ಬೆಂಗಳೂರು [ಡಿ.20]:  ಉಪ ಚುನಾವಣೆ ವೇಳೆ ಜೆಡಿಎಸ್‌ ಜತೆಗಿನ ಮೈತ್ರಿ ಬಗ್ಗೆ ಗೊಂದಲದ ಹೇಳಿಕೆ ನೀಡಿದ ಕಾಂಗ್ರೆಸ್‌ನ ಹಿರಿಯ ನಾಯಕರ ಧೋರಣೆ ಕುರಿತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೈಕಮಾಂಡ್‌ ಕಳುಹಿಸಿದ ವೀಕ್ಷಕರ ಸಮ್ಮುಖ ಬೇಸರ ವ್ಯಕ್ತಪಡಿಸಿದರು ಎಂದು ಮೂಲಗಳು ತಿಳಿಸಿವೆ. 

ರಾಜ್ಯ ಕಾಂಗ್ರೆಸ್‌ ನಾಯಕತ್ವ ಬದಲಾವಣೆ ಕುರಿತು ರಾಜ್ಯ ನಾಯಕರ ಅಭಿಪ್ರಾಯ ಸಂಗ್ರಹಕ್ಕೆ ಆಗಮಿಸಿರುವ ಎಐಸಿಸಿ ವೀಕ್ಷಕರಾದ ಮಧುಸೂದನ ಮಿಸ್ತ್ರಿ ಹಾಗೂ ಭಕ್ತ ಚರಣ ದಾಸ ಅವರು ಆ್ಯಂಜಿಯೋಪ್ಲಾಸ್ಟಿಚಿಕಿತ್ಸೆಯ ನಂತರ ವಿಶ್ರಾಂತಿ ಪಡೆಯುತ್ತಿರುವ ಸಿದ್ದರಾಮಯ್ಯ ಅವರನ್ನು ಅವರ ನಿವಾಸಕ್ಕೆ ತೆರಳಿ ಭೇಟಿ ಮಾಡಿ ಮಾತುಕತೆ ನಡೆಸಿದರು. ನಂತರ ಸಂಜೆ ಕುಮಾರಕೃಪ ಅತಿಥಿಗೃಹಕ್ಕೆ ಸಿದ್ದರಾಮಯ್ಯ ಅವರೇ ಭೇಟಿ ನೀಡಿ ವೀಕ್ಷಕರೊಂದಿಗೆ ಚರ್ಚಿಸಿದರು.

ಈ ವೇಳೆ ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಲು ಕಾರಣವೇನು ಎಂದು ವೀಕ್ಷಕರು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದಾಗ ಈ ಬೇಸರವನ್ನು ಅವರು ವ್ಯಕ್ತಪಡಿಸಿದರು ಎನ್ನಲಾಗಿದೆ. ಸೋಲಿನ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದೇನೆ. ಆದರೆ, ಚುನಾವಣೆ ಸಾಮೀಪ್ಯದ ಅವಧಿಯಲ್ಲಿ ಕೆಲ ಹಿರಿಯ ನಾಯಕರು ಗೊಂದಲ ಸೃಷ್ಟಿಸುವಂತಹ ಹೇಳಿಕೆಗಳನ್ನು ನೀಡಿದರು. ಇದರಿಂದ ಪಕ್ಷಕ್ಕೆ ಹಿನ್ನಡೆಯುಂಟಾಗಿದೆ. ಇಲ್ಲದಿದ್ದರೆ ನಮ್ಮ ಸ್ಥಾನ ಗಳಿಕೆ ಇನ್ನಷ್ಟುಉತ್ತಮವಾಗಿರುತ್ತಿತ್ತು ಎಂದು ಹೇಳಿದರು ಎನ್ನಲಾಗಿದೆ.

ಬಿಜೆಪಿಯಲ್ಲಿ ಯಾವುದೇ ಲಾಬಿ ಮಾಡಿಲ್ಲ : ಸುಧಾಕರ್..

ಈ ವೇಳೆ ಹೈಕಮಾಂಡ್‌ನಿಂದ ಆಗಮಿಸಿದ್ದ ವೀಕ್ಷಕರು ರಾಜೀನಾಮೆ ಹಿಂಪಡೆದು ಹುದ್ದೆಯಲ್ಲಿ ಮುಂದುವರೆಯುವುದೇ ಸೂಕ್ತ ಎಂದು ಸಲಹೆ ನೀಡಿದ್ದು, ಇದಕ್ಕೆ ಪಕ್ಷದಲ್ಲಿ ಗುಂಪುಗಾರಿಕೆಗೆ ಅವಕಾಶ ಮಾಡಿಕೊಡುವ ಮನಸ್ಥಿತಿಯಲ್ಲಿ ಹಿರಿಯ ನಾಯಕರು ಇರುವುದರಿಂದ ಈ ದಿಸೆಯಲ್ಲಿ ನಿರ್ಧಾರ ಕೈಗೊಳ್ಳಲು ತಮಗೆ ಕಷ್ಟವಾಗಿದೆ ಎಂದು ಸೂಚ್ಯವಾಗಿ ತಿಳಿಸಿದರು ಎಂದು ಮೂಲಗಳು ಹೇಳಿವೆ.