Asianet Suvarna News Asianet Suvarna News

ರಾಹುಲ್‌ಗೆ ಲಿಂಗದೀಕ್ಷೆ ನೀಡಿ ಮುರುಘಾಶ್ರೀ ಹೇಳಿದ್ದೇನು?

ಸಿದ್ದರಾಮೋತ್ಸವಕ್ಕೆ ಬಂದಿದ ಕಾಂಗ್ರೆಸ್ ನಾಯಕ ರಾಹುಲ್‌ ಗಾಂಧಿ ಬಸವಕೇಂದ್ರ ಮುರುಘಾಮಠಕ್ಕೆ ಭೇಟಿ ನೀಡಿ, ಡಾ.ಶಿವಮೂರ್ತಿ ಮುರುಘಾಶರಣರಿಂದ ಆಶೀರ್ವಾದದ ಜೊತೆ ಲಿಂಗದೀಕ್ಷೆ ಪಡೆದರು. ಜೊತೆಗೆ ಇಷ್ಟಲಿಂಗ ಪೂಜೆ ಕಲಿಯಲು ಇಷ್ಟವಿದೆ ಎಂದು ಹೇಳಿದರು.

what murugha shree told to rahul after linga deeksha to him akb
Author
Bengaluru, First Published Aug 4, 2022, 11:55 AM IST

ದಾವಣಗೆರೆ: ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‌ಗಾಂಧಿ ಬುಧವಾರ ಬಸವಕೇಂದ್ರ ಮುರುಘಾಮಠಕ್ಕೆ ಭೇಟಿ ನೀಡಿ ಡಾ.ಶಿವಮೂರ್ತಿ ಮುರುಘಾಶರಣರ ಆಶೀರ್ವಾದ ಪಡೆದು, 50ಕ್ಕೂ ಹೆಚ್ಚು ಸ್ವಾಮೀಜಿಗಳೊಟ್ಟಿಗೆ ಸಮಾಲೋಚನೆ ನಡೆಸಿದರು. ಹುಬ್ಬಳ್ಳಿಯಿಂದ ಕಾರಿನಲ್ಲಿ ನೇರವಾಗಿ ಬೆಳಗ್ಗೆ 11ಕ್ಕೆ ಬಿಗಿ ಪೊಲೀಸ್‌ ಬಂದೋಬಸ್ತ್‌ ನಡುವೆ ಮುರುಘಾಮಠಕ್ಕೆ ರಾಹುಲ್‌ ಆಗಮಿಸಿದಾಗ ಕಾಂಗ್ರೆಸ್‌ ಕಾರ್ಯಕರ್ತರು ಅದ್ಧೂರಿ ಸ್ವಾಗತ ಕೋರಿದರು. ಮುರುಘಾಮಠದ ಕತೃಗದ್ದುಗೆಗೆ ತೆರಳಿದ ರಾಹುಲ್‌, ವಿಶೇಷ ಪೂಜೆ ನಡೆಸಿ ನಮಿಸಿದರು. ತರುವಾಯ ಮುರುಘಾಮಠದ ಪರಂಪರೆ ಸಾರುವ ಹಾಗೂ ಮುರುಘಾಮಠದ ಒಡನಾಟದ ಭಾವಚಿತ್ರಗಳ ವೀಕ್ಷಿಸಿದರು. ನಂತರ ದರ್ಬಾರ್‌ ಹಾಲ್‌ಗೆ ತೆರಳಿದ ರಾಹುಲ್‌, ಶಿವಮೂರ್ತಿ ಮುರುಘಾಶರಣರ ಭೇಟಿಯಾಗಿ ಆಶೀರ್ವಾದ ಪಡೆದರು.

ಕಾಯಕದಲ್ಲಿ ನಿಷ್ಠೆ ಇರಬೇಕು:

ಈ ವೇಳೆ ಮಾತನಾಡಿದ ಡಾ. ಶಿವಮೂರ್ತಿ ಮುರುಘಾ ಶರಣರು, ಹೆಣ್ಣುಮಕ್ಕಳಿಗೆ ಸಮಾನತೆ ಸಿಗಲಿ ಎಂಬ ಕಾರಣಕ್ಕೆ ಬಸವಣ್ಣನವರು ತಮ್ಮ ಮನೆ ಬಿಟ್ಟು ಹೊರಬಂದರು. ಪ್ರಪಂಚದ ಮೊದಲ ಸಂಸತ್‌, ಅನುಭವ ಮಂಟಪವನ್ನು ತೆರೆದು ಸಮಾನತೆಯ ತತ್ವ ಸಿದ್ಧಾಂತವನ್ನು ಅನುಷ್ಠಾನಗೊಳಿಸಿದರು. ದಯವೇ ಧರ್ಮದ ಮೂಲವೆಂದು ಮಾನವೀಯತೆಗೆ ಪ್ರತಿಪಾದಿಸಿದರು. ಕಾಯಕ ದಾಸೋಹ ಸಿದ್ಧಾಂತಕ್ಕೆ ಹೆಚ್ಚಿನ ಮಹತ್ವ ನೀಡಿದರು. ಕಾಯಕದಲ್ಲಿ ಪ್ರಾಮಾಣಿಕತೆ, ನಿಷ್ಠೆ ಇರಬೇಕು ಎಂದರು.

ಕುತೂಹಲದಿಂದ ಆಲಿಸಿದ ರಾಹುಲ್‌:

ಶಾಂತಿ ಹಾಗೂ ಪಾರದರ್ಶಕ ಆಡಳಿತಕ್ಕೆ ಬಸವಣ್ಣ ಒತ್ತುಕೊಟ್ಟರು. ಶ್ರದ್ಧೆ ಇಲ್ಲದಿದ್ದರೆ ಯಾವ ಕೆಲಸವೂ ಪರಿಪೂರ್ಣ ಆಗುವುದಿಲ್ಲ ಎಂದು ಬಲವಾಗಿ ನಂಬಿದ್ದರೆಂಬ ಬಸವತತ್ವಗಳನ್ನು ರಾಹುಲ್‌ ಆವರಿಗೆ ಪರಿಚಯ ಮಾಡಿಕೊಟ್ಟರು. ಬಸವತತ್ವಗಳ ಬಗ್ಗೆ ಅತ್ಯಂತ ಕುತೂಹಲದಿಂದ ಆಲಿಸಿದ ರಾಹುಲ್‌, ಬಸವಣ್ಣನವರ ಬಗ್ಗೆ ಕೇಳಿದ್ದೇನೆ. ಇಷ್ಟಲಿಂಗದ ಅರಿವು ಇರಲಿಲ್ಲ. ನೀವು ಯಾವ ಸಿದ್ಧಾಂತ ಪ್ರಚುರಪಡಿಸುತ್ತಿದ್ದೀರಿ, ನೀವು ಯಾವ ಪೂಜೆ ಮಾಡುತ್ತಿದ್ದೀರಾ, ಬಸವಣ್ಣ ಜಗತ್ತಿಗೆ ನೀಡಿದ ಸಂದೇಶವೇನೆ ಎಂದು ಅತ್ಯಂತ ವಿನೀತರಾಗಿ ಡಾ.ಶಿವಮೂರ್ತಿ ಮುರುಘಾಶರಣರ ಮುಂದೆ ಪ್ರಶ್ನೆಗಳ ಹರವಿದರು. ಇಷ್ಟಲಿಂಗ ಪೂಜೆ ವಿಧಾನ ತಿಳಿಸಿಕೊಡುತ್ತೀರಾ ಎಂದು ಭಿನ್ನವಿಸಿಕೊಂಡರು.

ರಾಹುಲ್‌ಗೆ ಲಿಂಗದೀಕ್ಷೆ :

ರಾಹುಲ್‌ ಕೈಯಲ್ಲಿ ಲಿಂಗವಿಟ್ಟು ಇಷ್ಟಲಿಂಗ ಪೂಜೆ (ಶಿವಯೋಗದ) ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ಶ್ರೀಗಳು ವಿವರಿಸಿದರು. ಇಷ್ಟಲಿಂಗ ಧ್ಯಾನ ಮಾಡಿದುದನ್ನು ತದೇಕಚಿತ್ತದಿಂದ ಸುಮಾರು 25 ನಿಮಿಷಗಳ ಕಾಲ ಆಲಿಸಿದರು. ನಂತರ ಡಾ.ಶಿಮುಶ, ರಾಹುಲ್‌ಗೆ ವಿಭೂತಿಧಾರಣೆ ಮಾಡಿ ಲಿಂಗದೀಕ್ಷೆ ನೀಡಿ ಈಗ ನೀವು ಬಸವ ಭಕ್ತರಾಗಿದ್ದೀರಿ ಎಂದು ಮನವರಿಕೆ ಮಾಡಿಕೊಟ್ಟರು. ನಂತರ ಮಾತನಾಡಿದ ರಾಹುಲ್‌ಗಾಂಧಿ, ನನಗೆ ಬಸವಣ್ಣನವರ ಬಗ್ಗೆ ಒಂದಿಷ್ಟು ಪರಿಚಯ ಇದೆ. ತಾವು ಯಾರನ್ನಾದರೂ ಕಳುಹಿಸಿದರೆ ಸಹಜ ಶಿವಯೋಗವನ್ನು ಕಲಿಯುತ್ತೇನೆ ಎಂದರು. ನಂತರ ಶ್ರೀಗಳು ರಾಹುಲ್‌ ಗಾಂಧಿಗೆ ಬಸವಣ್ಣನವರ ಭಾವಚಿತ್ರ ನೀಡಿ ಶಾಲು ಹೊದಿಸಿ ಗೌರವಿಸಿದರು.

ಇಷ್ಟಲಿಂಗ ಪೂಜೆ ಕಲಿಯಲು ರಾಹುಲ್‌ ಬಯಸಿದ್ದಾರೆ

ಇಷ್ಟಲಿಂಗ ಪೂಜೆ ಬಗ್ಗೆ ಹೇಳಿಕೊಡಲು ದೆಹಲಿಗೆ ಬರಲು ಹೇಳಿದ್ದಾರೆ. ಯಾರಾದರು ಸ್ವಾಮೀಜಿಗಳನ್ನು ಕಳುಹಿಸುತ್ತೇನೆ ಅಥವಾ ನಮ್ಮಿಂದಾದರೆ ನಾವೇ ಹೋಗುತ್ತೇವೆ. ಚರ್ಚೆ ಮಾಡಿ, ಪ್ರಾತ್ಯಕ್ಷಿಕೆ ನೋಡಿದ ಬಳಿಕ ಲಿಂಗಧಾರಣೆ ಮಾಡಿದ್ದಾರೆ ಎಂದು ಬಳಿಕ ಮುರುಘಾ ಶರಣರು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

ನಮ್ಮ ಪಕ್ಷ ಮಠಗಳನ್ನು ನೋಯಿಸಿಲ್ಲ:

ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್‌ ಮಾತನಾಡಿ, ಇದೊಂದು ಐತಿಹಾಸಿಕ ಮಠ. ರಾಹುಲ್‌ಗಾಂಧಿಗೆ ಇಷ್ಟಲಿಂಗ ದೀಕ್ಷೆ ನೀಡಿದ್ದಾರೆ. ಇವರು ಈ ಮಠಕ್ಕೆ ಬರಬೇಕು ಎಂದು ಬಹಳ ದಿನದಿಂದ ಹೇಳುತ್ತಿದ್ದರು. ಅನೇಕ ಸಮುದಾಯದವರಿಗೆ ದೀಕ್ಷೆ ಕೊಟ್ಟಿರುವುದು ಅವರಿಗೆ ಖುಷಿ ಕೊಟ್ಟಿದೆ. ಸೋನಿಯಾಗಾಂಧಿ, ರಾಜೀವಗಾಂಧಿ ಅವರು ಈ ಮಠದ ಬಗ್ಗೆ ಪ್ರಸ್ತಾಪಿಸುತ್ತಿದ್ದರು. ನಮ್ಮ ಪಕ್ಷದಿಂದ ಯಾವುದೇ ಮಠಗಳಿಗೆ ಯಾವುದೇ ಸಂದರ್ಭದಲ್ಲಿ ನೋಯಿಸಿಲ್ಲ. ಇದು ನಮ್ಮ ತತ್ವ ಸಿದ್ಧಾಂತ ಎಂದರು.

ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮಿಗಳು ಮಾತನಾಡಿ, ರಾಹುಲ್‌ಗಾಂಧಿಗೆ ಇಷ್ಟಲಿಂಗ ದೀಕ್ಷೆ ಮಾಡಿದ್ದು ನನಗೆ ಅತೀವ ಸಂತಸ ತಂದಿದೆ. ಶ್ರೀಗಳವರದು ಮಾನವೀಯತೆಯ ಹೃದಯ. ಅವರ ವಿಶ್ವಮಾನ್ಯತತ್ವ ಅಸಾಮಾನ್ಯವಾದುದು ಎಂದು ಹೇಳಿದರು.

ಪಕ್ಷದ ಮುಖಂಡರಾದ ವೇಣುಗೋಪಾಲ್‌, ಶಾಸಕ ರಘುಮೂರ್ತಿ, ಮಾಜಿ ಸಂಸದ ಬಿ.ಎನ್‌.ಚಂದ್ರಪ್ಪ, ಎಚ್‌.ಹನುಮಂತಪ್ಪ, ಬಿ.ಕೆ.ಹರಿಪ್ರಸಾದ್‌, ಈಶ್ವರ ಖಂಡ್ರೆ, ಮಾಜಿ ಸಚಿವ ಡಿ.ಸುಧಾಕರ್‌, ಜಿಲ್ಲಾಧ್ಯಕ್ಷ ತಾಜ್‌ಪೀರ್‌, ಸಲೀಂ ಅಹಮದ್‌, ಹನುಮಲಿ ಷಣ್ಮುಖಪ್ಪ, ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ, ಸಲೀಂ ಅಹಮದ್‌ ಇದ್ದರು.

50ಕ್ಕೂ ಹೆಚ್ಚು ಸ್ವಾಮೀಜಿಗಳು ಭಾಗಿ

ಬೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಹಾವೇರಿ ಹೊಸಮಠದ ಬಸವ ಶಾಂತಲಿಂಗ ಸ್ವಾಮಿಗಳು, ಸವಣೂರು ದೊಡ್ಡಹುಣಸೇಮಠದ ಚೆನ್ನಬಸವ ಸ್ವಾಮಿಗಳು, ಹೆಬ್ಬಾಳು ಮಹಾಂತ ರುದ್ರೇಶ್ವರ ಸ್ವಾಮಿಜಿಗಳು, ಕಬೀರಾನಂದಾಶ್ರಮದ ಶಿವಲಿಂಗಾನಂದ ಸ್ವಾಮಿಗಳು, ಅಥಣಿ ಗಚ್ಚಿನಮಠದ ಶಿವಬಸವ ಗುರುಮುರುಘರಾಜೇಂದ್ರ ಸ್ವಾಮಿಗಳು, ದಾವಣಗೆರೆ ವಿರಕ್ತಮಠದ ಬಸವ ಪ್ರಭು ಸ್ವಾಮಿಗಳು, ಗಂಗಾವತಿ ಕಲ್ಮಠದ ಸ್ವಾಮಿಗಳು, ಸಂಗಮೇಶ್ವರ ಸ್ವಾಮಿಗಳು, ಅಕ್ಕಿಮಠದ ಗುರುಲಿಂಗ ಸ್ವಾಮಿಗಳು, ಮಾದಾರಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರಚೆನ್ನಯ್ಯ ಸ್ವಾಮೀಜಿ, ಯಾದವ ಗುರುಪೀಠದ ಕೃಷ್ಣ ಯಾದವಾನಂದ ಸ್ವಾಮಿಗಳು, ಮರುಳಶಂಕರ ಸ್ವಾಮಿಗಳು, ತಿಳವಳ್ಳಿ ಕಲ್ಮಠದ ಬಸವ ನಿರಂಜನ ಸ್ವಾಮಿಗಳು, ಬ್ಯಾಡಗಿ ಮುಪ್ಪಿನಸ್ವಾಮಿ ಮಠದ ಮಲ್ಲಿಕಾರ್ಜುನ ಸ್ವಾಮಿಗಳು, ಛಲವಾದಿ ಗುರುಪೀಠದ ಬಸವನಾಗಿದೇವ ಸ್ವಾಮಿಗಳು, ಹಿರಿಯೂರು ಆದಿಜಾಂಬವ ಮಠದ ಷಡಕ್ಷರಮುನಿ ದೇಶೀಕೇಂದ್ರ ಸ್ವಾಮಿಗಳು, ಶರಣೆ ಮುಕ್ತಾಯಕ್ಕ, ಶರಣೆ ಅಕ್ಕನಾಗಮ್ಮ, ಶರಣೆ ಜಯದೇವಿ ತಾಯಿ, ಶರಣೆ ಚಿನ್ಮಯಿತಾಯಿ, ಶರಣೆ ರಾಜೇಶ್ವರಿ ತಾಯಿ ಸೇರಿದಂತೆ ಐವತ್ತಕ್ಕು ಹೆಚ್ಚು ಸ್ವಾಮೀಜಿಗಳು ಉಪಸ್ಥಿತರಿದ್ದರು.

Follow Us:
Download App:
  • android
  • ios