿತ ಸಾದರ ಲಿಂಗಾಯತರ ಕ್ಷೇತ್ರ ಎಂಬಂತಾಗಿದೆ. ಸಾದರ ಲಿಂಗಾಯತರನ್ನು ಬಿಟ್ಟು ಇದುವರೆಗೆ ಯಾರೂ ಗೆದ್ದಿಲ್ಲ. ಕ್ಷೇತ್ರದಲ್ಲಿ 80 ಸಾವಿರ ಲಿಂಗಾಯತ ಮತಗಳಿದ್ದರೆ, 25 ಸಾವಿರ ಮುಸ್ಲಿಂ, ತಲಾ 20 ಸಾವಿರ ಎಸ್ಸಿ ಮತ್ತು ಎಸ್ಟಿ ಮತಗಳಿವೆ. ಕುರುಬ ಸಮಾಜದ 20 ಸಾವಿರ ಮತಗಳಿವೆ.

Follow Us:
Download App:
  • android
  • ios