ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಪತ್ರ ಬಳಕೆ ವಿಚಾರವಾಗಿ ಕಾನೂನು ತಿದ್ದುಪಡಿ ಮಾಡುವ ಅವಶ್ಯಕತೆ ಇದೆಯೋ, ಇಲ್ಲವೋ ಎಂಬ ಅಭಿಪ್ರಾಯ ತಿಳಿಸುವಂತೆ ಕಾನೂನು ತಜ್ಞರಿಗೆ ಸೂಚಿಸಲಾಗಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ್ ತಿಳಿಸಿದರು.
ಬೆಂಗಳೂರು (ಸೆ.18): ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಪತ್ರ ಬಳಕೆ ವಿಚಾರವಾಗಿ ಕಾನೂನು ತಿದ್ದುಪಡಿ ಮಾಡುವ ಅವಶ್ಯಕತೆ ಇದೆಯೋ, ಇಲ್ಲವೋ ಎಂಬ ಅಭಿಪ್ರಾಯ ತಿಳಿಸುವಂತೆ ಕಾನೂನು ತಜ್ಞರಿಗೆ ಸೂಚಿಸಲಾಗಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಪತ್ರದ ಮೂಲಕ ಚುನಾವಣೆ ನಡೆಸುವ ಕುರಿತು ಕಾನೂನು ತಿದ್ದುಪಡಿ ಕುರಿತು ಗೊಂದಲವಿದೆ. ಹೀಗಾಗಿ ಕಾನೂನು ತಿದ್ದುಪಡಿ ಅವಶ್ಯಕತೆ ಇದೆಯೇ, ಇಲ್ಲವೇ ಎಂಬ ಬಗ್ಗೆ ಕಾನೂನು ತಜ್ಞರು ಅಧ್ಯಯನ ನಡೆಸಿ ತಿಳಿಸುವಂತೆ ಹೇಳಲಾಗಿದೆ.
ಇನ್ನು, ಮತಪತ್ರ ಬಳಕೆ ವಿಚಾರದಲ್ಲಿ ಅವಶ್ಯಕತೆ ಇದ್ದರೆ ಸುಗ್ರೀವಾಜ್ಞೆಯನ್ನೂ ಹೊರಡಿಸುತ್ತೇವೆ. ಈ ಬಗ್ಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸುತ್ತೇವೆ ಎಂದರು. ಬಿಪಿಎಲ್ ಪಡಿತರ ಚೀಟಿ ರದ್ದು ವಿಚಾರದ ಕುರಿತು ಪ್ರತಿಕ್ರಿಯಿಸಿ, ಬಿಪಿಎಲ್ ಪಡಿತರ ಚೀಟಿ ಕುರಿತಂತೆ ಸಮಸ್ಯೆಗಳಿದ್ದರೆ ಅದರ ಪರಿಹಾರಕ್ಕೆ ಗ್ಯಾರಂಟಿ ಯೋಜನೆಗಳ ನಿರ್ವಹಣೆ ಸಮಿತಿಯನ್ನು ಸಂಪರ್ಕಿಸಬೇಕು. ಅಂತಹ ಸಮಸ್ಯೆಗಳನ್ನು ಸಮಿತಿ ನಿಭಾಯಿಸಲಿದೆ. ಗ್ಯಾರಂಟಿ ಯೋಜನೆಗಳು ಬಡವರಿಗಾಗಿ ಮಾಡಿದ್ದು, ಅವರಿಗೆ ಸಮಸ್ಯೆಯಾಗದಂತೆ ಮಾಡುತ್ತೇವೆ. ಇನ್ನು, ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರು ಕಾಳಜಿವಹಿಸಿ ಈ ಕುರಿತು ಕೆಲಸ ಮಾಡಬೇಕು ಎಂದರು.
ಸುಗ್ರೀವಾಜ್ಞೆಗೆ ಸಿದ್ಧತೆ
ಳೀಯ ಸಂಸ್ಥೆಗಳ ಚುನಾವಣೆಗೆ ಇವಿಎಂ ಬದಲು ಮತಪತ್ರ (ಬ್ಯಾಲೆಟ್) ಬಳಕೆ ಸಂಬಂಧಿಸಿ ಸೆ.11ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮೂರು ಕಾಯಿದೆಗಳಿಗೆ ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ಹೊರಡಿಸಲು ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಸೆ.4ರ ಸಂಪುಟ ಸಭೆ ನಿರ್ಣಯದಂತೆ ಜಿಬಿಎ, ಪಂಚಾಯತಿಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಇವಿಎಂ ಬದಲಿಗೆ ಬ್ಯಾಲೆಟ್ ಪೇಪರ್ ಬಳಸುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಶನಿವಾರ ಶಿಫಾರಸು ಕಳುಹಿಸಿಕೊಡಲಾಗಿದೆ.
ಇದಕ್ಕೆ ಪೂರಕವಾಗಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕಾಯಿದೆ-2024, ಕರ್ನಾಟಕ ಮುನ್ಸಿಪಾಲಿಟಿಗಳ ಕಾಯಿದೆ ಸೇರಿ ಮೂರು ಕಾಯಿದೆಗಳಿಗೆ ತಿದ್ದುಪಡಿ ತರಬೇಕಾಗಿದೆ. ಈ ಕುರಿತು ಸೆ.11ರ ಸಂಪುಟ ಸಭೆಯಲ್ಲಿ ತೀರ್ಮಾನಿಸುವುದಾಗಿ ಮೂಲಗಳು ತಿಳಿಸಿವೆ. ಇವಿಎಂ ಬದಲು ಬ್ಯಾಲೆಟ್ ಪೇಪರ್ ಬಳಕೆ ಸಂಬಂಧ ಕಾಯಿದೆಗೆ ತಿದ್ದುಪಡಿ ಅಗತ್ಯ. ಕಳೆದ ತಿಂಗಳಷ್ಟೇ ಮಳೆಗಾಲದ ಅಧಿವೇಶನ ಮುಗಿದಿದ್ದು, ಬೆಳಗಾವಿಯ ಚಳಿಗಾಲದ ಅಧಿವೇಶನದವರೆಗೆ ಅಧಿವೇಶನ ಇಲ್ಲ. ಹೀಗಾಗಿ ಕಾಯ್ದೆಗಳಿಗೆ ತಿದ್ದುಪಡಿ ತಂದು ಬ್ಯಾಲೆಟ್ ಪೇಪರ್ ಬಳಕೆ ನಿಯಮ ಜಾರಿಗೆ ಸುಗ್ರೀವಾಜ್ಞೆ ಅತ್ಯಗತ್ಯ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
