’ಜನಾದೇಶ ಕದ್ದಿದ್ದ ಕಾಂಗ್ರೆಸ್‌ಗೆ ಶಾಸ್ತಿ, ಬಿಜೆಪಿ ಗೆಲ್ಲಿಸಿದ ಕರ್ನಾಟಕ ಜನತೆಗೆ ಕೃತಜ್ಞತೆ’
ಜನಾದೇಶ ಕದ್ದಿದ್ದ ಕಾಂಗ್ರೆಸ್ಸಿಗೆ ಶಾಸ್ತಿ: ಮೋದಿ| ಬಿಜೆಪಿಗೆ ದಕ್ಷಿಣ ಭಾರತದಲ್ಲಿ ಪ್ರಭಾವವಿಲ್ಲ ಎನ್ನುತ್ತಿದ್ದವರಿಗೆ ಶಿಕ್ಷೆಯಾಗಿದೆ | ಬಿಜೆಪಿ ಗೆಲ್ಲಿಸಿದ ಕರ್ನಾಟಕದ ಜನತೆಗೆ ಕೃತಜ್ಞೆಗಳನ್ನು ಸಲ್ಲಿಸುತ್ತೇನೆ: ಪಿಎಂ
ಜಾರ್ಖಂಡ್[ಡಿ.10]: ಕರ್ನಾಟಕ ವಿಧಾನಸಭೆಯ 15 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಬಾರಿಸಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ಸಂತಸ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದಲ್ಲಿ ಜನಾದೇಶವನ್ನು ಹಿಂಬಾಗಿಲ ಮೂಲಕ ಕಳ್ಳತನ ಮಾಡಿದ್ದ ಕಾಂಗ್ರೆಸ್ಸಿಗೆ ಉಪಚುನಾವಣೆಯಲ್ಲಿ ತಕ್ಕ ಪಾಠ ದೊರೆತಿದೆ ಎಂದು ಹರಿಹಾಯ್ದಿದ್ದಾರೆ. ಇದೇ ವೇಳೆ, ಬಿಜೆಪಿಯ ಮೇಲೆ ದೇಶದ ಜನ ಎಷ್ಟು ವಿಶ್ವಾಸವಿರಿಸಿದ್ದಾರೆ ಎಂಬುದಕ್ಕೆ ಈ ಫಲಿತಾಂಶವೇ ಸಾಕ್ಷಿ ಎಂದು ಹೇಳಿದ್ದಾರೆ.
ಜಾರ್ಖಂಡ್ ವಿಧಾನಸಭೆ ಚುನಾವಣಾ ಪ್ರಚಾರ ಭಾಷಣಗಳಲ್ಲಿ ಸೋಮವಾರ ಕರ್ನಾಟಕ ವಿಧಾನಸಭೆ ಉಪಚುನಾವಣೆ ಫಲಿತಾಂಶವನ್ನು ಪ್ರಮುಖವಾಗಿ ಪ್ರಸ್ತಾಪಿಸಿದ ಪ್ರಧಾನಿ, ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕದಲ್ಲಿ ಕಾಂಗ್ರೆಸ್ ಹಾಗೂ ಅದರ ಮಿತ್ರರು ಜನಾದೇಶವನ್ನೇ ಬುಡಮೇಲು ಮಾಡಿದ್ದರು. ಜನಾದೇಶಕ್ಕೆ ಹಿಂದಿನಿಂದ ಇರಿದಿದ್ದರು. ಇದೀಗ ಆ ಪಕ್ಷಗಳು ಮಣ್ಣು ಮುಕ್ಕಿವೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ತಮ್ಮ ಬೆನ್ನಿಗೆ ಮತ್ತೊಮ್ಮೆ ಇರಿಯದಂತೆ ಜನರೇ ನೋಡಿಕೊಂಡಿದ್ದಾರೆ ಎಂಬುದನ್ನು ಉಪಚುನಾವಣೆ ಫಲಿತಾಂಶ ಎತ್ತಿ ತೋರಿಸಿದೆ ಎಂದಿದ್ದಾರೆ.
ಉಪಚುನಾವಣೆ ಫಲಿತಾಂಶದ ಮೂಲಕ ಕರ್ನಾಟಕದ ಮತದಾರರು ಬಲಿಷ್ಠ ಹಾಗೂ ಸ್ಥಿರ ಸರ್ಕಾರಕ್ಕೆ ಶಕ್ತಿ ತುಂಬಿದ್ದಾರೆ. ಅಸ್ಥಿರ ಸರ್ಕಾರಗಳಿಗೆ ಕಾರಣವಾಗುವ ತಾತ್ಕಾಲಿಕ ವ್ಯವಸ್ಥೆಗಳಿಗೆ ಯಾವುದೇ ಅವಕಾಶವಿಲ್ಲ. ರಾಜಕೀಯ ಸ್ಥಿರತೆಗಾಗಿ ದೇಶ ಬಿಜೆಪಿಯ ಮೇಲೆ ಎಷ್ಟು ವಿಶ್ವಾಸವಿರಿಸಿದೆ ಎಂಬುದಕ್ಕೆ ನಿದರ್ಶನ ನಮ್ಮ ಕಣ್ಣ ಮುಂದೆಯೇ ಇದೆ. ಇದಕ್ಕಾಗಿ ಕರ್ನಾಟಕದ ಜನತೆಗೆ ಕೃತಜ್ಞೆಗಳನ್ನು ಸಲ್ಲಿಸುತ್ತೇನೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಹೆಚ್ಚಿನ ಪ್ರಭಾವ ಹೊಂದಿಲ್ಲ ಎಂದು ಹೇಳುತ್ತಿದ್ದವರಿಗೆ ಜನರೇ ತಕ್ಕ ಶಿಕ್ಷೆ ಕೊಟ್ಟಿದ್ದಾರೆ. ಕಾಂಗ್ರೆಸ್ ಆಳ್ವಿಕೆಯಲ್ಲಿ ಕರ್ನಾಟಕದ ಅಭಿವೃದ್ಧಿಗೆ ಯಾವುದೇ ಅಜೆಂಡಾವೇ ಇರಲಿಲ್ಲ ಎಂದು ವಾಗ್ದಾಳಿ ನಡೆಸಿದರು.