ಬೆಂಗಳೂರು [ಡಿ.10]: ನೆರೆಯ ಮಹಾರಾಷ್ಟ್ರ ಮತ್ತು ಉತ್ತರದ ಹರ್ಯಾಣದಲ್ಲಿ ಗೆಲ್ಲಲು ಪ್ರಯಾಸಪಟ್ಟಿದ್ದ ಬಿಜೆಪಿಯ ರಾಷ್ಟ್ರೀಯ ನಾಯಕರಿಗೆ ಕರ್ನಾಟಕದಲ್ಲಿನ ಉಪಚುನಾವಣೆಯ ಭರ್ಜರಿ ಗೆಲುವು ನೆಮ್ಮದಿ ಉಂಟು ಮಾಡಿದೆ.

ರಾಜ್ಯದಲ್ಲಿ ಹಿಂದೆ ಇದ್ದ ಜೆಡಿಎಸ್‌ ಮತ್ತು ಕಾಂಗ್ರೆಸ್‌ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನಗೊಂಡು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದರೂ ಅಪಾಯ ಜೊತೆ ಜೊತೆಗೇ ಇತ್ತು. ಬಹುಮತ ಇಲ್ಲದಿದ್ದರೂ ಹಾಗೂ ಹೀಗೂ ಸರ್ಕಾರ ಮೂರು ತಿಂಗಳು ತಂತಿ ಮೇಲಿನ ನಡಿಗೆ ಪೂರೈಸಿತ್ತು. ಆದರೆ, ಈ ಉಪಚುನಾವಣೆಯೇ ತಮ್ಮ ಸರ್ಕಾರಕ್ಕೆ ಬಹುಮತ ತಂದು ಕೊಡಬಹುದು ಅಥವಾ ಪತನಗೊಳ್ಳಲು ಕಾರಣವಾಗಬಹುದು ಎಂಬ ಆತಂಕ ಬಿಜೆಪಿ ನಾಯಕರಿಗೆ ಇದ್ದೇ ಇತ್ತು.

ಸಮ್ಮಿಶ್ರ ಸರ್ಕಾರದಲ್ಲಿ ಶಾಸಕರಾಗಿದ್ದ 17 ಶಾಸಕರು ರಾಜೀನಾಮೆ ನೀಡಿದ್ದರಿಂದಲೇ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಸಾಧ್ಯವಾಯಿತು. ಆದರೆ, ಅದು ಪೂರ್ಣ ಬಹುಮತದ ಸರ್ಕಾರವಾಗಿರಲಿಲ್ಲ. ಹೀಗಾಗಿ, ಅಳುಕಿನಿಂದಲೇ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಆಡಳಿತ ನಡೆಸುತ್ತಿದ್ದರು. ಈ ಉಪಚುನಾವಣೆಗಾಗಿಯೇ ಎದುರು ನೋಡುತ್ತಿದ್ದರು.

’ಜನಾದೇಶ ಕದ್ದಿದ್ದ ಕಾಂಗ್ರೆಸ್‌ಗೆ ಶಾಸ್ತಿ, ಬಿಜೆಪಿ ಗೆಲ್ಲಿಸಿದ ಕರ್ನಾಟಕ ಜನತೆಗೆ ಕೃತಜ್ಞತೆ’..

ಸರ್ಕಾರ ಮತ್ತು ಪಕ್ಷ ಒಗ್ಗಟ್ಟಿನಿಂದ ಮುನ್ನಡೆದರೆ ಚುನಾವಣೆಯಲ್ಲಿ ಗೆಲುವು ಸುಲಭ ಎಂಬ ಸ್ಪಷ್ಟಸಂದೇಶವನ್ನು ಈ ಉಪಚುನಾವಣೆ ರವಾನಿಸಿದೆ. ಎಲ್ಲ ಹದಿನೈದು ವಿಧಾನಸಭಾ ಕ್ಷೇತ್ರಗಳಲ್ಲೂ ಉಪಚುನಾವಣೆ ಪ್ರಕ್ರಿಯೆ ಆರಂಭವಾದ ಬೆನ್ನಲ್ಲೇ ಸಚಿವರನ್ನೂ ಒಳಗೊಂಡಂತೆ ಉಸ್ತುವಾರಿ ತಂಡಗಳನ್ನು ರಚಿಸಲಾಯಿತು. ಜತೆಗೆ ಸ್ಥಳೀಯ ಮುಖಂಡರ ಹಾಗೂ ಕಾರ್ಯಕರ್ತರ ತಂಡಗಳನ್ನು ರಚಿಸುವ ಮೂಲಕ ವ್ಯವಸ್ಥಿತ ಪ್ರಚಾರಕ್ಕೆ ಚಾಲನೆ ನೀಡಲಾಯಿತು. ಅದೀಗ ಕೈಹಿಡಿದಿದೆ. ಹದಿನೈದು ಕ್ಷೇತ್ರಗಳ ಪೈಕಿ ಹನ್ನೆರಡು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ.

ಈ ಚುನಾವಣೆಯ ಫಲಿತಾಂಶದ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ಪಕ್ಷ ಮತ್ತು ಸರ್ಕಾರ ಒಟ್ಟಾಗಿ ಸಾಗಿದಲ್ಲಿ ಅದರಿಂದ ಎರಡಕ್ಕೂ ಅನುಕೂಲವಾಗಲಿದೆ. ಪಕ್ಷ ಸಂಘಟನೆಯೂ ಬಲಗೊಳ್ಳಲಿದೆ. ಜೊತೆಗೆ ಸರ್ಕಾರದ ಸಾಧನೆಗಳನ್ನೂ ಜನರಿಗೆ ಸಮರ್ಪಕವಾಗಿ ತಲುಪಿಸಬಹುದು ಎಂಬುದು ಮನವರಿಕೆಯಾಗಿದೆ.